ಸಿಧ್ಧಗುರುವಿಗೆ ಶರಣು-ಆಶಾ ಎಸ್ ಯಮಕನಮರಡಿ

ನುಡಿ ನಮನ

ಸಿಧ್ಧಗುರುವಿಗೆ ಶರಣು

ಆಶಾ ಎಸ್ ಯಮಕನಮರಡಿ

ಸಿಧ್ಧಗುರುವಿಗೆ ಶರಣು
ಸತ್ಯ ಶಾಂತಿ ನಿತ್ಯ ನಿರ್ಮಲ ಸರಳತೆ ಸಾಕಾರ ಮೂರ್ತಿ ಅತಿ ವಿರಳ ಜ್ಞಾನಿ ಗುರು ಸಿದ್ದೇಶ್ವರ ಮಹಾಸ್ವಾಮಿಗಳು ಉಪಮಾತೀತರು. ಪದಗಳಲಿ ಹಿ ಡಿಯಲಾಗದ ಘನಮಹಿಮರ ವ್ಯಕ್ತಿತ್ವ ಜಗಕೆ ಮಾದರಿಯಾದ ದೈವಸ್ವರೂಪದ ಮಹಾ ಮಾನವ
ನಡೆದಾಡುವ ದೇವರು ಭಕ್ತರ ಪಾಲಿನ ಆರಾಧ್ಯ ದೈವ ಶತಕೋಟಿ ಮಾನವಜೀವಿಗಳ ಹೃದಯದ ಚೈತನ್ಯ ರೂಪವಿಂದು ಬಯಲಾದ ಬಗೆ ಬೀಸುವ ಗಾಳಿ ಅರೆಕ್ಷಣ ತನ್ನ ಚಲನೆ ನಿಲ್ಲಿಸಿದಂತೆ ಹರಿಯುವಾ ನದಿ ಕ್ಷಣಕಾಲ ನಿಶ್ಚಲಗೊಂಡಂತೆ ಬೆಳಕಿನಾ ಕಿರಣಗಳು ಒಮ್ಮೆಲೆ ಮರೆಯಾಗಿ ಜಗವೆಲ್ಲಾ ಗಾಡಾಂಧಕಾರದಲಿ ಮುಳುಗಿದಂತೆ ಪೂಜ್ಯರ ನಿರ್ಗಮನದಿಂದ
ಎಲ್ಲರ ಹೃದಯವನೆ ಹಿಂಡಿ ಕಣ್ಣಿರಾಗಿ
ಹರಿಯುತಿದೆ.
ವಿಜಯಪುರ ಜಿಲ್ಲೆಯ ಬಿಜ್ಜರಗಿ ಹಳ್ಳಿಯ ರೈತ ಕುಟುಂಬದಲ್ಲಿ ಸೆಪ್ಟೆಂಬರ್ 5,1940 ರಂದು ಜನಿಸಿದ ಪವಿತ್ರಾತ್ಮದ ಕುಡಿಯೊಂದು ಜಗದ ಜನರ ಹೃದಯದ ದಿವ್ಯ ದೇಗುಲದ ಮೂರ್ತಿಯಾಗಿ ಆರಾಧಿಸಿಕೊಂಡಿರುವುದು ಇದು ಪವಾಡವಲ್ಲಾ ,ಚಮತ್ಕಾರವಲ್ಲಾ,
ಧೂಪ ದೀಪಗಳಿಂದ ಆರಾಧಿಸಿದರೆ ಮಾತ್ರ ದೇವರು ಸಿಗಲಾರನು. ಮಾನವನೊಬ್ಬ ದೇವರಾದ ಬಗೆ
ಅದು ಅವರ ಪವಿತ್ರ ಆತ್ಮದ ಬಲ ದೈವಾಂಶದ ಚೈತನ್ಯವೆ ಚಿದ್ಬೆಳಕಾಗಿ
ವ್ಯಕ್ತಿ ರೂಪದಲ್ಲಿ ನಮ್ಮ ಹಿರಿಮೆಯ ಕನ್ನಡನಾಡಿನಲ್ಲಿ ಉದಯಿಸಿ ಜಗದ ಜನರ ಬದುಕನ್ನು ತಮ್ಮ ಜ್ಞಾನ ದಾಸೋಹದಿಂದ ಸಂತೃಪ್ತಗೊಳಿಸಿ
ಸದಾಚಾರದ ದಾರಿಯಲ್ಲಿ ನಡೆಸಿದ ಗುರು ಸಿದ್ದೇಶ್ವರರಿಂದು ಭೌತಿಕವಾಗಿ
ಕಣ್ಮರೆ ಆದರು ನೆನೆದವರ ಮನದಲ್ಲಿ ನಿತ್ಯ ನಂದಾದೀಪವಾಗಿ ಬೆಳಗುತ್ತಿರುವ ಜ್ಯೋತಿ ಸ್ವರೂಪರಿವರು.ಬಾಲ್ಯದಿಂದಲೂ ಆಧ್ಯಾತ್ಮ ದತ್ತ ಒಲವು ಹೊಂದಿದ ಬಾಲಕ ಸಿದ್ಧೇಶ್ವರ ರಿಗೆ ದೊರೆತ ಗುರುಕಾರಣ್ಯವೆ ವೇದಾಂತ ಕೇಸರಿ ಮಲ್ಲಿಕಾರ್ಜುನ ಮಹಾಸ್ವಾಮಿಗಳು.
ವಿಜಯಪುರದ ಜ್ಞಾನ ಯೋಗಾಶ್ರಮದ ಯತಿವರ್ಯ ಮಲ್ಲಿಕಾರ್ಜುನ ಸ್ವಾಮಿಗಳು ಆಧ್ಯಾತ್ಮ ಚಿಂತನೆಗಳ ಪ್ರವಚನವನ್ನು ಜನಮಾನಸಕ್ಕೆ ತಲುಪಿಸುವ ಗುರಿ ಹೊಂದಿದ್ದರಿಂದ ನಾಡಿನಾದ್ಯಂತ ನಿರಂತರವಾಗಿ ಸಂಚರಿಸುತ್ತ ತಮ್ಮ ಅಮೋಘ ವಾಕ್ಚಾತುರ್ಯದ ಪ್ರವಚವನ್ನು ಪ್ರತಿಹಳ್ಳಿಹಳ್ಳಿಗಳಿಗೂ
ಕೊಡಮಾಡುವ ಸಂದರ್ಭದಲ್ಲಿ ಬಯಸುವ ಸಿರಿ ಬಾಗಿಲಿಗೆ ಬಂದಂತೆ
ಬಾಲಕ ಸಿದ್ಧೇಶ್ವರರಿಗೆ ಆಧ್ಯಾತ್ಮ ಗುರು ಮಲ್ಲಿಕಾರ್ಜುನ ಮಹಾಸ್ವಾಮಿಗಳು ದೊರೆತ ಘಳಿಗೆಯೆ ಮಹಾನವಮಿ ಆಗಿತ್ತು. ಅಂದಿನಿಂದಲೆ ಗುರುಗಳಿಗೆ


ತಕ್ಕ ಶಿಷ್ಯರಾಗಿ ದೀಕ್ಷೆ ಪಡೆದರು.ಪೂಜ್ಯ ಸಿದ್ಧೇಶ್ವರರು ಮಲ್ಲಿಕಾರ್ಜುನ ಸ್ವಾಮಿಗಳ ಪರಮಾಪ್ತ ಶಿಷ್ಯರಾಗಿ ಪಾಶ್ಚಾತ್ಯ ಮತ್ತು ಪೌರಸ್ತ್ಯ ಸಕಲ ದರ್ಶನಗಳನ್ನು ಅಧ್ಯಯನ ಮಾಡಿದರು. ಓದುವ ಹಂಬಲಕ್ಕೆ ಜ್ಞಾನ ದಾಹಿಗಳಾಗಿ ಕರ್ನಾಟಕ ವಿಶ್ವವಿದ್ಯಾಲಯದಿಂದ ತತ್ವಜ್ಞಾನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದರು.ಬಹುಭಾಷಾ ಪಾರಂಗತರಾದ ಶ್ರೀಗಳು ತಮ್ಮ ಅಮುಲ್ಯ ಅಸ್ಖಲಿತ ನುಡಿಗಳಿಂದ ಖ್ಯಾತ ಪ್ರವಚನಕಾರಾಗಿ ಹೊರಹೊಮ್ಮಿದರು.ತಮ್ಮ ಬದುಕನ್ನೆ ಸಾಧನೆಯ ಪಥವಾಗಿಸಿಕೊಂಡ ಪೂಜ್ಯರು ಬದುಕಿನುದ್ದಕ್ಕೂ ಮಧ್ಬಗವದ್ಗೀತೆ, ಕಠೋಪನಿಷತ್ತ,ಶ್ವೇತಾಶ್ವತರೋಪನಿಷತ್,ಕೇನೋಪನಿಷತ್,ಮಾಂಡುಕೋಪನಿಷತ್,ಸಿದ್ಧಾಂತ ಶಿಖಾಮಣಿ,ಪತಂಜಲಿ ಯೋಗ ಸೂತ್ರ ಮೊದಲಾದ ಸಂಸ್ಕೃತ ಮಹಾಗೃಂಥಗಳಿಗೆ ಸರಳಗನ್ನಡದಲ್ಲಿ ವ್ಯಾಖ್ಯಾನವನ್ನು ನೀಡಿ ಜ್ಞಾನಾಸಕ್ತರಿಗೆ
ಮಸ್ತಕದ ಹಸಿವಿಗೆ ರಸಕವಳ ಉಣ್ಣಿಸಿದ ಮಾತೃಹೃದಯಿಗಳಿವರು.
ನಡೆ ನುಡಿಗಳಲ್ಲಿ ಏಕತೆರನಾಗಿ ಉಡುವ ಬಟ್ಟೆಗೂ ಆಮಿಷದ ಮಸಿ ತಗುಲದಿರಲೆಂದು ಜೇಬಿಲ್ಲದಾ ಅಂಗಿ ತೊಟ್ಟು ಜಗಕೆಲ್ಲಾ ಮಾದರಿಯಾದರು. ಯಾರ ಹಂಗನು
ಬಯಸದೆ ಯಾವ ಪದವಿ ಪ್ರಶಸ್ತಿ ಗಳಿಗೂ ಸೋಲದೆ ಯಾರ ಹೆಸರಿನ ಪ್ರಭಾವ ಬಳಸದೆ ಭವದ ಬದುಕಿನ ಆಧ್ಯಾತ್ಮದ ಪ್ರಭುವಾಗಿದ್ದವರು ಪೂಜ್ಯ ಸಿದ್ಧೇಶ್ವರ ಸ್ವಾಮೀಜಿಗಳು.
ತಮ್ಮ ಪ್ರವಚನದುದ್ದಕ್ಕೂ ನಿಸರ್ಗವನ್ನೆ ಉದಾಹರಿಸುತ್ತ ಅತ್ಯಂತ ಕಠಿಣ ವಿಷಯಗಳನ್ನು ಜನಸಾಮಾನ್ಯರ ಮನತಲುಪುವಂತೆ ತಿಳಿಹೇಳಿ ಸಕಲ ಧರ್ಮಗಳ ಅಬಾಲವೃಧ್ಧರ ಆರಾಧ್ಯ ಮೂರ್ತಿಯಾದವರು ಪೂಜ್ಯರು.
ನುಡಿದರೆ ಮುತ್ತಿನ ಹಾರದಂತಿರಬೇಕು
ಎಂಬ ಶರಣವಾಣಿಗೆ ಪ್ರತೀಕವಾದ ಸಿದ್ಧೇಶ್ವರ ಪೂಜ್ಯರ ಮೃತುವಚನಗಳು
ಹೂಬಿರಿದಂತೆ,ಗಂಥ ಸೂಸಿದಂತೆ,
ನಿಜನಿರ್ಮಲದ ವಾಣಿಗಳಾಗಿದ್ದವು.
*ಮಾತಿಗೊಂದು ಮೌಲ್ಯ ನೀಡಿದವರು,
ಸರಳತೆಯ ಸೂತ್ರದಲ್ಲಿ ಸುಖವ ಕಂಡವರು,

ಮಮತೆ ಬಂಧುಗಳ ಕಳಚಿ ಬಲುದೂರ ನಿಂತವರು,ಅನುಭವದ ನೆಲೆಯಿಂದ ನಿಜವರಿತ ಜ್ಞಾನ ಸೂರ್ಯ ಅಸ್ತಂಗವಾದ್ದು ಹೊಸವರ್ಷ 2023 ದಿನಾಂಕ 3ರ
ಮಂಗಳವಾರದ ಮುಸ್ಸಂಜೆಯಂದು.
ಅಂತಿಮ ದಿನಗಳಲ್ಲಿ ತೀವ್ರ ಅನಾರೋಗ್ಯದಿಂದ ಬಳಲಿದ ಶ್ರೀ ಗಳು ಸಮಚಿತ್ತದಿಂದ ದೇಹತ್ಯಾಗ ಮಾಡಿದ ದಿನ ಕೋಟಿಭಕ್ತರೆಲ್ಲಾ ಒಮ್ಮೆಲೇ ಅನಾಥವಾದಂತಾಗಿ ಸೃಷ್ಟಿ ಯ ಚಲನೆಗಳೆಲ್ಲಾ ಏಕಕಾಲಕ್ಕೆ ಸ್ತಬ್ಧ ಗೊಂಡಂತಾದವು.
ಆಧ್ಯಾತ್ಮ ವಿಜ್ಞಾನ ಗಳೆರಡನು ಸಮನ್ವಯ ಗೊಳಿಸಿ ಸಿದ್ಧಾಂತವಾಗಿಸಿ
ಜನಕೆ ಹಂಚಿದ ಯೋಗಿ ನಡೆದಾಡುವ ದೇವರೆಂದೆ ಪ್ರಖ್ಯಾತರಾಗಿದ್ಧರು.ಮನುಜನ ಮನಸ್ಸು ಚಂಚಲಗೊಳ್ಳದಂತೆ ಅದರ ಮೇಲೆ ಹಿಡಿತ ಸಾಧಿಸಲು ಕರ್ಮಯೋಗದಿಂದ ಭಕ್ತಿಯೋಗ ಸಾಧನೆ ಮಾಡಿ,ಭಕ್ತಿಯೋಗದಿಂದ ಜ್ಞಾನ ಯೋಗದ ಕಡೆಗೆ ನಡೆದು ಭಕ್ತಿ ಜ್ಞಾನ ಕರ್ಮಗಳ ನಿಜವಾದ ಅರಿವನ್ನು ಪಡೆಯುವುದೆ ಮನುಷ್ಯ ಜೀವನದ ಪರಮಗುರಿ ಎನ್ನುವ ಸತ್ಯವನ್ನು ತಮ್ಮ ಪ್ರವಚನಗಳ ಮೂಲಕ ತಿಳಿಸಿಕೊಟ್ಟ
ಮಹಾಯೋಗಿಯ ಮನದಿಚ್ಚೆಯಂತೆ
ಅಂತ್ಯಕ್ರಿಯೆ ನೆರವೇರಿಸಿದ ಭಕ್ತಸಾಗದಲಿ ಭಸ್ಮರೂಪರಾಗಿ ಬೆರೆತು ಬಯಲಲ್ಲಿ ಬಯಲಾದ ಭುವಿಯ ಚಿದ್ಬೆಳಕು ಮುಂಜಾವಿನ
ಸುಪ್ರಭಾತದಲ್ಲಿ,ಪಕ್ಷಿಗಳ ಕಲರವದಲಿ ,ಅರಳಿದ ಹೂವಿನ ಮಧುರತೆಯಲ್ಲಿ ಪ್ರತಿಬಿಂಬವಾಗಿ ಸದಾ ಲೋಕಕಲ್ಯಾಣವನ್ನೆ ಬಯಸಿದ
ನನ್ನ ಆರಾಧ್ಯ ಗುರುಚರಣಕ್ಕೆ ಹಣೆಮಣಿಯುವೆ.


Leave a Reply

Back To Top