ಅಂಕಣ ಸಂಗಾತಿ

ಶಿಕ್ಷಣ ಲೋಕ

ಡಾ.ದಾನಮ್ಮ ಝಳಕಿಯವರು

ಪ್ರತಿ ಮಂಗಳವಾರ ಬರೆಯಲಿದ್ದಾರೆ

ಕಲಿಸುವಿಕೆಯಿಂದ ಅನುಕೂಲಿಸುವಿಕೆಯತ್ತ…

ಅನನ್ಯ ಎಂಬ ಶಿಕ್ಷಕಿ 8 ನೇ ತರಗತಿಗೆ ಹೋಗುವ ಸಿದ್ಧತೆಯಲ್ಲಿದ್ದಳು. ತನ್ನ ಪಾಠಕ್ಕೆ ಬೇಕಾಗಿರುವ ಚಾರ್ಟ ಹಾಗೂ ಮ್ಯಾಪಗಳನ್ನು ಜೋಡಿಸುತ್ತಾ, ಪಾಠದ ವಿಷಯಗಳ ಟಿಪ್ಪಣೆಗಳನ್ನು ಹೊಂದಿಸುತ್ತಾ, ತಾನು ಇಂದು ಮಕ್ಕಳಿಗೆ ಏನೆಲ್ಲಾ ಕಲಿಸಬೇಕು ಎಂಬುದನ್ನು ತಯಾರಿಸಿಕೊಳ್ಳುವಷ್ಟರಲ್ಲಿ ಅವಳ ಅವಧಿಯ ಬೆಲ್‌ ಬಾರಿಸಿತು. ಅವಳು ಲಗುಬಗೆಯಿಂದ ತರಗತಿಗೆ ಪ್ರವೇಶಿಸಿದಳು. ಎಲ್ಲ ಮಕ್ಕಳು ಎದ್ದು ನಿಂತು ಶಿಕ್ಷಕಿಗೆ ಶುಭ ಮುಂಜಾನೆ ತಿಳಿಸಿದರು. ಶಿಕ್ಷಕಿ ತನ್ನ ಸಮಾಜವಿಜ್ಞಾನ ವಿಷಯದ ಪರಿಕಲ್ಪನೆಗಳನ್ನು ಉಪನ್ಯಾಸ ವಿಧಾನದಿಂದ ಕಲಿಸಲು ಪ್ರಾರಂಭಿಸಿದಳು. ಅತ್ಯಂತ ಗಂಭೀರವಾಗಿ ಕಲಿಸುತ್ತಿರುವ ಶಿಕ್ಷಕಿ ಮಕ್ಕಳಿಗೆ ಯಾವುದೇ ಮಾತನಾಡುವ ಅಥವಾ ಚರ್ಚಿಸುವುದಕ್ಕೆ ಅವಕಾಶ ನೀಡದೇ ಅತ್ಯಂತ ಕಟ್ಟುನಿಟ್ಟಾದ ಶಿಕ್ಷಕಿಯಂತೆ ವರ್ತಿಸುತ್ತಾ ವಿಷಯದ ಬಗ್ಗೆ ಆಳವಾದ ಬೋದನೆಯಲ್ಲಿ ತೊಡಗಿದಳು.
ಅಷ್ಟರಲ್ಲಿ ಆ ತರಗತಿಯಲ್ಲಿದ್ದ ಹುಡುಗಿಯೊಬ್ಬಳು ಎದ್ದು ನಿಂತು ತನ್ನ ಪಕ್ಕದಲ್ಲಿದ್ದ ಮೂಗ ಮತ್ತು ಕಿವುಡನಾಗಿದ್ದ ರಾಜು ವಿಕಲಚೇತನ ಹುಡುಗನು ಎಲ್ಲ ಹೆಣ್ಣು ಮಕ್ಕಳ ಹೆಸರನ್ನು ಚೀಟಿಯಲ್ಲಿ ಬರೆದು ಕೊಡುತ್ತಿದ್ದಾನೆ ಎಂದು ತಿಳಿಸಿದಳು. ಶಿಕ್ಷಕಿಗೆ ಎಲ್ಲಿಲ್ಲದ ಕೋಪ ಬಂದಿತು. ಆ ವಿಕಲಚೇತನ ಮಗು ರಾಜುನನ್ನು ಎದ್ದು ನಿಲ್ಲಸಿ, ಗದರಿಸಲು ಪ್ರಾರಂಭಿಸಿದಳು. ಸರಿಯಾಗಿ ಪಾಠ ಕೇಳದೇ, ತರಗತಿಯಲ್ಲಿ ಉದ್ದಟತನದಿಂದ ವರ್ತಿಸುತ್ತಿರುವದರ ಬಗ್ಗೆ ಕಿರುಚಾಡಿದಳು. ಅವಳ ಆ ಯಾವ ಶಬ್ದವು ಅವನಿಗೆ ತಿಳಿಯಲಿಲ್ಲ. ಆದರೆ ಆ ಶಿಕ್ಷಕಿಯ ವರ್ತನೆಯಿಂದ ತನ್ನನ್ನು ಗದರಿಸುತ್ತಿದ್ದಾಳೆ ಎಂಬುದು ಮಾತ್ರ ಕ್ಷಣಾರ್ಧದಲ್ಲಿ ಅರಿತನು ಹಾಗೂ ಕೋಪಗೊಂಡು ತರಗತಿಯಿಂದ ಹೊರನಡೆದನು. ಆಗ ಆ ಶಿಕ್ಷಕಿ ಅಲ್ಲಿಯೇ ಇದ್ದ ಶಿಪಾಯಿಯನ್ನು ಕರೆದು ಆ ವಿಕಲಚೇತನ ಮಗುವನ್ನು ಶಿಕ್ಷಕರ ಕೊಠಡಿಯಲ್ಲಿ ಕುಳಿತುಕೊಳ್ಳಲು ತಿಳಿಸಿದಳು.
ತರಗತಿಯ ನಂತರ ಆ ವಿದ್ಯಾರ್ಥಿಯ ಬಗ್ಗೆಯೇ ಯೋಚಿಸುತ್ತಾ, ಈ ಮಗುವಿಗೆ ಏನು ಮಾಡಬೇಕು ಮತ್ತು ಇದು ನನ್ನ ಸಮಸ್ಯೆ ಮಾತ್ರವೇ ? ಅಥವಾ ಇತರ ಶಿಕ್ಷಕರ ತರಗತಿಯಲ್ಲಿ ಈತನ ವರ್ತನೆ ಹೇಗಿದೆ ? ಎಂದೆಲ್ಲಾ ಯೋಚಿಸುತ್ತಾ ಶಿಕ್ಷಕರ ಕೊಠಡಿಯೆಡಗೆ ಸಾಗಿದಳು.
ಅಲ್ಲಿಯೇ ಕುಳಿತಿದ್ದ ಭಾಷಾ ಶಿಕ್ಷಕಿ ತನಗೂ ಸಹ ಈ ಮಗುವಿನ ಬಗ್ಗೆ ಸಮಸ್ಯೆ ಇದೆ ಎಂಬುದನ್ನು ತಿಳಿಸಿದಳು. ಅಷ್ಟರಲ್ಲಿ ಗಣಿತ ಶಿಕ್ಷಕಿ ಶಿಕ್ಷಕರ ಕೊಠಡಿಗೆ ಪ್ರವೇಶಿಸುತ್ತಾ, ಏನ್‌ ರಾಜು ಇತ್ತ ಕಡೆಗೆ ಬಂದಿರುವಿ? ಎಂದು ಸನ್ನೆಯಿಂದ ಕೇಳಿದಳು. ಆಗ ರಾಜು ವಿಕಲಚೇತನ ಮಗು ಕಣ್ಣರಳಿಸಿ ಆ ಗಣಿತ ಶಿಕ್ಷಕಿಯೆಡೆಗೆ ಮುಗುಳ್ನಗೆಯಿಂದ ನೀವು ತುಂಬಾ ಉತ್ತಮ ಶಿಕ್ಷಕಿ ಎಂದು ಹೇಳಿದನು. ಆಗ ಆ ಗಣಿತ ಶಿಕ್ಷಕಿ ರಾಜುವಿನ ಬಗ್ಗೆ ಸಮಾಜ ವಿಜ್ಞಾನ ಶಿಕ್ಷಕಿಗೆ ತಿಳಿಸುತ್ತಾ, ತುಂಬಾ ಜಾಣ ವಿದ್ಯಾರ್ಥಿ ಹಾಗೂ ನನ್ನ ಅವಧಿಯಲ್ಲಿ ಅತ್ಯಂತ ಕ್ರಿಯಾಶೀಲವಾಗಿ ಕಲಿಕೆಯಲ್ಲಿ ಭಾಗವಹಿಸುತ್ತಾನೆ ಎಂದು ಹೇಳಿದಳು. ಇದನ್ನು ಕೇಳಿದ ಸಮಾಜ ವಿಜ್ಞಾನ ಶಿಕ್ಷಕಿಗೆ ಹಾಗೂ ಭಾಷಾ ಶಿಕ್ಷಕಿಗೆ ವಿಚಿತ್ರವೆನಿಸಿತು. ಇದು ಹೇಗೆ ಸಾಧ್ಯ ಎಂದು ಆಲೋಚಿಸತೊಡಗಿದರು ಹಾಗೂ ಸಮಾಜ ವಿಜ್ಞಾನ ಶಿಕ್ಷಕಿ ರಾಜುನೆಡೆಗೆ ತಿರುಗಿ ಏಕೆ ಈ ರೀತಿ ವರ್ತಿಸುತ್ತಿದ್ದೆ, ಏನು ತೊಂದರೆಯಾಗಿದೆ ಎಂದು ಕೇಳಿದಳು ಹಾಗೂ ಚೀಟಿಯಲ್ಲಿ ಹುಡುಗಿಯರ ಹೆಸರನ್ನೇಕೆ ಬರೆಯುತ್ತಿದ್ದೆ ಎಂದು ಗದರಿಸಿದಳು.


ಆಗ ರಾಜು ಸಮಾಜ ವಿಜ್ಞಾನ ಶಿಕ್ಷಕಿಗೆ ಪ್ರತ್ಯುತ್ತರ ನೀಡುತ್ತಾ ತಪ್ಪಾಗಿ ತಿಳಿಯಬೇಡಿ ಮೇಡಂ, ನೀವು ಪಾಠ ಹೇಳುತ್ತಿದುದು ನನಗೆ ಏನೂ ಅರ್ಥವಾಗುತ್ತಿರಲಿಲ್ಲ ಏಕೆಂದರೆ ನೀವು ಉಪನ್ಯಾಸದ ಮೂಲಕ ಹೇಳುತ್ತೀರಿ, ನಾನು ಕಿವುಡ ಹಾಗೂ ಮೂಗ. ನನಗೆ ಏನೂ ಕೇಳಿಸುವುದಿಲ್ಲ ಹಾಗೂ ಮಾತನಾಡಲು ಬರುವುದಿಲ್ಲ ಆದರೆ ಗಣಿತ ಶಿಕ್ಷಕರು ಬೋರ್ಡ ಮೇಲೆ ತಿಳಿಸುತ್ತಾರೆ ಹಾಗೂ ಗುಂಪಿನಲ್ಲಿ ಮಾಡಲು ನೀಡಿ, ನನ್ನ ಹತ್ತಿರ ಬಂದು ಅರ್ಥೈಸುತ್ತಾರೆ ಆಗ ನನಗೆ ಅರ್ಥವಾಗುತ್ತದೆ. ತಿಳಿಯದಿದ್ದರೆ ಪುನಃ ಅವರಿಗೆ ಕೇಳಿ ಅರ್ಥೈಸಿಕೊಳ್ಳುತ್ತೇನೆ. ಅವರು ಉತ್ತಮ ಶಿಕ್ಷಕರು. ಆದರೆ ತಾವು ಹಾಗೂ ಭಾಷಾ ಶಿಕ್ಷಕರ ಅವಧಿ ನನಗೆ ಏನೂ ಅರ್ಥವಾಗುವುದಿಲ್ಲ. ಆದ್ದರಿಂದ ತರಗತಿಯಲ್ಲಿ ನನಗೆ ಎಷ್ಟು ವಿದ್ಯಾರ್ಥಿಗಳ ಹೆಸರು ಗೊತ್ತಿದೆ ಅಷ್ಟು ವಿದ್ಯಾರ್ಥಿಗಳ ಹೆಸರನ್ನು ಬರೆಯುತ್ತಾ ಕುಳಿತೆ, Sorry Madam. ನಾನು ಹಾಗೆ ಹೆಸರನ್ನು ಬರೆಯಬಾರದಿತ್ತು ಆದರೆ ನನಗೆ ತಮ್ಮ ಪಾಠಗಳು ಅರ್ಥವಾಗುವುದಿಲ್ಲ ಎಂದು ಹೇಳಿ ನೆಲವನ್ನು ನೋಡುತ್ತಾ ನಿಂತನು. ಆಗ ಸಮಾಜ ವಿಜ್ಞಾನ ಶಿಕ್ಷಕಿ ತನ್ನ ಕಲಿಸುವಿಕೆಯ ಬಗ್ಗೆ ತಾನೇ ಸ್ವಾವಲೋಕನದಲ್ಲಿ ತೊಡಗುತ್ತಾ, ರಾಜು ನಾಳೆ ನಾನು ವಿಭಿನ್ನವಾಗಿ ಕಲಿಸುವೆ ಹಾಗೂ ನಿನಗೆ ಅರ್ಥವಾಗುವಂತೆ ಕಲಿಸುವೆ ಎಂದು ಹೇಳಿದಳು.
ಮಾರನೇಯ ದಿನ ರಾಜು (ವಿಕಲಚೇತನ ವಿದ್ಯಾರ್ಥಿ) ತರಗತಿಯ ಮುಂಬಾಗದಲ್ಲಿಯೇ ಕುಳಿತು ಆಸಕ್ತಿಯಿಂದ ಕಾಯುತ್ತಿದ್ದ. ಶಿಕ್ಷಕಿ ತರಗತಿಗೆ ಬಂದು, ತರಗತಿಯ ವಿವಿಧ ಗುಂಪುಗಳಲ್ಲಿ ಮಕ್ಕಳನ್ನು ಹಂಚಿಕೆ ಮಾಡಿ, ಒಂದೊಂದು ಗುಂಪಿಗೆ ಒಂದೊಂದು ಕಾರ್ಯ ಹಂಚಿ, ಕಲಿಕಾ ಪ್ರಕ್ರಿಯೆಯಲ್ಲಿ ಮಕ್ಕಳು ಭಾಗವಹಿಸುವಂತೆ ಮಾಡಿದಳು ಹಾಗೂ ಪರಿಕಲ್ಪನೆಗಳನ್ನು ಅನುಕೂಲಿಸಲು ಪ್ರಾರಂಭಿಸಿದಳು. ರಾಜು ಇರುವ ಗುಂಪಿಗೆ ಒಂದು ಗೋಳವನ್ನು ನೀಡಿದ್ದಳು ಹಾಗೂ ಆ ಗೋಳದಲ್ಲಿರುವ ಖಂಡ, ಮಹಾಸಾಗರ ಮತ್ತು ಖಂಡಗಳಲ್ಲಿರುವ ದೇಶಗಳನ್ನು ಪಟ್ಟಿ ಮಾಡಲು ನೀಡಿದ್ದಳು. ರಾಜು ಆಸಕ್ತಿಯಿಂದ ಗೋಳ ವೀಕ್ಷಿಸುವುದು ಹಾಗೂ ಪಟ್ಟಿ ಮಾಡುವ ಪ್ರಕ್ರಿಯೆಯಲ್ಲಿ ತೊಡಗಿದ್ದನ್ನು ನೋಡಿ ಶಿಕ್ಷಕಿಗೆ ಸಂತೋಷವಾಗಿತ್ತು. ಅಷ್ಟರಲ್ಲಿ ರಾಜು ಎದ್ದು ನಿಂತು ನೀವು ತಪ್ಪಾಗಿ ಅರ್ಥೈಸುತ್ತಿಲ್ಲವೇ ಮೇಡಂ ಎಂದು ಪ್ರಶ್ನೆಯನ್ನು ಇಟ್ಟನು. ಇದನ್ನು ಕೇಳಿ ಶಿಕ್ಷಕಿ ಏಕೆ ? ಎಂದು ಕೇಳಿದಳು. ತರಗತಿಯ ಹೊರಗೆ ಮೈದಾನದಲ್ಲಿಯ ಭೂಮಿಯನ್ನು ತೋರಿಸುತ್ತಾ, ಅಲ್ಲಿ ನೋಡಿ, ಮೇಡಂ ಭೂಮಿ ಹೇಗಿದೆ? ಎಲ್ಲಿಯೂ ಸಮತಟ್ಟಾಗಿ Plane ಆಗಿಲ್ಲ ಆದರೆ ತಾವು ನೀಡಿದ ಭೂಮಿಯ ಮಾದರಿಯ ಗೋಳ Plane ಇದೆಯಲ್ಲ ಎಂದನು. ಅದನ್ನು ಕೇಳಿದ ಶಿಕ್ಷಕಿಗೆ ರಾಜು ಕೇಳುತ್ತಿರುವುದು ಸರಿಯಾಗಿದೆ ಹಾಗೂ ನಾವು ಇನ್ನು ಮುಂದೆ ಬಳಸುವ ಗೋಳದ ಮಾದರಿಗಳು ಭೂಮಿಯ ನೈಜ ಸ್ವರೂಪವನ್ನು ಹೋಲುವ ಮಾದರಿಗಳೇ ಆಗಿರಬೇಕು ಅನಿಸಿತು. ಆಗ ಶಿಕ್ಷಕಿ ರಾಜುವಿಗೆ ಉತ್ತರಿಸುತ್ತಾ ಹೌದು ರಾಜು ನೀನು ಹೇಳುತ್ತಿರುವು ನಿಜ, ಉಪಗ್ರಹ ಆಧರಿತ ನಕ್ಷೆಯಲ್ಲೂ ನೀನು ಹೇಳಿದಂತೆ ಇರುತ್ತದೆ ಹಾಗೆಯೇ ನಮ್ಮ ಗೋಳಗಳು ಇದ್ದರೆ ನೈಜ ಪರಿಕಲ್ಪನೆ ಬರುತ್ತದೆ. ಎಂದರು. ತದನಂತರ ಇನ್ನೊಂದು ಗುಂಪಿನಲ್ಲಿಯ ರಾಣಿ ಎಂಬ ಅಂಗವೈಫಲ್ಯತೆಯನ್ನು ಹೊಂದಿದ ವಿಕಲಚೇತನ ವಿದ್ಯಾರ್ಥಿ ಎದ್ದು ನಿಂತು ಮೇಡಂ ನನಗೆ ಒಂದು ಸಂದೇಹ ಕಾಡುತ್ತಿದೆ ಎಂದಳು. ಶಿಕ್ಷಕಿ ಆ ಗುಂಪಿನೆಡೆಗೆ ಹೋಗಿ, ಏನು ಎಂದು ಕೇಳಿದಳು. ಆಗ ರಾಣಿಯು, ನೋಡಿ ಮೇಡಂ ನೀವು ಅಲ್ಲಿ ಗೋಡೆಗೆ ತೂಗು ಕಾಕಿದ ನಕ್ಷೆಯಲ್ಲಿ ಉತ್ತರ ಮೇಲೆ ಹಾಗೂ ದಕ್ಷಿಣ ಕೆಳಗೆ ಎಂದು ಹೇಳಿದಿರಿ. ಈಗ ತರಗತಿಯಿಂದ ಹೊರಗೆ ಹೋದಾಗ ಉತ್ತರ ಮೇಲೆ ದಕ್ಷಿಣ ಕೆಳಗೆ ಎಂದರೆ ತಪ್ಪು ಎಂದು ಹೇಳುತ್ತೀರಿ, ಇದು ಹೇಗೆ ಎಂದು ಕೇಳಿದಳು. ಆಗ ಶಿಕ್ಷಕಿ ಗೋಡೆಗೆ ತೂಗು ಹಾಕಿದ ನಕ್ಷೆಯನ್ನು ದಿಕ್ಕಿಗೆ ಅನುಗುಣವಾಗಿ ನೆಲಕ್ಕೆ ಹಾಸಿ, ದಿಕ್ಕುಗಳ ಪರಿಚಯ ಮಾಡಿದಳು ಹಾಗೂ ರಾಣಿ ಎಂಬ ವಿದ್ಯಾರ್ಥಿಗೆ ಸಂದೇಹ ಪರಿಹಾರವಾಯಿತೇ ಎಂದು ಕೇಳಿದಳು. ಆಗ ರಾಣಿ ಪ್ರತ್ಯುತ್ತರ ನೀಡುತ್ತಾ ಈಗ ತರಗತಿಯ ಹೊರಗಡೆ ಹಾಗೂ ತರಗತಿಯ ಒಳಗಡೆ ಒಂದೇ ರೀತಿಯ ದಿಕ್ಕುಗಳಿವೆ ಎಂದು ಹೇಳಿದಳು. ಅಂದಿನ ತರಗತಿಯಲ್ಲಿ ರಾಜು, ರಾಣಿ ಎಂಬ ವಿಕಲಚೇತನ ವಿದ್ಯಾರ್ಥಿಗಳು ಹಾಗೂ ತರಗತಿಯ ಇತರ ಎಲ್ಲ ಮಕ್ಕಳು ಅತ್ಯಂತ ಸಂತಸದ ಕಲಿಕೆಯನ್ನು ಆನಂದಿಸಿದರು.


ಮಕ್ಕಳನ್ನು ಕಲಿಕಾ ಪ್ರಕ್ರಿಯೆಯಲ್ಲಿ ಭಾಗವಹಿಸುವಂತೆ ಪ್ರೋತ್ಸಾಹಿಸಿ ಪರಿಕಲ್ಪನೆಗಳನ್ನು ಅರ್ಥೈಸುವಿಕೆಯ ಸುಗಮಗಾರಿಕೆ ಎಷ್ಟೊಂದು ಅದ್ಭುತ ಎಂದು ಶಿಕ್ಷಕಿ ಸಂತಸ ಪಟ್ಟಳು. ಆದ್ದರಿಂದಲೇ ಕಲಿಸುವಿಕೆಯಿಂದ ಅನುಕೂಲಿಸುವಿಕೆಯ ಪರಿಕಲ್ಪನೆ ಬಂದಿರಬಹುದು. ಮಕ್ಕಳು ಎಷ್ಟೊಂದು ಅದ್ಭುತವಾದ ಪ್ರಶ್ನೆಗಳನ್ನು ಕೇಳುತ್ತಾರೆ, ತಾರ್ಕಿಕವಾಗಿ, ವೈಚಾರಿಕವಾಗಿ ಚಿಂತಿಸುತ್ತಾರೆ ಎಂದು ಸ್ವಾವಲೋಕನ ಮಾಡುತ್ತಾ ಶಿಕ್ಷಕರ ಕೋಣೆಗೆ ಹೋಗಿ ಇತರ ಶಿಕ್ಷರೊಂದಿಗೆ ಚರ್ಚಿಸಿದಳು. ಮುಂಚೆ ಮಕ್ಕಳು ಕಲ್ಲು ಇದ್ದಹಾಗೆ, ಅವರನ್ನು ಕೆತ್ತಿ ಶಿಲ್ಪವನ್ನಾಗಿ ಮಾಡಬೇಕು ಎಂಬೆಲ್ಲ ಪರಿಕಲ್ಪನೆಗಳು ತಪ್ಪಾಗಿವೆ. ಮಕ್ಕಳು ಒಂದಲ್ಲಾ ಒಂದು ಜ್ಞಾನವನ್ನು ಕುಟುಂಬ ಹಾಗೂ ಸಮಾಜದಿಂದ ತುಂಬಿಕೊಂಡು ಬಂದಿರುತ್ತಾರೆ. ತರಗತಿಯಲ್ಲಿರುವ ಕಲಿಕಾರ್ಥಿಗಳು ಕಲಿಕೆಯನ್ನು ಶೂನ್ಯದಿಂದ ಆರಂಭಿಸುತ್ತಿಲ್ಲ. ಅವರು ತಮ್ಮ ಶ್ರೀಮಂತ ಅನುಭವಗಳನ್ನು ತರಗತಿಗೆ ತಂದಿರುತ್ತಾರೆ. ಅವುಗಳನ್ನು ಅನ್ವಯಿಸುತ್ತಾ ಅನುಕೂಲಿಸುತ್ತಾ ಅರ್ಥೈಸುತ್ತಾ ಹೋಗಬೇಕು ಎಂದು ಇತರ ಶಿಕ್ಷರೊಂದಿಗೆ ಚರ್ಚಿಸಿದಳು
ಕಲಿಕೆಯನ್ನು ಅನುಕೂಲಿಸುವವರಿಗೂ ಬೋಧಿಸುವವರಿಗೂ ಬಹಳ ವ್ಯತ್ಯಾಸವಿದೆ. ಇವೆರಡೂ ವಿರುದ್ಧಾರ್ಥಕ ಬಳಕೆಗಳು ಎಂದರೂ ತಪ್ಪಾಗಲಾರದು, ಬೋಧಿಸುವವರು ವಿಷಯವನ್ನು ನೇರವಾಗಿ ಹೇಳುತ್ತಾರೆ. ಅಲ್ಲಿ ಬೋಧಕರ ಪರಿಶ್ರಮವಿದೆ. ವಿಷಯ ವಿವರಣೆಯು ಕರಾರುವಕ್ಕಾಗಿಯೂ ವಿಸ್ತೃತವಾಗಿಯೂ ಇರುತ್ತದೆ. ಬೋಧಕರು ಹಲವಾರು ಆಕರ ಗ್ರಂಥಗಳನ್ನು ಪರಾಮರ್ಶಿಸಿ ಅವುಗಳ ಸಾರವನ್ನೇ ವಿದ್ಯಾರ್ಥಿಗಳಿಗೆ ಧಾರೆಯೆರೆಯುತ್ತಾರೆ. ಅನುಕೂಲಗಾರಿಕೆಯಲ್ಲಿ ವಿದ್ಯಾರ್ಥಿಗಳೇ ಕೆಲಸ ಮಾಡಬೇಕು. ಕಲಿಯುವವರು ತಾನೇ ಕಷ್ಟಪಡಬೇಕಾದದ್ದು? ಆದರೆ ಕೆಲಸ ಹೇಗೆ ಮಾಡಬೇಕು ಎಂಬ ಮಾರ್ಗದರ್ಶನವಿರುತ್ತದೆ. ಮಾಹಿತಿಯ ಮೂಲಗಳು ಲಭ್ಯವಿರುತ್ತವೆ. ವಿದ್ಯಾರ್ಥಿಗಳು ಪರಸ್ಪರ ಸಹಕಾರದಿಂದ ಕಲಿಯಲು ಅವಕಾಶಗಳಿರುತ್ತವೆ. ಕಲಿಕೆಯ ಪ್ರತಿ ಹಂತದಲ್ಲಿಯೂ ವಿದ್ಯಾರ್ಥಿಗಳ ಶ್ರಮವಿರುತ್ತದೆ. ಅದಕ್ಕೇ ಆ ಕಲಿಕೆ ಅವರಿಗೆ ಆಪ್ತವಾಗುತ್ತದೆ. ಅದರ ಜೊತೆ ಅವರು ಗುರುತಿಸಿಕೊಳ್ಳುತ್ತಾರೆ. ನಾನಿಷ್ಟು ಕಷ್ಟಪಟ್ಟು ಬೋಧಿಸಿದಾಗಲೂ ವಿದ್ಯಾರ್ಥಿಗಳು ಏಕೆ ಕಲಿಯುತ್ತಿಲ್ಲ? ಎಂದು ಬೇಸರಿಸಿಕೊಳ್ಳುವ ಅತ್ಯಂತ ಪ್ರಾಮಾಣಿಕರಾದ ಶಿಕ್ಷಕರೂ ಯೋಚಿಸಬೇಕಾದ ವಿಷಯವಿದು. ವಿದ್ಯಾರ್ಥಿಗಳು ಏಕೆ ಕಲಿಯುತ್ತಿಲ್ಲವೆಂದರೆ ನಾವು ಬೋಧಿಸುವ ವಿಷಯ ಅವರಿಗೆ ಆಪ್ತವಾಗುವುದಿಲ್ಲ. ಅದನ್ನು ತಮ್ಮದನ್ನಾಗಿಸಿಕೊಳ್ಳಬೇಕಾದರೆ ಅವರು ಬಲವಂತದಿಂದ ಅದರೆಡೆಗೆ ಗಮನ ಹರಿಸಬೇಕಾಗುತ್ತದೆ. ಅದಕ್ಕೆ ಎಷೋ ಬೇಕೋ ಅಷ್ಟನ್ನೇ ಬಾಯಿಪಾಠ ಮಾಡಿ ಒಪ್ಪಿಸಿ ಪರೀಕ್ಷೆಗಳಲ್ಲಿ ಪಾಸಾಗುವ ಮನೋವೃತ್ತಿ ಬೆಳೆಯುತ್ತದೆ.


ಬೋಧಿಸುವುದ ಒಂದು ಕೃತಕ ಕ್ರಿಯೆ. ಎಲ್ಲಿಯವರೆಗೆ ಬೋಧಿಸುವವರು ಇರುತ್ತಾರೋ ಅಲ್ಲಿಯವರೆಗೆ ಕಲಿಯದವರೂ ಇರುತ್ತಾರೆ. ಯಾವಾಗ ಕಲಿಕೆ ಅನುಕೂಲಗಾರಿಕೆ ಆರಂಭವಾಗುತ್ತದೆಯೋ ಆಗ ಪ್ರತಿಯೊಬ್ಬರೂ ಕಲಿಕೆದಾರರೇ ಆಗುತ್ತಾರೆ. ಪ್ರತಿಯೊಬ್ಬರೂ ಎಷ್ಟು ಕಲಿಯುತ್ತಾರೆ ಎನ್ನುವುದು ನಿಜಕ್ಕೂ ಅಮುಖ್ಯ. ಆದರೆ ಪ್ರತಿಯೊಬ್ಬರೂ ಹೇಗೆ ಕಲಿಯುತ್ತಾರೆ ಎನ್ನುವುದು ನಿರ್ಣಾಯಕ. ರಚನಾವಾದಿ ತತ್ವವು ಕಲಿಕೆಯ ಅನುಕೂಲಗಾರಿಕೆಯ ಮೇಲೆ ಹೆಚ್ಚು ಒತ್ತು ನೀಡುತ್ತದೆ. ಈಗ ನನಗೆ ರಚನಾವಾದ ತತ್ವ, ಕೇಂದ್ರೀಕೃತ ಹಾಗೂ ಸುರುಳಿಯಾಕಾರದ ತತ್ವಗಳು ಅರ್ಥವಾಗುತ್ತಿವೆ ಎಂದು ಶಿಕ್ಷಕರೆಲ್ಲರೂ ಚರ್ಚಿಸಲು ಪ್ರಾರಂಭಿಸಿದರು. ಆಗ ಭಾಷಾ ಶಿಕ್ಷಕಿ ತಾನು ಸಹ ಇನ್ನು ಮುಂದೆ ಕಲಿಸುವುದಿಲ್ಲ ಅನುಕೂಲಿಸುತ್ತೇನೆ


ಡಾ.ದಾನಮ್ಮ ಝಳಕಿ

ಡಾ.ದಾನಮ್ಮ ಝಳಕಿ ಯವರು ಪ್ರಸ್ತುತ ಶ್ರೀಮತಿ ಸೋಮವ್ವ ಚ ಅಂಗಡಿಯ ಕರ್ನಾಟಕ ಪಬ್ಲಿಕ್ ಶಾಲೆಯ ಉಪಪ್ರಾಂಶುಪಾಲರಾಗಿದ್ದು ಶಿಕ್ಷಣದಲ್ಲಿ ಇವರು ನಡೆಸಿದ ಹಲವು ಸಂಶೋದನಾ ಲೇಖನಗಳು ರಾಷ್ಟ್ರೀಯ ಅಂತರರಾಷ್ಟ್ರೀಯ ಸಂಸ್ತೆಗಳಿಂದ ಪ್ರಕಟಗೊಂಡಿವೆ.ರಾಜ್ಯಮಟ್ಟದಲ್ಲಿ ಉತ್ತಮ ಶಿಕ್ಷಕಿ ಪ್ರಶಸ್ತಿಗೂ ಬಾಜನರಾಗಿದ್ದಾರೆ.ಶಿಕ್ಷಣ ಮಾತ್ರವಲ್ಲದೆ ಸೃಜನಶೀಲ ಸಾಹಿತ್ಯ ರಚನೆಯಲ್ಲು ಇವರು ತಮ್ಮ ಛಾಪು ಮೂಡಿಸಿರುವ ಇವರ ಹಲವಾರು ಬರಹಗಳು ನಾಡಿನ ಬಹುತೇಕ ಪತ್ರಿಕೆಗಳಲ್ಲಿ ಪ್ರಕಟವಾಗಿವೆ

2 thoughts on “

  1. Innovative teacher.ಅವರ ಸರಳತೆ ಮಾರ್ಗದರ್ಶನ ಅನನ್ಯ ವಾದುದು.

Leave a Reply

Back To Top