ಕಾವ್ಯ ಸಂಗಾತಿ
ಗಜಲ್
ಮಾಜಾನ್ ಮಸ್ಕಿ
ನಾನೊಂದು ಹರಿದ ಸೂತ್ರವಾಗಿರುವೆ
ಬದುಕು ಅಳಿಸಿದ ಬರಹವಾಗಿರುವೆ
ಪ್ರೀತಿಯ ಅಪ್ಪುಗೆ ಬಯಸಿ ಅರಳಿದೆ
ಆಸೆಯಲ್ಲೇ ಬಾಡಿದ ಹೂವಾಗಿರುವೆ
ಮನಸಾರೆ ಪ್ರೀತಿಸಿದವರ ಮೋಸ ಕಂಡೆ
ಕನಸುಗಳೆಲ್ಲ ಕಳಚಿದ ಬಟ್ಟೆಯಾಗಿರುವೆ
ಹೆಜ್ಜೆ ಮೇಲೆ ಹೆಜ್ಜೆಯಲಿ ನಡೆದೆ ದೂರ
ಕೈ ಹಿಡಿಯದ ಕವಲು ದಾರಿಯಾಗಿರುವೆ
ನೀನು ಹಿಂದಿರುಗುವಿಯೆಂದು ಕಾದೆ “ಮಾಜಾ”
ನಿರಾಸೆ ಜೊತೆಯಾಗಿ ಏಕಾಂಗಿಯಾಗಿರುವೆ