ಅಂಕಣ ಸಂಗಾತಿ
ಸಿನಿ ಸಂಗಾತಿ
ಕುಸುಮ ಮಂಜುನಾಥ್
ಆರ್ಕೆಸ್ಟ್ರಾ ಮೈಸೂರು(ಕನ್ನಡ ಸಿನಿಮಾ)
ಚಿತ್ರದ ನಾಯಕ ಪೂರ್ಣ ಒಬ್ಬ ಸಾಮಾನ್ಯ ಹುಡುಗ ಮೈಸೂರಿನ ದಂತ ಚಿಕಿತ್ಸಾಲಯದಲ್ಲಿ ಸಹಾಯಕನಾಗಿ ಕೆಲಸ ಮಾಡುವಾತ, ತಾನು ಒಬ್ಬ ಉತ್ತಮ ಗಾಯಕನಾಗಿ ಹೊರಹೊಮ್ಮ ಬೇಕೆಂಬುದು ಅವನ ಆಸೆ ಅಷ್ಟೇ ಅಲ್ಲದೆ ತಾನು ಮೆಚ್ಚಿದ ಬ್ಯೂಟಿ ಪಾರ್ಲರ್ ಹುಡುಗಿಗೂ ತಾನು ಒಳ್ಳೆಯ ಗಾಯಕನೆಂದು ಇಂಪ್ರೆಸ್ ಮಾಡುವ ಆಸೆ ಅದಕ್ಕಾಗಿ ಅವನ ನಡೆಸುವ ಅಲೆದಾಟವೇ ಈ ಚಿತ್ರ “ಆರ್ಕೆಸ್ಟ್ರಾ ಮೈಸೂರು”
ಮೈಸೂರಿನ ಗಾಂಧಿನಗರ ಆರ್ಕೆಸ್ಟ್ರಾ ಗುಂಪುಗಳ ಆಗರ ಎಲ್ಲ ಆರ್ಕೆಸ್ಟ್ರಾ ಗುಂಪುಗಳ ಮೂಲಸ್ಥಾನ. ಇಲ್ಲಿನ ಆರ್ಕೆಸ್ಟ್ರಾ ಗುಂಪುಗಳಲ್ಲಿ ಹಾಡುಗಾರನಾಗುವ ಅವಕಾಶಕ್ಕಾಗಿ ಅಲೆದಾಡುವ ಪೂರ್ಣ ,ಆಕಸ್ಮಿಕವಾಗಿ ಭೇಟಿಯಾಗುವುದು ಮೈಸೂರಿನ ಹೆಸರಾಂತ ಪ್ರತಿಷ್ಠಿತ ಸ್ಟಾರ್ ಹಾಡುಗಾರ ನವೀನ್ ರಾಜ್ (ದಿಲೀಪ್ ರಾಜ) ರನ್ನು.
ಅಲ್ಲಿ ಮುಖ್ಯಗಾಯಕನಾಗಿ ಅವಕಾಶ ಪಡೆಯಲು ಪ್ರಯತ್ನಿಸುವ ನಾಯಕನಿಗೆ ದೊರೆಯುವುದು ತೆರೆಯ ಹಿಂದಿನ ವಾದ್ಯ ನುಡಿಸುವ ಅವಕಾಶ .ಒಂದಲ್ಲ ಒಂದು ದಿನ ತನ್ನ ಅವಕಾಶದ ಬಾಗಿಲು ತೆರೆಯಬಹುದೆಂದು ಗುಂಪಿನಲ್ಲಿ ಎಲ್ಲ ಕೆಲಸಗಳಲ್ಲಿ ತನ್ನನ್ನು ತೊಡಗಿಸಿಕೊಳ್ಳುತ್ತಾನೆ ನಮ್ಮ ನಾಯಕ.
ಅವನು ತಾನು ಮೆಚ್ಚುವ ಹುಡುಗಿಗಾಗಿ ಹಾಗೂ ತನ್ನನ್ನು ಪ್ರೋತ್ಸಾಹಿಸುವ ಗೆಳೆಯರ ಬಳಗವನ್ನು ಮೆಚ್ಚಿಸಲು ತಾನೊಬ್ಬ ಮುಖ್ಯ ಗಾಯಕನೆಂದು ಸುಳ್ಳು ಕಥೆ ಕಟ್ಟುತ್ತಾನೆ.
ತನ್ನವರ ಮುಂದೆ ನಿಜ ಬಯಲಾದಾಗ ಅವಮಾನಿತನಾದ ಪೂರ್ಣ ಮುದುರಿ ಕುಳಿತಾಗ ಅವನ ಸಹಾಯಕ್ಕೆ ಬರುವುದು ಅವನ ಪ್ರಾಣ ಸ್ನೇಹಿತ ಮಹೇಶ ಹಾಗೂ ಅದೇ ಕಾಂಪ್ಲೆಕ್ಸ್ ನ ಇತರ ಸ್ನೇಹಿತರು.
ನವೀನ್ ರಾಜ್ ನ ಗುಂಪಿನಿಂದ ಹೊರದಬ್ಬಲ್ಸ ಡುವ ನಾಯಕ ಪೂರ್ಣ ತನ್ನಂತೆಯೇ ಬೆಳಕಿಗೆ ಬಾರದ ಪ್ರತಿಭೆಗಳ ಗುಂಪನ್ನು ಕಟ್ಟಿ ತಾಲೀಮು ನಡೆಸಿ ಆರ್ಕೆಸ್ಟ್ರಾ ಗುಂಪನ್ನು ಕಟ್ಟುತ್ತಾನೆ ಹೆಸರುವಾಸಿಯಾಗುತ್ತಾನೆ. ಅವನ ಬೆಳವಣಿಗೆ ಸಹಿಸದ ಅವನ ಗುಂಪಿನ ಅವಕಾಶಗಳನ್ನು ಕಸಿಯುವ ವೇದಿಕೆ ಸಿಗದಂತೆ ಮಾಡುವ ನವೀನ್ ರಾಜ್ ಗೆ ಸದ್ದು ಹೊಡೆದು ನಿಂತು ರಸ್ತೆಯ ಬದಿಯನ್ನೇ ವೇದಿಕೆಯನ್ನಾಗಿ ಮಾಡಿಕೊಳ್ಳುತ್ತಾನೆ, ಗಾಯನ ಪ್ರಪಂಚದಲ್ಲಿ ಮಿಂಚಿನ ಸಂಚಲನ ಮೂಡಿಸುತ್ತಾನೆ ಯುವ ಗಾಯಕನಾಗಿ ಎಲ್ಲರ ಗಮನ ಸೆಳೆಯುತ್ತಾನೆ.
ತನ್ನನ್ನು ತುಳಿಯಲು ಪ್ರಯತ್ನಿಸುವ ನವೀನ್ ರಾಜ್ ನ ತಂತ್ರಗಳನ್ನು ಹಿಮ್ಮೆಟ್ಟುತ್ತಾನೆ .ಪೂರ್ಣನ ಬೆಳವಣಿಗೆ ನವೀನ್ ಗೆ ಸಹಿಸಲಾಗದ ತುತ್ತಾಗುತ್ತದೆ, ತಾನೇ ಶ್ರೇಷ್ಠ ಎಂಬ ಅವನ ಅಹಂಗೆ ಪೆಟ್ಟು ನೀಡುತ್ತದೆ.
ಮೈಸೂರಿನ ಜಗದ್ ವಿಖ್ಯಾತ ದಸರಾ ಕಾರ್ಯಕ್ರಮದ ಯುವ ದಸರಾ ವೇದಿಕೆಯಲ್ಲಿ ಭಾಗವಹಿಸಲು ಎಡಬಿಡದೆ ಪ್ರಯತ್ನಿಸುವ ನವೀನ್ ರಾಜ್ ಗೆ ಸುಲಭವಾಗಿ ಅವಕಾಶ ಪಡೆದು ಪೂರ್ಣ ಪ್ರತಿಸ್ಪರ್ಧಿ ಆಗುತ್ತಾನೆ….
ಹೀಗೆ ಮೈಸೂರು ಸಂಸ್ಕೃತಿಯ ಒಂದು ಕೊಂಡಿ ಆದ ಮೈಸೂರು ಆರ್ಕೆಸ್ಟ್ರಾದ ಒಳಸುಳಿಗಳು, ಅಲ್ಲಿ ಒಬ್ಬ ಗಾಯಕ ಮೇಲೆ ಬರಬೇಕಾದರೆ ಅನುಭವಿಸುವ ಕಷ್ಟಗಳು ಇವೆಲ್ಲವನ್ನು ಚಿತ್ರದಲ್ಲಿ ಬಹಳ ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ ಚಿತ್ರದ ನಿರ್ದೇಶಕ ಸುನಿಲ್ ಮೈಸೂರು, ಹೊಸತನದಿಂದ ತುಂಬಿದ ಕಥಾವಸ್ತು ಚಿತ್ರದ ಮತ್ತೊಂದು ಪ್ಲಸ್ ಪಾಯಿಂಟ್.
ಗಣೇಶೋತ್ಸವ ರಾಜ್ಯೋತ್ಸವ ದಂತಹ ಕಾರ್ಯಕ್ರಮಗಳಲ್ಲಿ ಕಾರ್ಯಕ್ರಮ ನೀಡಲು ಹವಣಿಸುವ ಅವಕಾಶಕ್ಕಾಗಿ ಹತಾಶರಾದವರ, ಒಳಗೆ ಹಣದ ಕೊರತೆ ಇದ್ದರೂ ಹೊರಗೆ ಪ್ರದರ್ಶಿಸದೆ ರಂಗಿನ ಬಟ್ಟೆಗಳನ್ನು ಧರಿಸಿ ನಗುತ ಕಾರ್ಯಕ್ರಮ ನೀಡುವ ಆರ್ಕೆಸ್ಟ್ರಾ ರವರ ಬದುಕು ಬವಣೆ ಇಲ್ಲಿ ಯಥಾವತ್ತಾಗಿ ಚಿತ್ರತವಾಗಿದೆ.
ಅದು ಚಿತ್ರರಂಗವೇ ಇರಲಿ ಕಲಾಪ್ರಪಂಚವಿರಲಿ ಯಾವುದೇ ರಂಗ ವಿರಲಿ ಪ್ರತಿಭೆಗಳು ನಿಲ್ಲಲು ನೆಲೆ ಕಾಣಲು ಪಡುವ ತಾಕಲಾಟ ಏನು ಎಂಬುದನ್ನು ಈ ಚಿತ್ರದಲ್ಲಿ ಅತ್ಯಂತ ಸರಳವಾಗಿ ಸಹಜವಾಗಿ ತೋರಿಸಿದ್ದಾರೆ .
ಸಿನಿಮಾದ ಅವಧಿ 3 ಗಂಟೆಗಳಾಗಿದ್ದು ಸ್ವಲ್ಪ ಹೆಚ್ಚಾಯಿತೆನಿಸುತ್ತದೆ ಎಳೆದಂತೆ ಲಂಬಿಸಿದಂತೆ ಕಾಣಿಸುತ್ತದೆ .ಚಿತ್ರದ ಕಾಲಾವಧಿಯನ್ನು ಮತ್ತಷ್ಟು ಮೊಟಕುಗೊಳಿಸಿದ್ದರೆ ಮತ್ತಷ್ಟು ಪರಿಣಾಮಕಾರಿಯಾಗುತ್ತಿತ್ತು ಈ ಚಿತ್ರ.
ಹೊಸ ಹುಡುಗ ಪೂರ್ಣ ಚಂದ್ರ ಆರಂಭದಲ್ಲಿ ತಡವರಿಸಿದರಂತೆ ಕಂಡರೂ ಚಿತ್ರ ಮುಗಿಯುವ ವೇಳೆಗೆ ಪ್ರಬುದ್ಧ ಅಭಿನಯದ ಮೂಲಕ ಹೊರಹೊಮ್ಮಿದ್ದಾರೆ .ನವೀನ್ ರಾಜ್ ನ ಪಾತ್ರದಲ್ಲಿ ದಿಲೀಪ್ ರಾಜ್ ಸೂಕ್ಷ್ಮ ಹಾಗೂ ಸೂಕ್ತ ಅಭಿನಯದ ಮೂಲಕ ಗಮನಸೆಳೆಯುತ್ತಾರೆ. ಚಿತ್ರರಂಗದಲ್ಲಿ ಅವರ ಪ್ರತಿಭೆ ಮತ್ತಷ್ಟು ಬಳಕೆಯಾಗಬೇಕಿದೆ . ಪೂರ್ಣಚಂದ್ರ ಹಾಗೂ ದಿಲೀಪ್ ರಾಜ್ ಚಿತ್ರವನ್ನು ಆವರಿಸಿಕೊಂಡಿದ್ದಾರೆ.
ಪೂರ್ಣನ ಸ್ನೇಹಿತನ ಪಾತ್ರದಲ್ಲಿ ಮಹೇಶ್ ಕುಮಾರ್, ಒಳ್ಳೆಯ ಅಭಿನಯ ನೀಡಿದ್ದಾರೆ ,ಪೋಷಕ ಪಾತ್ರಗಳಿಗೆ ಭರವಸೆಯ ಕಿರಣದಂತೆ ಕಾಣುತ್ತಾರೆ ಇವರು ಮೈಸೂರಿನ ರಂಗಭೂಮಿಯ ಅನೇಕ ಕಲಾವಿದರು ಚಿತ್ರದಲ್ಲಿದ್ದು ಚಿತ್ರಕ್ಕೆ ಕಳೆ ತಂದಿದ್ದಾರೆ.
ಮೈಸೂರು ನಗರ ಸಂಸ್ಕೃತಿಗಳ ಪರಿಚಯ ಉತ್ತಮ ಸಿನಿಮಾ ಟೋಗ್ರಫಿ (ಜೋಸೆಫ್ ರಾಜ್ )ರ ಮೂಲಕ ಹೊರಹೊಮ್ಮಿದೆ.
ಸಂಗೀತಕ್ಕೆ ಪ್ರಾಧಾನ್ಯತೆ ನೀಡುವ ಕಥಾವಸ್ತು ಇದ್ದರೂ ಚಿತ್ರದಲ್ಲಿ ಸಂಗೀತ ಪೂರ್ಣ ಅಂಕವನ್ನು ಪಡೆಯಲು ವಿಫಲವಾಗಿದೆ .ಸ್ವತ ಗಾಯಕರಾದ ರಘು ದೀಕ್ಷಿತ್ ರ ಸಂಗೀತ ನಿರ್ದೇಶನ ಈ ಚಿತ್ರಕ್ಕೆ ಸಿಕ್ಕಿದೆ ,ಚಿತ್ರದಲ್ಲಿ ಒಂದೆರಡು ಹಾಡುಗಳು ಗುನು ಗುಟ್ಟುವಂತಿವೆ. ಕ್ಲೈಮಾಕ್ಸ್ ನಲ್ಲಿ ಬರುವ ಹಾಡಿಗೆ ಮತ್ತಷ್ಟು ಕಸುವು ಬೇಕಿತ್ತು.
ಚಿತ್ರ ಕ್ಕೆ ಡಾಲಿ ಧನಂಜಯ ಅವರ ಸಾಹಿತ್ಯದ ಸಾಥ್ ಇದೆ ಗಾಯಕರಾದ ನವೀನ್ ಸಜ್ಜು ಹಾಗೂ ರಘು ದೀಕ್ಷಿತ್ ಅವರಿಂದ ಸಿನಿಮಾ ಪ್ರೇರಿತವಾಗಿದೆ.
ಹೊಸ ನಾಯಕಿ ರಾಜಲಕ್ಷ್ಮಿ ಭರವಸೆ ಹುಟ್ಟಿಸುತ್ತಾರೆ ಅವರ ಪಾತ್ರ ಪೋಷಣೆಗೆ ಮತ್ತಷ್ಟು ಅವಕಾಶ ದೊರೆಯಬೇಕಿತ್ತು.
ಯಾವುದೇ ಸ್ಟಾರ್ ನಟರ ಬೆಂಬಲವಿಲ್ಲದೆ ಹೊಸಬರಿಂದ ತಯಾರಾಗಿರುವ ಈ ಚಿತ್ರ” ಆರ್ಕೆಸ್ಟ್ರಾ ಮೈಸೂರು”, ಕುಟುಂಬದವರೆಲ್ಲರೂ ಯಾವುದೇ ಮುಜುಗರವಿಲ್ಲದೆ ಕುಳಿತು ನೋಡಬಹುದಾದ ಒಂದು ಮನೋರಂಜನೆಯ ಚಿತ್ರ . ಹೊಸತನದಿಂದ ಕೂಡಿದ ಅಭಿನಯದಿಂದ ವಿಭಿನ್ನ ಕಥಾ ವಸ್ತುವಿನಿಂದ ಉತ್ತಮ ನಿರ್ದೇಶನದಿಂದ ಕೂಡಿದ ಈ ಚಿತ್ರ 2023ರ ಭರವಸೆಯ ಸಿನಿಮಾವಾಗಿದೆ .
ಹೊಸ ವರ್ಷದ ಆರಂಭದಲ್ಲಿ ಬಂದಿರುವ ಈ ಸದ ಭಿರುಚಿಯ ಚಿತ್ರವನ್ನು ಸಿನಿ ರಸಿಕರು ಗೆಲ್ಲಿಸಬೇಕಿದೆ ..ತನ್ಮೂಲಕ ಉತ್ತಮ ಸಿನಿಮಾಗಳಿಗೆ ನಾಂದಿ ಹಾಡಬೇಕಿದೆ…
ಚಿತ್ರ ಅಮೆಜಾನ್ ಪ್ರೈಮ್ ನಲ್ಲಿ ವೀಕ್ಷಣೆಗೆ ಲಭ್ಯವಿದೆ.
ತಾರಾಗಣ – ಪೂರ್ಣಚಂದ್ರ ಮೈಸೂರು, ದೀಪಕ್ ರಾಜ್ ಮಹೇಶ್ ಕುಮಾರ್, ರಾಜಲಕ್ಷ್ಮಿ , ಸಚ್ಚಿದಾನಂದ ಸಚ್ಚು ರಾಜೇಶ್ ಬಸವಣ್ಣ, ರವಿ ರಂಗವಲ್ಲಿ, ಸುಬ್ಬು ಹುಣಸೂರು, ಮಹದೇವ ಪ್ರಸಾದ್ ಇತರರು
ನಿರ್ದೇಶನ -ಸುನಿಲ್ ಮೈಸೂರು
ಸಂಗೀತ ನಿರ್ದೇಶನ -ರಘು ದೀಕ್ಷಿತ್
ಸಿನಿಮಾಟೋಗ್ರಫಿ -ಜೋಸೆಫ್ ರಾಜ್
ನಿರ್ಮಾಣ- ರಘು ದೀಕ್ಷಿತ್, ಅಶ್ವಿನ್ ವಿಜಯ್ ಕುಮಾರ್.
ಕುಸುಮ ಮಂಜುನಾಥ್
ವೃತ್ತಿಯಲ್ಲಿ ಶಿಕ್ಷಕಿಯಾಗಿದ್ದ ಕುಸುಮಾ ಮಂಜುನಾಥ್ ರವರು ಪ್ರವೃತ್ತಿಯಲ್ಲಿ ಸಾಹಿತ್ಯಾಸಕ್ತಿ ಯನ್ನು ಹೊಂದಿದ್ದಾರೆ. ಸಮಾಜಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಇವರಿಗೆ “ಸಾಧನ ವಿದ್ಯಾ” ಮಾಸ ಪತ್ರಿಕೆಯಲ್ಲಿ ಉಪಸಂಪಾದಕರಾಗಿ ನಾಲ್ಕೈದು ವರ್ಷಗಳು ಕೆಲಸ ಮಾಡಿದ ಅನುಭವವಿದೆ. ರೋಟರಿ ಸಹಯೋಗದಲ್ಲಿ ಸಾಕ್ಷರತಾ ಮಿಷನ್ ಕಾರ್ಯಕ್ರಮದಡಿ ಕೂಲಿ ಕಾರ್ಮಿಕರಿಗೆ ಅಕ್ಷರ ಕಲಿಸುವ ಸೇವೆ ಮಾಡಿದ್ದಾರೆ. ಕಥೆ ,ಕವನ, ಲೇಖನ ಬರೆಯುವುದು ಇವರ ಹವ್ಯಾಸ. ಹಲವು ಬ್ಲಾಗ್ ಗಳಲ್ಲಿ ,ನಿಯತ ಕಾಲಿಕೆಗಳಲ್ಲಿ ಇವರ ಲೇಖನ ಪ್ರಕಟವಾಗಿದೆ. ಸಂಗೀತ ಕೇಳುವುದು ,ಪತ್ರಿಕೆ ಓದುವುದು ಇವರ ಇತರೆ ಹವ್ಯಾಸ.