ಕಾವ್ಯ ಸಂಗಾತಿ
ಹಣೆ ಬರಹ ಬರೆವವರಾರೋ
ಶಿವಲೀಲಾ ಹುಣಸಗಿ
ಯುಗಗಳುರುಳಿದರೂ
ಬದಲಾಗದಾ ಕಾರಿರುಳು
ಕರಿಬೇವು ಇಂಗು ಸಾಸಿವೆಯನೂ
ಎಣ್ಣೆಯಲಿ ಸಿಡಿದಷ್ಟೇ ಹೊತ್ತು
ಒಗ್ಗರಣೆಯ ಗುಂಗು ನಶೆಯಂತೆ
ಒಕ್ಕರಿಸಿ ಕಾಡುತಿವೆ ಹಗಲಿರುಳು
ಒಳಧ್ವನಿಯ ಒತ್ತರಿಕೆಗಳು
ಬಿಕ್ಕಳಿಕೆಗಳಾಗಿ ಬಿಕ್ಕುತಿವೆ
ಜಲಭಾದೆ ತೀರದಷ್ಟು ಬಳಲಿಕೆ
ಚಂಡಮಾರುತಗಳ ಅಬ್ಬರಕೆ
ಚಂಡಾಡಿವೆ ಸದ್ದು ಗದ್ದಲದಲಿ
ಬೀದಿ ಹೆಣವಾಗಿ ಬಿದ್ದವರೆಷ್ಟೋ
ಹರಳೆಣ್ಣೆಯಂತೆ ಅಂಟಿಕೊಂಡರು
ಕಣ್ಣುಗಳಿಗೆ ಕಾಡಿಗೆಯ ಶೃಂಗಾರ
ತುಟಿಯಂಚಲಿ ಹಿಡಿ ಶಾಪ ಸುರಿದರೂ
ನೆತ್ತರಿನ ಓಕುಳಿಯಲಿ ಸಪ್ಪೆ ಭಾವ
ಹೊಡೆದಾಟ ಯಾರಿಗಾಗೆಂಬ ಚಿಂತೆ?
ಮೂಕವೇದನೆ ಕಂಗಳ ರೋಧನ
ಯಾವ ಅಸ್ತಿತ್ವವಿದೆ ಈ ಮನಕೆ
ನಮಗೊಂದು ಸ್ವತಂತ್ರ ಬದುಕಿಲ್ಲ
ವಸ್ತುವಾಗಿ ಉಳಿದೆವೆಂಬ ಸಂಕಟ ಬೇರೆ
ಕಾಲಚಕ್ರ ತಿರುಗಿದಂತೆಲ್ಲವೂ ಬದಲೆಂಬರು
ನಮ್ಮೊಳಗಿನ ಅಸ್ತಿತ್ವ ಮಾತ್ರ ಶೂನ್ಯದತ್ತ
ಮೋಹವಡ್ಯಾನದ ಅಸ್ಥಿರ ನಕ್ಷತ್ರಗಳು
ಮೂತಿ,ಮುಚ್ಚಿ ತಿರುಗಬೇಕಿದೆ
ನವಿರಾದ ಹಸ್ತಾದೊಂಲನಕೆ ಕೈ ಚೆಲ್ಲಿ
ಅತಂತ್ರ ತಾಣದಲಿ ನಲುಗಿದ್ದಾಗಿದೆ
ಇನ್ನೇನು ಉಳಿದಿಲ್ಲ ಈ ಬದುಕಿಗೆ
ಅದೇ ನಿಟ್ಟುಸಿರು,ಒಡಲಕಿಚ್ಚಲಿ
ನವಮನ್ವಂತರದ ನಿರೀಕ್ಷೆಯಲಿ
ಕಳಚಿದಂತೆಲ್ಲ ಕಲ್ಮಶದ ಹಂಗು
ಮತ್ತೆ ಹಣೆ ಬರಹ ಬರೆವವರಾರೋ
ಅಕ್ಷಿಪಟಲಕೆ ತೆರೆ ಎಳೆವವರಾರೋ
ವೆರೀ ನೈಸ್