ಈಗೀಗ ಕವಿತೆ ಬರುತ್ತಿಲ್ಲ- ಡಾ.ಯ.ಮಾ.ಯಾಕೊಳ್ಳಿ

ಕಾವ್ಯ ಸಂಗಾತಿ

ಈಗೀಗ ಕವಿತೆ ಬರುತ್ತಿಲ್ಲ

ಡಾ.ಯ.ಮಾ.ಯಾಕೊಳ್ಳಿ

ಐಷಾರಾಮಿ ಬದುಕಿನ ಆರಂಕಿ ಸಂಬಳದ
ಬೆವರ ಹನಿಯೂ ಬಾರದ ದುಡಿಮೆಯ ನಡುವೆ
ಬೆವರು ಬಿಸಿಲಿನ ಬಗ್ಗೆ ನಾವು ಮಾತನಾಡುವದ
ಕಂಡು ಕವಿತೆ ನಾಚಿ ದೂರ ಸರಿದಿದೆ

ಆಡಂಬರದ ವೇದಿಕೆಯ ಮಾತುಗಳ
ಆರ್ಭಟದ ನುಡಿಯ ನಡುವೆ ಅಂತರಂಗದ
ಭಾವಗಳು ಹೆದರಿ ಮುದುರಿ ಕೂತಿವೆ
ಕವಿತೆ ಬಾರದೆ ದೂರವೇ ಉಳಿದಿದೆ

ಸಾರ್ವಜನಿಕ ವೇದಿಕೆಯನೇರಿ ಕಾಗೆಗಳೇ
ನಾ ಕೋಗಿಲೆಯಂದು ಗುಟುರು ಹಾಕುತ್ತಿವೆ
ನಿಜ‌ ಕವಿತೆ ಮೌನ ಧರಿಸಿ ಮೂಲೆ ಸೇರಿದೆ
ಕವಿತೆ ದನಿ ಕಳೆದುಕೊಂಡು ಅನಾಥವಾಗಿದೆ

ಅವರವರದೆ ವಂದಿಮಾಗಧರ ಗುಂಪು ರಚಿಸಿ
ಹೊಗಳಲೆಂದೆ ಅಂಗ ಭಟರನಿಟ್ಟು
ತಾವೆ ಕಟ್ಟಿಕೊಂಡ ವರ್ತುಲವೆ ಜಗವೆಂದು ಸಂಭ್ರಮಿಸುವವರ
ನಡುವೆ ಕವಿತೆ ಸೋತು ಹೋಗಿದೆ.

ಗೆಲ್ಲೆಲೆಂದು ತಮ್ಮದೇ ತಂತ್ರ‌ಪಟ್ಟುಗಳನು
ಪೇರಿಸಿಕೊಂಡು ತನ್ನದೆ ಸತ್ಯ ,ನಾನೇ ನಿಜವೆಂದು
ಸ್ವಘೋಷಣೆಯ ಬಡಾಯಿಕೋರರ ನಡುವೆ
ಮೌನವಾಗಿದೆ ಕವಿತೆ,ಮಾತು ಮರೆತಿದೆ


Leave a Reply

Back To Top