ಕಾವ್ಯ ಸಂಗಾತಿ
ನೀಲಕಾಯ
ಹುಳಿಯಾರ್ ಷಬ್ಬೀರ್
ನಾನು..
ಬದುಕಿನ ವಿಶ್ವವಿದ್ಯಾಲಯದಲ್ಲಿ
ಸ್ವಾಭಿಮಾನದ ಬೆಂಕಿಯ ಉಂಡೆ
ಬಡತನವಷ್ಟೇ ದೌರ್ಬಲ್ಯ
ಹಸಿವಿಗೆ ಸಿಡಿದೇಳುವ ಶಕ್ತಿ ಇದೆ
ಅದು ಶಾಪವಲ್ಲ
ಉದರದ ಪ್ರತಿರೂಪ
ನನ್ನ ಬದಲಾವಣೆಯ ಕನಸು
ಲೋಕ ಗೆಲ್ಲುವಷ್ಟಿದೆ…!
ನನ್ನನ್ನು ಗುರುತಿಸುವಷ್ಟು
ಇದು ಹೆಮ್ಮೆಯಲ್ಲವೇ..? ನನಗಲ್ಲ
ನನ್ನ ಹೆತ್ತವಳಿಗೂ ಅಲ್ಲ
ಭಾರತಾಂಬೆಗೆ
ಭಾರತೀಯರಿಗೆ..
ನನ್ನ ಆಸ್ತಿ ನನ್ನ ಜನ
ಅದಕ್ಕೆ ದೊಡ್ಡಾಲದ ಮರವನ್ನೇ
ಕೊಟ್ಟಿದ್ದು ಗುಲಾಮಗಿರಿಗೆ
ಪರ್ಯಾಯ ತಾಕತ್ತು ನೀಡಿದ್ದು
ನಮ್ಮ ಅವಮಾನದ ಹಳೆಯ
ಗಾಯಗಳಿಗೆ ಸಮಾನತೆಯ
ಮುಲಾಮು ಹಚ್ಚಿದ್ದು
ಮಾನವೀಯತೆ ಹಂಚಲು
ಮನಸ್ಸು ಶುಭ್ರಗೊಳಿಸಿದ್ದು..
ಜಾತಿ ಜಾತಿ ಎನ್ನುವ
ಒಳ ಹುನ್ನಾರದ ಕೂಪ ಮಂಡೂಕಗಳ
ಕಣ್ಣು ಕಿವಿ ಪ್ರಜ್ಞೆ
ಮೊಂಡಾದಾಗ ತಣ್ಣಗೆ ಸ್ಪೋಟಿಸಿದ್ದು
ಸಲಗದ ಆತ್ಮವಿಶ್ವಾಸದಿಂದ
ಮೌಲ್ಯ ಸೃಷ್ಟಿಸಲಾರೆ
ಆದರೆ…?
ವಿಸರ್ಜಿಸುವ ತಾಕತ್ತಿರುವ
ಫಲವತ್ತತೆ ಗೊಳಿಸುವ ಛಲವಿರುವ
ನೀಲಕಾಯ ಭೀಮ ನಾನು..
ನನ್ನದು ಕುರುಡು ಕ್ರಾಂತಿಯಲ್ಲ
ಜಗದ ಕ್ರಾಂತಿಯೆಂದು
ದೇವ ಗ್ರಂಥ ಸಂವಿಧಾನ ಬರೆದಿದ್ದು
ಬಾಬಾಸಾಹೇಬನಾಗಿದ್ದು
ಸತ್ಯವಲ್ಲವೇ…?