ಕಾವ್ಯ ಸಂಗಾತಿ
ಪ್ರೀತಿಯನ್ನಷ್ಟೇ ಹೇಳಬೇಕಿದೆ.
ಸ್ಮಿತಾ ರಾಘವೇಂದ್ರ
ನಾನು ಪ್ರೀತಿಯ ಕುರಿತಷ್ಟೇ ಹೇಳ ಬಂದಿದ್ದೆ
ಏನೆಲ್ಲ ಬಿದ್ದವು ಹರಿವಾಣದಲ್ಲಿ.
ನೀತಿ ನಿಯಮ ನಿಷ್ಠೆ, ಏನಿದೆ ಇದರಲ್ಲಿ
ಮೋಸ, ಮೋಹ, ನೋವು ಕ್ರೌರ್ಯ ಎಳೆದು ತಾ.
ಹೊಗೆ ಉಗುಳುವ ಸೋಗೆ ಮನೆಯಲ್ಲಿ
ಸೊಗಸೇನು ಉಳಿದಿದೆ
ಅದೀಗ ಹಳೆಯ ಸರಕು
ಜಗಮಗಿಸುವ ನಿರ್ಜೀವಕ್ಕೆ ಬಹು ಬೇಡಿಕೆ ಇದೆ.
ಬಂಡಾಯ,ಜಾತಿ ಮತ ಧರ್ಮ,
ಬೀಸು ಚಾಟಿ ಏಟು
ಗುರುತಿಸಿಕೋ ಎಡವೋ ಬಲವೋ
ಆಗಬೇಕು ಒಂದೊಂದು ಕವನಗಳೂ, ಮಾತುಗಳೂ ಒಂದೊಂದು ಪ್ರತಿಭಟನೆ
ಅಸ್ತ್ರವಾಗಬೇಕು,ಹಸಿದವರು, ನಿರ್ಗತಿಕರು ನೊಂದವರು.
ಇರಬಾರದು ಕವಿಗೂ ಕವಿತೆಗೂ ಸಂಬಂಧ ಅಂದವರ ಪಟ್ಟಿಯೇ ಇದೆ.
ಎಳೆದು ತಂದಿದ್ದಾರೆ ಅನುದ್ವಿಗ್ನ ಪ್ರಪಂಚಕ್ಕೆ
ಎಷ್ಟು ಬದಲಾದವು ಭಾವ
ಈಗೀಗ ಯಾವುದೂ ನಿರ್ವಿಘ್ನವಾಗಿಲ್ಲ
ಒಳಗೊಳಗೇ ಮನಸು ಹೆಣಗಾಡುತ್ತಿದೆ
ಹರಿವಾಣದ ತುಂಬಾ ಹದವರಿಯದ ಪಾಕ.
ಪರಮಾರ್ಥವನ್ನು ಲೇಖನಿಯೂ ಬರೆಯುವುದಿಲ್ಲ.
ಒಲೆಯ ಕಿಡಿ ಹಾರಿ
ಹೊದ್ದ ಹೊದಿಕೆಯತುಂಬ
ಸುಟ್ಟ ಗಾಯದ ಕಿಂಡಿ
ನಕ್ಷತ್ರಗಳ ಕೆಳಗೆ ನಿಂತು ಅರುಂಧತಿ ರೋಹಿಣಿಯರ ಅಳೆಯುತ್ತಿದ್ದಾರೆ
ಚಂದ್ರನ ಮಣ್ಣು ತಂದವರು ನಗುತ್ತಿದ್ದಾರೆ.
ಪ್ರೀತಿಯನ್ನಷ್ಟೇ ಹೇಳಿದ್ದರೆ ಕೊನೇ ಪಕ್ಷ ಹೃದಯಗಳಾದರೂ ಒಡೆಯುತ್ತಿರಲಿಲ್ಲವೇನೋ..
ಕಿಕ್ಕಿರಿದ ಕಗ್ಗತ್ತಲಿನಲಿ
ಬೆಳಕ ಮೊಳೆಯಿಸಲು ಪ್ರೀತಿಯ
ಬಿತ್ತುವಿಗಲ್ಲದೆ ಮತ್ಯಾರಿಂದ ಸಾದ್ಯ?!