ಕಾವ್ಯಯಾನ

ಬೆಳಕಿನ ಬೀಜಗಳು..

ಚಂದ್ರಪ್ರಭ

ಬೆಳಕಿನ ಬೀಜಗಳು..

ಪುರುಷನೆಂದರು ಪ್ರಕೃತಿಯೆಂದರು
ನಾವು ತಲೆದೂಗಿದೆವು
ಗಂಡೆಂದರು ಹೆಣ್ಣೆಂದರು
ನಾವು ತಲೆದೂಗಿದೆವು
ಅವನೆಂದರು ಅವಳೆಂದರು
ನಾವು ತಲೆದೂಗಿದೆವು
ತುದಿಯೆಂದರು ಮೊದಲೆಂದರು
ನಾವು ತಲೆದೂಗಿದೆವು
ಅಖಿಲವೆಂದರು ಅಣುವೆಂದರು
ನಾವು ತಲೆದೂಗಿದೆವು

ಅನಾದಿಯಿಂದ ಇದು ನಡೆದೇ ಇದೆಯಲ್ಲ
ಹೊಸತೇನಿದೆ ಇದರಲ್ಲಿ!!
ನಾವು ಒಡಲು ತುಂಬಿ ಹೆತ್ತು ಹೊರುತ್ತ ಬಂದಿದ್ದೇವೆ
ಅಟ್ಟು ಬೇಯಿಸಿ ಹಸಿವ ನೀಗುತ್ತೇವೆ
ಚಳಿ ಗಾಳಿ ಮಳೆ ಬಿಸಿಲಿಗೆ ತತ್ತರಿಸುವಾಗ
ಜೀವವನು ವಾತ್ಸಲ್ಯದ ಸೆರಗಲ್ಲಿ ಕಾಪಿಡುತ್ತೇವೆ
ಸೂರುಗಳಿಗೆ ಜೀವ ತುಂಬಿ
ಲವಲವಿಕೆಯ ಮನೆಯಾಗಿಸುತ್ತೇವೆ
ಗೋಡೆಗಳನು ಕೆಡವಿ ಸೇತುವೆ ಕಟ್ಟುತ್ತೇವೆ
ಮನೆ ಅಂಗಳ ರಸ್ತೆಗಳನೆಲ್ಲ ಗುಡಿಸಿ
ಅಂದದ ರಂಗೋಲಿ ಬಿಡಿಸುತ್ತೇವೆ
ಬಟ್ಟೆ ಪಾತ್ರೆ ನೆಲ ಗೋಡೆ ಎಲ್ಲ ತಿಕ್ಕಿ ತೊಳೆದು
ಹಸನುಗೊಳಿಸುತ್ತೇವೆ
ಮನಮನದೊಳು ದೀಪ ಉರಿಸಿ
ಅಲ್ಲೊಂದಿಷ್ಟು ಬೆಳಕು
ಇಣುಕುವಂತೆ ಮಾಡುತ್ತೇವೆ
ಮುಟ್ಟು ಬಸಿರು ಬಾಣಂತನ ಎಂಬೆಲ್ಲವುಗಳನು
ಜೀವ ಕಾರುಣ್ಯದ ಕಣ್ಣಿಂದಲೇ ನಿರುಕಿಸುತ್ತೇವೆ
ಅದನೆಲ್ಲ ಅಕ್ಕರೆಯಿಂದ ಒಪ್ಪಿ ಅಪ್ಪಿಕೊಳ್ಳುತ್ತೇವೆ
ಕೂಸು ಕುನ್ನಿ ಮುದಿ ಜೀವಗಳು
ಆರೋಗ್ಯ ಬಾಧೆಯಿಂದ ಪೀಡಿತರು
ಮನೋವ್ಯಾಕುಲತೆಗೆ ಒಳಗಾದವರೆಲ್ಲ
ನಮಗೆ ನೊಂದ ಜೀವಗಳಾಗಿ ಕಂಡಿವೆ
ಅವರ ಸಾಂತ್ವನ ಸೇವೆಗೆ ನಮ್ಮೊಳಗಿನ ತಾಯಿ ದಾದಿ
ಸದಾ ತುದಿಗಾಲಲ್ಲಿ ನಿಂತು ತುಡಿಯುತ್ತಾಳೆ

ಪ್ರಕೃತಿ ಎನಿಸಿದ ಕ್ಷಣದಿಂದ ನಮ್ಮನ್ನು
ಎರಡನೇ ಸಾಲಿಗೆ ದೂಡಲಾಗಿದೆ
ಸಹಸ್ರಮಾನಗಳಿಂದ ನಮ್ಮನ್ನು
ಹಿಡದೆಳೆದು ತೊಟ್ಟ ಬಟ್ಟೆ ಸೆಳೆದು
ಅಂಗ ಅಂಗವನು ಛಿದ್ರಗೊಳಿಸಿ
ಹೃದಯವನ್ನು ಬಟಾ ಬಯಲಿನಲ್ಲಿ
ಬಿಕರಿಗಿಡಲಾಗಿದೆ
ಆದರೂ
ಮಿಡಿಯುವುದ ತೊರೆದಿಲ್ಲ ನಾವು
ಹೃದಯ ತನ್ನ ಮಿಡಿತ ಮರೆತರೆ ಜಗ
ನಿಶ್ಚಲವಾಗುವುದೆಂಬ ಎಚ್ಚರ ಸದಾ
ನಮ್ಮನ್ನು ಪೊರೆದಿದೆ

ಮನೆ ಮಕ್ಕಳು ಪಾತ್ರೆ ಪಗಡದೊಂದಿಗೆ
ನಮ್ಮನ್ನು ಹಿಂಸೆ ಅತ್ಯಾಚಾರಗಳ ಭೀಬತ್ಸಕ್ಕೆ
ನಿರಂತರ ಗುರಿ ಮಾಡಲಾಗಿದೆ
ಸೆರಗಿನ ಮರೆಯಲ್ಲಿ ನಾವು
ನಮ್ಮ ಕರುಳ ಕುಡಿಗಳನು ಪೊರೆದಿದ್ದೇವೆ
ಗುಂಡು ಗೋಲಿ ಬಡಿಗೆ ಕತ್ತಿ ಖಡ್ಗಳಿಗೆ
ವಿನಾಕಾರಣ ಜೀವ ತೆತ್ತ ಜತೆಗಾರ
ಇಂದು ಬರುವ ನಾಳೆ ಬರುವನೆಂಬ
ಹುಸಿ ಭರವಸೆಯನೆ ತುಂಬುತ್ತ
ಎಳೆಯ ಜೀವಗಳ ಸಲಹಿದ್ದೇವೆ
ಬೆಂಕಿ ಬಯಲು ಕಂಬಿ ಜೈಲುಗಳು
ನಮ್ಮ ಕಾರುಣ್ಯದೆದುರು ಮಂಡಿಯೂರಿವೆ
ಗಾಢ ಅಗಾಧ ಎಂಬ ಬಣ್ಣನೆಗೆ ಪಾತ್ರವಾಗುವ ಅಂಧಕಾರ
ನಮ್ಮೊಂದು ಸೆಳಕಿನೆದುರು ನಿಲ್ಲದೆ ಸೋತು ಕಾಲ್ಕಿತ್ತಿದೆ
ಈ ಊರು ಆ ಊರು ಈ ದೇಶ ಆ ದೇಶ ಎನುವ
ಭೇದವೇ ಇರದೆ ಬುವಿ ಎಲ್ಲೆಡೆ
ಮೆಲ್ಲಗೆ ಕುಡಿಯೊಡೆದು ಬೆಳಕು ಸೂಸಿ
ನಿಧಾನವಾಗಿ ಬಿಸಿಲು ಚೆಲ್ಲುತ್ತೇವೆ
ಹರಿತ್ತುವಿನಲ್ಲಿ ಜೀವ ಸಂಚಾರವಾಗುತ್ತದೆ
ನೋಯಿಸುವ ನೊಂದ ಪೊರೆದ ಈರ್ಷೆಗೆ ನಿಂತ
ಜೀವಗಳೆಲ್ಲ ಕೈ ಮುಂದೆ ಮಾಡುವಾಗ
ನಾವು ಕೈ ತುತ್ತು ನೀಡುತ್ತೇವೆ..


ಆಗ
ಎಲ್ಲ ಇಲ್ಲಗಳ ನಡುವೆ ಜಗತ್ತು
ಸುಂದರವಾಗಿ ಕಾಣತೊಡಗುತ್ತದೆ
ರೊಟ್ಟಿಯೆದುರು ಬಣ್ಣ ಬಣ್ಣದ ಪತಾಕೆಗಳು
ಗುಡಿ ಗುಂಡಾರ ದೈವಗಳೆಲ್ಲ ಸೋತು ನೆಲ ಕಚ್ಚುತ್ತವೆ
ಸಂದಿಗೊಂದಿಗಳಲ್ಲಿ ಬೆಳಕಿನ ಎಳೆ ಎಳೆ ಸೂಸಿ
ಒಂದಿಷ್ಟು ಕರುಳ ಬಳ್ಳಿಯ ಬೇರಿಗೂ ತಾಕುವಾಗ
ಬುದ್ಧ ಬಸವ ಬಾಬಾ.. ಕನಕ ಕಬೀರ ಏಸು
ಅಕ್ಕ ಮೀರಾ ಲಲ್ಲಾ.. ಕಪ್ಪು ಕೆಂಪು ಹಸಿರು
ಎಲ್ಲ ಒಂದರೋಳು ಇನ್ನೊಂದು ಬೆರೆತು
ಬೆಳ್ಳನೊಂದು ಬೆಳಕು ಹೊಮ್ಮುತ್ತದೆ….

************

Leave a Reply

Back To Top