ಕಾವ್ಯ ಸಂಗಾತಿ
ಕನವರಿಕೆ
ಕನವರಿಕೆ
ವಿಜಯಪ್ರಕಾಶ್
ತುಸು ಬಿರಿದ ತುಟಿಗಳಲಿ
ನಸು ನಗುವು ನುಸುಳುತಿರೆ
ಹಸನಾಯ್ತು ಹೃದಯವದು ಬಲು ಹರುಷದಿ |
ಪಿಸು ನುಡಿಯ ಪುಳಕದಲಿ
ಬಿಸಿಯುಸಿರು ಸೋಕುತಿರೆ
ಕಸುಗಟ್ಟಿತು ಮನ ಪ್ರಣಯ ಭಾವದಿ ||
ಹಚ್ಚಿಟ್ಟ ಹಣತೆಯಲಿ
ಹುಚ್ಚೆದ್ದು ಕುಣಿದಿತ್ತು
ಬೆಚ್ಚನೆ ಜ್ವಾಲೆಯದು ಹಿಗ್ಗಿನಿಂದ |
ನುಚ್ಚು ನೂರಾಯ್ತಾಗ
ಹೆಚ್ಚಾದ ಮನದಿರುಳು
ಮೆಚ್ಚಿ ಮೇಳೈಸಲಂದು ಸಲುಗೆಯಿಂದ ||
ಅರಳುವುದು ಮಧುಮಾಸ
ಸರಸದ ಸಮರಸದಲಿ
ಹರಡುವುದು ಬದುಕಿನಲಿ ಖುಷಿಯ ಹೊನಲು |
ಅರಸುತಿಹೆ ದಿನವನ್ನು
ಮರೆತ ಮನದ ಪುಟದಲಿ
ಮರಳಿ ಬರದೆನ್ನುವುದು ತಿಳಿದ ಮೇಲೂ ||
ಮನಮುಟ್ಟುವ ಸಾಲುಗಳು ವಿಜಯ್ ಅವರೇ
ಥ್ಯಾಂಕ್ಯೂ ಅರ್ಚನಾ ಅವರೇ..
ಪ್ರತೀ ಸಾಲಿನಲ್ಲೂ ಪ್ರೀತಿಯ ಉತ್ಕಟತೆ…
ಕನವರಿಕೆಯ ಕವನ ಸುಂದರವಾಗಿದೆ ವಿಜಯ್
ಧನ್ಯವಾದಗಳು ನಿಮ್ಮ ಪ್ರೀತಿಯ ಪ್ರತಿಕ್ರಿಯೆಗೆ..