ಜ್ಯೋತಿ , ಡಿ .ಬೊಮ್ಮಾಲಲಿತ ಪ್ರಬಂಧ

ಲಲಿತ ಪ್ರಬಂಧ

ಸುತ್ತೇಳು ನೆರೆಗಂಜಿ….

ಜ್ಯೋತಿ , ಡಿ .ಬೊಮ್ಮಾ.

ಸುತ್ತೇಳು ನೆರೆಗಂಜಿ….

ಪಕ್ಕದ ಖಾಲಿ ನಿವೇಶನ ನೋಡಲು ಬಂದ ದಂಪತಿಗಳು ಜಾಗದ ಆಳ ಅಗಲ ವಿಸ್ತೀರ್ಣ ನೋಡುವದಕ್ಕಿಂತ ಸುತ್ತಮುತ್ತಲು ವಾಸಿಸುವ ಜನರಾರು , ಯಾವ ಜನಾಂಗದವರು , ಯಾವ ಧರ್ಮದವರು ಎಂಬ ಬಗ್ಗೆ ಚರ್ಚಿಸುತಿದ್ದರು. ಅವರ ಮಾತಿನ ಸದ್ದಿಗೆ ಬಾಗಿಲು  ತೆಗೆದು ಇಣುಕಿದೆ. ನಾವು ನಿಮ್ಮ ನೆರೆಯವರಾಗುವವರು ಎಂದು ಮುಗುಳ್ನಕ್ಕರು. ಕುಶಾಲೋಪರಿ ಮಾತಿನ ನಂತರ ಸುತ್ತಲೂ ನಮ್ಮ ಜನಾನೇ ಇದ್ದಾರಲ್ವ , ಎಂದು ಕೇಳಿದರು.ನಮ್ಮವರಂದುಕೊಂಡರೆ ಎಲ್ಲರೂ ನಮ್ಮವರೆ ಎಂದೆ . ಹಾಗಲ್ಲ ನಮ್ಮ ಜಾತಿಯವರಾದರೆ ಪರವಾಗಿಲ್ಲ , ಬೇರೆ ಬೇರೆ ಜಾತಿಯವರಿದ್ದರೆ ಅಡಜಸ್ಟ್ ಮಾಡಿಕೊಳ್ಳುವದು ಕಠಿಣ ಎಂದರು. ಬೇರೆಬೇರೆ ಜಾತಿಯವರಾರೆ ನಮಗೇನು ತೊಂದರೆ , ಅವರ ಮನೆಯಲ್ಲಿ ಅವರಿರುತ್ತಾರೆ ನಮ್ಮ ಮನೆಯಲ್ಲಿ ನವಿರುತ್ತೆವೆ , ಇದರಲ್ಲಿ ಅಡ್ಜಸ್ಟ ಮಾಡಿಕೊಳ್ಳುವದೇನಿದೆ ಎಂದೆ. ಇಲ್ರಿ , ನಮಗೆ ನಮ್ಮ ನಮ್ಮ ಮಂದಿ ಇದ್ದರೆ ಚಂದ , ಬೇರೆ ರಿಲಿಜನ್ ದವರ ಸಂಗಡ ನಮಗ ಆಗಲ್ಲ ಎಂದು ರಾಗ ಏಳೆದರು.  ನಮ್ಮ ಮನೆಯಲ್ಲೆ ಹೆತ್ತವರೊಂದಿಗೆ , ಒಡಹುಟ್ಟಿದವರೊಂದಿಗೆ  ರಕ್ತಸಂಭಂಧಿಗಳೊಂದಿಗೆ ಕೂಡಿ ಬಾಳಲಾಗದ ನಾವು  ನಮ್ಮ ನೆರೆ ಹೊರೆಯವರು ಒಳ್ಳೆಯವರಾಗಿರಬೇಕು , ನಮ್ಮವರೆ ಆಗಿರಬೆಕೆಂದೂ ಬಯಸುವದು ವಿಪರ್ಯಾಸವೆಂದು ಹೇಳಬಹುದು.

ಪ್ರತಿಯೊಬ್ಬರೂ ಮನೆ ಅಥವಾ ನಿವೇಶನ ಕೊಳ್ಳುವಾಗ ಬಯಸುವದು ನೆರೆ ಹೊರೆ ಚನ್ನಾಗಿರಬೆಕೆಂದು. ; ನಾವು ಛಂದಿದ್ದರೆ ದುನಿಯಾ ಛಂದ್ ; ಅನ್ನುವ  ಮಾತು ನಾವೆಲ್ಲ ಮರೆತಿದ್ದೆವೆ. ಸದಾ ಬೇರೆಯವರು ನಮ್ಮೊಂದಿಗೆ ಚನ್ನಾಗಿರಬೆಕೆಂದೇ  ಆಪೇಕ್ಷಿಸುತ್ತೆವೆ. ಅಕ್ಕಪಕ್ಕವೇ ಇರುವ ಒಡಹುಟ್ಟಿದವರು ಸ್ನೇಹಿತರು ಒಬ್ಬರಿಗೊಬ್ಬರು ಮಾತಾಡದೆ ಅಜಾತ ಶತ್ರುಗಳಂತೆ ವಾಸಿಸುವ ನಾವು  ಸುತ್ತಲೂ ನಮ್ಮನಮ್ಮವರೇ ಇರಬೆಕೆಂದು ಬಯಸುವ ಪರಿಭಾಷೆ ಅದಾವದೋ.

ಒಂದು ಕಾಲದಲ್ಲಿ ನೆರೆಹೊರೆ ಎಂದರೆ ಸಂಭಂಧಕ್ಕೂ ಮೀರಿದ ಬಾಂಧವ್ಯ ಹೊಂದಿರುತಿದ್ದರು. ಒಂದು ಒಳ್ಳೆ ಕೆಟ್ಟ ಸಂದರ್ಭಗಳಲ್ಲಿ ಸದಾ ಸಹಾಯ ಹಸ್ತ ಚಾಚಿರುತಿದ್ದರು , ಯಾವ ಪ್ರತಿಫಲಾಪೇಕ್ಷೆಯು ಹೊಂದದೆ. ನಾವು ಚಿಕ್ಕವರಿದ್ದಾಗ ನಮ್ಮ ಮನೆಯಲ್ಲಿರುವದಕ್ಕಿಂತ ಪಕ್ಕದ ಮನೆಯಲ್ಲಿರುತಿದ್ದುದ್ದೆ ಹೆಚ್ಚು. ಅಲ್ಲೆ ಆಡಿ ಉಂಡು ಮಲಗಿದಾಗ ಅವರೆ ಎತ್ತಿಕೊಂಡು ತಂದು ನಮ್ಮ ಮನೆಯಲ್ಲಿ ಮಲಗಿಸುತಿದ್ದರು. ತಮ್ಮ ಮನೆಯಲ್ಲಿ ಬೇಗ ಅಡುಗೆ ತಿಂಡಿ ಸಿದ್ದವಾಗದಿದ್ದರೆ ಪಕ್ಕದ ಮನೆಯಿಂದ ತಂದು ನಮ್ಮ ಹೊಟ್ಟೆ ಹಸಿವು ತಣಿಸುತಿದ್ದ ಅಮ್ಮಂದಿರಿಗೆ ಇದು ಸಂಕೋಚದ ವಿಷಯ ಅನಿಸಿದ್ದೆ ಇಲ್ಲ. ಪಕ್ಕದ ಮನೆಯಲ್ಲಿ ರೊಟ್ಟಿ ತಟ್ಟುವ ಸದ್ದು ಕೇಳೆಸಿದ್ದೆ ತಡ ಕೆಲಸಕ್ಕೆ ಹೊರಡುವ ಗಂಡಸರಿಗೆ ಅವರ ಮನೆಯಿಂದ ರೊಟ್ಟಿ ತಂದು ಉಣಬಡಿಸುತಿದ್ದರು.ಇಲ್ಲವೇ ಅವರೆ ತಂದು ಕೊಡುತಿದ್ದರು , ಅಷ್ಡೋಂದು ಕಾಳಜಿ ಭಾವ ನೆರೆಹೊರೆ ಎಂದರೆ.

 ನಾನು ನಮ್ಮ ಹೊಸ ಮನೆಗೆ ಬಂದಾಗ ಸುತ್ತಮುತ್ತಲೂ ಮನೆಗಳಿಲ್ಲದಿರುವದಕ್ಕೆ ಚಿಂತೆಯಾಗಿತ್ತು.ಸಮಯಕ್ಕೆ ಚಿಟಿಕೆ ಉಪ್ಪು ಬೇಕಾದರು ತರಲು ಒಂದು ಮನೆ ಇಲ್ಲವಲ್ಲ ಎಂಬ ಚಿಂತೆಯಾಗಿತ್ತು. ಎಷ್ಟೆ ಮುಂಜಾಗ್ರತೆಯಿಂದ ದಿನಸಿ ವಸ್ತು ಗಳು ತಂದಿಟ್ಟರೂ ಅದಾವ ಮಾಯದಲ್ಲೋ ಮುಗಿದದ್ದು ಒಮ್ಮೊಮ್ಮೆ ಗೊತ್ತೆ ಆಗುವದಿಲ್ಲ. ಮೊದಲೆಲ್ಲ ಮನೆಗೆ ಅಥಿತಿ ಗಳು ಧಿಢಿರ್ ಎಂದು ಆಗಮಿಸುತಿದ್ದರು . ಅಥಿತಿಗಳಿಗೆ ಟಿ ಮಾಡಲು ಹಾಲು ಒಲೆಯ ಮೇಲಿಟ್ಟು ಟಿ ಪುಡಿಯ ಡಬ್ಬಿಯ ಮುಚ್ಚಳ ತೆಗೆದರೆ ಖಾಲಿ , ತಕ್ಷಣ ಮಕ್ಕಳಿಗೆ ಒಂದು ಬಟ್ಟಲು ಕೊಟ್ಟು ಪಕ್ಕದ ಮನೆಗೆ ಅಟ್ಟಲಾಗುತಿತ್ತು , ಹೀಗೆ ಹಾಲು , ಸಕ್ಕರೆ ,ಹಿಟ್ಟು ಗಳಿಗೆಲ್ಲ ನೆರೆಮನೆ ಎಂಬ ಆಪತ್ಭಾಂಧವರಿರದಿದ್ದರೆ ಹೇಗೆ .. ಮನೆಯ ಗಂಡಸರು ಊರಿಗೆ ಹೋಗಿದ್ದರೆ ,ಇಲ್ಲವೇ ತಡ ರಾತ್ರಿ ಒಬ್ಬರೆ ಇರುವ ಪ್ರಸಂಗದಲ್ಲಿ ಪಕ್ಕದಮನೆಯವರು ಇದ್ದಾರೆ ಎನ್ನುವದೆ ದೈರ್ಯದ ವಿಷಯವಾಗಿರುತಿತ್ತು. ತಾವು ಮನೆಯಲ್ಲಿ ಇರದಿದ್ದರೆ ಮಕ್ಕಳನ್ನು ನೋಡಿಕೊಳ್ಳಲು ಪಕ್ಕದ ಮನೆ ಎಂಬ ಆಪ್ತರಿದ್ದರೆ ಅದಕ್ಕಿಂತ ಸಮಾಧಾನದ ಭಾವ ಮತ್ತಾವದಿದೆ.

ಕಷ್ಟ ಸುಖ , ಮನದ ಬೇಗುದಿ ಹೇಳಿಕೊಳ್ಳಲು ಆಪ್ತರಿಗಾಗಿ ಸದಾ ಹುಡುಕುತ್ತದೆ ಮನ . ಬಂಧುಗಳು ಸಂಭಂಧಿಕರಿಗೆ ಹೇಳಿಕೊಳ್ಳಲಾಗದ ವಿಷಯಗಳು ನೆರೆಹೊರೆಯವರ ಮುಂದೆ ಹೇಳಿಕೊಂಡು ಹಗುರಾಗುವದಿದೆ. ಬೆಳಿಗ್ಗೆ ಅಂಗಳ ಕಸ ಗುಡಿಸುವದರಿಂದ ಶುರುವಾಗುವ ಮಾತುಕತೆ ರಾತ್ರಿ ಮಲಗುವವರೆಗೂ ಸಾಗುತ್ತಲೇ ಇರುತ್ತವೆ.

ಮಕ್ಕಳೆಲ್ಲ ವಿದ್ಯಾಭ್ಯಾಸ ಮುಗಿಸಿ ಪಟ್ಟಣಗಳತ್ತ ಮುಖಮಾಡಿ ಅಲ್ಲೆ ತಮ್ಮ ಬದುಕು ಕಂಡುಕೊಳ್ಳುವ ಎಷ್ಟೋ ಜನರ ಹೆತ್ತವರು ತಮ್ಮ ಊರು ಬಿಟ್ಟು ಮಕ್ಕಳೊಂದಿಗೆ ಉಳಿಯುವ ಸಂದರ್ಭ ಬಂದರೆ ಅವರು ಮೊದಲು ಬಯಸುವದು ತಮ್ಮ ನೆರೆ ಹೊರೆಯವರನ್ನು.ಆ ಮಹಾ ನಗರದ  ಧಾವಂತ ಬದುಕಿನಲ್ಲಿ ಮಾತಾಡಲು ಯಾರಿಗೆ ಪುರುಸೊತ್ತಿದೆ

. ತಮ್ಮ ಪಕ್ಕದ ಮನೆಯಲ್ಲಿ ಯಾರಿದ್ದಾರೆಂದು ತಿಳಿದು ಕೊಳ್ಳುವ ಕೂತುಹಲವೂ ಇಲ್ಲ ಅವರಿಗೆ. ಮನೆಯಲ್ಲಿ ಇರುವ ಮೂವರಿಗೆ ತಮ್ಮತಮ್ಮಲ್ಲಿ ಮಾತಾಡಲು ಸಮಯವಿಲ್ಲದಾಗ ಪಕ್ಕದ ಮನೆಯವರೊಂದಿಗೆ ಮಾತಾಡುವದು ದೂರದ ವಿಷಯ. ಅತೀ ಅಗತ್ಯ ವಸ್ತುಗಳು ವಿನಿಮಯ ಮಾಡಿಕೊಳ್ಳದೆ ಅದೇಗೆ ಬದುಕುತ್ತಾರೆಂದು ಸೋಜಿಗವಾಗುತ್ತದೆ ನನಗೆ.

ಈಗ ಎಲ್ಲರೂ ಎಕಾಂಗಿ ವಾಸಿಗಳೆ , ಟಿ ವಿ ಪೋನ್ ಗಳೆ ಅವರ ಉತ್ತಮ ಸಂಗಾತಿಗಳು  . ಹಿರಿಯರು ಈಗ ಮಾತಿಗಾಗಿ ಕಾತರಿಸದೆ ಮೌನವಾಗಿರಲು ಕಲಿತಿದ್ದಾರೆ. ನೆರೆ ಹೊರೆಯವರಿಂದ ದೂರವಾಗಿ ತಮ್ಮ ಪಾಡಿಗೆ ತಾವಿರಲು ಬಯಸುತ್ತಾರೆ.

ಈಗಿನ ನೆರೆ ಹೊರೆಯು ಅಸಹಿಷ್ಣತೆ ಉಳ್ಳವರು.ಒಬ್ಬರು ತಮ್ಮ ಮನೆಯಲ್ಲಿ ಒಗೆದ ಬಟ್ಟೆಗಳನ್ನು ಕಂಪೌಂಡ ವಾಲ್ ಮೇಲೆ ಹಾಕಿದಕ್ಕೆ ಅದರಿಂದ ಸುರಿದ ನೀರು ತಮ್ಮ ಕಂಪೌಂಡ್ ನ ನೆಲ ಒದ್ದೆಯಾಗಿಸಿತೆಂದು ಜಗಳವಾಡಿದರೆ ಮತ್ತೊಬ್ಬರು ಅವರ ಕಂಪೌಂಡ್ ನಲ್ಲಿ ಬೆಳೆದ ಗಿಡಗಳ ಎಲೆಗಳು ತಮ್ಮ ಕಂಪೌಂಡ್ ನಲ್ಲಿ ಬಿಳುತ್ತಿವೆ ಎಂದು ಗಲಾಟೆ ಮಾಡಿದರು.ಒಂದು ಅಂಗುಲ ಸ್ಥಳ ಬಿಡದೆ ಒಬ್ಬರ ಮನೆಗೊಬ್ಬರು ಹತ್ತಿ ಮನೆ ಕಟ್ಟಿಕೊಂಡರೆ ಇವೆಲ್ಲ ಸಹಜ . ಆದರ ಸಹಜವೆಂದು ಭಾವಿಸುವ ಮನ ಯಾರಿಗೂ ಇಲ್ಲ. ಎಂದೋ ಕೊಟ್ಟ ಬಟ್ಟಲು ವಾಪಸು ಕೊಡಲಿಲ್ಲವೆಂದೂ , ಹಿತ್ತಲಿನಿಂದ ಕರಿಬೇವಿನ ಏಲೆ ಕಿಳುತಿದ್ದಾರೆಂದೂ , ಅವರ ಮನೆ ಮುಂದಿನ ಕಸ ಈ ಕಡೆ ದಬ್ಬಿದರೆಂದೂ ಇನ್ನೂ ಇಂತಹ ಅನೇಕ ವಿಷಯಗಳಿಗೆ ಸಂಘರ್ಷ ಏರ್ಪಡುತ್ತಲೇ ಇರುತ್ತದೆ. ಇನ್ನೂ ಕೆಲವು ನೆರೆ ಹೊರೆಯವರು ತಾವು ನೆರೆ ಮನೆಯವರೆಂದು ಸರ್ವಾಧಿರಾರಿ ಧೋರಣೆ ತೋರುತ್ತಾರೆ. ಅವರ ಪಾರ್ಕಿಂಗ್ ನಲ್ಲಿ ತಮ್ಮ ವಾಹನ ನಿಲ್ಲಿಸುವದು.ಪಕ್ಕದ ಮನೆಯ ಗಿಡದ ಹೂ ಹಣ್ಣಿನ ಮೇಲೆ ಹಕ್ಕು ಸಾಧಿಸುವದು , ನೆರೆಯವರೆಂಬ ಕಾರಣಕ್ಕೆ ಅವರ ವಯಕ್ತಿಕ ವಿಷಯಗಳನ್ನೆಲ್ಲ ಕೆದಕಿ ಕೇಳುವದು , ಇಂತಹ ಸಂದರ್ಭಗಳಲ್ಲಿ ನೆರೆ ಎಂಬುದು ಹೊರೆಯಾಗುವದೆ ಹೆಚ್ಚು.

ಈಗಿನ ಕಾಲಘಟ್ಟದಲ್ಲಿ ನೆರೆಯವರೆಲ್ಲ ಆಪ್ತರಾಗೆ ಇರುತ್ತಾರೆಂದು ಹೇಳಲಾಗದು , ಎಷ್ಟು ಸಾಮೀಪ್ಯ ಹೊಂದುತ್ತೆವೋ ಅಷ್ಟೇ ಬೇಗ ವೈಮನಸ್ಸು ತಲೆದೂರುತ್ತಿದೆ. ಅಕ್ಕಪಕ್ಕದವರ ಬಗ್ಗೆ ಅಸಹನೆ , ಮತ್ತೊಬ್ಬರ ಉನ್ನತಿ ನೋಡಿ ಸಂತೋಷ ಪಡುವ ಗುಣ ಕಳೆದುಕೊಳ್ಳತಿಡಗಿದ್ದೆವೆ. ಪಕ್ಕದಲ್ಲಿದ್ದವರು ಸಂಕಷ್ಟದಲ್ಲಿದ್ದಾಗ ಒಳಗೊಳಗೆ  ಸಂತೋಷಿಸುವ ವಿಕೃತಿ ಬೆಳೆಯುತ್ತಿರುವದು ವಿಷಾದನೀಯ. ಅತ್ತೆ ಮಾವರಿಗಂಜಿ , ಸುತ್ತೇಳು ನೆರೆಗಂಜಿ ಜೀವಿಸಬೇಕೆಂಬ ಜನಪದ ನುಡಿ ಈಗ ಮಿಥ್ಯ. ನೆರೆಹೊರೆಯವರಿಂದ ದೂರವಾಗಿ ಬದುಕುವದೇ ಈಗಿನ ವಾಸ್ತವ ಸ್ಥಿತಿ.

ನೆರೆಹೊರೆಯೆಂಬ ಸೌಹಾರ್ದ ತೆ ನಮ್ಮನಮ್ಮವರು ಅಥವಾ ನಮ್ಮ ಜಾತಿ ಜನಾಂಗದಿಂದ ಮೂಡುವದಲ್ಲ. ಸೌಹಾರ್ದತೆಯು ಮನಸ್ಸಿನ ಭಾವನೆಯಿಂದ ಮೂಡುವಂಥದ್ದು.


 ಜ್ಯೋತಿ , ಡಿ .ಬೊಮ್ಮಾ.

Leave a Reply

Back To Top