ಗಜಲ್ ಜುಗಲ್ ಬಂದಿ

ಕಾವ್ಯಸಂಗಾತಿ

ಗಜಲ್ ಜುಗಲ್ ಬಂದಿ

rt.

ಗಜಲ್

ಬೆರೆತ ಭಾವಗಳ ಅರಿತ ಮನಸುಗಳ ಸಹ್ಯಾ ಸಹ್ಯಗಳ ದರ್ಶಕವಿದು ಬದುಕು
ನವ ರಸಗಳ ಪಾಕಗಳೊಳು ಅನಿಯಮಿತ ಚಮತ್ಕೃತಿಗಳ ಬಸಿರಿದು ಬದುಕು

ಬೆವರ ಪನಿಗಳ ನಿಚ್ಚಣಿಕೆಯಲಿ ಬಿರಿವುದು ಬಾಳ್ಗೆಯ ರಹದಾರಿಯಿದು ನಿಶ್ಚಿತ
ಸುಸ್ವರದ ಲಾಲಿತ್ಯಕೆ ನೆಚ್ಚುತಿರಲು ಸುರಸೌಖ್ಯ ಸ್ಮಿತೆಯ ಲಬ್ಧತೆಯಿದು ಬದುಕು

ಕಾವ್ಯದೈಸಿರಿಯ ಮೇಳದೊಳು ಪ್ರವಹಿಸುತ ರಿಂಗಣಿಸುವ ಆಶಯ ಚೆಂದವು
ಶೌರಿಯೋಘದ ಜವದಿ ಉತ್ಪ್ರೇಕ್ಷೆಯನು ತಡಕಾಡುವ ಮರ್ಜಿಯಿದು ಬದುಕು

ಅಂಚಿರದ ಅಂಕುರಕೆ ಮಣಿಯಲು ಬಾಷ್ಪ ಮಂಜರಿಯೊಳು ನಲುಗೀತು ಅಸು
ಜತ್ತ ಚರ್ಯೆಗೆ ಹೆಜ್ಜೆಗಳ ಸ್ವರ್ಶಿಸುತಿರಲು ಉದಯಾದ್ರಿಯ ಉಷೆಯಿದು ಬದುಕು

ತೃಣ ತುಮುಲಗಳ ಮಾಯಾಜಾಲಕೆ ಬೆಚ್ಚಿ ಕೃಶವಾಗಿ ಹಳಹಳಿಸದಿರು ‘ನಯನ’
ಚಣ ಚಣಗಳ ಅನುಭಾವ್ಯದಿ ಭವ್ಯ ಚಿಂತನೆಗಳಿಗೆ ಉಪೋದ್ಭಾತವಿದು ಬದುಕು.

***

ನಯನ. ಜಿ. ಎಸ್.

*********************

ಗಜಲ್

ಬರೆದಷ್ಟು ಬರೆಸುವ ಓದಿದಷ್ಟು ಓದಿಸಿಕೊಳ್ಳುವ ಕಾದಂಬರಿಯಿದು ಬದುಕು
ಬಗೆದಷ್ಟು ಸಿಹಿ ನೀಡುವ ಸವಿದಷ್ಟು ರುಚಿಯೆನಿಸುವ ಔದುಂಬರವಿದು ಬದುಕು

ಗಮ್ಯದೊಳಗಿನ ರಮ್ಯತೆಯ ರಸದೌತಣ ಉಣಬಡಿಸುವ ನಳಪಾಕವು ಜೀವನ
ಆಯ ತಪ್ಪಿದರೆ ಅಪ್ಪಿಕೊಳ್ಳುವ ಮೋಹದ ಭೋರ್ಗೆರೆಯುವ ಶರಧಿಯಿದು ಬದುಕು

ಅಪ್ರತಿಮ ಪ್ರವೀಣ ಕಬ್ಬಿಗನ ಕಂಗಳಂತೆ ರಂಗು ರಂಗಿನ ಚಿತ್ತಾರ ಬಿಡಿಸುವಲ್ಲಿ
ಮರೀಚಿಕೆಯಾಗಿ ಬೆನ್ನತ್ತುತ ಸದ್ದಿಲ್ಲದೆ ಮದ್ದೆರೆವ ಮಾಯಂಗನೆಯಿದು ಬದುಕು

ಬಾಳ ಬಂಡಿ ಜೀಕುವ ತೂಗುಯ್ಯಾಲೆಯೇ ಹೊರತು ಮೆಲ್ಲುವ ರಸಗವಳವಲ್ಲ
ಕಟುಸತ್ಯಗಳ ಭೀಭತ್ಸತೆಯಲ್ಲಿ ವಾಸ್ತವದ ಹಂಗನರುಹುವ ದರ್ಪಣವಿದು ಬದುಕು

ತಹತಹಿಸುವ ತಥ್ಯ ಮಿಥ್ಯಗಳ ಕಾಲಡಿ ಸಿಲುಕಿ ತತ್ತರಿಸಿ ಹೋಗದಿರು ‘ಅರ್ಚನಾ’
ಪ್ರೇಮ ಕಕ್ಕುವ ಕಾರ್ಕೋಟಕದಲಿ ಉಣಿಸುವ ನಿತ್ಯಸತ್ಯದ ಪೀಯೂಷವಿದು ಬದುಕು

***

ಅರ್ಚನಾ ಯಳಬೇರು

Leave a Reply

Back To Top