ಅಭಿಜ್ಞಾ ಪಿ ಎಮ್ ಗೌಡ ಕವಿತೆ-ಭಾಷೆಯ ಪಾರುಪತ್ಯ

ಕಾವ್ಯ ಸಂಗಾತಿ

ಭಾಷೆಯ ಪಾರುಪತ್ಯ

ಅಭಿಜ್ಞಾ ಪಿ ಎಮ್ ಗೌಡ

ಭಾಷೆ ಎಂದರೆ….
ಕಾಳುಗಳ ಅಂಕುರಿಸುವಿಕೆಯ
ಸುಸಂದರ್ಭದ ನಿಪ್ಪೊಸತು
ಭವಬಂಧಗಳಲಿ ಉತ್ಫಲ್ಲವಾಗುವ
ಮನಸುಗಳ ವಸಾಹತು….

ಭಾಷೆ ಎಂದರೆ….
ಉದ್ವಹದ ಸಂಹವನವಿದು
ಉದ್ಬೋಧದ ಊರ್ಜಸ್ವಿಯ ನಿಶಾನಿ
ಮನಸ್ಸಿನಾಳದಲ್ಲಿ ನೆಲೆನಿಲ್ಲೊ
ನಿಶ್ರೇಯಸದೊಳಗಿನ ಉತ್ಪಲಿನಿ….

ಭಾಷೆ ಎಂದರೆ….
ಜೀಕುವ ಪ್ರೇಂಖಿತದೊಳಗಿನ ಉತ್ಸಾಹ
ಅನುಭವ ಅನುಭಾವದ ಪ್ರಭೃತಿ
ಮುಸ್ಸಂಜೆಯ ಕೆಂಬಾರದ ಪ್ರದ್ಯುತಿ
ಬಾನಾಡಿಗಳ ಕಂಪಿನಿಂಪಿನ ಪ್ರಮತಿ
ಸಾತ್ವಿಕತೆಯ ಸಾದಾರ
ಸಾಫಲ್ಯದ ಮೇದುರ….

ಭಾಷೆ ಎಂದರೆ…
ಹಸುವಿನ ಕೆಚ್ಚಲೊಳಗೆ ಬಾಯಿಟ್ಟು
ಹಾಲೀರೊ ಕರುವಿನ ಪ್ರೀತಿ
ಆತ್ಮೀಯತೆಯ ಪರಾಕಾಷ್ಟೆ
ಮಧುರ ಬಾಂಧವ್ಯದ ಬಂಧುರ
ಪ್ರತಿಕ್ರಿಯೆಗಳೆಂಬ
ಸದ್ಭಾವಗಳ ಬಿತ್ತರಿಕೆಯ ಕಣಜ ನಿಷ್ಟೆ
ಸಂಹೃಷ್ಟಿಯ ಭಾವ
ಸಾನಂದದ ಜೀವ…..

ಭಾಷೆ ಎಂದರೆ..
ನನ್ನೆದೆಯಾಳದ ಜೀವನುಡಿ
ಉದ್ಭವಿಸಿ ಉತ್ಕರ್ಷಿಸುವ ನವಚೈತನ್ಯಧಾರೆ
ಸಂವಹನ ಸಂಪರ್ಕದ ಕೊಂಡಿ
ಜೀವನವನು ಹೂವಂತೆ
ಅರಳಿಸಿ ಮುನ್ನಡೆಸೊ ಬಂಡಿ
ಸಮುತ್ಕಟದ ಸಂವಹನ
ಜ್ಞಾನ ಸಂಲಬ್ಧದ ವಿಶೇಷಣ..

ಭಾಷೆ ಎಂದರೆ…..
ಬಾಂಧವ್ಯದ ಬೆಸುಗೆ
ಸ್ನೇಹ ಸಂಗಮದೊಳಗಿನ ಒಸಗೆ
ಭಾವಾಭಿವ್ಯಕ್ತದ ದಿವ್ಯ ಸಾಧನ
ಸದೃಢ ಸದ್ಭಕ್ತಿಯ ಭವ್ಯ ಸೇಚನದ ಮಲ್ಲಿಗೆ
ಸಂತಸದ ಜೀವಾಳ
ಮನಸ್ಸಿನ ನಿರಾಳ….

ಭಾಷೆ ಎಂದರೆ…
ಅಭಿಮತಗಳ ಸಂಕೇತ
ಅಭಿಪ್ರಾಯಗಳ ಸಾದ್ಯಂತ
ಸಾತ್ವಿಕ ನುಡಿಗಳ ಸಾದರದ ಪರ್ವ
ಸಾಪೇಕ್ಷಾ ಲಿಪಿಗಳ ಗಡಣವಿದು
ಸ್ವೀಕರಿಸಿದರೆ ಮುತ್ತು
ನಿರಾಕರಿಸಿದರೆ ಆಪತ್ತು
ಇದುವೆ ಭಾಷೆಯ ಗಮತ್ತು…

ಭಾಷೆಎಂದರೆ….
ಹೊಂಬಾಳೆಯ ಕದರು ಚೆಂಬೆಳಕಿನ ಮೊಹರು
ಚುಕ್ಕಿ ತಾರೆಗಳಂತೆ ಸೊಗಸು
ಪಲ್ಲವಿಸೊ ಹಸಿರಂಚು
ವಿಶ್ವಾಸಗಳ ಮೊತ್ತ ನಂಬಿಕೆಗಳ ಸುತ್ತ
ರಂಜಿಸುವ ದೀಪಾವಳಿ
ಸ್ಪಂದಿಸುವ ರಾಗಾವಳಿ..


7 thoughts on “ಅಭಿಜ್ಞಾ ಪಿ ಎಮ್ ಗೌಡ ಕವಿತೆ-ಭಾಷೆಯ ಪಾರುಪತ್ಯ

Leave a Reply

Back To Top