ಅಂಕಣ ಸಂಗಾತಿ

ಸಕಾಲ

ಶಿವಲೀಲಾ ಹುಣಸಗಿ

ಪ್ರತಿ ತುತ್ತಿನ ಬೆಲೆ ಅರಿತಷ್ಟು ಒಳಿತು….

ಎಲ್ಲಾರು ಮಾಡುವುದು ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ಗೇಣು ಬಟ್ಟೆಗಾಗಿ,ಬಿಲ್ಲುಗಳ ಕುಟ್ಟಿಕೊಂಡು ಬಿದುರುಗಳ ಹೊತ್ತುಕೊಂಡು ಕೂಲಿಗಳ ಮಾಡುವುದು ಹೊಟ್ಟೆಗಾಗಿ,ನಾಲ್ಕು ವೇದ ಪುರಾಣ ಪಂಚಾಗ ಹೇಳಿಕೊಂಡು ಕಾಲ ಕಳೆಯುವುದೆಲ್ಲ ಹೊಟ್ಟೆಗಾಗಿ..

                                                      ಕನಕದಾಸರು ರಚಿತ ಕವಿತೆ ಓದಿದಾಗಂತೂ ಜೀವನ ಚರಿತ್ರೆ ಜಾಲಾಡಿದಂತೆ.ನಾಲಿಗೆಯ ರುಚಿ,ಉದರದ ಆತುರ ಒಟ್ಡಿನಲ್ಲಿ,ಊಟ ಎಂದಾಕ್ಷಣ ಬಾಯಲ್ಲಿ ನೀರೂರುವುದು ಖಾತ್ರಿ.ಆದ್ರೆ ಅದು ಹಸಿವನ್ನು ನೀಗಿಸುವ ಒಂದು ಕಾಯಕಕ್ಕೆ ಮೀಸಲಾಗಿದ್ದು ಮಾತ್ರ.ಹಸಿವಂದರೆ ಹೀಗಿರಬೇಕು.ಮನಸ್ಸು ತೃಪ್ತಿಯಾಗಿ ಸ್ವೀಕರಿಸಿದಷ್ಟು ಊಟಕ್ಕೊಂದು ಬೆಲೆ.ಇವತ್ತು ಈ ವಿಷಯ ಅಷ್ಟೇನು ಗಂಭೀರವಲ್ಲ.ಊಟ ಅಂದರೆ ಊಟ ಅಷ್ಟೇ. ಹಸಿವಿರಲಿ ಬಿಡಲಿ ಬಾಯಿ ಮಾತ್ರ ದನಕರುವಂತೆ ಬಾಯಾಡಿಸುತ್ತ ಇದ್ದರೆ ಸಾಕು.ಊಟ ಯಾರಿಗೆ ಬೇಕು? ಅದರ ಬೆಲೆ ಬಗ್ಗೆ ತಿಳಿದವರು ಎಷ್ಡು? ಮಕ್ಕಳಿಗೆ ವರ್ಗಾಯಿಸಿದವರೆಷ್ಟು? ಮದುವೆ,ಮುಂಜಿಯಲ್ಲಿ ಮೊದಲು ಉಂಡವಣೆ ಜಾಣ ಗಾದೆ ಮಾತಿದೆ.ಆದ್ರೆ ಇಂತಹ ಕಾರ್ಯಕ್ರಮಗಳಲ್ಲಿ

ನಯನಾಜೂಕಾಗಿ ಎಷ್ಟು ಬೇಕೋ ಅಷ್ಟು ಹಾಕಿಸಿಕೊಳ್ಳುವ ಜನರ ನಡುವೆ,ಬೇಕಾಬಿಟ್ಟಿಯಾಗಿ ಬಿಸಾಡುವ ಜನರು ನಮ್ಮ ನಡುವೆ ಇದ್ದಾರೆಂದರೆ ನಂಬಲೆಬೇಕು.ಊಟ ಸಾಕೆಂದು ಹೊಂಟವರಿಗೆ  ಅವರ ಪಕ್ಕದಲ್ಲಿ ಕುಳಿತ ಸ್ನೇಹಿತರು ಮಾತ್ರ ಇನ್ನೂ ಅನ್ನವನ್ನೇ ಹಾಕಿಸಿ ಕೊಂಡಿಲ್ಲವೆಂದು ಕಾಡಿಸುವವರಿಗೇನು ಕಡಿಮೆಯಿಲ್ಲ.

ಅಷ್ಟಾಗಿಯೂ ಅನ್ನ ಬಿಡಬೇಕು ಎಂದು ಅನಿಸಿದರೆ ಬಿಡಿ. ನಮ್ಮ ಒಂದು ಅಗುಳು, ಇರುವೆಗೆ ಆ ದಿನದ ಭರ್ಜರಿ ಭೋಜನ,ಒಂದು ಅಗುಳನ್ನೂ ವ್ಯರ್ಥ ಮಾಡಬೇಡಿ. ಬೇಕಷ್ಟನ್ನೇ ಹಾಕಿಸಿಕೊಳ್ಳಿ. ಉಪ್ಪು ಉಪ್ಪಿನಕಾಯಿ ಬೇಡವೆಂದರೆ, ಹಾಕಿಸಿಕೊಳ್ಳಬೇಡಿ. ನೀವು ಉಣ್ಣುವುದು ಎರಡು ಸೌಟು ಅನ್ನವಾದರೆ, ಮೂರನೇ ಸೌಟನ್ನು ಯಾವ ಕಾರಣಕ್ಕೂಬೇಡ.ಒಂದು ವೇಳೆ ಒತ್ತಾಯ ಮಾಡಿ ಬಡಿಸಿದರೆ, ಅದನ್ನು ಚೆಲ್ಲ ಬೇಡಿ. ತುಸು ಭಾರವೆನಿಸಿದರೂ ಊಟ ಮಾಡಿ, ರಾತ್ರಿ ಊಟವನ್ನು ಬಿಡಿ ಅಥವಾ ಕಡಿಮೆ ಮಾಡಿ. ಹೊರತು ಯಾವ ಕಾರ ಣಕ್ಕೂ ಬಾಳೆಲೆಯಲ್ಲಿ ಏನನ್ನೂ ಬಿಡಬೇಡಿ’ ಎಂದು ಹೇಳಿದಷ್ಟು ಉಪಯೋಗ ಪಡೆದವರೆಷ್ಟೋ ಇದೆಲ್ಲ ಕೇವಲ ಬಾಯಲ್ಲಿರದೆ ಕೃತಿಯಲ್ಲಿ ಅಂದರೆ,ಮನೆಯಲ್ಲಿ ಬದಲಾವಣೆ ತರದೇ ಅದನ್ನು ಬೀದಿಯಲ್ಲಿ, ಸಮಾಜದಲ್ಲಿ ತರಲು ಸಾಧ್ಯವಿಲ್ಲ.ತಕ್ಷಣ ಸ್ವಚ್ಛ ಬಾಳೆಲೆಯ ಫೊಟೋವನ್ನು ಕ್ಲಿಕ್ಕಿಸಿಕೊಂಡು, ಫೇಸ್ ಬುಕ್ ಪೋಸ್ಟ್ ಮಾಡಿ ಲೈಕ್ ಮತ್ತು ಕಮೆಂಟ್ಸ ನೋಡಿ ಖುಷಿಪಡುವ ಕ್ಷಣಗಳು ಕ್ಷಣಿಕವೆಂದೆನಿಸಿಲ್ಲ ನಮಗೆ.


ಮದುವೆ-ಮುಂಜಿ, ಗೃಹಪ್ರವೇಶ, ಔತಣಕೂಟದಲ್ಲಿ ಬಾಳೆಯಲ್ಲಿ ಹಾಕಿಸಿಕೊಂಡ ಭೋಜನವನ್ನು ಅರ್ಧ ಊಟ ಮಾಡಿ, ನಿರ್ದಯವಾಗಿ ಬಿಸಾಕುವವರು,ತಮಗೆ ಸಾಧ್ಯವಾಗದ್ದು ಬೇರೆಯವರಿಂದಲೂ ಸಾಧ್ಯವಾಗದು ಎಂದು ಭಾವಿಸಿದ್ದರಲಿಕ್ಕೂ ಸಾಕು. ಅದಾಗಿ ಒಂದೆರಡು ದಿನಗಳ ಬಳಿಕ, ಅದೇ ರೀತಿ ಊಟ ಮಾಡಿದ ಸ್ವಚ್ಛ ಊಟದ ತಾಟಿನ ಫೋಟೋವನ್ನೂ ಪೋಸ್ಟ್ ಮಾಡಿ. ಅದಕ್ಕೂ ಅದೇ ರೀತಿ ಚರ್ಚೆ, ವಾದದ ಬದಲು.ಅಲ್ಲಿ ಪ್ರಚಾರ, ವೈಯಕ್ತಿಕ ತೆವಲಿಗಿಂತ ಆಹಾರದ ಬಗ್ಗೆ ಕಾಳಜಿಯೇ ಮುಖ್ಯವಾದರೆ ಒಳಿತು. ಆದರೆ ಕೆಲವರಿಗೆ ಅದು ಸಹ ಸಹ್ಯವಾಗಿರದು.ಮೊದಲೇ ಮನುಷ್ಯನ ಮನಸ್ಸು ಮರ್ಕಟಕ್ಕೆ ಹೋಲಿಸಿದ್ದು ಇದೇ ಕಾರಣಕ್ಕೆ‌ ಅಲ್ಲವಾ?

“Money is yours but resources belong to the society” ಒಮ್ಮೆ ಉದ್ಯಮಿ ರತನ್ ಟಾಟಾ

ಜರ್ಮನಿಗೆ ಹೋದಾಗ,ನಿಮ್ಮ ದೇಶ ಶ್ರೀಮಂತವಾಗಿರಬಹುದು. ಆದರೆ ಆಹಾರವನ್ನು ಬಿಸಾಡುವ ಹಕ್ಕು ನಿಮಗಿಲ್ಲ ಎಂದು ಹೇಳಿದ್ದು ಯಾರೋ ಹೇಳಿದ್ದು ನೆನಪಾಗುತ್ತದೆ. ನಾನೂ ಪ್ರತಿದಿನ ಅದೇ ರೀತಿ ಊಟ ಮಾಡುತ್ತೇನೆ ಎಂದು ಪ್ರತಿಜ್ಞೆ ಮಾಡುವುದು ಅಷ್ಟು ಸುಲಭವಲ್ಲ. ಅವರವರ ತಾಕತ್ತು ಊಟದೆಲೆಯನ್ನು ಅವಲಂಬಿಸಿದೆ. ಅರ್ಧಂಬರ್ಧ ತಿಂದು ಬಿಸಾಡುವಾಗ ಬಹಳ ನೋವಾಗುತ್ತದೆ. ಜನರು ರೈತನ ದುಡಿಮೆಯನ್ನು ಈ ರೀತಿ ಪೋಲುಮಾಡುತ್ತ, ಬಿಸಾಡುತ್ತಾರಲ್ಲ ಅನಿಸುತ್ತದೆ.ಹಣವನ್ನಾದರೂ ಬಿಸಾಡಬಹುದು, ಕಾರಣ ದುಡಿದು ಹಣ ಗಳಿಸಬಹುದು. ಆದರೆ ಹಣ ಕೊಟ್ಟರೂ ಆಹಾರ ಸಿಗದ ಪರಿಸ್ಥಿತಿ ಬಂದರೆ ಹಣವನ್ನು ತಿಂದು ಬದುಕಲಾಗುತ್ತದೆಯೆ? ಒಟ್ಟಿನಲ್ಲಿ ಉಣ್ಣುವ ಅನ್ನಕೆ ನ್ಯಾಯ ದೊರಕುವಂತಾದರೆ ಸಾಕು.ಹೋಟೆಲಿನಲ್ಲಿ ಗಿರಾಕಿಗಳು ಪ್ರತಿದಿನ ಬಿಸಾಡುವ ಆಹಾರದಲ್ಲಿ ಕನಿಷ್ಠ ನೂರು ಜನರ ಹಸಿವನ್ನು ನೀಗಬಹುದು. ಆದರೆ ಹಣ ಕೊಟ್ಟು ಜನ ಆಹಾರವನ್ನು ಬಿಸಾಡುತ್ತಾರೆ. ಬಹಳ ಬೇಸರದ ಸಂಗತಿ.

ಎಲ್ಲ ಐಟಮ್ಮುಗಳ ರುಚಿ ನೋಡುವ ಆಸೆ. ಆದರೆ ಯಾವುದನ್ನೂ ಪೂರ್ತಿ ತಿನ್ನುವುದಿಲ್ಲ. ಒಂದು ಸಲ ಕಚ್ಚಿ, ಉಳಿದುದನ್ನು ಬಿಟ್ಟುಬಿಡುತ್ತಾರೆ. ತಾವು ಸೇವಿಸುವುದು ಸಾಕ್ಷಾತ್ ಅನ್ನ ದೇವರು, ಅನ್ನ ಲಕ್ಷ್ಮಿ, ದೇವರ ಪ್ರಸಾದ, ಪ್ರಕೃತಿಯ ವರ.. ಎಂದು ಭಾವಿಸುವುದಿಲ್ಲ. ಭಾರತದಂಥ ದೇಶದಲ್ಲಿ ಪ್ರತಿ ವರ್ಷಕ್ಕೆ ಒಂದು ಲಕ್ಷ ಕೋಟಿಗಿಂತ ಅಧಿಕ ಮೊತ್ತದಆಹಾರವನ್ನು ತಿಪ್ಪೆಗೆ ಎಸೆಯುತ್ತಾರೆ ಎಂಬುದನ್ನು ಕೇಳಿದರೆ, ಕರುಳು ಚುರ್ರ್ ಎನ್ನುತ್ತದೆ. ಭಾರತ ಬಡ ದೇಶ ಎನ್ನುತ್ತೇವೆ.ಹಸಿವಿನಿಂದ ಸಾಯುವವರು ಇಂದಿಗೂ ಇದ್ದಾರೆ. ಆದರೆ ಅದೇ ದೇಶದಲ್ಲಿ ನಾಲಗೆ ಮೇಲಿಡುವ ಆಹಾರವನ್ನು ತಿಪ್ಪೆಗೆಎಸೆಯುತ್ತಾರಲ್ಲ?ಇದಕ್ಕೇನೆನ್ನಬೇಕು? ಬೇಕಾದರೆ ಹಣವನ್ನು ಎಸೆಯಿರಿ, ಆದರೆ ಆಹಾರವನ್ನಂತೂ ಎಸೆಯಲೇಕೂಡದು.ಎಷ್ಟು ಬೇಕಾದರೂ ಸೇವಿಸಿ ತಪ್ಪೇನಿಲ್ಲ, ಅದು ನಮ್ಮ ಹೊಟ್ಟೆ, ನಮ್ಮ ಇಚ್ಛೆ. ಆದರೆ ಒಂದು ಅಗುಳು ಬಿಸಾಡುವಾಗ ನೂರು ಸಲ ಯೋಚಿಸಿ. ಯಾಕೆಂದರೆ ಹಣ ನಮ್ಮದಾದರೂ, ಅನ್ನ ಬಿಸಾಡಲು ನಮಗೆ ಹಕ್ಕಿಲ್ಲ. ಅದು ಬೇರೆಯವರ ಅನ್ನಕ್ಕೆ ಕಲ್ಲು ಹಾಕಿದಂತೆ.ಹಸಿದ ಹೊಟ್ಟೆಗೆ ಅನ್ನ ಬೀಳುವಂತಾದರೆ ಅದೆ ಸ್ವರ್ಗ.

ಎಲ್ಲರ ಬದುಕು ಶ್ರೇಷ್ಠ. ತುತ್ತು ಕೂಳಿಗೆ ಊರುಬಿಟ್ಟು ಬಂದವರ ಗೋಳು ನೆನೆದರೆ ಅನ್ನದ ಮಹತ್ವ ಅರಿವಾಗುತ್ತದೆ.


ಶಿವಲೀಲಾ ಹುಣಸಗಿ

ಊರು- ಯಲ್ಲಾಪುರ ತಾಲೂಕು,ಉತ್ತರ ಕನ್ನಡ ಜಿಲ್ಲೆ ಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅರಬೈಲ್ ದಲ್ಲಿ ಕಳೆದ ೨೪ ವರ್ಷಗಳಿಂದ ಶಿಕ್ಷಕಿಯಾಗಿ ಕಾರ್ಯ ನಿರ್ವಹಣೆ *ಪ್ರಕಟಿತ ಕೃತಿಗಳು- ಬಿಚ್ಚಿಟ್ಟಮನ,ಬದುಕಂದ್ರೆ ಹೀಗೇನಾ? ಅವಳಿ ಕವನಸಂಕಲನಗಳು. ಜಿಲ್ಲಾ ಕ.ಸಾ.ಪ ದ ಸಹ ಕಾರ್ಯದರ್ಶಿಯಾಗಿ ಕೆಲಸ ಮಾಡಿರುವೆ.ಜಿಲ್ಲಾ ಸಮ್ಮೆಳನದ ನಿರೂಪಕಿಯಾಗಿ ಕಾರ್ಯ ನಿರ್ವಹಿಸಿರುವೆ. ಸಂದ ಪ್ರಶಸ್ತಿಗಳು- ಅನುಪಮಾ ಸೇವಾ ಪುರಸ್ಕಾರ, ಹೆಮ್ಮೆಯ ಕನ್ನಡಿ,ನಾಡೋಜ ದೇ ಜ ಗೌಡ ಪ್ರಶಸ್ತಿ, ಬೇಂದ್ರೆ ಕಾವ್ಯ ,ಆದರ್ಶ ಶಿಕ್ಷಕಿ,ಕನ್ನಡ ರತ್ನ,ಸಾಹಿತ್ಯ ರತ್ನ ಯುಗದರ್ಶಿನಿ ರಾಜ್ಯ ಪ್ರಶಸ್ತಿ. ಇತ್ಯಾದಿ

One thought on “

Leave a Reply

Back To Top