ನಯನ. ಜಿ. ಎಸ್-ಗಜಲ್

ಕಾವ್ಯ ಸಂಗಾತಿ

ಗಜಲ್

ನಯನ. ಜಿ. ಎಸ್

ಕಿಡಿಕಾರುವ ಕಂಗಳ ಪನಿಯೊಳು ಮಜ್ಜಿಸುತಲಿ ಅನುರಾಗ ತೊರೆದೆಯಲ್ಲ ಸಖ
ಮುಗಿಲ ಚುಂಬಿಸಿದ ಸ್ವಪ್ನ ಮಂಟಪದಿ ಕುಸಿದು ಕಡು ವಿರಹವಾದೆಯಲ್ಲ ಸಖ

ನಿಡಿದಾದ ಗಮ್ಯಕೆ ಭಾವಗಳ ಪೇಯವನುಣ್ಣಿಸಿ ಒಲವ ಅಮಲ ಹತ್ತಿಸಿದೆ ತರವೇ
ಹೆಣೆದ ರಮ್ಯ ಕಾಮನೆಯ ಸಹಜತೆಗೆ ನಿಲುಕದೇ ಮಳೆಬಿಲ್ಲ ಬಣ್ಣವಾದೆಯಲ್ಲ ಸಖ

ಕಾಣದೂರಿಗೆ ನಂಟು ಬೆಳೆಸಿದ ನಿಚ್ಚಣಿಕೆ ಇಷ್ಟು ಬೇಗನೇ ನಿಶ್ಚಲಗೊಂಡಿತೇ ಹೇಳು
ಮುಗ್ಧ ಮನಕೆ ಮೋಹಕತೆಯ ಪೂಸಿ ನೇಹ ಸಗ್ಗಕೆ ಇರಿವ ಮುಳುವಾದೆಯಲ್ಲ ಸಖ

ಹಂಬಲಿಸಿದರೇನು ಹೊಳೆಯುವ ಬೆಳ್ಚುಕ್ಕಿಗೆ ಮಡಿಲ ಬಿಸುಪಿಗೆ ದಕ್ಕೀತೇ ಮುಂದೆ
ಮೇರೆಗಳ ಪಥಕೆ ಹುಸಿ ಹಾರೈಕೆಗಳ ವೃಷ್ಠಿಸಿ ನಲಿವ ಸೊಬಗನು ಕಸಿದೆಯಲ್ಲ ಸಖ

ಬಾಳ ಜಾತ್ರೆಯ ತಿರುವಿನಲಿ ನೀ ಬರುವ ಮುನ್ನ ನಯನ ಕಳಕೊಂಡದ್ದೇನೂ ಇಲ್ಲ
ಸಖ್ಯವಾಗುತ ವಿನೋದದ ತೆವಲಿಗೆ ಹಾಸಭರಿತ ಆತ್ಮಸುಖವ ಕೊಂದೆಯಲ್ಲ ಸಖ


Leave a Reply

Back To Top