ಕಾವ್ಯ ಸಂಗಾತಿ
ಪರಿಶುದ್ಧವೆಂದರೆ
ಸ್ಮಿತಾ ಅಮೃತರಾಜ್. ಸಂಪಾಜೆ
ತೆರೆಯ ಮೇಲೆ ಬರುವ
ತಳುಕು ಬಳುಕಿನ ಹುಡುಗಿ
ಅಂಗೈಯೊಳಗಿಟ್ಟು, ಹಿಡಿದು ತಿರುಗಿಸಿ
ಮುಚ್ಚಿ, ತೆರೆದು ,ಆಘ್ರಾಣಿಸಿ
ಪರಿಶುದ್ಧತೆಯ ಪ್ರಮಾಣೀಕರಿಸಿ
ನೂರು ಅಂಕ ಕೊಟ್ಟು ನಕ್ಕು
ಕಣ್ ಕಟ್ಟಿಸಿ ನಮ್ಮ ದಿಕ್ಕುತಪ್ಪಿಸಿ ಹೋಗುತ್ತಾಳೆ.
ಎಲ್ಲವೂ ಕಡೆತನಕ ಕೆಡದಂತೆ
ಉಳಿಯಬಲ್ಲುದೆ?
ಏಕಾಂತ ಸಂಜೆಯಲ್ಲಿ ಅದೇ ಗುಂಗಿಗೆ ಬಿದ್ದು
ಮೌನವೊಂದು ಪತರಗುಟ್ಟುತ್ತದೆ.
ತಾಜಾ ಹಾಲು ಒಡೆಯುತ್ತದೆ, ಮೊಸರಾಗುತ್ತದೆ
ದಿನ ಕಳೆದರೆ ಹುಳಿಯಾಗುತ್ತದೆ
ಘಮದ ತುಪ್ಪ ನಿಧಾನಕ್ಕೆ ಕಮಟುಗಟ್ಟುತ್ತದೆ
ವರ್ಷ ಕಳೆದರೆ ಜೇನೂ ಹರಳುಗಟ್ಟುತ್ತದೆ.
ತಾಕಿ ಹೋದ ಶುದ್ಧ ಒಲವ ಹವೆಯೊಂದು
ತಾನೇ ತಾನಾಗಿ ಹಾಗೆಯೇ ತಿರುಗಿ ಬರುತ್ತದೆಯೆಂಬ
ನಂಬಿಕೆಯಲ್ಲಿ ಶಬರಿಯಾಗಿದ್ದಾಳೆ ಆಕೆ.
ಕಡಿದು ಹೋದ ಮೇಲೂ ಒಲವಿನೊಂದು
ತಂತು ಹಿಡಿದು ಹಳೆ ಎಳೆಗಳ
ಎಳೆದು ತಂದು ನೇಯುತ್ತಾ
ಎದೆಯ ಕವಾಟಿನೊಳಗದನ್ನು ಶುಭ್ರವಾಗಿಯೇ
ಜೋಕೆ ಮಾಡುವೆನೆಂಬ ಅವಳ ತೀವ್ರಧ್ಯಾನದ
ಸುಖವನ್ನು ಯಾಕೋ ಕದಡ ಬೇಕೆನ್ನಿಸುತ್ತಿಲ್ಲ
ನನಗೆ.
ಚಂದದ ಕವಿತೆ ಸ್ಮಿತಾ
Super ಕವಿತೆ
ಪರಿಶುದ್ಧ ಪ್ರೀತಿಯ ಸಾಲುಗಳ ಕವಿತೆ ಚಂದ ಇದೆ
ಬದುಕು, ಭಾವನೆಯ ಬೆರಗು.