ಕಾವ್ಯಸಂಗಾತಿ
ಗಜಲ್
ಅರ್ಚನಾ ಯಳಬೇರು

ಜೊತೆ ಜೊತೆಯಲಿ ಹೆಜ್ಜೆ ಹಾಕುವವರ ಹುಡುಕುತ್ತಿರುವೆ
ಬೀಸುವ ತಂಗಾಳಿಗೆ ನೋವುಗಳ ತೂರಿ ಬಿಡುತ್ತಿರುವೆ
ಉಪ್ಪಾಗಿ ಹರಿವ ಕಂಗಳ ಬಿಸಿನೀರು ಮೀಯದವರಿಹರೇ
ಹರಿವ ಕಂಬನಿಯ ಕಡಲಿಗೆ ಅಣೆಕಟ್ಟು ಕಟ್ಟುತ್ತಿರುವೆ
ಸಾಗುತಿದೆ ಬಾಳ ಚಕ್ಕಡಿಯು ಹುಟ್ಟು ಸಾವುಗಳ ಗಾಲಿಯಲ್ಲಿ
ಕಾಣದ ಗೆಲುವಿನ ದಡವನು ಸೇರಲು ಹವಣಿಸುತ್ತಿರುವೆ
ಹೆಣ ಭಾರವಾದ ಮನವ ಹೊತ್ತು ಸಾಗುವ ಪರಿಯೆಂತು
ಸಿಂಗರಿಸಿದ ಗೋರಿಯಲಿ ವಾಂಛೆಗಳ ದಫನ್ ಮಾಡುತ್ತಿರುವೆ
ಸುರಿವ ನೆತ್ತರಿನ ಬೆಲೆ ಅಲಗು ಅರಿತ ಕುರುಹುಂಟೆ ಅರ್ಚನಾ
ಶವವಾದ ಭಾವದಲಿ ಅಸುವ ತುಂಬಲು ತವಕಿಸುತ್ತಿರುವೆ
Super
Mad super…