ಕಾವ್ಯ ಸಂಗಾತಿ
ಹೂ ಹಾಡು
ಅನುರಾಧಾ ಶಿವಪ್ರಕಾಶ್
ಅಂಗಳದ ತುಂಬೆಲ್ಲಾ
ನಗುತಿರುವ ಹೂವುಗಳ
ಕಾಣುತಿರೆ ಮನವೆಲ್ಲಾ ಅರಳುತಿಹುದು
ಚೆಂಗುಲಾಬಿ ಹೂವುಗಳ
ನೋಡುತಿರೆ ಜಾವದಲಿ
ತನುವಲ್ಲಾ ಪುಳಕದಲಿ ನಲಿಯುತಿಹುದು
ಹಸಿರೆಲೆಯ ನಡುವಿನಲಿ
ಬಣ್ಣಗಳು ಮೇಳೈಸಿ
ನರುಗಂಪು ಹರಡಿಹುದು ಮನೆಯಸುತ್ತ
ವಿಧವಿಧದ ಚೆಲುವಲ್ಲಿ
ಕಂಗೊಳಿಸಿ ಸೆಳೆಯುವದು ಕಣ್ಮನವನತ್ತ
ಆಗಸದ ಒಡಲಿಂದ
ಧರೆಗಿಳಿದ ತಾರೆಗಳು
ನೀವೆಂದು ಭಾವಿಸಿಹೆ ನಾನೊಲವಲಿ
ಬಣ್ಣದಂಗಿಯ ತೊಟ್ಟು
ಚೆಲುವ ನೋಟವನಿಟ್ಟು
ನಗುತಲಿರಿ ಎನ್ನ ಮನೆಯಂಗಳದಲಿ
ಫೋಟೋಜೊತೆಗೆ ಕವನವು ಅದ್ಭುತವಾಗಿದೆ mam
ಸುಂದರವಾದ ಭಾವ ತುಂಬಿದ ಕವಿತೆ
ಧನ್ಯವಾದಗಳು