ಕಾವ್ಯ ಸಂಗಾತಿ
ಗಜಲ್
ಅರ್ಚನಾ ಯಳಬೇರು
ನನ್ನ ಮೆತ್ತನೆಯ ಅಧರಗಳು ಹೊತ್ತಿವೆ ಮುತ್ತಿನ ಬಸಿರು
ಬಾಯಾರಿದ ಕಂಗಳಿಗೆ ಗುಟುಕು ನಿನ್ನ ಬಿಂಬದ ಉಸಿರು
ಹವಣಿಸುತಿದೆ ನನ್ನೆದೆಯು ಸಖಾ ನಿನ್ನೊಲವ ತುತ್ತಿಗಾಗಿ
ಮೌನದ ಭೋರ್ಗರೆತದಿ ತುಂಬಿದೆ ಅನುರಾಗದ ಒಸರು
ಪ್ರೇಮ ಶರವನು ಹೂಡಿ ಹೆಣ್ತನವ ಕೆಣಕದಿರು ಇನಿಯಾ
ಹೃದಯದಿ ಅಂಕುರಿಸಿದ ಪ್ರೀತಿಗೆ ಇಟ್ಟಿಹೆ ನಿನ್ನದೇ ಹೆಸರು
ಜನಕ ನೀನು ನನ್ನುದರದಲಿ ಜನಿಸುವ ಭಾವಗಳ ಕೂಸಿಗೆ
ಸವಿನುಡಿಗಳ ಸಲ್ಲಾಪದಲಿ ಮೈಮರೆತ ತನುವೆಲ್ಲ ಹಸಿರು
ಜೋತ್ಸ್ನದ ಲಾವಣ್ಯವು ನೀ ‘ಅರ್ಚನಾ’ಳ ಸುಪ್ತ ಸ್ವಪ್ನಗಳಿಗೆ
ಆಪ್ತತೆಯ ಆಲಾಪದ ಹೆಪ್ಪಿನಲಿ ಎನ್ನ ಬಾಳೆಲ್ಲ ಸಿಹಿ ಮೊಸರು
ಚೆನ್ನಾಗಿದೆ ಮೇಡಂ