ಎಸ್ ವಿ ಹೆಗಡೆ ಕವಿತೆ-ಮೋಹ

ಕಾವ್ಯ ಸಂಗಾತಿ

ಮೋಹ

ಎಸ್ ವಿ ಹೆಗಡೆ

,

ಮೋಹದ ಜಾಲದಲಿ
ಸಿಲುಕಿದ ಮನ
ಸಂಸಾರ ಸಾಗರದಲ್ಲಿ
ಯಾರೋ ಎಸೆದ
ಗಾಳಕ್ಕೆ ಸಿಕ್ಕ ಮೀನು
ಕಾಣದ
ಜೇಡಿನ ಬಲೆಯಲ್ಲಿ
ಸಿಕ್ಕಿ ಒದ್ದಾಡುವ ಜೀವಾಣು

.

ಹೆಣ್ಣು ಹೊನ್ನು ಮಣ್ಣು
ಪತಿ ಪತ್ನಿ ಮಗಮಗಳು
ಮನೆಮಠ ಜಾತಿ ನೀತಿ
ಭಾಷೆ ದೇಶ ವೇಷ
ನಾಮ ಕಾಮ ಗುಣ ವಿಶೇಷ
ವಯೋಮಿತಿಗೆ ತಕ್ಕಂತೆ
ಅಂಟುವ ಅಗಣಿತ
ಮೋಹ ವ್ಯಾಮೋಹ

ಎಷ್ಟೇ ತಿಕ್ಕಿ ತೊಳೆದರೂ
ಹೋಗದ ಹಲಸಿನ ಮೇಣ
ಬೆರಳಿಗೆ ಅಂಟಿದ ಸವಿದ ತುಪ್ಪ
ಗಾಢ ಮೋಹದ ಬಿಗಿತ
ಕುಣಿತ ಜಿಗಿತ ಮೋಹದ ಆಟ
ಇನ್ನೇನು ನಾನು ಜಯಿಸಿದೆ
ಅನ್ನುವಷ್ಟರಲಿ ಎಲ್ಲ
ಮೋಹವೂ ಮಾಯ॥


Leave a Reply

Back To Top