ಕಾವ್ಯ ಸಂಗಾತಿ
ಸುಗ್ಗಿ ಸಂಕ್ರಾಂತಿ
ಬಾಪು ಖಾಡೆ
ಪಥ ಬದಲಿಸಿ ರಥವೇರಿದ
ರವಿತೇಜನ ಹೊಸ ಪಯಣ
ಮಾಗಿ ಚಳಿಯ ಮಾಘ ಮಾಸ
ಭುವಿಗೆ ಮಕರ ಸಂಕ್ರಮಣ
ನದ – ನದಿಯಲಿ ಮಿಂದು ಜನರು
ಪಡೆದು ದೇವ ದರುಶನ
ಎಳ್ಳು ಬೆಲ್ಲ ನಗುತ ಹಂಚಿ
ಹರುಷಗೊಂಡ ಜನಮನ
ಭೂ ತಾಯಿಯ ಮಡಿಲಿನಲ್ಲಿ
ಒಕ್ಕಲಿಗನ ಸಡಗರ ದವಸ – ಧಾನ್ಯ ಪೈರು ಪಚ್ಚೆ
ಸುಗ್ಗಿ ಸಂಭ್ರಮದ ಝೇಂಕಾರ
ಕಿಚ್ಚಾಯಿಸಿದ ದನ – ಕರುವಿಗೆ
ಸಿರಿ ಸಿಂಗಾರದ ಅಲಂಕಾರ
ನೋಡಲ್ಲಿ ನೀಲ ನಭದಿ
ಗಾಳಿಪಟಗಳ ಚಿತ್ತಾರ
ಮಧುರ ಬಾಂಧವ್ಯದ ಭಾವೈಕ್ಯದ
ಸಂಕ್ರಾಂತಿಯ ಪರ್ವಕಾಲ ಹಳ್ಳಿಯಿಂದ ದಿಲ್ಲಿವರೆಗೆ
ಹೊಸ ಫಸಲಿನ ಸುಗ್ಗಿ ಕಾಲ