ಡಾ. ಪುಷ್ಪಾ ಶಲವಡಿಮಠರವರಹೊಸ ಕವಿತೆ-ಎಲ್ಲ ತೊರೆದವಳು

ಕಾವ್ಯ ಸಂಗಾತಿ

ಎಲ್ಲ ತೊರೆದವಳು

ಡಾ. ಪುಷ್ಪಾ ಶಲವಡಿಮಠ

ಎಲ್ಲ ತೊರೆದವಳು ನಾನು
ಎಲ್ಲ ಮರೆತು ಹೊರಟವಳು ನಾನು
ಹುಟ್ಟಿದ್ದೇಲ್ಲೋ?!ಬೆಳೆದಿದ್ದೆಲ್ಲೋ?!
ಹೊರಟಿರುವುದೆಲ್ಲೋ?!
ಅಸ್ತಿತ್ವಕ್ಕಾಗಿ ತಡಕಾಡುತ್ತ
ಮೌನವಾಗಿ ಹೊರಟವಳು ನಾನು
ನದಿಯಾಗಿ ಹರಿಯುತ್ತಿರುವವಳು.

ಎಷ್ಟೊಂದು ತಿರುವುಗಳ ಬಳಸಿ
ಎಷ್ಟೊಂದು ಕಂದರಗಳ ಹಾಯ್ದು
ಸಿಗದಂತೆ ಸಾಗುತ್ತಲೇ ಇರುವವಳು ನಾನು
ಗಿರಿ ಗಂಹ್ವರಗಳಲಿ ನಲಿಯುತಿರುವ ನನ್ನ
ಬಂಧಿಸಿದರು ಆಣೆಕಟ್ಟು ಕಟ್ಟಿದರು
ತಮ್ಮಿಚ್ಛೆಯಂತೆ ಬಳಸಿಕೊಂಡರು
ಕಟ್ಟೆ ಕಟ್ಟಿದರೇನು!ಕಟ್ಟಿ ಹಾಕಿದರೇನು!
ಕಟ್ಟು ಮೀರಿ ಧುಮ್ಮಿಕ್ಕಿ ಹರಿದವಳು ನಾನು

ನಾ ತುಂಬಿ ಹರಿದಾಗ
ಎಷ್ಟೊಂದು ಪೂಜೆಗಳು!
ಬಾಗಿನಗಳ ಸುರಿಮಳೆ!
ತಮ್ಮೆಲ್ಲ ಕಲ್ಮಶ ಕಳೆದುಕೊಂಡು
ನನ್ನ ಕಲುಷಿತಗೊಳಿಸಿದರು
ಪಾವನ ಗಂಗೆಯಾದ ನಾನು ಬತ್ತಿದಾಗ
ಮುಖ ತಿರುಗಿಸಿ ನಡೆದು ಬಿಟ್ಟರು

ಉಗುಳಿದವರೇಷ್ಟೋ?!ತೆಗಳಿದವರೇಷ್ಟೋ?!
ಲೆಕ್ಕ ಇಟ್ಟವರು ಯಾರು?!
ತಮ್ಮದಾಹ ತೀರಿಸಿಕೊಂಡವರೇಷ್ಟೋ?!
ಎಲ್ಲವನ್ನೂ ಸಹಿಸಿಕೊಳ್ಳುತ್ತಾ
ನನ್ನನ್ನೇ ಶೋಧಿಸಿಕೊಳ್ಳುತ್ತಾ ಸಾಗುತಿರುವಳು ನಾನು
ನಿಲ್ಲದೆ ಹರಿಯುತ್ತಿರುವವಳು ನಾನು

ನಾ ಹರಿದಲ್ಲೆಲ್ಲಾ ಹಸಿರುಕ್ಕಿಸಿ
ಖಗಮೃಗಗಳ ಕುಣಿಸಿ ನಗಿಸಿ
ಜೀವ ಪ್ರೀತಿಯನೇ ಹಂಚಿ
ಸಾಗುತಿರುವವಳು ನಾನು
ವಿರಮಿಸಬೇಕೆನಿಸಿಲ್ಲ ನನಗೆ
ಇರುವಷ್ಟು ಹೊತ್ತು ತಂಪನಿತ್ತೆನೆಂಬ
ಭಾವತೃಪ್ತಿಯೇ ಸಾಕೆನಗೆ

ನಿಲ್ಲದೆ ಹರಿಯುತ್ತಿರುವ ನನಗೆ
ಹರಿಯುವುದು ಮಾತ್ರ ಗೊತ್ತು
ಓಡುತಿರುವ ಕಾಲದೊಂದಿಗೆ
ಓಡುತಿರುವವಳು ನಾನು
ಹರಿಯುವುದೇ ನನ್ನ ಗಮನವಾದರೂ
ಕೊನೆಗೊಮ್ಮೆ ಕಡಲ ಸೇರಿ
ಇಲ್ಲವಾಗುವವಳು ನಾನು

ಅಸ್ತಿತ್ವಕ್ಕಾಗಿ ತಡಕಾಡುತ್ತ
ಮೌನವಾಗಿ ಹೊರಟವಳು ನಾನು
ನದಿಯಾಗಿ ಹರಿಯುತ್ತಾ
ಕಡಲಾಗಿ ವಿಸ್ತರಿಸಿಕೊಂಡವಳು ನಾನು
ಎಲ್ಲ ತೊರೆದವಳು ನಾನು


3 thoughts on “ಡಾ. ಪುಷ್ಪಾ ಶಲವಡಿಮಠರವರಹೊಸ ಕವಿತೆ-ಎಲ್ಲ ತೊರೆದವಳು

  1. ಅದ್ಬುತ ಹರಿವು ಇದರಲ್ಲಿ ಇದೆ. ಶರಣು ಕವಿಯತ್ರಿಗೆ

Leave a Reply

Back To Top