ನಿಮ್ಮ ಲೇಖನಗಳನ್ನು ಇ-ಮೇಲ್ ಅಥವಾ ವಾಟ್ಸಪ್ ಮುಖಾಂತರ ನಮ್ಮ ಸಂಗತಿ ವೆಬ್ಸೈಟ್ ಕಳಿಸಬಹುದು ವಾಟ್ಸಪ್‌ :- 7019100351, ಇಮೇಲ್ :- sangaatipatrike@gmail.com

ಕಾವ್ಯ ಸಂಗಾತಿ

ಬುದ್ದನಿಲ್ಲದ ಮನದಲ್ಲೊಂದು ಸುತ್ತು

ಶಂಕರಾನಂದ ಹೆಬ್ಬಾಳ

ಹೇ ಬುದ್ದ
ನೀನು ಹೊರಟು ಶತಮಾನ
ಕಳೆಯಿತು,
ಮನಸು ಬದಲಾಗಲಿಲ್ಲ,
ಹಾಗೆ ಇದೆ,
ಗೆದ್ದಲು ಹತ್ತಿದ ಮರದಂತೆ..

ಸಾವಿರಾರು ಕೋಟಿಯ
ಮೋಹ ನನ್ನನು ಬಿಡಲೆಯಿಲ್ಲ,
ಮಡದಿ ಮಕ್ಕಳ ವಾಂಛಲ್ಯ
ಸರಪಳಿಯಲ್ಲಿ ಜಗ್ಗುತಿದೆ,
ನಿನ್ನನ್ನೆ ಹಿಂಬಾಲಿಸುತ್ತಿದ್ದೇನೆ…!
ಆದರೂ ನಾನು
ನಿನ್ನಂತಾಗದೆ ಒದ್ದಾಡುತ್ತಿದ್ದೇನೆ…!!

ಇಹದ ಸುಖಭೋಗಗಳ ತೊರೆದು
ಹೊರಟೆಯಲ್ಲ
ಅಷ್ಟು ಅವಸರವೇನಿತ್ತು,
ಮನವು ಶಾಂತಿಯನರಸಿತ್ತು,
ಎದೆಯ ಆಳದಲ್ಲಿ ಚಂಚಲವೆಂಬ
ಭ್ರಮರ ಕೊರೆಯುತ್ತಲೆ ಇತ್ತು.
ಹೊರಟೆ ಮನೆಬಿಟ್ಟು
ಭೇದಿಸಲು ಜಗದ ಗುಟ್ಟು…

ಧ್ಯಾನದಲ್ಲಿ ಕುಳಿತಾಗಲೊಮ್ಮೆ
ಹಣ,ಐಶ್ವರ್ಯ,ಆಸ್ತಿಗಳದೆ ನೆನಪು,
ಮಿಂಚಿ ಮರೆಯಾದನವನು
ಮರಿಚಿಕೆಯಂತೆ…!
ನಾ ಹೋದರೆ ಹೆಂಡತಿಮಕ್ಕಳ ಗತಿ
ನೆನಪಿಸಿಕೊಂಡೆ,
ಸ್ತಬ್ಧನಾದೆ, ಹೊರಳಿದೆ
ನಿದ್ದೆಯಿಲ್ಲದೆ ಗೋಳಾಡಿದೆ,
ನಾನು ಬುದ್ದನಂತೆ…!!

ತೊಳಲಾಟದಲ್ಲಿ ಜೀವನ
ಸಾಗಿಸುತ್ತಿದ್ದೇನೆ,
ಒಮ್ಮೆ ಕೊರಗುತ್ತೇನೆ,ಮತ್ತೆ
ಮರುಗುತ್ತೇನೆ…!
ಆಗೊಮ್ಮೆ,ಈಗೊಮ್ಮೆ ಬುದ್ದನಿಲ್ಲದ
ಮನದಲ್ಲೊಂದು
ಸುತ್ತುಹಾಕುತ್ತೇನೆ…!!


About The Author

Leave a Reply

You cannot copy content of this page

Scroll to Top