ಅಂಕಣ ಬರಹ
ಸಾಧಕಿಯರ ಯಶೋಗಾಥೆ
ಭಾರತದ ಮೊದಲ ಮಹಿಳಾ ಶಾಸಕಿ
ಡಾ. ಮುತ್ತು ಲಕ್ಷ್ಮಿ
ವೈದ್ಯೆ, ಪತ್ರಕರ್ತೆ, ಸಾಮಾಜ ಸುಧಾರಕಿಯೂ ಆಗಿದ್ದರು (1886-1968)
ಡಾ|| ಮುತ್ತುಲಕ್ಷ್ಮಿ ರೆಡ್ಡಿಯವರು ಭಾರತೀಯ ವೈದ್ಯೆ ಮತ್ತು ಪತ್ರಕರ್ತೆಯಾಗಿ ಕಾರ್ಯನಿರ್ವಹಿಸಿದವರು. ಸಾಮಾಜ ಸುಧಾರಕಿ ಮತ್ತು ಪದ್ಮಭೂಷಣ ಪ್ರಶಸ್ತಿ ವಿಜೇತೆ. ಇವರು ಭಾರತದ ಮೊದಲ ಮಹಿಳಾ ಶಾಸಕಿ. ಮುತ್ತು ಲಕ್ಷ್ಮಿ ರೆಡ್ಡಿ 1927ರಲ್ಲಿ ಮದ್ರಾಸ್ ಶಾಸಕಾಂಗ ಸಭೆಗೆ ನೇಮಕಗೊಂಡರು. ಇವರು ಬ್ರಿಟೀಷ್ ಇಂಡಿಯಾದ ಮೊದಲ ಮಹಿಳಾ ಶಾಸಕಿ. ರಾಜ್ಯ ಸಮಾಜ ಕಲ್ಯಾಣ ಸಲಹಾ ಮಂಡಳಿಯ ಮೊದಲ ಮಹಿಳಾ ಶಾಸಕಿ. ಮಹಿಳಾ ಕಾಲೇಜು, ಸರ್ಕಾರಿ ಹೆರಿಗೆ ಮತ್ತು ನೇತ್ರಶಾಸ್ತ್ರೀಯ ಆಸ್ಪತ್ರೆಯಲ್ಲಿನ ಮೊದಲ ಮಹಿಳಾ ಸರ್ಜನ್ ಆಗಿದ್ದರು. ಹಾಗೇಯೆ ಪುರುಷರ ಕಾಲೇಜಿನಲ್ಲಿ ಪ್ರವೇಶವನ್ನು ಪಡೆದ ಮೊದಲ ಮಹಿಳೆಯಾಗಿದ್ದಾರೆ.
ಮುತ್ತು ಲಕ್ಷ್ಮಿಯವರು 30 ಜುಲೈ 1886ರಲ್ಲಿ ಆಗಿನ ಮದ್ರಾಸ್ ಪ್ರಾಂತ್ಯದ ರಾಜಸಂಸ್ಥಾನ ಆಫ್ ಪಡುಕೋಟೈಯಲ್ಲಿ ಜನಿಸಿದರು. ಇವರ ತಂದೆ ಮಹಾರಾಜ ಕಾಲೇಜಿನ ಪ್ರಾಂಶುಪಾಲರಾಗಿದ್ದರು. ಇವರ ತಂದೆ ಎಸ್. ನಾರಾಯಣಸ್ವಾಮಿ ತಾಯಿ ಚಂದ್ರಮ್ಮಲ್. ಚಂದ್ರಮ್ಮಲ್‍ರವರು ಒಬ್ಬ ದೇವದಾಸಿಯಾಗಿದ್ದರು. ದೇವದಾಸಿ ಹೆಣ್ಣು ಮಗಳನ್ನು ವಿವಾಹವಾಗಿದ್ದಕ್ಕೆ ಮುತ್ತು ಲಕ್ಷ್ಮಿಯ ತಂದೆಯನ್ನು ಕುಟುಂಬದಿಂದ ಬಹಿಷ್ಕರಿಸಿದ್ದರು.
ಮುತ್ತು ಲಕ್ಷ್ಮಿಯವರು ತಾಯಿಯೊಂದಿಗೆ ನಿಕಟವಾದ ಸಂಬಂಧವನ್ನು ಬೆಳೆಸಿಕೊಂಡಿದ್ದರಿಂದ ದೇವದಾಸಿ ಮಹಿಳೆಯರ ಜೀವನ ಅವರ ಸಮಸ್ಯೆ ಮುಂತಾದವುಗಳ ಬಗ್ಗೆ ತಿಳಿಯುವಂತಾಯಿತು. ಅಂದಿನ ದಿನಮಾನಗಳಲ್ಲಿ ಹೆಣ್ಣು ಮಕ್ಕಳಿಗೆ ಶಿಕ್ಷಣವನ್ನು ನೀಡದ ಕಾಲದಲ್ಲಿ ನಾರಾಯಣ ಸ್ವಾಮಿಯವರು ತನ್ನ ಮಗಳಿಗೆ ಶಿಕ್ಷಣ ಕೊಡಿಸಲು ಮುಂದಾದರು. ಮುತ್ತು ಲಕ್ಷ್ಮಿಯು ಕೂಡ ಓದು ಬರಹದಲ್ಲಿ ಚುರುಕಾಗಿದ್ದರು. ಫ್ರೌಡಾವಸ್ಥೆಯಲ್ಲಿ ಶಾಲೆ ಬಿಡುವ ನಿರ್ಧಾರ ತೆಗೆದುಕೊಂಡರು. ಹಾಗಾಗಿ ಮನೆಯಲ್ಲಿಯೇ ಭೋಧನೆ ಮುಂದುವರೆಯಿತು. ತಾಯಿಯು ಲಕ್ಷ್ಮಿಯ ಮದುವೆಯನ್ನು ಮಾಡಲು ವರನನ್ನು ಹುಡುಕಲು ಪ್ರಾರಂಭಿಸಿದರು. ಅದಕ್ಕೆ ಮುತ್ತು ಲಕ್ಷ್ಮಿಯವರು ವಿರೋಧ ವ್ಯಕ್ತಪಡಿಸಿ ವಿಭಿನ್ನವಾಗಿ ಇರಲು ಆಲೋಚಿಸಿದರು. ಅನೇಕ ಸಲ ಕೇವಲ ಗಂಡು ಮಕ್ಕಳಿಗೇಕೆ ಶಿಕ್ಷಣ, ಹೆಣ್ಣು ಮಕ್ಕಳಿಗೇಕಿಲ್ಲ ಶಿಕ್ಷಣವೆಬುಂದು? ಕುಟುಂಬದವರೊಂದಿಗೆ ವಾದ ಮಾಡುತ್ತಿದ್ದರು.
ಮುತ್ತು ಲಕ್ಷ್ಮಿಯವರು ಮೆಟ್ರಿಕ್ಯೂಲೇಷನ್ ಪರೀಕ್ಷೆ ಉತ್ತಿರ್ಣರಾದಾಗ ಅವರು ಮಹಾರಾಜ ಕಾಲೇಜಿಗೆ ಪ್ರವೇಶ ಪರೀಕ್ಷೆಗಾಗಿ ಅರ್ಜಿ ಸಲ್ಲಿಸಿದರು. ಆದರೆ ಆ ಕಾಲೇಜಿನಿಂದ ಯಾವುದೇ ಪ್ರತಿಕ್ರಿಯೆ ಬರುವುದಿಲ್ಲ. ಏಕೆಂದರೆ ಇವಳು ಹೆಣ್ಣು ಹುಡುಗಿ ಎಂಬ ಕಾರಣಕ್ಕಾಗಿ. ಅನಂತರ ಮಹಾರಾಜರು ಮುತ್ತು ಲಕ್ಷ್ಮಿಯವರನ್ನು ತಮ್ಮ ಕಾಲೇಜಿನಲ್ಲಿ ಪ್ರವೇಶವನ್ನು ನೀಡುವುದರ ಜೊತೆಗೆ ವಿದ್ಯಾರ್ಥಿ ವೇತನವನ್ನು ಕೂಡ ನೀಡಿದರು. ಲಕ್ಷ್ಮಿಯವರ ತಂದೆಯವರು ತನ್ನ ಮಗಳು ಶಿಕ್ಷಕಿಯಾಗಬಹುದು ಎಂದು ಭಾವಿಸಿದ್ದರು. ಆದರೆ ಲಕ್ಷ್ಮಿಯವರ ಆಸಕ್ತಿಗಳೆ ಬೇರೆಯೇ ಆಗಿದ್ದವು. ಅನಂತರ ಇವರು ಮದ್ರಾಸ್ ವೈದ್ಯಕೀಯ ಕಾಲೇಜಿಗೆ ಪ್ರವೇಶ ಪಡೆದರು. 1921ರಲ್ಲಿ ತಮ್ಮ ಅಧ್ಯಯನವನ್ನು ಮುಗಿಸಿ ಚೆನೈನ ಮಹಿಳಾ ಮತ್ತು ಮಕ್ಕಳ ಸರ್ಕಾರಿ ಆಸ್ಪತ್ರೆಯಲ್ಲಿ ಹೌಸ್ ಸರ್ಜನ್ ಆದರು.
ಮುತ್ತು ಲಕ್ಷ್ಮಿಯವರು ತಮ್ಮ ಭಾವನೆಗಳ ಕಡಗೆ ಗಮನ ಹರಿಸಿ, ತಮ್ಮಂತೆ ಸಮಾನರೆಂದು ಭಾವಿಸುವ ಸುಂದರ ರೆಡ್ಡಿ ಅವರನ್ನು 1914ರಲ್ಲಿ ತನ್ನ 28ನೇ ವಯಸ್ಸಿನಲ್ಲಿ ವಿವಾಹವಾದರು. 1872ರ ಸ್ಥಳೀಯ ವಿವಾಹ ಖಾಯ್ದೆಯ ಪ್ರಕಾರ ವಿವಾಹವಾದರು. ಇವರಿಗೆ ಎಸ್. ಕೃಷ್ಣಮೂರ್ತಿ ಮತ್ತು ಎಸ್. ರಾಮಮೋಹನ್ ಮಕ್ಕಳು ಇರುವರು.
ಮುತ್ತು ಲಕ್ಷ್ಮಿಯವರು ಕಾಲೇಜು ದಿನಗಳಲ್ಲಿ ಸರೋಜಿನಿ ನಾಯ್ಡುರವರನ್ನು ಬೇಟಿಯಾದರು. ನಂತರ ಮಹಿಳಾ ಸಭೆಗಳಲ್ಲಿ ಭಾಗವಹಿಸಲು ಪ್ರಾರಂಭಿಸಿದರು. ಮಹಿಳೆಯರ ಸಮಸ್ಯೆಗಳನ್ನು ಆಲಿಸಲು ಪ್ರಾರಂಭಿಸಿದರು.
ಮುತ್ತು ಲಕ್ಷ್ಮಿಯವರ ಜೀವನದಲ್ಲಿ ಹೆಚ್ಚು ಪ್ರಭಾವ ಬೀರಿದ ವ್ಯಕ್ತಿಗಳೆಂದರೆ ಮಹಾತ್ಮಗಾಂಧಿ ಮತ್ತು ಅನಿಬೆಸೆಂಟ್. ಲಕ್ಷ್ಮಿಯವರು ಮನೆಯ ನಾಲ್ಕು ಗೋಡೆಯಲ್ಲಿ ಬಂಧಿಸಲ್ಪಟ್ಟ ಮಹಿಳೆಯರ ವಿಮೋಚನೆಗಾಗಿ ಕೆಲಸ ಮಾಡಲು ಪ್ರಾರಂಭಿಸಿದರು.
ಮುತ್ತು ಲಕ್ಷ್ಮಿಯವರು ಉನ್ನತ ಶಿಕ್ಷಣಕ್ಕಾಗಿ ಇಂಗ್ಲೆಂಡ್‍ಗೆ ಹೋದರು. ಅನಂತರ ಮದ್ರಾಸ್ ಲೆಜಿಸ್ಲೇಟಿವ್ ಕೌನ್ಸಿಲ್‍ಗೆ ಪ್ರವೇಶ ಪಡೆಯಲು ಮಹಿಳಾ ಭಾರತೀಯ ಸಂಘ “ಡಬ್ಲ್ಯೂಡಿ.ಎ” ವತಿಯಿಂದ ಕೋರಿಕೆ ಬಂದಾಗ ತಮ್ಮ ಲಾಭದಾಯಕ ಮೆಡಿಷನ್ ವೃತ್ತಿಯನ್ನು ಬಿಟ್ಟು ಅವರ ಮನವಿಯನ್ನು ಒಪ್ಪಿಕೊಂಡರು. ಮಹಿಳೆಯರಿಗಾಗಿ ಪುರಸಭೆ ಮತ್ತು ಶಾಸಕಾಂಗದ ಅಧಿಕಾರಕ್ಕಾಗಿ ಮುತ್ತು ಲಕ್ಷ್ಮಿಯವರು ಆಂದೋಲನವನ್ನು ಮಾಡಿದರು. ಇವರು ವಿಶೇಷವಾಗಿ ಮಹಿಳೆಯರಿಗಾಗಿ ಹಾಗೂ ಅನಾಥರ ಬಗ್ಗೆ ವಿಶೇಷ ಕಾಳಜಿಯನ್ನು ವಹಿಸುತ್ತಿದ್ದರು. ಅವರಿಗೆ ಉಚಿತ ಬೋರ್ಡಿಂಗ್ ಮತ್ತು ವಸತಿ ವ್ಯವಸ್ಥೆಯನ್ನು ಮಾಡಿದರು. ಚೆನೈನಲ್ಲಿ ಅವಾವೈ ಹೋಮ್‍ನ್ನು ಪ್ರಾರಂಭಿಸಿದರು.
ಮುತ್ತು ಲಕ್ಷ್ಮಿಯವರು ಮಹಿಳೆಯರಿಗಾಗಿ ಹಲವಾರು ಕೆಲಸಗಳನ್ನು ಮಾಡಿರುವರು. ಮಹಿಳೆಯರಿಗಾಗಿ ಮತ್ತು ಮಕ್ಕಳಿಗಾಗಿ ವಿಶೇಷವಾದ ಆಸ್ಪತ್ರೆಗಳನ್ನು ಸ್ಥಾಪಿಸಿದರು. ಈ ಆಸ್ಪತ್ರೆಯಲ್ಲಿಯೇ ಮಕ್ಕಳ ವಿಭಾಗವನ್ನು ತೆರೆದರು. ಪುರಸಭೆಗಳಲ್ಲಿ ಮತ್ತು ಸ್ಥಳೀಯ ಸಂಸ್ಥೆಗಳಿಂದ ನಡೆಸಲ್ಪಡುವ ಶಾಲೆಗಳಲ್ಲಿ ಮತ್ತು ಕಾಲೇಜುಗಳಲ್ಲಿನ ವಿಧ್ಯಾರ್ಥಿಗಳ ವ್ಯವಸ್ಥಿತ ಆರೋಗ್ಯ ತಪಾಸಣೆಗೆ ಮುತ್ತು ಲಕ್ಷ್ಮಿಯವರು ಶಿಪಾರಸ್ಸು ಮಾಡಿದರು. ಟ್ರ್ರಿಪ್ಲಿಕೇಷನ್‍ನಲ್ಲಿರುವ ಕಸ್ತೂರ ಬಾ ಆಸ್ಪತ್ರೆಯು ಇವರ ಪ್ರಯತ್ನದ ಫಲವಾಗಿದೆ.
ಮುತ್ತುಲಕ್ಷ್ಮಿಯವರು ಅಖಿಲ ಭಾರತ ಮಹಿಳಾ ಸಮ್ಮೇಳನದ ಅಧ್ಯಕ್ಷರಾಗಿದ್ದರು. ದೇವದಾಸಿ ಮಹಿಳೆಯರು ಮತ್ತು ಮಕ್ಕಳು ವೇಶ್ಯಾಗೃಹಗಳನ್ನು ನಿಗ್ರಹಿಸುವುದು ಮತ್ತು ಅನೈತಿಕ ಕಳ್ಳಸಾಗಾಣಿಕೆಯನ್ನು ತಡೆಯುವುದಕ್ಕಾಗಿ ಒಂದು ಹೊಸ ಮಸೂದೆಯನ್ನು ಅವರು ಅಂಗೀಕರಿಸಿದರು. ವೇಶ್ಯಾಗೃಹಗಳಿಂದ ರಕ್ಷಿಸಲ್ಪಟ್ಟವರಿಗೆ ಆಶ್ರಯ ನೀಡುವ ಪ್ರಯತ್ನಗಳ ಮೂಲಕ ಹುಡುಗಿಯರು ಮತ್ತು ಮಹಿಳೆಯರಿಗಾಗಿ ಒಂದು ಆಲಯವನ್ನು ತೆರೆಯಲಾಯಿತು. ಮುಸ್ಲಿಂ ಬಾಲಕಿಯರಿಗಾಗಿ ಹಾಸ್ಟಲ್ ಮತ್ತು ಹರಿಜನ ಬಾಲಕಿಯರಿಗೆ ವಿಧ್ಯಾರ್ಥಿ ವೇತನವನ್ನು ನೀಡುವ ಮೂಲಕ, ಮದುವೆಗೆ ಕನಿಷ್ಠ ವಯಸ್ಸನ್ನು ಹುಡುಗರಿಗೆ ಕನಿಷ್ಠ 21 ಮತ್ತು ಬಾಲಕಿಯರಿಗೆ 16 ಕ್ಕೆ ಏರಿಸಬೇಕೆಂದು ಮುತ್ತು ಲಕ್ಷ್ಮಿಯವರು ಸರ್ಕಾರಕ್ಕೆ ಶಿಪಾರಸ್ಸು ಮಾಡಿದ್ದರು.
1927ರ ಮದ್ರಾಸ್ ಶಾಸಕಾಂಗಕ್ಕೆ ಶಾಸಕಾಂಗದ ಪರಿಷತ್ತಿನ ಸದಸ್ಯರಾಗಿ ನಾಮನಿರ್ದೇಶನಗೊಂಡ ಭಾರತದ ಶಾಸಕಾಂಗದ ಸದಸ್ಯ ಮಂಡಳಿಯಲ್ಲಿ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ಶಾಸಕಾಂಗ ಪರಿಷತ್ತಿನ ಉಪಾಧ್ಯಕ್ಷರಾಗಿ ಆಯ್ಕೆಯಾದಾಗ ಇವರು ಶಾಸಕಾಂಗವೊಂದರ ಉಪಾಧ್ಯಕ್ಷರಾದ ವಿಶ್ವದ ಮೊದಲ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾದರು. ದೇವದಾಸಿ ಪದ್ಧತಿಯ ರದ್ಧತಿ ಕುರಿತು, ಮಹಿಳೆಯರ ಮತ್ತು ಮಕ್ಕಳ ಸಾಗಾಣಿಕೆಯ ಕುರಿತು, ಮಹಿಳೆಯರಿಗೆ ವಿವಾಹದ ಕನಿಷ್ಠ ವಯಸ್ಸು ಮುಂತಾದವುಗಳ ಕುರಿತು ಮಹತ್ವದ ಕೆಲಸವನ್ನು ಮಾಡಿರುವರು.
ಮಹಾತ್ಮಗಾಂಧಿ ಜೈಲಿನಲ್ಲಿದ್ದ ಸಮಯದಲ್ಲಿ 1930ರಲ್ಲಿ ಮದ್ರಾಸ್ ವಿಧಾನ ಸಭೆಗೆ ರಾಜಿನಾಮೆ ನೀಡಿದರು. ಆ ಸಮಯದಲ್ಲಿ ತಮಿಳುನಾಡಿನಲ್ಲಿ ವ್ಯಾಪಕವಾಗಿದ್ದ ದೇವದಾಸಿ ಪದ್ಧತಿಯನ್ನು ತೆಗೆದು ಹಾಕಬೇಕೆಂದು ಅವರು ವಾದಿಸಿದರು. ಮುತ್ತು ಲಕ್ಷ್ಮಿಯವರು ಭಾರತೀಯ ಸಂಘ (ಡಬ್ಲ್ಯೂ.ಐ.ಎ) ಸ್ಥಾಪಕ ಅಧ್ಯಕ್ಷರಾಗಿದ್ದರು ಮತ್ತು ಮದ್ರಾಸ್ ಕಾರ್ಪೊರೇಷನ್ ಮೊದಲ ಆಲ್ಡರ್ ವುಮೆನ್ ಆಗಿದ್ದರು.
ಮುತ್ತು ಲಕ್ಷ್ಮಿಯವರು ಮಹಿಳಾ ಶೌಚಾಲಯಗಳನ್ನು ಸ್ಥಾಪಿಸುವಲ್ಲಿ ಸಕ್ರಿಯರಾಗಿದ್ದರು. ಕೊಳಗೇರಿ ನಿವಾಸಿಗಳಿಗೆ ನೀಡಲಾಗುವ ವೈದ್ಯಕೀಯ ಸೌಲಭ್ಯಗಳನ್ನು ಮತ್ತಷ್ಟು ಸುಧಾರಿಸುವ ಕ್ರಮಗಳನ್ನು ಜಾರಿಗೆ ತರಲು ಪ್ರಾರಂಭಿಸಿದರು. 1930ರಲ್ಲಿ ಇವರು ಆವೈವ ಇಲಾಮ್ ಸಂಘವನ್ನು ಸ್ಥಾಪಿಸಿದ್ದರು.
1968 ರಲ್ಲಿ ನಿಧನರಾದ ಡಾ.ಮುತ್ತುಲಕ್ಷ್ಮಿಯವರಿಗೆ ಭಾರತ ಸರ್ಕಾರವು 1959ರಲ್ಲಿ ಇವರ ಸೇವೆಗಳನ್ನು ಗಮನಿಸಿ ಪದ್ಮ ಭೂಷಣ ಪ್ರಶಸ್ತಿ ನೀಡಿತ್ತು. ಇವರು ಕ್ಯಾನ್ಸರ್ ತಡೆಗಟ್ಟುವ ನಿಟ್ಟಿನಲ್ಲಿ ಕೆಲಸ ಮಾಡುವ ಮಹಿಳೆಯರಿಗೆ ಇವರ ಹೆಸರಿನಲ್ಲಿ ಪಡೆಯುವ ಪ್ರಶಸ್ತಿಗೆ ಮುತ್ತು ಲಕ್ಷ್ಮಿಯವರು ಸ್ಫೂರ್ತಿಯಾಗಿದ್ದಾರೆ. 30ಜುಲೈ 2019ರಂದು ಗೂಗಲ್ ಡೂಡೆಲ್ (ಸಾಕ್ಷ್ಯಚಿತ್ರವನ್ನು) ಅನ್ನು ತೋರಿಸಿತು.
ಡಾ.ಸುರೇಖಾ ರಾಠೋಡ್
ಸುರೇಖಾ ರಾಠೋಡ್ ಎಂ.ಎ , ಎಂ.ಫಿಲ್,ಪಿಎಚ್ ಡಿ, ಪಿಡಿಎಫ್. ಪದವಿ ಪಡೆದು ವಿಜಾಪುರ ಮಹಿಳಾ ವಿವಿಯಲ್ಲಿ ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. “ಸಿದ್ದಿ ಸಮುದಾಯದ ಲಿಂಗ ಸಂಬಂಧಿ ಅದ್ಯಯನ ” ಎಂಬ ವಿಷಯದಲ್ಲಿ ಕನ್ನಡ ವಿಶ್ವವಿದ್ಯಾಲಯ ಹಂಪಿಯಿಂದ ಎಂಫಿಲ್ ಪದವಿ ಪಡೆದಿದ್ದಾರೆ. “ವಿಜಯಪುರ ನಗರದ ಕೊಳಚೆ ನಿವಾಸಿ ಮಹಿಳೆಯರ ಬದುಕು ಬವಣೆ ಭರವಸೆ” ಎಂಬ ವಿಷಯದಲ್ಲಿ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯ ವಿಜಯಪುರಯಿಂದ ಪಿಎಚ್ ಡಿ ಪದವಿ ಪಡೆದಿದ್ದಾರೆ. ಇದು ಅವರ ಮಹಿಳೆಯರ ಮೇಲೆ ಬೀರಿದ ಬೆಳಕಿಗೆ ಸಾಕ್ಷಿಯಾಗಿದೆ. “ಹರಣಶಿಕಾರಿ ಮಹಿಳೆಯರ ಸ್ಥಾನಮಾನ” ಎಂಬ ವಿಷಯದ ಕುರಿತು ಪಿಡಿಎಫ್ (ಸಂಶೋಧನೆ ) ಮುಂದುವರಿದಿದೆ. ಹೊರ ತಂದ ಪುಸ್ತಕಗಳು: ವಿಜಯಪುರ ನಗರದ ಕೊಳಚೆ ನಿವಾಸಿ ಮಹಿಳೆಯರ ಬದುಕು ಬವಣೆ ಭರವಸೆ, ದಲಿತ ಸಾಹಿತ್ಯ ಪರಿಷತ್ತಿ ಗದಗ ಪ್ರಕಟಿಸಿದೆ.೨. ದಲಿತ ಮಹಿಳಾ ಕಾರ್ಮಿಕರ ಸಮಸ್ಯೆಗಳು, ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು ಪ್ರಕಟಿಸಿದೆ ೩. ಮಹಿಳಾ ಅದ್ಯಯನ, ಯುಜಿಸಿ ನೆಟ್ -ಜೆಆರ್ ಎಫ್,ಕೆಸೆಟ್ ಪಠ್ಯ ಮತ್ತು ಪ್ರಶ್ನೆ ಪತ್ರಿಕೆಗಳು’ ಡಿವಿಕೆ ಪ್ರಕಾಶನ ಮೈಸೂರು ಪ್ರಕಟಿಸಿವೆ