ಕಾವ್ಯ ಸಂಗಾತಿ
ಕಾಲವನ್ನು ಹಿಡಿದಿಡಲಾಗದು….
ಅಭಿಜ್ಞಾ ಪಿ ಎಮ್ ಗೌಡ
ನಿಟ್ಟುಸಿರುಗಳ ತಹತಹಿ
ಮನವನ್ನೇಕೆ
ತಡಬಡಿಸುತಿವೆ.?
ಪ್ರವಹಿಸೊ ನೀರಿನಂತೆ
ಈ ಬದುಕ ಸಾರಸಿರಿ
ನೋವು ನಲಿವುಗಳು
ಒಲವು ಚೆಲುವುಗಳ
ಬಂಧುರ ಅದ್ಯಾಕೆ
ಪ್ರಕ್ಷೋಭಿಸಿವೆಯೋ..?
ಫರ್ಮಾನು ಹೊರಡಿಸಿದರು
ತಸ್ಕರರಂತೆ ನುಸುಳಿ
ಅಂತಃಪಟಲ ಪರದೆಯ
ದ್ವಂಸಗೊಳಿಸುತಿವೆ
ಆ ಹಳೆ ನೆನಪುಗಳ ಪಿಂಡಿ.!
ನಿನ್ನೆಗಳ ನೆನಪಿನಲಿ
ನಾಳೆಗಳ ಭರವಸೆಯಲಿ
ಇಂದಿನ ಜಿಜ್ಞಾಸೆಗಳು
ಹತಾಶದಿ ಮನ
ತಲ್ಲಣಗೊಳಿಸಿವೆ ಹಿಂಡಿ.!
ಇವೆಲ್ಲ ಬಾಳ ಚಿತ್ತಾರ
ಬದುಕು ನಿಂತ ನೀರಲ್ಲ
ಕಾಲ ಯಾರಿಗೂ
ಕಾಯುವಂತದ್ದು ಅಲ್ಲ.!
ಮೆರೆದವರು ಮೆರೆಯಲಿ
ಸಮಯ ಬಂದಾಗ
ಪ್ರತ್ಯಕ್ಷ ದರ್ಶನಕ್ಕು ಸಿದ್ಧ
ತಪ್ಪುನೆಪ್ಪುಗಳ ಲೆಕ್ಕಾಚಾರದಿ
ಸ್ಪಷ್ಟ ವ್ಯಾಖ್ಯಾನಕ್ಕು ಬದ್ಧ
ಕಾಲ ಯಾರ ಅಂಕುಶಕ್ಕೂ
ಒಳಪಟ್ಟಿಲ್ಲ.!
ಅನುಭವವೆಂಬ
ಕಡೆಗೋಲಂತೆ ನಮ್ಮೀ ಬದುಕು
ಬುದ್ಧಿಗಳ ಕಡೆದು ಆತ್ಮ ಪ್ರಜ್ಞೆ
ಮೂಡಿಸೊ ಸಾಕಲ್ಯದ
ಪ್ರದೀಪವೀ ಬಾಳ ಬೆಳಕು.!
ಸಮರವಲ್ಲ ಸರಳವಲ್ಲ
ಈ ಬಾಳಯಾನ
ಜೀವಿಸೊ ಕಾಲವಷ್ಟೆ ಕ್ಷಣಿಕ.!
ಬಾಳ ದಾರಿ ದ್ಯೋತಕ.!
ತಡವರಿಸಿದ ನಡೆಗೆ
ಕದಲದ ಕಾಯದೊಳಗೆ
ಸರಿದು ಬೆದರಿ
ಜಿಗಿದ ಬೆಸೆವ ಬಂಧ
ಈ ಬಾಳೆಂಬ ಚದುರಂಗ..!
ಹುಟ್ಟೊ ಸೂರ್ಯ
ಬೀಸೊ ಗಾಳಿಯ ತಡೆವರಾರು.?
ಉಕ್ಕುವ ಅಲೆಗಳಿಗೆ
ಗೆಜ್ಜೆ ಕಟ್ಟುವವರಾರು.?
ಬಿರುಗಾಳಿಯಾದರೇನು.?
ತಂಬೆಲರಾದರೇನು.?
ಕಂಪನ ಇಂಪನ
ನೋವು ನಲಿವುಗಳ
ಮೂರು ದಿನದ ಸಂತೆಯಲಿ
ಜನನ ಮರಣಗಳೆರಡು ನಿಶ್ಚಿತ
ಜಾರುತಿರುವ ಸಮಯದಂತೆ..!
ತುಂಬಾ ಸೊಗಸಾಗಿದೆ.