ಅಂಕಣ ಸಂಗಾತಿ

ಒಲವ ಧಾರೆ

ರಮೇಶ ಸಿ ಬನ್ನಿಕೊಪ್ಪ ಹಲಗೇರಿಯವರ ಅಂಕಣ

ಅಡ್ಡಗೋಡೆಗಳ ಕೆಡವುತ್ತಲೇ ಸಾಗೋಣ

ಮಾನವ ಹುಟ್ಟುತ್ತ ವಿಶ್ವ ಮಾನವ,
ಬೆಳೆ ಬೆಳೆಯುತ್ತಾ ವಿಷಮಾನವನಾಗುತ್ತಲೇ ಸಮಾಜದ ಬಂಧನಕ್ಕೆ ಒಳಗಾಗುತ್ತಾನೆ”
ಈ ಮೇಲಿನ ಮಾತನ್ನು ಕ್ರಾಂತಿಕಾರಿ ಚಿಂತಕ, ತತ್ವಜ್ಞಾನಿ ರೂಸೋ ಅಭಿಪ್ರಾಯಪಡುತ್ತಾನೆ.

ಹೌದು ನಾವು ಭೂಮಿಗೆ ಹಸುಳೆ ಕಂದಮ್ಮಗಳಾಗಿ ಬಂದಾಗ ಜಾತಿ, ಮತ, ಧರ್ಮ, ಪಂಥ, ದೇಶ, ಭಾಷೆ, ವೈವಿಧ್ಯಮಯ ಸಂಸ್ಕೃತಿ, ಇದ್ಯಾವುದರ ಅರಿವೇ ಇರುವುದಿಲ್ಲ. ಮನುಷ್ಯ ಪ್ರಕೃತಿದತ್ತ ಕೊಡುಗೆಯಾಗಿ ಹುಟ್ಟಿ ಬರುತ್ತಾನೆ. ಆದರೆ ಅವನು ಪ್ರಕೃತಿದತ್ತವಾಗಿ ಬೆಳೆಯದೆ, ತನ್ನ ವಿಶಾಲವಾದ ಇರುಕೆಯನ್ನು ಸಮಾಜದೊಂದಿಗೆ ಸಂಕುಚಿತಗೊಳಿಸುತ್ತ ಲೇ ಹೋಗುತ್ತಾನೆ. ಇದು ಮನುಷ್ಯನ ಸಾಂಸ್ಕೃತಿಕ – ಸಾಮಾಜಿಕ ಹಾಗೂ ಪ್ರಗತಿಪರ ಬೆಳವಣಿಗೆಗೆ ಮಾರಕವಾಗುತ್ತದೆ.

ಸಮ ಸಮಾಜವನ್ನು ಕಟ್ಟುವ ಸಲುವಾಗಿ ಸಾಕಷ್ಟು ಮಹನೀಯರು ಹೋರಾಟ ನಡೆಸಿದರು. ಕುಟುಂಬವನ್ನು ತೊರೆದರು, ಮರೆತರು ಅಷ್ಟೇ ಯಾಕೇ ಬದುಕಿನುದ್ದಕ್ಕೂ ಸಮಾಜದ ಒಳಿತಿಗಾಗಿ ಶ್ರಮಿಸಿದರು. ಈ ಹಿರಿಯ ಜೀವಗಳ ಸಾಧನೆಗಳ ಮೌಲ್ಯಗಳನ್ನು ಎಣಿಸಲು ಸಾಧ್ಯವೇ ಇಲ್ಲ..? ಒಂದು ಕಾಲಘಟ್ಟದಲ್ಲಿ ಮನುಷ್ಯರನ್ನು ಪಶುವಿಗಿಂತಲೂ ಕೀಳಾಗಿ ಕಾಣುತ್ತಿದ್ದ, ದಂಡಿಸುತ್ತಿದ್ದ, ಬಹಿಷ್ಕಾರವನ್ನು ಹಾಕುತ್ತಿದ್ದು ಸಾಮಾನ್ಯವಾಗಿತ್ತು. ಯಾರು ಪ್ರಶ್ನಿಸುತ್ತಿರಲಿಲ್ಲ. ಪ್ರಶ್ನಿಸುವ ಅಸ್ತಿತ್ವಕ್ಕೆ ಕೊಡಲಿ ಪೆಟ್ಟು ಬಿದ್ದು ನೋವಿನಿಂದ ನರಳುತ್ತಿದ್ದರು. ಆದಿವಾಸಿ, ದೀನದಲಿತರು, ಮಹಿಳೆಯರು, ಹಿಂದುಳಿದವರು, ಬಡವರನ್ನು ಶೋಷಣೆ ಮಾಡುವುದು ನಿತ್ಯವೂ ನಡೆಯುತ್ತಿತ್ತು.

ಇಂತಹ ಅಸಂಗತವಾದ ಕ್ರೌರ್ಯದಿಂದ ಮುಕ್ತಗೊಳಿಸುವವರನ್ನು ಅಂದಿನ ಸಮಾಜ ನಿರೀಕ್ಷಿತ ಕಣ್ಣಿನಿಂದ ನೋಡುತ್ತಿತ್ತು.

ಈ ಸಮಯದಲ್ಲಿ ನೊಂದವರ ಕೈಹಿಡಿದು ಕಣ್ಣೀರು ಒರೆಸುವ ತಾಯಿ ಹೃದಯದ ಭಗವಾನ ಬುದ್ದ, ಬಸವ, ಅಂಬೇಡ್ಕರ್ ಆದಿಯಾಗಿ ಸಮಾಜಿಕ ಚಳುವಳಿಯನ್ನು ಹುಟ್ಟು ಹಾಕಿದರು.

ಬುದ್ಧನು, “ಆಸೆಯ ದು:ಖಕ್ಕೆ ಮೂಲ ಕಾರಣ”ವೆಂದು ವರ್ಗ ವ್ಯವಸ್ಥೆಯ ವಿರುದ್ಧ, ಮತ್ತು ಭೂದಾಹದ ವಿರುದ್ಧ ಬೋಧನೆಗಳನ್ನು ಬೋಧಿಸುತ್ತ ವಾಸ್ತವ ಸಂಗತಿಗಳನ್ನು ತಿಳಿಸಿದನು.

ಅದೇ ರೀತಿಯಲ್ಲಿ ಬಸವಣ್ಣನವರು, “ಕಾಯಕವೇ ಕೈಲಾಸ”,

“ಹೊಲಿಗೇರಿಯೊಂದೆ ಶಿವಾಲಯಕ್ಕೆ..” ಎಂದು
ಸರ್ವರೂ ಸಮಾನರು ಎಂದು ರಾಜಪ್ರಭುತ್ವದ ಮತ್ತು ಸಂಪ್ರದಾಯದ ವಿರುದ್ಧ ಹೋರಾಡಿದರು.

ಇನ್ನು ಡಾ.ಅಂಬೇಡ್ಕರ್ ಅವರು , ಜಾತಿ ವ್ಯವಸ್ಥೆಯಲ್ಲಿಯೇ ನೊಂದು – ಬೆಂದು ಬೆಂಡಾದರೂ ಕೇವಲ ಬೋಧನೆಗಳಿಂದ ಸಮ ಸಮಾಜ ಕಟ್ಟಲು ಸಾಧ್ಯವಿಲ್ಲ ಎಂದು ಮನಗಂಡರು. ತನಗೆ ದೊರಕಿದ ಅವಕಾಶವನ್ನು ಬಳಸಿಕೊಂಡರು. ಮೂಕರಿಗೆ ಧ್ವನಿಯಾದರು. ಸಂವಿಧಾನದ ಅಡಿಪಾಯವನ್ನು ಗಟ್ಟಿಗೊಳಿಸಿದರು.

ಈ ಮೇಲಿನ ಉದಾಹರಣೆಗಳು ಕೆಲವೇ ಕೆಲವು ಮಾತ್ರ. ಅದಾರಚೆ ಇನ್ನೂ ಸಾಕಷ್ಟು ಹೋರಾಟಗಾರರು ವ್ಯವಸ್ಥೆಯ ವಿರುದ್ಧ ಪ್ರಶ್ನಿಸುತ್ತಲೇ ಕೊಲೆಯಾದರು.
ಸಾಕ್ರಟೀಸ್, ಗಾಂಧೀಜಿ….
ಇಂತಹ ಹಿರಿಯ ಪ್ರಗತಿಪರರ ತ್ಯಾಗ, ಬಲಿದಾನಗಳಿಂದ ನಮಗೆ ಪಾಠವಾಗಬೇಕು.

ಮನುಷ್ಯ ಮನುಷ್ಯ ಮಾತ್ರ. ಮತ್ತೆ ಬೇರೆನೂ ಅಲ್ಲ. ಇಲ್ಲಿ ಯಾರು ಮುಖ್ಯರಲ್ಲ : ಯಾರೂ ಅಮುಖ್ಯರೂ ಅಲ್ಲ. ಬಿದ್ದವರನ್ನು ಮೇಲೇತ್ತಬೇಕಷ್ಟೇ..!! ದ್ವೇಷ ಬಿತ್ತುವ ಧರ್ಮಗಳ ಹರಕತ್ತು ನಮಗೆ ಬೇಕಿಲ್ಲ.

ಹುಟ್ಟು ಆಕಸ್ಮಿಕ. ನಾವ್ಯಾರು ಹೇಳಿ ಕೇಳಿ ಇದೇ ಜಾತಿಯಲ್ಲಿ ಹುಟ್ಟಬೇಕೆಂಬ ಅರ್ಜಿ ಹಾಕಿರುವುದಿಲ್ಲ. ಅಲ್ಲದೆ ಶ್ರೀಮಂತ ಮನೆತನದಲ್ಲಿಯೇ ಹುಟ್ಟನ್ನು ಬಯಸಿರುವುದಿಲ್ಲ.

ನಮ್ಮ ನಡುವಿನ ಇಂತಹ ಹತ್ತು ಹಲವಾರು ಅಡ್ಡ ಗೋಡೆಗಳನ್ನು ನಿರ್ಮಿಸಿರಬಹುದು. ಅಂತಹ ಅಡ್ಡಗೋಡೆಗಳನ್ನು ಕೆಡುವುತ್ತಲೇ ಸಮ ಸಮಾಜವನ್ನು ನಿರ್ಮಿಸುತ್ತ ಮುಂದೆ ಮುಂದೆ ಹೆಜ್ಜೆ ಹಾಕಬೇಕಾಗಿದೆ. ಆಗ ಮಾತ್ರ ಹಿರಿಯರ ಸಮಸಮಾಜದ ಕನಸಿನ ಒಲವಧಾರೆ ಅರ್ಥಪೂರ್ಣವಾದೀತು.

————————————————–


ರಮೇಶ ಸಿ ಬನ್ನಿಕೊಪ್ಪ

ಜೀವಸೂಚಿ :
ಹೆಸರು : ರಮೇಶ ಸಿ ಬನ್ನಿಕೊಪ್ಪ ಹಲಗೇರಿ
ವೃತ್ತಿ : ಶಿಕ್ಷಕರು
ಸರಕಾರಿ ಮಾದರಿಯ ಹಿರಿಯ ಪ್ರಾಥಮಿಕ ಶಾಲೆ ಹಿರೇಜಂತಕಲ್ –ಗಂಗಾವತಿ
ವಿದ್ಯಾಭ್ಯಾಸ : ಎಮ್ ಎ ಬಿಇಡಿ
ಹವ್ಯಾಸ : ಓದು, ಪ್ರವಾಸದ ತಿರುಗಾಟ, ಅಂಕಣ ಬರಹ, ಕಾವ್ಯ, ಗದ್ಯ, ಚುಟುಕು ಬರಹಗಳು ಇತ್ಯಾದಿ
ಅಂಕಣಗಳು ಬರಹಗಳು :
ವಿನಯವಾಣಿ ಪತ್ರಿಕೆಯಲ್ಲಿ
ಶೈಕ್ಷಣಿಕ ಸ್ಪಂದನ
ಯುವಸ್ಪಂದನ
ವಿಜಯ ವಿಕ್ರಾಂತ ಪತ್ರಿಕೆಯಲ್ಲಿ
ಒಲವಧಾರೆ
ರೆಡ್ಡಿಬಳಗ ಮಾಸಿಕದಲ್ಲಿ
ಚಿಂತನ ಬರಹ
ವಿವಿಧ ಪತ್ರಿಕೆಯಲ್ಲಿ
ಪುಸ್ತಕ ಸ್ಪಂದನ (ಪುಸ್ತಕಾವಲೋಕನ ಬರಹಗಳು)
ಪ್ರಕಟಿತ ಕೃತಿಗಳು:
ಹೆಜ್ಜೆ ಮೂಡದ ಹಾದಿ
(ಕವನ ಸಂಕಲನ)
ನೆಲ ತಬ್ಬಿದ ಮುಗಿಲು
(ಚುಟುಕು ಸಂಕಲನ)
ಕಾಣೆಯಾದ ನಗುವ ಚಂದಿರ
(ಕವನ ಸಂಕಲನ)
ಭಾರತದಲ್ಲಿ ಸ್ವಾತಂತ್ರ‍್ಯ ಹೋರಾಟದಲ್ಲಿ ಗಂಗಾವತಿ
(ಕರ್ನಾಟಕ ಸಾಹಿತ್ಯ ಆಕಾಡೆಮಿ ಪ್ರಕಟಿತ)
ಅಚ್ಚಿನಲ್ಲಿರುವ ಕೃತಿಗಳು :
ಚಿಟ್ಟೆಗೆಣೆದ ಬಟ್ಟೆ
(ಹಾಯ್ಕು ಸಂಕಲನ)
ಅನುದಿನ ಚಾಚಿದ ಬಿಂಬ
(ದ್ವೀಪದಿಗಳು)
ಶಿಕ್ಷಣವೆಂಬ ಹಾರೋ ಹಕ್ಕಿ
(ಶೈಕ್ಷಣಿಕ ಚಿಂತನಾ ಅಂಕಣ ಬರಹಗಳು)
ಹಾಫ್ ಚಹಾ
(ಬದುಕಿಗೆ ದಕ್ಕಿದ ಅರ್ಧ ಸತ್ಯಗಳು)
ನಾಡಿನ ಪ್ರಮುಖ ಪತ್ರಿಕೆಗಳಲ್ಲಿ 
ಕವನ ಲೇಖನಗಳ ಪ್ರಕಟ.

Leave a Reply

Back To Top