ಕಾವ್ಯಸಂಗಾತಿ
ಶರಣೆನ್ನತೇನ ನಾ ನಿನಗ
2- ಜನೆವರಿ ಡಾ.ಚಂದ್ರಶೇಖರ ಕಂಬಾರ ಅವರ ಜನ್ಮದಿನ ಶುಭಾಶಯಗಳೊಂದಿಗೆ ವಂದನೆಗಳು ಹಮೀದಾ
ಹಮೀದಾಬೇಗಂ ದೇಸಾಯಿ
ಹಿರೇರ ಹೇಳೂ ಮಾತೊಂದ
ಮ್ಯಾಲಿಂದಮ್ಯಾಲ ನೆನಪಾಗತೇತಿ
ಕೋಣೀ ಕೂಸು ಕೊಳಿತಂತ
ಓಣೀ ಕೂಸು ಬೆಳೀತಂತ…ಹಂಗ
ಹಳ್ಳಿ ಮನ್ಯಾಗಿನ ಚಿಮಣೀ ದೀಪ
ಬೆಂಗ್ಳೂರ ಊರಾಗ ಬೆಳಕಾ ಮಾಡಿ
ಕನ್ನಡತಾಯಿ ದೀವಟ್ಗೀ ಹೊತ್ಸಿ
ದಿಲ್ಲಿತನಕಾ ” ಉಧೋ “ಅಂದಿ..
ಕುಂದರನಾಡಿನ ಜವಾರಿಹೋರಿ
ಶಹರದಾವ್ರನೆಲ್ಲಾ ‘ ಗಾರ ‘ ಮಾಡಿ
ಹತ್ತಾರದೇಶಾ ಸುತ್ತಾಡಿ ಬಂದ್ರೂ
ದೇಸೀತನಾ ಬಿಡಲಿಲ್ಲ ಧೀರಾ..!
ಸಂಗ್ಯಾ- ಬಾಳ್ಯಾನ ಸಂಗಾಟ ಕರಕೊಂಡ
ಕರಿಮಾಯಿ-ಮಹಾಮಾಯಿ ಜೋಡಿ ಮಾಡ್ಕೊಂಡ
ಜೋಕುಮಾರಸ್ವಾಮಿನ ದೇಶಾತಿರಸ್ಯಾಡಿ
ಸಿರಿ-ಸಂಪಿಗೆ ಹೂವ ಸೂರಿಮಾಡ್ದಿ…
ಕಾಡುಕದುರೆ ಏರಾನ್ ನೋಡೋ
ಋಷ್ಯಶೃಂಗ ಹತ್ಯಾನ ನೋಡೋ
ಶಿಖರ ಸೂರ್ಯನ ಕಂಡಾನ ನೋಡೋ
ಎಲ್ಲೈತೀ ಶಿವಾಪುರ ಕೇಳ್ಯಾನ ನೋಡೋ..
ಹಾಡ ಬರದಾನ ತಾಽನ ಹಾಡ್ಯಾನ
ನಾಟಕ ಬರದಾನ ಸಿನಿಮಾ ಮಾಡ್ಯಾನ
ಎಲ್ಲಾಕಿಂತ ಹೆಚ್ಚಿಂದಂದ್ರ
ಹಂಪಿ ಕನ್ನಡ ಕುಲಪತಿ ಆಗ್ಯಾನ..!!
ಏನೇನ ಗಳಸಬೇಕ ಎಲ್ಲಾ ಗಳಸ್ಯಾನ
ಮಾನುಳ್ಳ ಮನಶ್ಯಾಮನದಾಗ ನಿಂತಾನ
ಶಿವರಾತ್ರಿ ಹೊತ್ತಿಗೆ ಎತ್ತರಕೇರ್ಯಾನ
ನಾಡದೇವಿಗಿ ಕಿರೀಟ ತೊಡಿಸ್ಯಾನ …
ಹಸನಬದುಕಿನ ಜ್ಞಾನದ ಭಂಡಾರಾ
ಜಾನಪದ ಸೊಗಡಿನ ಜಾದೂಗಾರಾ
ಘೋಡಗೇರಿಯ ದೇಶೀ ಕಸಬುದಾರಾ
ಶರಣೆನ್ನತೇನ ನಾ ನಿನಗ ಚಂದ್ರಶೇಖರ ಕಂಬಾರಾ