ಕಾವ್ಯ ಸಂಗಾತಿ
ಕಾವ್ಯವೆಂದರೆ……!
ಶಂಕರಾನಂದ ಹೆಬ್ಬಾಳ
ಕಾವ್ಯವೆಂದರೆ….
ಪ್ರಪುಲ್ಲ ಮನಸ್ಸಿನ ಉದಯಿಸುವ
ಉನ್ಮಾದದ ಭಾವಾಂಕುರ
ಒಮ್ಮೊಮ್ಮೆ ಉದಿಸಿ ಹೊರಹೊಮ್ಮುವ
ಅಚ್ಚೋದ ಸರೋವರ||
ಕಾವ್ಯವೆಂದರೆ….
ವಹಿತ್ರದಲ್ಲಿ ಸಾಗುವ ಸವಿಯಾನ
ಶುಭಸ್ವಪ್ನದ ಗಾನ
ಉನ್ಮೀಲನಗೊಳ್ಳುವ ಕವಿಮನದಿ
ಹೂಮಳೆಯ ಯಾನ||
ಕಾವ್ಯವೆಂದರೆ….
ಭಾವಾಭಿವ್ಯಕ್ತಿ ತೋರುವ ಅಂತರಾಳ
ಪ್ರಭೃತಿಯ ಕವಿಹೃದಯ
ಮಸ್ತಕದ ಆಳದೊಳು ಶಬ್ದ ಭಂಡಾರದಿ
ಮುಳುಗೆದ್ದ ಸುಸಮಯ||
ಕಾವ್ಯವೆಂದರೆ….
ಲೋಕಕ್ಕೊಂದು ನವನವೀನ ಒಸಗೆ
ಕವಿ ಕಾವ್ಯಗಳ ಆವಿರ್ಭಾವ ಬೆಸುಗೆ
ಅನುಪಮ ಛಂದೋಬಂಧದ ಬಿಗಿ
ಅದ್ವಿತೀಯ ಬರವಣಿಗೆಯ ಕಾವ್ಯಯೋಗಿ||
ಕಾವ್ಯವೆಂದರೆ….
ಅಚ್ಚುಪಡಿಯಲ್ಲಿ ಮೂಡಿದ ವಿಗ್ರಹ
ತೋಚಿದ್ದನ್ನು ಗೀಚುವ ಬರಹ
ಒಮ್ಮೊಮ್ಮೆ ಒಲುಮೆಯೊಳು
ಮತ್ತೊಮ್ಮೆ ಖೇದದೊಳು||
ಕಾವ್ಯವೆಂದರೆ….
ಶಿವನ ಮೂರನೆಯ ದೃಷ್ಟಿ
ಜಗದೊಳಗೆ ಹೊಸಬಗೆಯ ಸೃಷ್ಠಿ
ಸಾಕಲ್ಯದ ಅನುಭವ
ಸಾಫಲ್ಯದ ವಿಭವ||
ಕಾವ್ಯವೆಂದರೆ….
ಹೃದಯದಿ ಕವಿಸಮಯ ಪಲ್ಲವಿಸುವ
ಶೃಂಗಾರದ ಸಲ್ಲಾಪ
ಮುಗಿಯದ ದಾರಿಯಲಿ ಪದಗಾನದ
ಸವಿಯ ಆಲಾಪ||
ಕಾವ್ಯವೆಂದರೆ….
ಹೀಗೆಯೆ…ಉದಿಸಿ ಮಥಿಸಿ ಮತಿಯ
ಆಳದೊಳಗಿನ ಮಿಂಚಿನಂತೆ
ಸ್ಪುರಿಸಿದ ಚಣಕ್ಕಿದು ಅತ್ಯುದ್ಬುತ
ಮಾಯಾ ಸೃಷ್ಠಿಯಂತೆ||