ಕಾವ್ಯಸಂಗಾತಿ
ಸಿಕಂದರ್ ಅಲಿ
ಅನಸೂಯ ಜಹಗೀರದಾರ
ಗಜ಼ಲ್
ಲೇ ಕೇಳೆ ಇಲ್ಲಿ ಏನಾಯಿತು ಹೆಚ್ಚು ದೂರವಾಗುತ್ತಿದ್ದೀಯಾ |
ಲೇ ಕೇಳೆ ಇಲ್ಲಿ ಏನಾದರೊಂದು ಹೊಂಚು ಹಾಕುತ್ತಿದ್ದೀಯಾ ||
ನಂಬುವುದಾದರೂ ಹೇಗೆ ಹೇಳು ಬದುಕ ಜಂಜಡದಲಿ |
ಲೇ ಕೇಳೆ ಇಲ್ಲಿ ಈ ಸಲ ಮುಖವಾಡವ ಕಳಚಿಟ್ಟಿದ್ದೀಯಾ ||
ನಿ ನಡೆವ ಹಾದಿಯಲಿ ತಾನೇ ನಾ ಹೂಗಳನು ಹಾಸಿದ್ದು |
ಲೇ ಕೇಳೆ ಇಲ್ಲಿ ನನ್ನದೆಗೆ ಮುಳ್ಳು ಚುಚ್ಚಿ ಹೊರಟಿದ್ದೀಯಾ ||
ಅಳಿಸಬೇಡ ಹಣೆ ಸಿಂಧೂರ ನನ್ನದೇ ಹೆಸರು ಹೇಳುತ್ತದೆ |
ಲೇ ಕೇಳೆ ಇಲ್ಲಿ ಯಾರ ಒತ್ತಾಯದಿ ಮರೆಯುತ್ತಿದ್ದೀಯಾ ||
ಹಿಂದೆ ಪ್ರತಿಜ್ಞೆಗೈದಿದ್ದೆ ಅಗಲುವುದಿಲ್ಲವೆಂದು ನೆನಪಿದೆಯೇ |
ಲೇ ಕೇಳೆ ಇಲ್ಲಿ ಮಧುಬಟ್ಟಲಿಗೆ ನಿರಾಕರಿಸಲು ಹೇಳಿದ್ದೀಯಾ ||
ಅಲಿ ಹೃದಯ ಕಾಲ್ಗೆಜ್ಜೆಯ ನಾದಕ್ಕೆ ಮರುಳಾಗಲಿಲ್ಲ ಗೆಳತಿ |
ಲೇ ಕೇಳೆ ಇಲ್ಲಿ ಒಂಟಿ ನೆನಪುಗಳಿಗೆ ಕೊಳ್ಳಿ ಇಡುತ್ತಿದ್ದೀಯಾ.||
ಸಿಕಂದರ್ ಅಲಿ
ಅಲಿ ಸರ್ ಗಜಲ್ ಗೆ ನನ್ನ ಗಜಲ್ ಉತ್ತರ
ಗಜಲ್ ಜುಗಲ್ಬಂದಿ
ಏನನ್ನು ಕೇಳಲಿ ಮತ್ತೊಂದನ್ನು ಕೇಳಬಾರದೆಂದು ನೀನೇ ತಾಕೀತು ಮಾಡಿದ್ದೀಯಾ
ಏನನ್ನು ಕೇಳಲಿ ನನ್ನಆಸೆಗಳನು ಹೆಣಗಳಾಗಿಸಿ ಕಾವಳದ ಕಾನನದಲಿ ಎಸೆದಿದ್ದೀಯಾ
ಇಲ್ಲಿ ಬೆಳ್ಳಗಿರುವುದೆಲ್ಲಹಾಲು ಅಲ್ಲವೇ ಅಲ್ಲ ತಿಳಿಯಲು ತುಸು ತಡವಾಯಿತು
ಏನನ್ನು ಕೇಳಲಿ ನನ್ನ ಮುಖದಲಿ ಹುಸಿ ನಗೆಯ ಮುಖವಾಡ ಇಟ್ಟಿದ್ದೀಯಾ
ನಡೆವ ದಾರಿಯಲಿ ಮುಳ್ಳುಗಳೆಸೆದು ಹೂವೆಂದು ನಂಬಿಸಲು ಹೆಣಗಾಡುತ್ತಿರುವೆ
ಏನನ್ನು ಕೇಳಲಿ ತುಳಿವ ಪಾದಗಳಲಿ ರಕುತವೇಕೆಂದು ಹೇಳಲು ಪೀಡಿಸುತ್ತೀದ್ದೀಯಾ
ಸಿಂಧೂರ ಇಡದಂತೆ ಕರಗಳನು ಕಟ್ಟಿ ಲಗಾಮು ಹಿಡಿದಿರುವೆ ನೀನೇ ನಿನ್ನದೇ ಕೈಯಲಿ
ಏನನ್ನು ಕೇಳಲಿ ನಿನ್ನ ಆತ್ಮ ಸಾಕ್ಷಿಯ ಮಾರಿಕೊಂಡು ಗೆಲುವಿನಿಂದ ಬೀಗುತ್ತಿದ್ದೀಯಾ
ಆಣೆ ಪ್ರಮಾಣಗಳನು ಮುರಿದು ಮೋಜು ನೋಡುತ್ತಿರುವೆ ಬಲು ಮೋಜುಗಾರನೆ
ಏನನ್ನು ಕೇಳಲಿ ನನ್ನಲ್ಲಿಯ ನವಿರು ಭಾವಗಳನು ಬೆಂಕಿಗೆ ಆಹಾರವಾಗಿಸಿದ್ದೀಯಾ
ಅನುಹೃದಯ ಖೋಟಾ ವ್ಯಕ್ತಿತ್ವವ ನಿಜವೆಂದು ತಿಳಿದು ಮೋಸ ಹೋಯಿತು ಗೆಳೆಯಾ
ಏನನ್ನು ಕೇಳಲಿ ಕಹಿ ಬಳ್ಳಿಯ ಮನದಲಿ ನೆಟ್ಟು ಸಿಹಿಯೆಂದು ನಂಬಿಸುತ್ತಿದ್ದೀಯಾ
ಅನಸೂಯ ಜಹಗೀರದಾರ