ಅರುಣಾ ಶ್ರೀನಿವಾಸ ಕವಿತೆ-ಆಸ್ಪತ್ರೆ

ಕಾವ್ಯ ಸಂಗಾತಿ

ಆಸ್ಪತ್ರೆ

ಅರುಣಾ ಶ್ರೀನಿವಾಸ

ಆಸ್ಪತ್ರೆ ಎಂದರೆ
ಒಂಥರಾ ಕಲಸುಮೇಲೋಗರದಂತೆ
ಹೀಗೇ ಎಂದು
ಸಮೀಕರಿಸಲಾಗದು..

ಹುಳಿ, ಖಾರ, ಸಿಹಿ, ಕಹಿಗಳ
ಸಮ್ಮಿಶ್ರಣ
ಕೆಲವೊಮ್ಮೆ ನೋವ ನರಳುವಿಕೆ
ನಗುವ ಅರಳುವಿಕೆ
ಹತಾಶೆಯಲಿ ಉರುಳುವಿಕೆ..
ಎಲ್ಲವೂ ಸಾಮಾನ್ಯ.

ಹಣದ ಲೆಕ್ಕಾಚಾರವೇ
ಮೊದಲಾದರೂ ಇಲ್ಲಿ
ಆರೋಗ್ಯ ವಿಮೆಗಳದು
ತುಸು ಹೆಚ್ಚೇ ಕಾರುಬಾರು…

ಅದೇನೇ ಆದರೂ,
ಇಲ್ಲಿ ಮಲಗುವ ಹಾಸಿಗೆಗಳು
ಜಾತಿ, ಮತ ಗಳೆನ್ನದೆ
ಹೆಣ್ಣು ಗಂಡೆನ್ನದೆ
ಎಲ್ಲರ ಗಾಯವನ್ನೂ
ಸವರಿರುತ್ತದೆ….
ರಕ್ತವನ್ನು ಹೃದಯಕ್ಕಿಳಿಸಿರುತ್ತದೆ

ಬಹುಶಃ ಇಲ್ಲಿಯ
ಅಸಹಾಯಕ ಪ್ರಾರ್ಥನೆಗಳು
ದೇವರೆದೆಯ ಕದ ಬಡಿದಷ್ಟು
ಇನ್ನೆಲ್ಲೂ ಕಾಣಸಿಗದು…

ಮಡಿ ಮೈಲಿಗೆ
ಧರ್ಮ ಸಂಕೋಲೆಗಳ ಹಂಗಿರದೆ
ಎಲ್ಲರಿಗೂ ಒಂದೇ ದೇವರು
ಕೇವಲ ಮಾನವೀಯತೆಗಷ್ಟೇ
ಮಿಡಿಯುತ್ತಾನೆ ಅವನು.

ಇದ್ದಲ್ಲೆಲ್ಲಾ ಸಿಕ್ಕಿಸುವ ಪೈಪುಗಳು
ನೋಡಲು ಭಯ ಹುಟ್ಟಿಸಿದರೂ
ಬದುಕೇ ಬೇಡವೆನಿಸಿದರೂ
ಉಸಿರ ಭರವಸೆಗಳು ಅವು

ಅದಕ್ಕಿಂತಲೂ ಹೆಚ್ಚಿನ
ಜೀವರಕ್ಷಕಗಳು
ವೈದ್ಯರ ನಗು ಮತ್ತು
ದಾದಿಯರ ಮೃದುಮಾತುಗಳು.

ಯಾರಿಗೂ ಬೇಡವಾಗಿ
ಮೂಲೆ ಸೇರಿದ್ದ
ಮನೆಯ ಮುದಿಜೀವಕ್ಕೆ
ಆಸ್ಪತ್ರೆ ಸೇರಿದರೆ ಸಾಕು
ದಾದಿಯರ ಓಡಾಟ
ಜನರ ಪರದಾಟಗಳ ಸದ್ದು
ಮನಕೆ ತುಸು ನಿರಾಳ

ಇಲ್ಲಿ ಪ್ರತೀ ಸಾವಿಗೂ
ಆಸ್ಪತ್ರೆಯ ಹೆಸರಿನ ಫಲಕ
ನಲುಗುತ್ತದೆ..
ಪ್ರತೀ ಹುಟ್ಟಿಗೂ ಸಂತಸದಿಂದ
ನಗುತ್ತದೆ….
ಮತ್ತು
ಒಂದಷ್ಟು ನಂಬಿಕೆಯ ಹಿಡಿದು
ಇನ್ನಷ್ಟು ಜನರನ್ನು ತನ್ನತ್ತ
ಕೈಬೀಸಿ ಕರೆಯುತ್ತದೆ.


Leave a Reply

Back To Top