ಅಂಕಣ ಸಂಗಾತಿ

ಗಜಲ್ ಲೋಕ

ರತ್ನರಾಯಮಲ್ಲ ಅವರ ಲೇಖನಿಯಿಂದ

ವೆಂಕಟೇಶ್ವರ ರವರ ಗಜಲ್ ಗಳಲ್ಲಿ ಸಿಹಿಜೇನು

ಗಜಲ್… ಗಜಲ್ ಎಂದರೆ ಅದೇನೋ ಪುಳಕ ಮನದಲಿ. ಈ ಗಜಲ್ ಪ್ರೀತಿಸುವ ರಸಿಕರಿಗೆ ದಿಲ್ ಸೆ ಆದಾಬ್ ಅರ್ಜ್ ಹೈ.. ಪ್ರತಿವಾರ ಒಬ್ಬೊಬ್ಬ ಗಜಲ್ ಕಾರ ಕುರಿತು ಬರೆಯುತ್ತ ಗಜಲ್ ಗುಲ್ಜಾರ್ ನಲ್ಲಿ ಅಲೆದಾಡುತ್ತಿರುವೆ. ಆ ಗುಲ್ಜಾರ್ ನಲ್ಲಿ ಆಕರ್ಷಿಸಿದ ಗುಲ್ಶನ್ ನೊಂದಿಗೆ ನಿಮ್ಮ ಮುಂದೆ ಬರುತಿದ್ದೇನೆ, ನೀವು ನಿರೀಕ್ಷಿಸುತ್ತಿರುವ ಗಜಲ್ ಬೆಳದಿಂಗಳೊಂದಿಗೆ… 

ನೀವು ಸಂಪತ್ತಿನ ತಕ್ಕಡಿಯಲ್ಲಿ ಹೃದಯಗಳನ್ನು ತೂಗುತ್ತೀರಿ

ನಾವು ಪ್ರೀತಿಯಿಂದ ಪ್ರೀತಿಯನ್ನು ಹೊಲಿಯುತ್ತೇವೆ”

ಸಾಹೀರ್ ಲುಧಿಯಾನವಿ

         ನಮ್ಮ ಜೀವನವನ್ನು ನಾವು ಸರಳೀಕರಿಸಿದಂತೆ ಬ್ರಹ್ಮಾಂಡದ ನಿಯಮಗಳೆಲ್ಲವೂ ಸರಳವಾಗಿ ಕಂಗೊಳಿಸುತ್ತವೆ. ಆವಾಗ ಏಕಾಂತವು ಏಕಾಂತವಾಗುವುದಿಲ್ಲ, ಬಡತನವು ಬಡತನವಾಗುವುದಿಲ್ಲ, ಜೊತೆಗೆ ದೌರ್ಬಲ್ಯ ದೌರ್ಬಲ್ಯವಾಗುವುದಿಲ್ಲ. ನಮ್ಮ ಜೀವನವು ನಿಜವಾಗಿಯೂ ಸರಳವಾಗಿದೆ. ಆದರೆ ನಾವೆ ಅದನ್ನು ಸಂಕೀರ್ಣಗೊಳಿಸುತಿದ್ದೇವೆ. ಬುದ್ಧಿವಂತ ಮೂರ್ಖನು ವಿಷಯಗಳನ್ನು ದೊಡ್ಡದಾಗಿ, ಹೆಚ್ಚು ಸಂಕೀರ್ಣವಾಗಿ ಮತ್ತು ಹೆಚ್ಚು ಹಿಂಸಾತ್ಮಕವಾಗಿ ಮಾಡುವ ಸಾಧ್ಯತೆಯನ್ನು ಅಲ್ಲಗಳೆಯುವಂತಿಲ್ಲ. ಅಮೇರಿಕಾದ ಲೇಖಕ, ಕ್ರೀಡಾಪಟು ಹಾಗೂ ಉತ್ತಮ ವಾಗ್ಮಿಯಾದ ಸ್ಟೀವ್ ಮರಬೋಲಿ ಯವರು ಹೇಳಿದ “ಬಿಡುವುದನ್ನು ಕಲಿಯುವುದೇ ಸರಳತೆಯ ಬದುಕಿನೆಡೆಗಿನ ದೊಡ್ಡ ಹೆಜ್ಜೆ” ಎಂಬ ಮಾತು ಅಕ್ಷರಶಃ ಸತ್ಯವೆನಿಸುತ್ತದೆ. ಈ ನೆಲೆಯಲ್ಲಿ ಅಸಾಮಾನ್ಯ ವಿಷಯಗಳನ್ನು ಹೇಳಲು ಸಾಮಾನ್ಯ ಪದಗಳನ್ನೆ ಬಳಸಬೇಕು. ಪ್ರತಿಭೆಯು ಸರಳವಾದದ್ದನ್ನು ಸಂಕೀರ್ಣಗೊಳಿಸುವುದಿಲ್ಲ. ಬದಲಿಗೆ ಸಂಕೀರ್ಣವಾದದ್ದನ್ನು ಸರಳಗೊಳಿಸುತ್ತದೆ. ಲಿಯೋ ಟಾಲ್ಸ್ಟಾಯ್ ರವರು ತಮ್ಮ ‘ಯುದ್ಧ ಮತ್ತು ಶಾಂತಿ’ ಎಂಬ ಕೃತಿಯಲ್ಲಿ “ಸರಳತೆ, ಒಳ್ಳೆಯತನ ಮತ್ತು ಸತ್ಯ ಇಲ್ಲದಿರುವಲ್ಲಿ ಶ್ರೇಷ್ಠತೆ ಇಲ್ಲ” ಎಂಬುದು ಸಾರ್ವಕಾಲಿಕ ಮಹತ್ವದ ಸಂದೇಶವಾಗಿದೆ. ಈ ದಿಸೆಯಲ್ಲಿ ಬದುಕು ಸರಳವಾಗಿದ್ದಷ್ಟು ಸುಂದರವಾಗಿರುತ್ತದೆ. ಇನ್ನೂ ಬದುಕಿನ ಪ್ರತಿಬಿಂಬವೇ ಆದ ಸಾಹಿತ್ಯವು ಕೂಡ ಸರಳವಾಗಿದ್ದಲ್ಲಿ ಮಾತ್ರ ಹೆಚ್ಚು ಜನರ ಹೃದಯದ ಬಾಗಿಲು ತಟ್ಟಲು ಸಾಧ್ಯವಾಗುತ್ತದೆ. ಅಂತೆಯೇ ಸಾಹಿತ್ಯದ ಎಲ್ಲ ಪ್ರಕಾರಗಳು ಜನಸಾಮಾನ್ಯರ ಮನಸನ್ನು ಸೂರೆಗೊಳ್ಳಬೇಕಾದರೆ ಸರಳವಾಗಿ, ಸುಂದರವಾಗಿ ಇರುವುದು ಅತ್ಯವಶ್ಯಕ. ಜಾಗತಿಕ ಮಟ್ಟದಲ್ಲಿ ಜನಸಾಮಾನ್ಯರ ಪ್ರೀತಿಗೆ ಪಾತ್ರವಾಗಿರುವ ಗಜಲ್ ಇಂದು ನಮ್ಮ ಕರುನಾಡಿನಲ್ಲಿಯೂ ತನ್ನ ನೆಲೆಯನ್ನು ಕಂಡುಕೊಂಡಿದೆ. ಗಜಲ್ ಬರೆಯುತ್ತಿರುವ ಅಸಂಖ್ಯಾತ ಗಜಲ್ ಕಾರರಲ್ಲಿ ಸಿ.ಜಿ.ವೆಂಕಟೇಶ್ವರ ಇವರೂ ಒಬ್ಬರು.

      ವೃತ್ತಿಯಲ್ಲಿ ಶಿಕ್ಷಕರಾಗಿರುವ ಸಿ. ಜಿ. ವೆಂಕಟೇಶ್ವರ ಅವರು ಮೂಲತಃ ಚಿತ್ರದುರ್ಗ ಜಿಲ್ಲೆಯ ಹೊಳಲ್ಕೆರೆ ತಾಲ್ಲೂಕಿನ ಚೌಡಗೊಂಡನಹಳ್ಳಿ ಗ್ರಾಮದ ರೈತಾಪಿ ಕುಟುಂಬದಲ್ಲಿ ೧೯೭೫ ರ ಜೂನ್ ೧೩ ರಂದು ಜನಿಸಿದರು. ಇವರ ತಂದೆ ಗೋವಿಂದಪ್ಪ ತಾಯಿ ಶ್ರೀಮತಿ ಶ್ರೀದೇವಮ್ಮ. ಚೌಡಗೊಂಡನಹಳ್ಳಿ, ಉಪ್ಪರಿಗೇನಹಳ್ಳಿ, ಯರಬಳ್ಳಿ, ಹಿರಿಯೂರು ಹಾಗೂ ಮೈಸೂರು..ಗಳಲ್ಲಿ ಇವರು ತಮ್ಮ ವಿದ್ಯಾಭ್ಯಾಸವನ್ನು ಪೂರೈಸಿದ್ದಾರೆ. ಅರ್ಥ ಶಾಸ್ತ್ರ ಮತ್ತು ರಾಜ್ಯಶಾಸ್ತ್ರ ಗಳಲ್ಲಿ ಎಂ.ಎ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದು, ಶೈಕ್ಷಣಿಕ ನೆಲೆಯಲ್ಲಿ ಎಂ‌.ಇಡಿ ಕೂಡ ಪೂರ್ಣಗೊಳಿಸಿದ್ದಾರೆ. ಪ್ರಸ್ತುತವಾಗಿ ಇವರು ತುಮಕೂರಿನ ಕ್ಯಾತಸಂದ್ರದ ಸರ್ಕಾರಿ ಪ್ರೌಢಶಾಲೆಯಲ್ಲಿ ಸಮಾಜ ವಿಜ್ಞಾನ ಶಿಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.

      ಸಿ.ಜಿ.ವೆಂಕಟೇಶ್ವರ ರವರು ತಮ್ಮ ಕಾಲೇಜು ದಿನಗಳಿಂದಲೇ ಸಾಹಿತ್ಯ ಹಾಗೂ ಕಲೆಯ ಅಭಿರುಚಿ ಹೊಂದಿದ್ದು, ಕವನ, ಭಾವಗೀತೆ, ಭಕ್ತಿಗೀತೆ, ಲೇಖನ, ಲಲಿತ ಪ್ರಬಂಧ, ಅಂಕಣ, ಗಜಲ್, ಹನಿಗವನಗಳು, ಶಾಹಿರಿ, ಕಥೆ, ಪರ್ದ್… ಮುಂತಾದ ಹಲವು ಸಾಹಿತ್ಯ ಪ್ರಕಾರಗಳಲ್ಲಿ ಕೃಷಿಯನ್ನು ಮಾಡುತ್ತ ಬಂದಿದ್ದಾರೆ, ಬರುತ್ತಿದ್ದಾರೆ. ಇವರ ಅನೇಕ ಬಿಡಿ ಲೇಖನಗಳು, ಕವನಗಳು ಹಲವು ಪುಸ್ತಕಗಳಲ್ಲಿ ಪ್ರಕಟಗೊಂಡಿವೆ. ಜೊತೆಯಲ್ಲಿ ಶ್ರೀಯುತರು ಹಲವು ಕೃತಿಗಳನ್ನು ಸಂಪಾದಿಸಿ ಕನ್ನಡ ಸಾರಸ್ವತ ಲೋಕಕ್ಕೆ ಅರ್ಪಿಸಿದ್ದಾರೆ. ‘ಸಾಲು ದೀಪಾವಳಿ’, ಎಂಬ ಕವನ ಸಂಕಲನ, ‘ಕಡೂರು’, ‘ಶಾಲಾ ಪ್ರಬಂಧ ಮತ್ತು ಪತ್ರ ಲೇಖನ’, ‘ಸ್ಟೂಡೆಂಟ್ ಬುಕ್ ಕಂಪನಿ’, ಎಂಬ ಮಕ್ಕಳ ಪುಸ್ತಕಗಳು ‘ನನ್ನಮ್ಮ ನಮ್ಮೂರಿನ ಫ್ಲಾರೆನ್ಸ್ ನೈಟಿಂಗೇಲ್’, ಎಂಬ ಲಲಿತ ಪ್ರಬಂಧ ಸಂಕಲನ, ‘ಉದಕದೊಳಗಿನ ಕಿಚ್ಚು’ ಎಂಬ ಕಾದಂಬರಿ ಮತ್ತು ‘ಸಿಹಿಜೀವಿಯ ಗಜಲ್’ ಎಂಬ ಗಜಲ್ ಸಂಕಲನ.. ಮುಂತಾದ ವೈವಿಧ್ಯಮಯ ಪುಸ್ತಕಗಳನ್ನು ಪ್ರಕಟಿಸಿದ್ದಾರೆ. ತಮ್ಮದೇಯಾದ ‘ಸಿಹಿಜೀವಿ ಪ್ರಕಾಶನ’ ಒಂದನ್ನು ಆರಂಭಿಸಿದ್ದಾರೆ. ‘ರಂಗಣ್ಣನ ಗುಡಿಸಲು’, ಎಂಬ ಕಥಾಸಂಕಲನ,

ಸಾಮಾಜಿಕ ಕಾದಂಬರಿ ಹಾಗೂ ವಿದ್ಯಾರ್ಥಿಗಳಿಗಾಗಿ ಮಕ್ಕಳ ಪುಸ್ತಕಗಳು ಪ್ರಕಟಣೆಯ ಹಂತದಲ್ಲಿವೆ. ಇದೆಲ್ಲವೂ ಇವರ ಸಾಹಿತ್ಯ ಪ್ರೀತಿಯನ್ನು ಅರುಹುತ್ತದೆ. ನಾಡಿನ ಬಹಳಷ್ಟು ನಿಯತಕಾಲಿಕೆಗಳಲ್ಲಿ ಇವರ ಬರಹಗಳು ಪ್ರಕಟವಾಗಿವೆ. ಗಾಯಕರು, ಕಲೆಗಾರರು ಮತ್ತು ಉತ್ತಮ ರಂಗಭೂಮಿಯ ಕಲಾವಿದರಾದ ಇವರು ಪೌರಾಣಿಕ ನಾಟಕಗಳಲ್ಲೂ ಅಭಿನಯಿಸಿದ್ದಾರೆ. ತಾಲ್ಲೂಕು, ಜಿಲ್ಲಾ ಹಾಗೂ ರಾಜ್ಯ ಮಟ್ಟದ ಅನೇಕ ಕವಿಗೋಷ್ಟಿಗಳಲ್ಲಿ, ಗಜಲ್ ಗೋಷ್ಠಿಗಳಲ್ಲಿ ಭಾಗವಹಿಸಿ ಕವನ, ಗಜಲ್ ವಾಚನ ಮಾಡಿ ಜನರ ಮನಸನ್ನು ಗೆದ್ದಿದ್ದಾರೆ. ರಾಜ್ಯ, ಜಿಲ್ಲಾ ಮಟ್ಟದ ಸಮಾಜ ವಿಜ್ಞಾನ ಶಿಕ್ಷಕರ ಸಂಪನ್ಮೂಲ ವ್ಯಕ್ತಿಯಾಗಿ ಸೇವೆಯನ್ನು ಸಲ್ಲಿಸಿದ್ದಾರೆ. ಪರಿಸರ ಕುರಿತಾದ ರಾಷ್ಟ್ರ ಮಟ್ಟದ ಕಾರ್ಯಾಗಾರಗಳಲ್ಲಿ ಪಾಲ್ಗೊಂಡಿದ್ದಾರೆ.

     ಶೈಕ್ಷಣಿಕ ನೆಲೆಯಲ್ಲಿ ಓರ್ವ ಶಿಕ್ಷಕರಾದ ಶ್ರೀಯುತರ ಸಾಧನೆ ಗಮನಾರ್ಹ. ದೀಕ್ಷಾ ಪೋರ್ಟಲ್ ನಲ್ಲಿ ಇಪ್ಪತ್ತೊಂದು ಡಿಜಿಟಲ್ ಸಂಪನ್ಮೂಲ ರಚಿಸಿ ಪ್ರಕಟಿಸಿದ್ದಾರೆ. ಶಾಲೆಯಲ್ಲಿ ಡಿಜಿಟಲ್ ಕಲಿಕೆಗೆ ಪ್ರೋತ್ಸಾಹ ನೀಡಿ ಕಂಪ್ಯೂಟರ್ ಪ್ರೊಜೆಕ್ಟರ್ ಆಧಾರಿತ ಕಲಿಕೆಗೆ ಒತ್ತು ನೀ…


ರತ್ನರಾಯಮಲ್ಲ

ರಾವೂರ ಎಂಬುದು ಪುಟ್ಟ ಊರು. ಚಿತ್ತಾವಲಿ ಶಾ ಎಂಬ ಸೂಫಿಯ ದರ್ಗಾ ಒಳಗೊಂಡ ಚಿತ್ತಾಪುರ ಎಂಬ ತಾಲೂಕಿನ ತೆಕ್ಕೆಯೊಳಗಿದೆ. ಕಲಬುರಗಿಯಲ್ಲಿ ಶತಮಾನ ಕಂಡ ನೂತನ ಪದವಿ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿರುವ ಡಾ.ಮಲ್ಲಿನಾಥ ತಳವಾರ ಅವರು ಪುಟ್ಟ ರಾವೂರಿನಿಂದ ರಾಜಧಾನಿವರೆಗೆ ಗುರುತಿಸಿಕೊಂಡಿದ್ದು “ಗಾಲಿಬ್” ನಿಂದ. ಕವಿತೆ, ಕಥೆ, ವಿಮರ್ಶೆ, ಸಂಶೋಧನೆ, ಗಜಲ್ ಸೇರಿ ಒಂದು ಡಜನ್ ಗೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಅವುಗಳಲ್ಲಿ ಜ್ಞಾನಪೀಠಿ ಡಾ.ಶಿವರಾಮ ಕಾರಂತರ ಸ್ತ್ರೀ ಪ್ರಪಂಚ ಕುರಿತು ಮಹಾಪ್ರಬಂಧ, ‘ಮುತ್ತಿನ ಸಂಕೋಲೆ’ ಎಂಬ ಸ್ತ್ರೀ ಸಂವೇದನೆಯ ಕಥೆಗಳು, ‘ಪ್ರೀತಿಯಿಲ್ಲದೆ ಬದುಕಿದವರ್ಯಾರು’ ಎಂಬ ಕವನ ಸಂಕಲನ, ‘ಗಾಲಿಬ್ ಸ್ಮೃತಿ’, ‘ಮಲ್ಲಿಗೆ ಸಿಂಚನ’ ದಂತಹ ಗಜಲ್ ಸಂಕಲನಗಳು ಪ್ರಮುಖವಾಗಿವೆ.’ರತ್ನರಾಯಮಲ್ಲ’ ಎಂಬ ಹೆಸರಿನಿಂದ ಚಿರಪರಿಚಿತರಾಗಿ ಬರೆಯುತ್ತಿದ್ದಾರೆ.’ರತ್ನ’ಮ್ಮ ತಾಯಿ ಹೆಸರಾದರೆ, ತಂದೆಯ ಹೆಸರು ಶಿವ’ರಾಯ’ ಮತ್ತು ಮಲ್ಲಿನಾಥ ‘ ಮಲ್ಲ’ ಆಗಿಸಿಕೊಂಡಿದ್ದಾರೆ. ‘ಮಲ್ಲಿ’ ಇವರ ತಖಲ್ಲುಸನಾಮ.ಅವಮಾನದಿಂದ, ದುಃಖದಿಂದ ಪ್ರೀತಿಯಿಂದ ಕಣ್ತುಂಬಿಕೊಂಡೇ ಬದುಕನ್ನು ಕಟ್ಟಿಕೊಂಡ ಡಾ.ತಳವಾರ ಅವರಲ್ಲಿ, ಕನಸುಗಳ ಹೊರತು ಮತ್ತೇನೂ ಇಲ್ಲ. ಎಂದಿಗೂ ಮಧುಶಾಲೆ ಕಂಡಿಲ್ಲ.‌ಆದರೆ ಗಜಲ್ ಗಳಲ್ಲಿ ಮಧುಶಾಲೆ ಅರಸುತ್ತ ಹೊರಟಿದ್ದಾರೆ..ಎಲ್ಲಿ ನಿಲ್ಲುತ್ತಾರೋ

Leave a Reply

Back To Top