ಕಾವ್ಯ ಸಂಗಾತಿ
ಕವಿತೆಗಳಲ್ಲಿ ‘ಭಾವ ಲಹರಿ’
ನಯನ. ಜಿ. ಎಸ್.
ಕವಿತೆ’ , ‘ಕವಿತೆ’ , ‘ಕವಿತೆ’ , ನೀನೇಕೆ ಹೀಗೆ ಅವಿತೆ ?
ಮನದ ಮೌನದಲೂ ಭಾವನೆಗಳ ನಡುವೆ ಕುಳಿತೆ.
ಸರಸ್ವತಿಯ ಇಂಪಾದ ವೀಣೆಯಲಿ
ವಾಗ್ದೇವಿಯ ಸಿಹಿ ಮಾತುಗಳಲಿ
ಅಭಯದ ಆಶೀರ್ವಾದಗಳ ಅಮೃತವಾಣಿಯಲಿ
ಶೋಭಿಸಿದೆ ನೀ ಪದಜ್ಯೋತಿಯಾಗಿ.
ವಿನಾಯಕನ ದಂತ ಲೇಖನಿಯಲಿ
ಪುರಾಣ ಗ್ರಂಥಗಳ ಭಾಷ್ಯದಲಿ
ಧರ್ಮ , ಸಂಸ್ಕೃತಿಗಳ ಬೋಧನೆಯ ಸಾರದಲಿ
ಪದ ಸಾಮ್ರಾಜ್ಯವನಾಳಿದೆ ನೀ ಪದಗುಚ್ಛಗಳಾಗಿ.
ರೂಪಕಗಳ ಸನ್ನಿವೇಶಗಳಲಿ
ಷಟ್ಪದಿಗಳ ಷರತ್ತುಗಳಲಿ
ಅಲಂಕಾರದ ಉಪಮೆಗಳಲಿ
ಮೇಳೈಸಿದೆ ನೀ ಭಾವರಂಜಿನಿಯಾಗಿ.
ಕವಿಪುಂಗವರ ನವೀನ ಶೈಲಿಗಳಲಿ
ವಚನಗಾರರ ವಾಚನದಲಿ
ಲೇಖನಿಯ ತುದಿಯಿಂದೊಸರಿದ ಬರಹದಲಿ
ಮುದ್ದಾಗಿ ಬೆಳೆದೆ ನೀ ನೀಳವೇಣಿಯಾಗಿ.
ಪ್ರೇಮದ ಹಿತ ಸಲ್ಲಾಪಗಳಲಿ
ವಿರಹದ ಕಹಿ ಬರಹಗಳಲಿ
ಅನುರಾಗ ಬಂಧನದ ಅನುಭೂತಿಗಳಲಿ
ವಿಹರಿಸಿದೆ ನೀ ನವತರಂಗಿಣಿಯಾಗಿ.
ಕಾವ್ಯಗಳ ಪದ ಪದಗಳಲಿ
ಕಬ್ಬಿಗರ ಅಂತರಂಗದ ಭಾವದಲಿ
ಚುಟುಕುಗಳ ಚಟಾಕಿಗಳಲಿ
ಸುಳಿದಾಡಿದೆ ನೀ ಹಾಸ್ಯರಂಗಿಣಿಯಾಗಿ.
ಪ್ರಾಸ ಪ್ರಾಸಗಳ ನಿಯಮಗಳಲಿ
ಗಾಯನಗಳ ಇಂಪಿನ ದನಿಯಲಿ
ನಾಟಕಗಳ ನಾಟ್ಯಗಳಲಿ
ನರ್ತಿಸಿದೆ ನೀ ನೂಪುರವಾಹಿಣಿಯಾಗಿ.
Nice about kavithe ,