ಜಯಂತಿ ಸುನಿಲ್ ಗಜಲ್

ಕಾವ್ಯ ಸಂಗಾತಿ

ಗಜಲ್

ಜಯಂತಿ ಸುನಿಲ್

ದೀಪವಾರಿದ ಮೇಲೆ ಬೆಳಕು ಮಾತನಾಡುವುದಿಲ್ಲಾ..
ನಂಬಿಕೆ ತೊರೆದ ಮೇಲೆ ಬಂಧಗಳು ಉಳಿಯುವುದಿಲ್ಲಾ…

ಅಮಲೇರಿದ ಮೇಲೆ ಮಧುಬಟ್ಟಲಿಗೆ ಕೆಲಸವಿರುವುದಿಲ್ಲಾ…
ನಿಶೆಯಿಳಿಯದ ಹೊರತು ಸಾಕಿಯು ಸಹಕರಿಸುವುದಿಲ್ಲಾ..!!

ಮನಸು ಮುರಿದ ಮೇಲೆ ಎದೆಯ ಬಾಗಿಲು ತಡೆಯುವುದಿಲ್ಲಾ…
ಭಾವನೆಗಳು ಪೋಲಾದ ಮೇಲೆ ಮಾತಿಗೆ ಜಾಗವಿರುವುದಿಲ್ಲಾ…

ದಾರಿ ಮುಗಿದ ಮೇಲೆ ಪಯಣ ಮುಂದೆ ಸಾಗುವುದಿಲ್ಲ
ಗೂಡು ಬದಲಿಸುವ ಹಕ್ಕಿಗೆ ಬಯಲು ಬೇಕೆನ್ನಿಸುವುದಿಲ್ಲಾ..

ಬೇರು ಸತ್ತ ಮೇಲೆ ಸಸಿಗೆ ನೆಲೆಯಿರುವುದಿಲ್ಲಾ…
ಅನುರಾಗವಿಲ್ಲದ ಮೇಲೆ ಚೈತ್ರದಲೂ ಭಾವಕೋಗಿಲೆ ಹಾಡುವುದಿಲ್ಲಾ…

ನೆಪಗಳ ಭಾರ ಹೊತ್ತ ಮೇಲೆ ಭುವಿಯು ತೂಕವೆನಿಸುವುದಿಲ್ಲಾ…
ನೋವು ಹೆಪ್ಪುಗಟ್ಟದ ಹೊರತು ಕಾರ್ಮೋಡ ಕಂಬನಿ ಸುರಿಸುವುದಿಲ್ಲಾ..

ಕೇಳು ಜಯಾ..ಕತ್ತಲು ಬೆತ್ತಲಾದ ಮೇಲೆ ಗಾಯಗಳು ಸುಮ್ಮನಿರುವುದಿಲ್ಲಾ…
ದೇಹ ಗೋರಿಗಿಳಿಯದ ಹೊರತು ಚುಚ್ಚುವ ನೆನಪುಗಳು ಸಾಯುವುದಿಲ್ಲ…


Leave a Reply

Back To Top