ಸಂಕ್ರಾಂತಿ ವಿಶೇಷ-ಮಾತಿನ ಪೈರು

ಮಾತಿನ ಪೈರು

ಡಾ. ಅರಕಲಗೂಡು ನೀಲಕಂಠ ಮೂರ್ತಿ

ಹೃದಯ ಪೂರ್ವ ಮಾತು
ಇತ್ಯಾದಿ ಕಪಟ ಬೇಡಿ ಖಂಡಿತ

ಹೃದಯ ಚಿಮ್ಮುವ ರಕ್ತ
ಪರಸ್ಪರ ಹಂಚಿಕೊಂಡ
ಮುಗ್ಧ ಎದೆಯೆತ್ತಿ ಮಾತನಾಡಿ

ಅಂಟಿದ ಜಂಟಿ ದೇಹಗಳ
ಒಳಗೆ ಹೃದಯ ಬಡಿತಗಳ
ಮಿಳಿತದೊಡನೆ
ಪರಸ್ಪರರ ರಕ್ತವು ಮಿಳಿತವಾಗಿ
ಇಬ್ಬರೂ ಒಂದೆ
ಬೇರೆ ಬೇರೆ ಅಲ್ಲ ಎಂಬಂತೆ
ಬೆರೆತು ಬೆಳೆಯಲಿ
ಮಾತುಗಳ ಹುಲುಸು ಪೈರು
ಒಂದಾಗಿ ಕೂಡಿ ಬರಲಿ
ಎರಡರ ಕಟಾವು ಕಣಜಕೆ!

ಇರುವ ಮೂರು ಮತ್ತೊಂದು ದಿನ
ಕತ್ತಿ ಗುರಾಣಿಗಳೇಕೆ ನಾಲಗೆ ಮೇಲೆ!

ಎಲ್ಲರೂ ಒಂದೊಂದು ದಿನ
ಬೇರೆ ಬೇರೆಯೆ ಒಳಗಿಳಿದರು
ಮಣ್ಣೊಳಗೆ ಹುದುಗಿರುವ
ಆ ಅಗಾಧ ಸೌಟು
ಅತ್ತಿಂದಿತ್ತ ಇತ್ತಿಂದತ್ತ
ತಿರುತಿರುವಿ ಮತ್ತೆಮತ್ತೆ
ಅಳಿದುದೆಲ್ಲವು ಒಂದೆ ಹೂರಣ ಒಳಗೆ!

ಅಂಥ ಆಲಿಂಗನದ ಬಾಹುಗಳು
ಒಳಗೆ ನಮ್ಮೆಲ್ಲರನು
ಸ್ವಾಗತಿಸಲು ಅನುವಾಗಿರಲು
ಧರೆಯ ಮೇಲಿನ
ಹಗೆ ವೈಷಮ್ಯ ಕಪಟವೇಕೆ?

ಅಷ್ಟಲ್ಲದೆ ಅದೆ ಹೂರಣ
ಒಂದಿಷ್ಟಿಷ್ಟೆ ಮತ್ತೆ ಹಂಚಿಕೊಂಡು
ಮತ್ತೆ ಮತ್ತೆ ನಮ್ಮುದಯ
ಅದೆ ಹಳೆ ಇಳೆ ಮೇಲೆ…!


Leave a Reply

Back To Top