ಸ್ವಾತ್ಮಗತ

ಜಾನಪದ ಗಾರುಡಿಗ ಬೈಲೂರ ಬಸವಲಿಂಗಯ್ಯ ಹಿರೇಮಠ..!

ಕೆ.ಶಿವುಲಕ್ಕಣ್ಣವರ

ಜಾನಪದ ಗಾರುಡಿಗ ಬೈಲೂರ ಬಸವಲಿಂಗಯ್ಯ ಹಿರೇಮಠ..!

ನಾನು ಬೈಲೂರ ಬಸವಲಿಂಗಯ್ಯ ಹಿರೇಮಠ ಅವರ ಪುಸ್ತಕವಾದ ‘ನೂರು ಜಾನಪದ ಹಾಡುಗಳು’ ಬಗೆಗೆ ವಿಮರ್ಶಾತ್ಮಕ ಲೇಖನವನ್ನು ಬರೆದೆನು. ಆಗ ಸಾಕಷ್ಟು ಪ್ರಶಂಸೆಗಳು ಬಂದವು. ಅಲ್ಲದೇ ಸಾಕಷ್ಟು ಜನರು ಅವರ ಆ ಪುಸ್ತಕವನ್ನು ಕೇಳಿದರು. ನಾನು ಅವರ ಅಂದರೆ ಬೈಲೂರ ಬಸವಲಿಂಗಯ್ಯ ಹಿರೇಮಠರ ಫೋನ್ ನಂಬರ್ ಕೊಟ್ಟು ಸುಮ್ಮನಾದೆನು. ಅದರೆ ಬಹಳಷ್ಟು ಜನರು ಬೈಲೂರ ಬಸವಲಿಂಗಯ್ಯ ಹಿರೇಮಠರ ವೈಯಕ್ತಿಕ ಮಾಹಿತಿಯನ್ನು ಕೇಳಿದರು. ನಾನು ಸಾಧ್ಯವಾದಷ್ಟು ಮತ್ತು ನನಗೆ ಗೊತ್ತಿದ್ದಷ್ಟು ಮಾಹಿತಿಯನ್ನೂ ಫೋನ್ ನಲ್ಲಿಯೇ ಹೇಳಿದೆನು. ಕೆಲವರಂತೂ ಅವರ ಕುರಿತಾಗಿ ಒಂದು ವೈಯಕ್ತಿಕ ಬದುಕಿನ ಬಗೆಗೆ ಅಂದರೆ ಅವರ ‘ಜಾನಪದ ಬದುಕಿನ ಮಜಲ’ನ್ನೇ ಒಂದು ಲೇಖನ ಮಾಡಿರೆಂದರು.
ಹಾಗಾಗಿ ಆ ಅವರ ವೈಯಕ್ತಿಕ ಬದುಕಿನ ಬಗೆಗೆ ಕೇಳಿದರಿಗಾಗಿ ಏಕೆ ಒಂದು ಲೇಖನ ಬರೆಯಬಾರದೆಂದು ಈ‌ ಬೈಲೂರ ಬಸವಲಿಂಗಯ್ಯ ಹಿರೇಮಠ ಜಾನಪದ ಬದುಕಿನ ಬಗೆಗೆ ಬರೆಯಬೇಕಾಯಿತು…

ಅದು ಹೀಗಿದೆ–

ಬೈಲೂರ ಬಸವಲಿಂಗಯ್ಯ ಹಿರೇಮಠರು ಅತ್ಯಂತ ಗ್ರಾಮೀಣ ಸೊಗಡಿನ ಜಾನಪದ ಪ್ರತಿಭೆ. ಬೆಳಗಾವಿ ಜಿಲ್ಲೆಯ ಬೈಲಹೊಂಗಲದ ಬೈಲೂರಿನವರು ಇವರು…

ಇವರು ಚಿಕ್ಕಂದಿನಿಂದಲೇ ಜಾನಪದ ಸಂಗೀತ ಹಾಗೂ ಬಯಲಾಟಗಳೊಂದಿಗೆ ಹಾಡುತ್ತ, ಆಡುತ್ತ ಬೆಳೆದವರು. ಮುಂದೆ ಇವರು ಜಾನಪದದಲ್ಲಿ ಎಂ.ಎ.ಪದವಿ ಪಡೆವರು. ೧೯೮೩ರಲ್ಲಯೇ ನೀನಾಸಂ ‘ಜನ ಸ್ಪಂದನ’ ಶಿಬಿರದ ಮೂಲಕ ಹವ್ಯಾಸಿ ರಂಗಭೂಮಿಗೆ ಕಾಲಿಟ್ಟವರು. ಇವರು ತಿರುಗಾಟದಲ್ಲಿ ನಟರಾಗಿ, ಗಾಯಕರಾಗಿ, ಸಂಗೀತ ನಿರ್ದೇಶಕರಾಗಿ ಕೆಲ ಮಾಡಿದವರು. ಬಿ.ವಿ.ಕಾರಂತರೊಂದಿಗೆ ‘ರಂಗ ಸಂಗೀತ’ ಕುರಿತಂತೆ ಅಭ್ಯಾಸ ಮಾಡಿದವರು…

ಧಾರವಾಡದಲ್ಲೊಂದು ‘ಜಾನಪದ ಸಂಶೋಧನಾ ಕೇಂದ್ರ’ವನ್ನು ಹುಟ್ಟು ಹಾಕಿ ತನ್ಮೂಲಕ ದಂಪತಿಗಳ ಇಬ್ಬರೂ ೩೦ ವರ್ಷಗಳಿಂದ ಜಾನಪದ ರಂಗಭೂಮಿ, ಗ್ರಾಮೀಣ ವೃತ್ತಿ ರಂಗಭೂಮಿ, ಹಾಗೂ ಆದುನಿಕ ರಂಗಭೂಮಿಯಲ್ಲೂ ತಮ್ಮನ್ನು ತಾವು ತೊಡಗಿಕೊಂಡವರು. ಇವರ ರಚನೆಯ ಪರಿಷ್ಕೃತ ರಂಗರೂಪ ‘ಶ್ರೀ ಕೃಷ್ಣ ಪಾರಿಜಾತ’ ಸಾವಿರ ಪ್ರಯೋಗದತ್ತ ದಾಪುಗಾಲು ಹಾಕುತ್ತಿದೆ…

ಇವರು ನಟರಾಗಿ, ಹಾಡುಗಾರರಾಗಿ ಸಂಗೀತ ನಿರ್ದೇಶಕರಾಗಿ ಕೆಲಸ ಮಾಡಿದ ಇವರು ಸುಮಾರು ನೂರಕ್ಕೂ ಹೆಚ್ಚು ನಾಟಕಗಳಿಗೂ ಸಂಗೀತ ನಿರ್ದೇಶನ ಮಾಡಿದ್ದಾರೆ.
ಬಿ.ವಿ.ಕಾರಂತರ ಆಸೆಯದಂತೆ ‘ರಂಗ ಸಂಗೀತ’ ಎನ್ನುವುದು ಭಾಷೆಯಾಗಬೇಕು ಎಂಬುದನ್ನು ಮನಗಂಡು ಇವರು ಆ ತೆರದಲ್ಲಿ ಸಂಗೀತ ನಿರ್ದೇಶನದಲ್ಲೂ ತೊಡಗಿಸಿಕೊಂಡಿದ್ದಾರೆ.
ಜಾನಪದ ಬಯಲಾಟಗಳು, ಹಾಡುಗಳು ಅದರ ವಾದ್ಯಗಳ ಅಬ್ಬರದಲ್ಲಿ ಸ್ಪಷ್ಟತೆ ಕಳೆದುಕೊಂಡ ಈ ಸಂದರ್ಭದಲ್ಲಿ ಅಲ್ಲಿಯ ಮಟ್ಟಗಳ ಕುರಿತು ಅಧ್ಯಯನ ಮಾಡಿ ಪುಸ್ತಕಗಳನ್ನು ಹೊರತಂದಿದ್ದಾರೆ ಬೈಲೂರು ಬಸವಲಿಂಗಯ್ಯ ಹಿರೇಮಠ ಅವರು.
ಹಿಂದೂಸ್ತಾನಿ ಸಂಗೀತದಲ್ಲೂ ಪದವಿ ಪಡೆದ ಇವರು ರಂಗ ಸಂಗೀತ, ದಾಸವಾಣಿ, ಶರಣವಾಣಿ, ತತ್ವಪದ ಹಾಗೂ ಬಯಲಾಟ ಪದಗಳ‌ ಕುರಿತಂತೆ ಕರ್ನಾಟಕವಲ್ಲದೇ ಹೊರ ರಾಜ್ಯ ಹಾಗೂ ಹೊರದೇಶಗಳಾದ ಅಮೆರಿಕಾ, ‌ಲಂಡನ್, ಬೆಹರಿನ್, ಸಿಂಗಪುರ ಮುಂತಾದೆಡೆ ಕಾರ್ಯಕ್ರಮ ನಡೆಸಿದ್ದಾರೆ.
ನೂರಾರು ರಂಗಪದಗಳು ಒಳಗೊಂಡಂತೆ ೨೦ ಕ್ಕೂ ಹೆಚ್ಚು ಧ್ವನಿ ಸುರುಳಿಗಳನ್ನು ಹೊರ ತಂದಿದ್ದಾರೆ.
ಈಗ ಮೂಲ ಪತ್ತಾರ ಮಾಸ್ತರರ ಪದ್ಯರೂಪದ‌ ‘ಸಂಗ್ಯಾ ಬಾಳ್ಯಾ’ನಿಗೊಂದು ‘ರಂಗ ರೂಪ’ ನೀಡಿ ಸಂಗೀತದ ಹೊಸ ಸಾಧ್ಯತೆಗಳತ್ತ ನೋಟಬೀರಿದ್ದಾರೆ.
ಇವರ ಈ ಜಾನಪದ ಹೊಸ ಸಾಧ್ಯತೆಗಾಗಿ ಕರ್ನಾಟಕ ರಾಜೋತ್ಸವ ಪ್ರಶಸ್ತಿ, ಅತ್ತಿಮಬ್ಬೆ ಪ್ರಶಸ್ತಿ, ಅಭಿನವ‌ ಶರೀಫ ಹಾಗೂ ಜಾನಪದ ಸೇರಿದಂತೆ ಅನೇಕ ಪುರಸ್ಕಾರಗಳು ಸಂದಿವೆ…
ಇವಿಷ್ಟು ಬೈಲೂರ ಬಸವಲಿಂಗಯ್ಯ ಹಿರೇಮಠ ಅವರ ಬಗೆಗೆ ಹೇಳಿ ಮಾತು ಮುಗಿಸುತ್ತೇನೆ..!

Leave a Reply

Back To Top