ಶಿವ ಒಂದುವಿಶ್ಲೇಷಣೆ
ಗಣೇಶ ಭಟ್ ಶಿರಸಿ
ಪ್ರತಿವರ್ಷ ಶಿವರಾತ್ರಿ ಬಂದೊಡನೆ ಶಿವನ ಆರಾಧನೆ ಜೋರಾಗುತ್ತದೆ; ಶಿವನ ಕುರಿತಾಗಿ ಲೇಖನಗಳು, ಪುಸ್ತಕಗಳು ಬರುತ್ತವೆ. ಎಲ್ಲವೂ ಹೆಚ್ಚು ಕಡಿಮೆ ಒಂದೇ ಅಚ್ಚಿನಲ್ಲಿ ಎರಕಹೊಯ್ದಂತಿರುತ್ತವೆ. ನಾನಿಲ್ಲಿ ಹೇಳಹೊರಟಿರುವದು ಶಿವನ ಕುರಿತಾದ ಒಂದು ವಿಶಿಷ್ಟ ಪುಸ್ತಕದ ಕುರಿತು. ಅದರ ಹೆಸರೇ ನಮಃ ಶಿವಾಯ ಶಾಂತಾಯ.
ಶ್ರೀ ಶ್ರೀ ಆನಂದಮೂರ್ತಿ ಎಂದು ಅನುಯಾಯಿಗಳಿಂದ ಕರೆಯಲ್ಪಡುವ ಶ್ರೀ ಪ್ರಭಾತ ರಂಜನ್ ಸರ್ಕಾರರು 1982 ರ ಎಪ್ರಿಲ್ 11 ರಿಂದ ಪ್ರಾರಂಭಿಸಿ 13 ಅಗಸ್ಟ್ 1982 ರವರೆಗೆ ಸುಮಾರಾಗಿ ವಾರದಲ್ಲಿ ಒಂದರಂತೆ ನೀಡಿದ 20 ಪ್ರವಚನ ಸಂಗ್ರಹವೇ ಈ ಪುಸ್ತಕ.
ಶ್ರೀ ಶ್ರೀ ಆನಂದ ಮೂರ್ತಿಯವರ ಅಭಿಪ್ರಾಯದಂತೆ ಶಿವ ಒಬ್ಬ ಐತಿಹಾಸಿಕ ಮಹಾಪುರುಷ. ಜಡ್ಡುಗಟ್ಟಿದ್ದ ಮಾನವ ಸಮೂಹದ ಪ್ರಗತಿಗೆ ಚಾಲನೆ ನೀಡಲು ಸುಮಾರು ಏಳು ಸಾವಿರ ವರ್ಷಗಳ ಹಿಂದೆ ಆವಿರ್ಭವಿಸಿದ ತಾರಕ ಬ್ರಹ್ಮ. ಮಾನವ ನಾಗರಿಕತೆ ಮತ್ತು ಸಂಸ್ಕøತಿಗಳ ನಿರ್ಮಾಣದಲ್ಲಿ ಶಿವನದು ವಿರಾಟ ಭೂಮಿಕೆ. ಅವನ ಕೊಡುಗೆ ಅಪಾರ. ಶಿವನನ್ನು ಹೊರತುಪಡಿಸಿ ಮಾನವ ಸಮಾಜದ ನಾಗರಿಕತೆ, ಸಂಸ್ಕøತಿಗಳು ನಿಲ್ಲಲಾರವು. ಒಂದು ವೇಳೆ ಪ್ರಥ್ವಿಯ ಇಂದಿನ ಮತ್ತು ಭವಿಷ್ಯದ ಮಾನವ ಸಮಾಜದ ಕುರಿತು ಯಥಾರ್ಥವಾಗಿ ವಿಚಾರಿಸುವುದಾದರೆ ಅಥವಾ ಇತಿಹಾಸವನ್ನು ಬರೆಯುವುದಾದರೆ , ಶಿವನನ್ನು ಬಿಟ್ಟು ಸಾಗಲಾರೆವೆಂದು ಅವರು ಹೇಳುತ್ತಾರೆ.
ಮಾನವ ಸಮಾಜಕ್ಕೆ ಶಿವನ ಕೊಡುಗೆ ಅಪಾರ. ಸಂಗೀತ ಕ್ಷೇತ್ರವನ್ನೇ ತೆಗೆದುಕೊಂಡರೆ, ಇಂದಿನ ಸಂಗೀತವು ಸುರ- ಸಪ್ತಕವನ್ನು ಆಧರಿಸಿದೆ. ಅಂದಿನ ಸಮಯದ ಋಗ್ವೇದ ಯುಗದಲ್ಲಿ ಛಂದವಿತ್ತು. ಆದರೆ ರಾಗ- ರಾಗಿಣಿಗಳ ಉದ್ಭವವಾಗಿರಲಿಲ್ಲ. ಸುರ- ಸಪ್ತಕದ ಪರಿಚಯವಿರಲಿಲ್ಲ. ವಿವಿಧ ಪ್ರಾಣಿ, ಪಕ್ಷಿಗಳ ಧ್ವನಿ ತರಂಗಗಳು ವಿಶ್ವದ ಧ್ವನಿ ತರಂಗದೊಂದಿಗೆ, ಆರೋಹ- ಅವರೋಹಗಳೊಂದಿಗೆ ಸಾಮರಸ್ಯ ಹೊಂದಿರುವುದನ್ನು ಶಿವನು ಗುರ್ತಿಸಿದನು. ಇದರ ಪರಿಣಾಮವಾಗಿ ಏಳು ಪ್ರಾಣಿಗಳ ಧ್ವನಿಯನ್ನು ಕೇಂದ್ರವಾಗಿಸಿಕೊಂಡು ಸುರ ಸಪ್ತಕವನ್ನು ರಚಿಸಿದನು.
ಧ್ವನಿ ವಿಜ್ಞಾನವು ಸ್ವರ ವಿಜ್ಞಾನವನ್ನು ಅವಲಂಬಿಸಿದೆ. ಇದು ಮಾನವನ ಶ್ವಾಸ, ನಿಃಶ್ವಾಸಗಳನ್ನು ಆಧರಿಸಿದೆ. ಇದನ್ನು ಆಧರಿಸಿಯೇ ಛಂದದ ಜೊತೆಗೆ ನೃತ್ಯ ಮತ್ತು ಮುದ್ರೆಯನ್ನು ಸಹ ಶಿವನು ಜೋಡಿಸಿದನು. ಆದ್ದರಿಂದಲೇ ಅವನು ನಟರಾಜ. ಈ ಜ್ಞಾನವನ್ನು ಭರತ ಮಹರ್ಷಿಯ ಮೂಲಕ ಜನರಿಗೆ ತಲುಪಸಿದನು. ಶಿವನು ಕೇವಲ ಸಂಗೀತ ಮತ್ತು ನೃತ್ಯಕ್ಕೆ ಮಾತ್ರ ವಿಧಿಬದ್ಧ, ಛಂದೋಬದ್ಧ ರೂಪವನ್ನು ನೀಡಲಿಲ್ಲ; ಜೀವನದ ಪ್ರತಿಯೊಂದು ಅಭಿವ್ಯಕ್ತಿಯನ್ನೂ ಶಿಸ್ತುಬದ್ಧಗೊಳಿಸಿದನು.
ಶಿವನು ಸಮಯಕ್ಕಿಂತ ಮೊದಲು ವಿವಾಹ ಪದ್ಧತಿ ಇರಲಿಲ್ಲ. ವ್ಯಕ್ತ್ತಿಯ ಪರಿಚಯವನ್ನು ತಾಯಿಯ ಹೆಸರಿನಿಂದ ಗುರ್ತಿಸಲಾಗುತ್ತಿತ್ತು. ತಂದೆಯಾದವನಿಗೆ ಕುಟುಂಬ ನಿರ್ವಹಣೆಯಲ್ಲಿ ನಿರ್ದಿಷ್ಟ ಪಾತ್ರವಿರಲಿಲ್ಲ. ವಿವಾಹ ( ಅಂದರೆ ಒಂದು ವಿಶೇಷ ನಿಯಮಾನುಸಾರ ನಡೆಯುವುದು) ಪದ್ಧತಿಯನ್ನು ಅರ್ಥಾತ್ ಕೌಟುಂಬಿಕ ವ್ಯವಸ್ಥೆಗೆ ಭದ್ರ ಅಡಿಪಾಯ ಹಾಕಿದವನು ಸದಾಶಿವ. ಶಿವ- ಪಾರ್ವತಿಯರ ವಿವಾಹವನ್ನು ಪ್ರಥಮ ವಿವಾಹವೆಂದೂ ಹೇಳುತ್ತಾರೆ.
ನವ ವಿವಾಹಿತರಿಗೆ ಆಶೀರ್ವಾದ ಮಾಡುವಾಗ ಶಿವ- ಪಾರ್ವತಿಯರಂತೆ ಆದರ್ಶ ದಾಂಪತ್ಯ ನಿಮ್ಮದಾಗಲಿ ಎಂದು ಹೇಳುವ ಸಂಪ್ರದಾಯ ಇಂದಿಗೂ ಕೂಡಾ ಇದೆ.
ಶ್ವಾಸ-ನಿಶ್ವಾಸಗಳು ಮನಸ್ಸಿನ ಮೇಲೆ ನೇರ ಪರಿಣಾಮ ಬೀರುತ್ತದೆ. ವಿವಿಧ ನಾಡಿಗಳು ( ಇಡಾ, ಪಿಂಗಳಾ, ಸುಷುಮ್ನಾ) ಕಾರ್ಯ ನಿರ್ವಹಿಸುವ ವಿಧಾನ, ಮಾನವನ ಉಸಿರಾಟದೊಂದಿಗೆ ಅವುಗಳ ಸಂಬಂಧದ ಕುರಿತು ತಿಳಿ ಹೇಳಿದವನು ಶಿವ. ಶ್ವಾಸ- ಪ್ರಶ್ವಾಸಗಳು ಕೆಲವೊಮ್ಮೆ ಬಲನಾಸಿಕ ಅಥವಾ ಎಡನಾಸಿಕ ಹಾಗೂ ಕೆಲವೊಮ್ಮೆ ಎರಡೂ ನಾಸಿಕಗಳ ಮೂಲಕ ನಡೆಯುವುದನ್ನು ಗಮನಿಸಿರುತ್ತೇವೆ. ಉಸಿರಾಟದ ವಿಶೇಷತೆಗೂ, ಮಾನವನ ದಿನಚರ್ಯೆಗೂ ನೇರ ಸಂಬಂಧ ಇರುವುದನ್ನು ತೋರಿಸಿಕೊಳ್ಳುವುದು ಶಿವ. ಬಲನಾಸಿಕದಲ್ಲಿ ಶ್ವಾಸೊಚ್ವಾಸ ನಡೆದಿರುವಾಗ ಯಾವ ಕಾರ್ಯಗಳನ್ನು ಮಾಡಬೇಕು, ದೈಹಿಕ ಶ್ರಮಕ್ಕೆ ಪೂರಕವಾದ ಉಸಿರಾಟ ಎಂತಿರಬೇಕು. ಯೋಗಾಸನಕ್ಕೆ, ಧ್ಯಾನಕ್ಕೆ ಪೂರಕವಾದ ಉಸಿರಾಟದ ವಿಧಾನ ಹೇಗಿರಬೇಕು ಮುಂತಾಗಿ ತಿಳಿಸಿದವನು ಶಿವ. ಈ ವಿಜ್ಞಾನವನ್ನು ಸ್ವರಶಾಸ್ತ್ರ ಅಥವಾ ಸ್ವರೋದಯ ಅಥವಾ ಸ್ವರ ವಿಜ್ಞಾನ ಎಂದು ಕರೆಯಲಾಯಿತು.
ಮಾನವನ ದೇಹದಲ್ಲಿ ಹಲವು ಗ್ರಂಥಿಗಳಿವೆ. ಅವು ಸ್ರವಿಸುವ ಗ್ರಂಥಿರಸದ ಪ್ರಮಾಣ ದೈಹಿಕ ಆರೋಗ್ಯವನ್ನು, ಮಾನಸಿಕ ಸ್ಥಿರತೆಯನ್ನು ನಿಯಂತ್ರಿಸುತ್ತದೆ. ಗ್ರಂಥಿಗಳ ನಿಯಂತ್ರಣಕ್ಕಾಗಿ ವ್ಯವಸ್ಥಿತ ರೀತಿಯಲ್ಲಿ ದೇಹ ಚಲನೆ ಅಗತ್ಯ. ಅಂತಹ ದೈಹಿಕ ಚಲನೆಯನ್ನು ಮುದ್ರೆ, ಛಂದಗಳನ್ನು ಸೇರಿಸಿದ ನೃತ್ಯ ರೂಪದಲ್ಲಿ ಶಿವನು ನೀಡಿದನು. ಪುರುಷರಲ್ಲಿ ಆತ್ಮವಿಶ್ವಾಸ ಬೆಳೆಸುವ, ಧೈರ್ಯ ಹೆಚ್ಚಿಸುವ, ಛಲ ಬೆಳೆಸುವುದಕ್ಕಾಗಿ ತಾಂಡವ ನೃತ್ಯವನ್ನು ಶಿವನು ಪರಿಚಯಿಸಿದನು. ಕಳೆದ ಏಳುಸಾವಿರ ವರ್ಷಗಳ ಹಿಂದೆ ಜನಪ್ರಿಯಗೊಂಡಿದ್ದ ತಾಂಡವ ಕ್ರಮೇಣ ಜನಮಾನಸದಿಂದ ಮರೆಯಾಗಿ ಬಿಟ್ಟಿದೆ. ಇದೇ ತಾಂಡವವನ್ನು ಸಕಾರಣವಾಗಿ ಪುನಃ ಜನಪ್ರಿಯಗೊಳಿಸುವ ಕಾರ್ಯವನ್ನು ಶ್ರೀ ಪ್ರಭಾತ ರಂಜನ್ ಸರ್ಕಾರರು ಮಾಡಿದ್ದಾರೆ. ಜಗತ್ತಿನಾದ್ಯಂತ ಇರುವ ಆನಂದ ಮಾರ್ಗದ ಪುರುಷ ಅನುಯಾಯಿಗಳು ತಾಂಡವ ನೃತ್ಯವನ್ನು ಕಲಿತು, ಯೋಗಾಸನದಂತೆ ಪ್ರತಿದಿನ ಎರಡು ವೇಳೆ ಅಭ್ಯಾಸ ಮಾಡಲು ಅವರು ಸೂಚಿಸಿದ್ದಾರೆ. ಇತರರಿಗೂ ತಾಂಡವ ನೃತ್ಯವನ್ನು ಉಚಿತವಾಗಿ ಬೋಧಿಸುವ ವ್ಯವಸ್ಥೆ ಮಾಡಿದ್ದಾರೆ..
ವೈದ್ಯಕಶಾಸ್ತ್ರಕ್ಕೆ ಶಿವನ ಕೊಡುಗೆ ಅಪಾರ. ಶಲ್ಯಕರಣ, ವಿಶಲ್ಯಕರಣ, ಶವಚ್ಛೇದಗಳೆಲ್ಲವನ್ನೂ ಶಿವನು ಆಯುರ್ವೇದ ಶಾಸ್ತ್ರದೊಂದಿಗೇ ಸಮ್ಮಿಲಿತಗೊಳಿಸಿದ್ದರು.
ಆರ್ಯರು ಭಾರತಕ್ಕೆ ಹೊರಗಿನಿಂದ ಬಂದವರು. ಯಜ್ಞ- ಯಾಗಗಳೂ ಅವರೊಂದಿಗೇ ಬಂದವು. ಭಾರತದ ಮೂಲನಿವಾಸಿಗಳಿಗೆ ಅಮೂಲ್ಯವಾದ ಆಹಾರ ವಸ್ತುಗಳನ್ನು ಯಜ್ಞ ಕುಂಡದಲ್ಲಿ ಸುರಿಯುವುದು, ಪ್ರಾಣಿಗಳ ಬಲಿ ನೀಡುವುದು ಒಪ್ಪಿತವಾಗಿರಲಿಲ್ಲ. ಇದು ಧರ್ಮವೇ ಅಲ್ಲವೆಂದು ಶಿವನು ಸಾರಿದನು. ಧರ್ಮವೆಂದರೆ ಪರಮ ಸಂಪ್ರಾಪ್ತಿಯ ಮಾರ್ಗ; ಪಾಶವೀ ಸುಖದ ಮಾರ್ಗವಲ್ಲ ಎಂದು ಶಿವನು ಘೋಷಿಸಿದ್ದನು. ಸಮಸ್ತ ಕರ್ಮಗಳ ಏಷಣವನ್ನು ಈಶ್ವರನತ್ತ ತಿರುಗಿಸಿ ಸಾಗುವುದೇ ಧರ್ಮದ ಪೂರ್ಣತೆಯೆಂಬುದು ಶಿವನ ಅಭಿಪ್ರಾಯವಾಗಿತ್ತು.
ಶಿವನ ಕಾಲದಲ್ಲಿ ಭಾರತದ ಮೂಲ ನಿವಾಸಿಗಳು ( ಆಸ್ಟ್ರೀಕೋ- ಮಂಗೋಲ- ನಿಗ್ರೋಯೆಡ್ ಜನಾಂಗದವರು) ಮತ್ತು ಹೊರಗಿನಿಂದ ಬಂದ ಆರ್ಯರ ಸಂಬಂಧ ಒಳ್ಳೆಯದಾಗಿರಲಿಲ್ಲ. ಇಲ್ಲ್ಲಿನವರನ್ನು ಅಸುರರು, ದಾನವರು, ದಾಸರು, ಶೂದ್ರ ಮುಂತಾಗಿ ಆರ್ಯರು ಸಂಬೋಧಿಸುತ್ತಿದ್ದರು.
ಗೌರಿ ಅಥವಾ ಪಾರ್ವತಿ ಆರ್ಯಕನ್ಯೆ. ಶಿವನನ್ನೇ ಧ್ಯಾನಿಸಿ, ಅವನನ್ನೇ ವಿವಾಹವಾಗ ಬಯಸಿದವಳು. ಶಿವ ಮತ್ತು ಗೌರಿಯ ವಿವಾಹದ ನಂತರ ಆರ್ಯ ಮತ್ತು ಆರ್ಯೇತರರ ಸಂಬಂಧ ಸುಧಾರಿಸಬಹುದೆಂದು ನಿರೀಕ್ಷಿಸಲಾಗಿತ್ತು. ಆದರೆ ಅದು ಇನ್ನಷ್ಟು ಕೆಡತೊಡಗಿತು. ಗೌರಿಯ ತಂದೆಯಾದ ಆರ್ಯಕುಲದ ದಕ್ಷನು ಶಿವನನ್ನು ನಿಂದಿಸಲೆಂದೇ, ಶಿವನನ್ನು ಬಿಟ್ಟು ಒಂದು ಯಜ್ಞವನ್ನು ನಡೆಸಿದನು. ಶಿವನಿಗೆ ಆಮಂತ್ರಣ ನೀಡದೇ ಇದ್ದುದÀಲ್ಲದೇ ಯಜ್ಞ ಸ್ಥಳದಲ್ಲಿ ನಡೆದ ಶಿವ ನಿಂದನೆಯನ್ನು ಸಹಿಸಲಾರದ ಗೌರಿಯು ಆತ್ಮತ್ಯಾಗ ಮಾಡಿದಳು.
ಹಲವರ ಅಭಿಪ್ರಾಯದಲ್ಲಿ ದಕ್ಷಯಜ್ಞರ ಘಟನೆ ಪೌರಾಣಿಕ ಕಲ್ಪನೆ. ಆದರೆ ಶ್ರೀ ಶ್ರೀ ಆನಂದ ಮೂರ್ತಿಯವರು ಹೇಳುವಂತೆ ಗೌರಿಯ ಆತ್ಮತ್ಯಾಗದ ನಂತರ ಆರ್ಯ ಮತ್ತು ಅನಾರ್ಯರ ಸಂಬಂಧ ಸುಧಾರಿಸತೊಡಗಿತು.
ಐತಿಹಾಸಿಕ ಶಿವನಿಗೆ ಮೂವರು ಪತ್ನಿಯರು. ಆರ್ಯಕುಲದ ಗೌರಿ, ಅನಾರ್ಯಕನ್ಯೆಯಾದ ಕಾಳಿ, ಮಂಗೋಲಿಯನ್ ಕನ್ಯೆಯಾದ ಗಂಗೆ. ಭೈರವ ಪಾರ್ವತಿಯ ಮಗ. ಭೈರವಿ ಕಾಳಿಯ ಮಗಳು. ಕಾರ್ತಿಕೇಯ ಗಂಗೆಯ ಮಗ.
ಶಿವನ ಕುರಿತಾಗಿ ಹಲವು ನಂಬಿಕೆಗಳು, ಊಹಾಪೋಹಗಳು, ಕಲ್ಪನೆಗಳು ಜನರ ಮನಸ್ಸಿನಲ್ಲಿ ತುಂಬಿಕೊಂಡಿವೆ. ಶಿವನ ಜಟೆಯಿಂದ ನೀರು ಹರಿದು ಬರುವುದನ್ನು ತೋರಿಸಿ ಅದನ್ನು ಗಂಗೆ ಎಂದು ನಂಬುತ್ತಾರೆ. ಇದಕ್ಕೆ ಶ್ರೀ ಶ್ರೀ ಆನಂದ ಮೂರ್ತಿಯವರ ವಿವರಣೆ ತುಂಬಾ ಮಾರ್ಮಿಕವಾಗಿದೆ.
ಪಾರ್ವತಿಯ ಮಗನಾದ ಭೈರವ ಹಾಗೂ ಕಾಳಿಯ ಮಗಳು ಭೈರವಿ ಇಬ್ಬರೂ ಧರ್ಮನಿಷ್ಠರೂ, ತಂತ್ರಸಾಧಕರೂ ಆಗಿದ್ದರು. ಆದರೆ, ಗಂಗೆಯ ಪುತ್ರ ಕಾರ್ತಿಕೇಯನು ಹಾಗಿರಲಿಲ್ಲ. ಇದು ಅವಳ ದುಃಖಕ್ಕೆ ಕಾರಣವಾಗಿತ್ತು. ಅವಳ ದುಃಖವನ್ನು ಮರೆಸುವ ಸಲುವಾಗಿ ಶಿವನು ಅವಳಿಗೆ ಹೆಚ್ಚಿನ ಸಮಾಧಾನ ಮಾಡುತ್ತಿದ್ದನು. ಮತ್ತು ಸಮಯ ನೀಡುತ್ತಿದ್ದನು. ಇದನ್ನೇ ಶಿವನು ಗಂಗೆಯನ್ನು ತಲೆಯ ಮೇಲೆ ಹೊತ್ತುಕೊಂಡಿದ್ದಾನೆಂದು ಆಡಿಕೊಳ್ಳುತ್ತಿದ್ದರು. ಸಾವಿರಾರು ವರ್ಷಗಳ ನಂತರ ಇದೇ ವಿಷಯ ಬದಲಾಗಿ ಶಿವನ ಜಟೆಯಿಂದ ಗಂಗೆ( ನೀರು) ಯ ಉದ್ಭವವಾಗುವ ಕಥೆ ಹುಟ್ಟಿಕೊಂಡಿತು.
ಅಸುರರೆಂದರೆ ಕ್ರೂರಿಗಳೆಂದೂ, ಬೃಹತ್ ದೇಹ ಹೊಂದಿದ ಅನಾಗರಿಕ ಜನರೆಂದು ನಮ್ಮ ಪುರಾಣ ಕಥೆಗಳಲ್ಲಿ ಓದುತ್ತೇವೆ. ಆದರೆ ಶ್ರೀ ಶ್ರೀ ಆನಂದ ಮೂರ್ತಿಯವರ ಪ್ರಕಾರ ಮಧ್ಯ ಏಷಿಯಾದ ಅಸ್ಸೀರಿಯಾ ಪ್ರಾಂತ್ಯದ ನಿವಾಸಿಗಳೇ ಅಸುರರು. ಇವರು ಆರ್ಯರ ಬದ್ಧ ದ್ವೇಷಿಗಳಾಗಿದ್ದರು. ಆರ್ಯರ ನಡೆ, ನುಡಿ, ಆಚರಣೆಗಳನ್ನು ಅಸುರರು ಒಪ್ಪುತ್ತಿರಲಿಲ್ಲ. ತಮ್ಮ ಶ್ರೇಷ್ಠತೆಯನ್ನು ಒಪ್ಪದ ಅಸುರರನ್ನು ಕೊಲ್ಲುವದು ತಮ್ಮ ಹಕ್ಕು ಎಂಬಂತೆ ಆರ್ಯರು ವರ್ತಿಸುತ್ತಿದ್ದರು. ಅಂತಹ ಸಂದರ್ಭದಲ್ಲಿ ಅಸುರರು ರಕ್ಷಣೆ ಕೋರಿ ಶಿವನಲ್ಲಿಗೆ ಬರುತ್ತಾರೆ.
ಅಂದು ನಡೆಯುತ್ತಿದ್ದ ಜನಾಂಗೀಯ ದ್ವೇಷವನ್ನು ತಣಿಸಲು ಶಿವನು ಸಾಕಷ್ಟು ಶ್ರಮಿಸಿದನು ಮತ್ತು ಅಸುರರಿಗೆ ರಕ್ಷಣೆ ನೀಡಿದನು, ಸಮಾಜದಲ್ಲಿ ಗೌರವ ಪಡೆಯಲು ಅನರ್ಹರೆಂದು ಆರ್ಯರಿಂದ ತೀರ್ಮಾನಿಸಲ್ಪಟ್ಟ ಜನಸಾಮನ್ಯರು ಶಿವನ ಅನುಯಾಯಿಗಳಾಗಿದ್ದರು. ಇಂತಹ ಹಲವು ಘಟನೆಗಳು ಮುಂದಿನ ದಿನಗಳಲ್ಲಿ ಆರ್ಯರ ಪ್ರಭಾವಕಕ್ಕೊಳಗಾಗಿ ರಚಿತವಾದ ಕಥೆ, ಪುರಾಣಗಳಲ್ಲಿ ವಿಕೃತವಾಗಿ ಪ್ರಸ್ತುತಪಡಿಸಲ್ಪಟ್ಟವು. ಅದರಿಂದಾಗಿಯೇ ಅಸುರರು ಶಿವ ಭಕ್ತರಾಗಿ ಶಿವನಿಂದ ವರ ಪಡೆದವರಾಗಿ ಯಜ್ಞ- ಯಾಗಾದಿಗಳನ್ನು ಕೆಡಿಸುವವರಾಗಿ ತೋರಿಸಲ್ಪಟ್ಟಿದ್ದಾರೆ. ಜನಸಾಮಾನ್ಯರನ್ನು ಶಿವಗಣಗಳೆಂದೂ, ಸ್ಮಶಾನವಾಸಿಗಳೆಂದೂ ವಿವರಿಸುವುದನ್ನು ಕಾಣುತ್ತೇವೆ.
ಪುರಾಣಗಳ ಮೂಲಕ, ಜಾನಪದ ಕಥೆ, ದಂತಕಥೆಗಳ ಮೂಲಕ ಶಿವನಿಗೂ ಹಾಗೂ ಇತರ ದೇವಿ, ದೇವತಾ ಪುರುಷರಿಗೂ ಒಂದೊಲ್ಲೊಂದು ರೀತಿಯ ಸಂಬಂಧ ಕಲ್ಪಿಸಿರುವುದನ್ನು ಕಾಣುತ್ತೇವೆ. ವಾಸ್ತವದಲ್ಲಿ ಐತಿಹಾಸಿಕ ಶಿವನಿಗೂ, ಅವರೆಲ್ಲರಿಗೂ ಯಾವ ಸಂಬಂಧವೂ ಇರಲಿಲ್ಲ. ಆದರೂ ಇಂತಹ ಸಂಬಂಧ ಸೃಷ್ಟಿಗೆ ಮೂಲಕಾರಣ ಶಿವನ ಉನ್ನತ ವ್ಯಕ್ತಿತ್ವ. ಮಾನವ ಸಮಾಜ ಅದರಲ್ಲೂ ವಿಶೇಷವಾಗಿ ಭಾರತೀಯ ಸಮಾಜದ ಮೇಲೆ ಉಂಟಾಗಿರುವ ಶಿವನ ಗಾಢ ಪ್ರಭಾವವೇ ಇಂತಹ ಕಥೆಗಳಿಗೆ ಕಾರಣ.
ಶಿವನ ಪತ್ನಿಯೆಂದು ನಂಬಲಾಗಿರುವ ದುರ್ಗೆ, ಪಾರ್ವತಿಯೂ ಅಲ್ಲ; ಕಾಳಿಯೂ ಅಲ್ಲ, ದುರ್ಗೆಯ ಕಲ್ಪನೆ ಮಾಡಿರುವುದೇ ಶಿವನ ಸಮಯದ ಐದು ಸಾವಿರ ವರ್ಷಗಳ ನಂತರ. ಕೆಲವು ಪುರಾಣ ಕಥೆಗಳಲ್ಲಿರುವಂತೆ ಲಕ್ಷ್ಮೀ ಮತ್ತು ಸರಸ್ವತಿಯರು ಶಿವನ ಪುತ್ರಿಯರೇ ಅಲ್ಲ. ಶಿವನ ಮಗನೆಂದು ಹೇಳಲಾಗುವ ಗಣೇಶನು ಶಿವನಿಗಿಂತ ಬಹು ಪುರಾತನನು. ಗಣದ ಮುಖ್ಯಸ್ಥನಾಗಿ ಕಲ್ಪನೆಯಲ್ಲಿದ್ದ ಗಣೇಶನನ್ನು ಶಿವನೊಂದಿಗೆ ಜೋಡಿಸಿರುವುದು, ಲಿಂಗಪೂಜೆಯೊಂದಿಗೆ ಶಿವನ ಸಂಬಂಧ ಕಲ್ಪಿಸಲು ಕಾರಣವೆಂದರೆ ಶಿವನ ಅಸಮಾನ್ಯ, ಅಲೌಕಿಕ ಪ್ರಭಾವವು ಜನಸಮೂಹದ ಮೇಲೆ ಇರುವುದೇ ಕಾರಣ. ಶಿವನೊಂದಿಗೆ ಸಂಬಂಧ ಕಲ್ಪಿಸಿ ಅವರ ಗೌರವ ಹೆಚ್ಚಿಸಿಕೊಳ್ಳುವ ಪ್ರಯತ್ನವಿದು. ಆದ್ದರಿಂದಲೇ ಶಿವನ ಸಮ್ಮಾನದಲ್ಲಿಯೇ ಸರ್ವರ ಸಮ್ಮಾನವಿದೆಯೆಂದು ಹೇಳುತ್ತಾರೆ.
ನಮಃ ಶಿವಾಯ ಶಾಂತಾಯ ಪುಸ್ತಕದಲ್ಲಿ ಇಂತಹ ಹಲವು ಅಪರೂಪದ ಮಾಹಿತಿಗಳು ಸಿಗುತ್ತವೆ. ಶ್ರೀ ಶ್ರೀ ಆನಂದ ಮೂರ್ತಿಯವರು ಹೇಳಿದ್ದಾರೆಂಬ ಕಾರಣಕ್ಕಾಗಿಯೇ ಶಿವನನ್ನು ಐತಿಹಾಸಿಕ ಮಹಾಮೇರು ವ್ಯಕ್ತಿಯೆಂದು ನಂಬಬೇಕೇ ಎಂಬ ಪ್ರಶ್ನೆ ಸಹಜ. ಶಿವನ ಅಸ್ತಿತ್ವಕ್ಕೆ ಆಧಾರವಾಗಿ ಯಾವ ಶಿಲಾ ಲೇಖವೂ ಇಲ್ಲ. ಯಾಕೆಂದರೆ ಅಂದು ಲಿಪಿಯ ಆವಿಷ್ಕಾರ ಆಗಿರಲೇ ಇಲ್ಲ. ಆದರೂ ಶಿವನ ಐತಿಹಾಸಿಕ ಸತ್ಯವನ್ನು, ತಾರ್ಕಿಕವಾಗಿ ಲೇಖಕರು ಸಿದ್ಧಪಡಿಸುತ್ತಾರೆ. ಇದೇ ಅವರ ಪ್ರವಚನಗಳ ವಿಶೇಷತೆ.
ನಮಃ ಶಿವಾಯ ಶಾಂತಾಯ ಬರೀ ಶಿವನ ಕಥೆಯಲ್ಲ. ಕಳೆದ ಏಳು ಸಾವಿರ ವರ್ಷಗಳ ಭಾರತದ ಇತಿಹಾಸವಿದು. ಶಿವನ ನಂತರ ಭಾರತದಲ್ಲಿ ಉಂಟಾದ ಬದಲಾವಣೆಗಳು ಹುಟ್ಟಿಕೊಂಡ ಹೊಸ ಹೊಸ ಪಂಥಗಳು, ಮತಗಳು ಮತ್ತು ಅವು ಯಾವ ರೀತಿಯಲ್ಲಿ ಶಿವನಿಂದ, ಶಿವತತ್ವದಿಂದ ಪ್ರೇರಿತವಾದವೆನ್ನುವುದನ್ನು ವಿವರಿಸಲಾಗಿದೆ, ಬೌದ್ಧ, ಜೈನ ಮತಗಳು ಕೂಡಾ ಹೇಗೆ ಶಿವನ ಪ್ರಭಾವಕ್ಕೊಳಗಾಗಿ ತಮ್ಮ ನಂಬಿಕೆಯ ದೇವ- ದೇವತೆಗಳನ್ನು ಶಿವನೊಂದಿಗೆ ಜೋಡಿಸಿದರೆಂಬ ಮಾಹಿತಿಯನ್ನು ನೀಡಲಾಗಿದೆ. ಬೌದ್ಧರ ತಾರಾನಾಥ, ಜೈನರ ಮಂಜುನಾಥ ಮುಂತಾದ ಹಲವು ಉದಾಹರಣೆಗಳೂ ಲಭ್ಯ. ದೇಶದ ವಿವಿಧ ಪ್ರದೇಶಗಳಲ್ಲಿ ಆಚರಣೆಯಲ್ಲಿರುವ ಸಂಪ್ರದಾಯಗಳು ಶಿವನೊಂದಿಗೆ ಹೊಂದಿರುವ ಸಂಬಂಧಗಳ ವಿಶ್ಲೇಷಣೆಯನ್ನು ನೀಡಲಾಗಿದೆ.
ಶಿವೋಕ್ತಿ , ಶಿವೋಪದೇಶಗಳ ವಿವರಣೆಯೂ ಈ ಪ್ರವಚನಗಳಲ್ಲಿದೆ. ಆಧುನಿಕ ಸಮಾಜದ ತುಮುಲಗಳಿಗೆ ಶಿವನ ಹಿತೋಪದೇಶಗಳಲ್ಲಿರುವ ಪರಿಹಾರವನ್ನು ಸಾದರಪಡಿಸಿರುವ ರೀತಿ ಅನನ್ಯವಾಗಿದೆ.
ಶಿವನು ಹೆಚ್ಚಾಗಿ ವಾಸಿಸುತ್ತಿದ್ದುದು ಹಿಮಾಲಯದ ಪ್ರದೇಶದಲ್ಲಿ. ಆದರೆ ಅವನ ಚಳಿಗಾಲದ ವಾಸ್ತವ್ಯ ಇರುತ್ತಿದ್ದುದು ಇಂದಿನ ವಾರಣಾಸಿಯಲ್ಲಿ. ಇಲ್ಲಿ ಉತ್ಖನನ ನಡೆಸಿದರೆ ಏಳು ಸಾವಿರ ವರ್ಷಗಳ ಹಿಂದಿನ ಇತಿಹಾಸದ ಕುರುಹು ಸಿಗುತ್ತದೆಂದು ಶ್ರೀ ಶ್ರೀ ಆನಂದ ಮೂರ್ತಿಯವರು ಅಭಿಪ್ರಾಯಪಟ್ಟಿದ್ದಾರೆ.
ಶಿವನ ಕುರಿತು ಅಧ್ಯಯನ ನಡೆಸುವುದನ್ನು ಶಿವೋಲಜಿ ಎನ್ನುತ್ತಾರೆ. ಭಾರತ ಮತ್ತು ಜಗತ್ತಿನ ಹಲವು ಭಾಷೆಗಳಿಗೆ ಅನುವಾದಿಸಲ್ಪಟ್ಟಿರುವ ನಮಃ ಶಿವಾಯ ಶಾಂತಾಯ ಪುಸ್ತಕದ ಓದಿನಿಂದ ಶಿವೋಲಜಿಯ ವಿದ್ಯಾರ್ಥಿಗಳಿಗೆ ಮಾತ್ರವಲ್ಲ. ಜನಸಾಮಾನ್ಯರ ಅರಿವನ್ನು ವಿಸ್ತಾರಗೊಳಿಸುವ, ಶಿವನ ಕುರಿತಾದ ನವಕಲ್ಪನೆ ನೀಡುತ್ತದೆ. ದೂರದ ಶಿವ ನಮ್ಮ ಶಿವನಾಗಿ ಬಿಡುತ್ತಾನೆ.