ಕಾವ್ಯ ಸಂಗಾತಿ
ಗಜಲ್
ಬಾಗೇಪಲ್ಲಿ
ಸುತ್ತ ಲೋಕವನೊಮ್ಮೆ ಅವಲೋಕಿಸಿದಾಗ ನನ್ನ ಸಮಸ್ಯೆ ಅಗಣ್ಯ
ಸೂಕ್ಷ್ಮದೊಮ್ಮೆ ನಾನು ಪರಿಶೀಲಿಸಿದಾಗ ನನ್ನ ಸಮಸ್ಯೆ ಅಗಣ್ಯ
ಊರ ಮುಂದಿನ ಹಳೆಯ ಚಾವಡಿ ರಾತ್ರಿಯೊಮ್ಮೆ ನೋಡಿ ಬಂದೆ
ಗುಡಿಸಲ ಚಾವಣಿ ಬಿರುಕಲ್ಲಿ ಚಂದ್ರ ಕಿರಣ ನುಸುಳಿದಾಗ ನನ್ನ ಸಮಸ್ಯೆ ಅಗಣ್ಯ
ಬೆಳಗಿಂದ ಸಂಜೆಯವರೆಗೆ ಹೊಟ್ಟೆಗೇನು ಎಂಬ ಚಿಂತೆಯವರು ಬಹಳಮಂದಿ
ಹೊಟ್ಟೆ ಏಕೆ ಹೊಟ್ಟೆ ಕಿಚ್ಚೇ ಇಲ್ಲೆಂದು ಖಾತರಿಯಾದಾಗ ನನ್ನ ಸಮಸ್ಯೆ ಅಗಣ್ಯ
ರಾಜಧಾನಿ ದೆಹಲಿ ಚಳಿಯಲಿ ಸಹಸ್ರ ಜನರಿಹರು ದೀಪದ ಕೆಳಗೆ ಕತ್ತಲು!
ಹರಿದ ಕೋಲಾರ ಕಂಬಳಿ ಮೈ ಸುತ್ತುವರೆದಾಗ. ನಮ್ಮ ಸಮಸ್ಯೆ ಅಗಣ್ಯ
ಕೃಷ್ಣಾ! ಇವುಗಳನೆಲ್ಲಾ ಕಂಡು ಅನುಭವಿಸಿ ಗುರು ಗುಂಡಪ್ಪ ಎಂದಿಹರು (ಕಗ್ಗ)
ಇರುವುದಕೆ ಬೆಲೆ ನೀಡಿ ಇಲ್ಲದುದಕೆ ಹಂಬಲಿಸದಾಗ ನನ್ನ ಸಮಸ್ಯೆ ಅಗಣ್ಯ