ಅಂಕಣ ಸಂಗಾತಿ

ಶಿಕ್ಷಣ ಲೋಕ

ಡಾ.ದಾನಮ್ಮ ಝಳಕಿಯವರು

ಪ್ರತಿ ಮಂಗಳವಾರ ಬರೆಯಲಿದ್ದಾರೆ

ಕಲಿಕಾ ಪ್ರಕ್ರಿಯೆಯಲ್ಲಿ
ಸೃಜನಶೀಲತೆಯ ಆತ್ಮಾವಲೋಕನ

ಅಕ್ಷತಾ ಮುದ್ದಾದ ತುಂಟ ಹುಡುಗಿ. ತೋಟದ ಮನೆಯಲ್ಲಿ ವಿಧವಿಧ ಹೂಗಳನ್ನು, ಪಕ್ಷಿಗಳನ್ನು, ಪ್ರಾಣಿಗಳನ್ನು ಬೆಟ್ಟ ಗುಡ್ಡಗಳನ್ನು ಹಾಗೂ ಸುಂದರ ನಿಸರ್ಗವನ್ನು ಸವಿಯುತ್ತಾ, ಆಸ್ವಾದಿಸುತ್ತಾ ಸುಂದರ ನಿಸರ್ಗದ ಹೂವಿನಂತೆ ಬೆಳೆದ ಮಗು. ಅವಳಿಗೆ ನಿಸರ್ಗ ಎಂದರೆ ಅಚ್ಚುಮೆಚ್ಚು, ಸದಾ ಪ್ರಾಣಿ ಪಕ್ಷಿಗಳೊಂದಿಗೆ ಆಡುತ್ತಾ ಹೂಗಳ ಕಲರವ ನೋಡುತ್ತಾ ನಲಿದಾಡುತ್ತಿದ್ದಳು. ಒಂದು ದಿನ ಅವಳ ತಂದೆ ತಾಯಿ ಅವಳ ಬಗ್ಗೆ ಆಲೋಚಿಸಿ ಮಗಳಿಗೆ 6 ವರ್ಷವಾದವು ಶಾಲೆಗೆ ಸೇರಿಸಬೇಕು ಎಂದು ಚರ್ಚಿಸಿ ಮನೆಯ ಪಕ್ಕದಲ್ಲಿಯೇ ಇರುವ ಶಾಲೆಗೆ ದಾಖಲಾತಿ ಮಾಡಿಸಿದರು. ಶಾಲೆಯ ಮೊದಲನೇಯ ದಿನ ಅಕ್ಷತಾ ಅತ್ಯಂತ ಉತ್ಸುಕಳಾಗಿ ಶಾಲೆಗೆ ಹೋದಳು. ಹೊಸ ಸ್ನೇಹಿತರ ಪರಿಚಯವಾಯಿತು. ಮೊದಲನೇಯ ತರಗತಿಯಲ್ಲಿ ಶಿಕ್ಷಕರು ಬಂದು ಎಲ್ಲ ಮಕ್ಕಳಿಗೆ ಒಂದು ಬಿಳಿ ಹಾಳೆಯನ್ನು ಹಾಗೂ ಬಣ್ಣದ ಪೆನ್ಸಿಲನ್ನು ಪ್ರತಿ ಮಕ್ಕಳಿಗೆ ನೀಡುತ್ತಾ, “ಮಕ್ಕಳೇ ಇಂದು ನಾವೆಲ್ಲ ಒಂದು ಸುಂದರ ಹೂವನ್ನು ಬಿಡಿಸೋಣವೇ” ಎಂದರು. ಅಷ್ಟರಲ್ಲಿ ಅಕ್ಷತಾ ಅತ್ಯಂತ ಸಂತೋಷದಿಂದ ತಾನು ನಿಸರ್ಗದಲ್ಲಿ ನೋಡಿದ ವಿಧ ವಿಧ ಹೊಗಳನ್ನು ಚಿತ್ರಿಸುತ್ತಾ ಬಣ್ಣ ತುಂಬಲು ಪ್ರಾರಂಭಿಸಿಯೇ ಬಿಟ್ಟಳು. ಕ್ಷಣಾರ್ಧದಲ್ಲಿ ಅವಳ ಬಿಳಿ ಹಾಳೆ ವಿಧವಿಧ ಬಣ್ಣದ ಹೂಗಳಿಂದ ಕಂಗೋಳಿಸಲು ಪ್ರಾರಂಭಿಸಿತು. ಅಷ್ಟರಲ್ಲಿ ಅತ್ತಕಡೆಯಿಂದ ಶಿಕ್ಷಕರ ಸೂಚನೆ ಕೇಳಿತು. ಮಕ್ಕಳೇ ನಾನು ಬಿಡಿಸಿದ ಹೂವನ್ನೇ ಬಿಡಿಸಬೇಕು ಹಾಗೂ ನಾನು ತುಂಬಿದ ಬಣ್ಣವನ್ನೇ ತುಂಬಬೇಕು ಎಂದರು. ಆಗ ಅಕ್ಷತಾ ತಾನು ಬಿಡಿಸಿದ ಹಾಳೆಯನ್ನು ಬಚ್ಚಿಟ್ಟು ಮತ್ತೊಂದು ಹಾಳೆಯಲ್ಲಿ ಶಿಕ್ಷಕರ ಸೂಚನೆಯಂತೆ, ಬೋರ್ಡಮೇಲೆ ಬಿಡಿಸಿದ ಹೂವನ್ನು ಚಿತ್ರಿಸಿ, ಅವರು ಹೇಳಿದ ಬಣ್ಣ ತುಂಬಿ ಶಿಕ್ಷಕರ ಕೈಗಿತ್ತು ಮೌನಿಯಾಗಿ ಮನೆಯ ಕಡೆಗೆ ನಡೆದಳು. ತದನಂತರದಲ್ಲಿ ಶಿಕ್ಷಕರು ಹೇಳಿದಂತೆಯೇ ಮಾಡುವ ಕಲೆಯನ್ನು ಕರಗತ ಮಾಡಿಕೊಳ್ಳುತ್ತಾ, ತನ್ನತನವನ್ನು, ಸೃಜನಾತ್ಮಕತೆಯನ್ನು ಪ್ರತಿದಿನ ಚಿವುಟುತ್ತಾ ಸಾಗಿದಳು. ಅವಳಿಗೆ ಗೊತ್ತಿಲ್ಲದಂತೆಯೇ ಅವಳ ಸೃಜನಾತ್ಮಕತೆ ಎಂಬುದು ಮರೆಯಾಗುತ್ತಾ ಹೋಯಿತು. ಕಲಿಕೆ ಕಂಠಪಾಠದಂತೆ ಸಾಗಿತು.
ತದನಂತರ 7 ವರ್ಷ ಪ್ರಾಥಮಿಕ ಶಾಲೆಯನ್ನು ಪೂರೈಸಿದ ಅಕ್ಷತಾ ಪ್ರೌಢಶಾಲೆಯ ಮೆಟ್ಟಿಲನ್ನು ಏರಿದಳು. ಅದು ಅವಳ ಪ್ರೌಢಶಾಲೆಯ ಪ್ರಥಮ ದಿನ. ಅಂದು ತರಗತಿಗೆ ಶಾಲೆಯ ಮುಖ್ಯೋಪಾಧ್ಯಾರು ಆಗಮಿಸಿ, ಮಕ್ಕಳ ಪರಿಚಯ ಮಾಡಿಕೊಂಡರು ಹಾಗೂ ಶಾಲೆಯ ಪಠ್ಯ ಹಾಗೂ ಸಹಪಠ್ಯ ಚಟುವಟಿಕೆಯ ಪರಿಚಯವನ್ನು ಮಾಡಿಕೊಟ್ಟರು. ತದನಂತರದಲ್ಲಿ ಮಕ್ಕಳಿಗೆ ನಿಮ್ಮಿಷ್ಟದ ವಿಷಯದ ಮೇಲೆ ಒಂದು ಪ್ರಬಂಧ ಬರೆಯಲು ಹಾಗೂ ಭಾಷಣ ತಯಾರಿಸಿಕೊಂಡು ಬರಲು ತಿಳಿಸಿದರು. ಆಗ ಅಕ್ಷತಾ ಎದ್ದು ನಿಂತು, ಸರ್‌ ನೀವೇ ವಿಷಯ ನೀಡಿ ನಾವು ತಯಾರಾಗಿ ಬರುತ್ತೇವೆ ಎಂದಳು. ಆಗ ಮುಖ್ಯೋಪಾಧ್ಯಾಯರು ಆಲೋಚಿಸಿ, ಏಕೆ? ಎಂದು ಕೇಳಿದರು. ಆಗ ಅಕ್ಷತಾ ಹೇಳಿದ್ದು ನಮ್ಮೆಲ್ಲರನ್ನೂ ಆಲೋಚಿಸುವಂತೆ ಮಾಡುತ್ತದೆ. ಈಗ ನಮಗೆax ನೀವು ಹೇಳಿದಂತೆಯೇ ಮಾಡುವುದು ರೂಢಿಯಾಗಿದೆ. ಈಗ ನಮಗೆ ವಿಷಯಗಳನ್ನು ಅಲೋಚಿಸುವುದು, ಹೊಸತನವನ್ನು ಹುಡುಕುವುದು, ವಿಭಿನ್ನವಾಗಿ ಕಾರ್ಯ ಮಾಡುವ ಕೌಶಲ ಎಲ್ಲವೂ ಕಳೆದು ಹೋಗಿಬಿಟ್ಟಿದೆ. ತಪ್ಪು ತಿಳಿಯಬೇಡಿ ಸರ್‌ ಏಕೆಂದರೆ ಪ್ರಾರಂಭದಿಂದ ನಾವು ಹೇಳಿದಂತೆ ಮಾಡು ಎಂಬ ವಾಕ್ಯಗಳು ನಮ್ಮ ಆಲೋಚನೆಯನ್ನು ಸೃಜನಾತ್ಮಕತೆಯನ್ನು ಹಂತಹಂತವಾಗಿ ಕೊನೆಗಾಣಿಸಿದೆ ಎಂದಾಗ ಮುಖ್ಯೋಪಾದ್ಯಾಯರಿಗೆ ದಿಗಿಲು ಬಡಿಯಿತು. ನಾವು ಏನನ್ನು ಮಾಡುತ್ತಿದ್ದೇವೆ. ಮಕ್ಕಳ ಸೃಜನಾತ್ಮಕತೆ ಹುಟ್ಟಿನಿಂದ ಅತ್ಯಂತ ಉತೃಷ್ಟವಾಗಿರುವುದನ್ನು ನಮ್ಮ ಶಾಲಾ ಹಂತದಲ್ಲಿ ಚಿವುಟುತ್ತಿದ್ದೇವೆಯೇ? ಎಂದು ಆಲೋಚಿಸುತ್ತಾ ನಿಂತರು


ಈ ಮೇಲಿನ ಘಟನೆ ನಮ್ಮನ್ನು ಆತ್ಮಾವಲೋಕನಕ್ಕೆ ಹಚ್ಚುತ್ತದೆ. ಹೌದು ಸೃಜನಶೀಲತೆಯ ಗುಣ ಮಕ್ಕಳಲ್ಲಿ ಹೆಚ್ಚಾಗಿರುತ್ತದೆ ವಯಸ್ಸಾದಂತೆ ಕಡಿಮೆಯಾಗುತ್ತದೆ. ಮಕ್ಕಳ ಮನಸ್ಸು ಮುಕ್ತವಾಗಿರುತ್ತದೆ. ದೊಡ್ಡವರಾದಂತೆ ನಿಯಮ ನಿಬಂಧನೆಗಳನ್ನು ಬೋಧಿಸಿದಾಗ ಆಲೋಚನೆಗಳು ಸಂಕುಚಿತವಾಗುತ್ತವೆ. ಪರಿಮಿತಗೊಳ್ಳುತ್ತವೆ.
ನಮ್ಮ ಜೀವನದ ಅನೇಕ ಕ್ಷೇತ್ರಗಳಲ್ಲಿ ಸೃಷ್ಠಿಸುವ ಗುಣ ಇರುವುದರಿಂದಲೇ ನಮ್ಮಲ್ಲಿ ಜೀವಂತಿಕೆ, ಲವಲವಿಕೆ ಉಳಿದಿರುವುದು. ಸೃಜನಶೀಲತೆ ನಿಗೂಢವಾದುದೇನಲ್ಲ. ನೊಬೆಲ್‌ ಪ್ರಶಸ್ತಿ ವಿಜೇತ ವೈದ್ಯರಾದ ಅಲ್ಬರ್ಟ ಸಜೆಂಟ್‌ ಗಿರ್ಯೋಯಿ ಅವರು ಸೃಜನಶೀಲತೆಯ ಲಕ್ಷಣದ ಬಗ್ಗೆ ಹೀಗೆ ಹೇಳುತ್ತಾರೆ. “ ಕಂಡುಹಿಡಿದ ವಸ್ತು ವಿಷಯದಲ್ಲಿ ಎಲ್ಲರೂ ನೋಡಿರುವಂತ ಒಂದು ಆಲೋಚನೆ ಇರುತ್ತದೆ. ಆದರೆ ಯಾರೂ ನೋಡಿರದ ಚಿಂತನೆಯೊಂದು ಇರುತ್ತದೆ” ಎಂದು ತಿಳಿಸಿದ್ದಾರೆ.
ಸೃಜನಶೀಲ ಚಿಂತನೆಯು ಪ್ರಚೋದನೆಗೆ ಒಂದು ರೀತಿಯ ಪ್ರತಿಕ್ರಿಯೆ ನೀಡುವುದರ ಮೇಲೆ ಕೇಂದ್ರೀಕರಿಸಿರುವುದಿಲ್ಲ. ಬದಲಾಗಿ ಬೇರೆ ಬೇರೆ ಆಯಾಮಗಳಲ್ಲಿ ಯೋಚಿಸಿ ಪ್ರತಿಕ್ರಿಯಿಸುವುದಾಗಿದೆ. ಇದರಿಂದ ವ್ಯಕ್ತಿಯಲ್ಲಿ ಅನ್ವೇಷಣಾಶೀಲ ವ್ಯಕ್ತಿತ್ವದ ಅಭಿವೃದ್ಧಿಯಾಗುತ್ತದೆ. ಸೂಕ್ಷ್ಮ ಮನಸ್ಸಿನ, ಪ್ರತಿಕ್ರಿಯೆ ಕೋರುವ, ಕಾರ್ಯಶೀಲ ಹಾಗೂ ಅನುಭವಗ್ರಾಹಿಯಾದ ಗುಣ ಮತ್ತು ದೃಢವಾದ ನಿಲುವು ತಳೆಯುವ ವ್ಯಕ್ತಿತ್ವ ರೂಪಗೊಳ್ಳುತ್ತದೆ. ಉದಾಹರಣೆಗೆ ಸೃಜನಶೀಲ ಆಲೋಚನೆಗಳಲ್ಲಿ ತೊಡಗಿ ತಮ್ಮದೇ ಆದ ವಿಶೇಷ ಕೊಡುಗೆ ನೀಡಿರುವ ಕೆಲವು ಪ್ರಮುಖರೆಂದರೆ, ಕಲಾವಿದ ಲಿಯೋನೋರ್ಡೋ ಡಾವಿಂಚಿ, ವಿಜ್ಞಾನಿ ಥಾಮಸ್‌ ಅಲ್ವಾ ಎಡಿಸನ್‌, ಅಲ್ಬರ್ಟ ಐನ್‌ಸ್ಟೈನ್, ಪಾಬ್ಲೋ ಪಿಕಾಸೋ, ರವೀಂದ್ರನಾಥ ಠಾಗೂರು, ಕನ್ನಡ ಕಾವ್ಯಲೋಕದ ಕುವೆಂಪು, ದ ರಾ ಬೇಂದ್ರ, ಗೋಪಾಲಕೃಷ್ಣ ಅಡಿಗರು, ಸಮಾಜ ಸುಧಾಕರಲ್ಲಿ ಗಾಂಧೀಜೀ, ಅಂಬೇಡ್ಕರ್‌, ಡಾ ರಾಧಾಕೃಷ್ಣನ್‌ ಹೀಗೆ ಇನ್ನೂ ಅನೇಕರ ಹೆಸರುಗಳ ಪಟ್ಟಿ ಬೆಳೆಯುತ್ತದೆ.
ಪ್ರತಿಯೊಬ್ಬ ವ್ಯಕ್ತಿಯಲ್ಲಿಯೂ ಸೃಜನಶೀಲತೆಯನ್ನು ಕಾಣಬಹುದು ಉದಾಹರಣೆಗೆ ರಂಗೋಲಿ ಹಾಕುವವರು ತಾವು ಕಲಿತದ್ದನ್ನು ಮಾತ್ರ ಹಾಕುವದಿಲ್ಲ ಅದನ್ನು ವಿಸ್ತರಿಸಿ ಸುಂದರವಾಗಿ ಕಾಣುವಂತೆ ಬಣ್ಣಗಳನ್ನು ತುಂಬುತ್ತಾರೆ. ಇದು ಸೃಜನಾತ್ಮಕತೆ ಅಲ್ಲವೇ? ಬುಟ್ಟಿ ವಿನ್ಯಾ, ತರಕಾರಿಗಳಲ್ಲಿ ವಿನ್ಯಾಸ, ಕ್ಯಾಲಂಡರ್‌ನಲ್ಲಿ ವಿನ್ಯಾಸ, ಕಸೂತಿ, ಕೊಬ್ಬರಿ ಬಟ್ಟಲಗಳ ಮೇಲೆ ವಿನ್ಯಾಸ, ಚಿತ್ರಕಾರರು, ಹಾಡುಗಾರರು, ಹೊಸ ಹೊಸ ರುಚಿ ಅಡುಗೆ ಮಾಡುವವರು, ಪೇಪರ ಕ್ರಾಫ್ಟ ಕಲಿತು ತಮ್ಮದೇ ಆದ ವಿನ್ಯಾಸ ತಯಾರಿಸುವುದು ಇವೆಲ್ಲ ಸೃಜನಶೀಲತೆಯ ಉದಾಹರಣೆಗಳು.
ಸೃಜನಶೀಲತೆ ಒಂದು ರೀತಿಯ ಮಾನಸಿಕ ಚಟುವಟಿಕೆ. ಕೆಲವು ವ್ಯಕ್ತಿಗಳ ಮನಸ್ಸಿನ ಅಂತರ್ಯದಲ್ಲಿ ಸೃಜನಶೀಲತೆ ಪ್ರಕ್ರಿಯೆ ನಡೆಯುತ್ತದೆ. ವ್ಯಕ್ತಿಯ ಆಲೋಚನೆಗಳ ಪ್ರತಿಸ್ಪಂದನದಲ್ಲಿ ರೂಪುಗೊಳ್ಳುತ್ತದೆ. ಇದರಲ್ಲಿ ಸಾಮಾಜಿಕ- ಸಾಂಸ್ಕೃತಿಕ ಸಂಬಂಧ ಸಹ ಇರುತ್ತದೆ. ಎಲ್ಲಾ ಮುನ್ನಡೆಗಳು, ಸಂಶೋಧನೆಗಳು, ಅನ್ವೇಷಣೆಗಳು, ಸಾಹಸಗಳು, ಸಾಧನೆಗಳು, ನಾವೀನ್ಯಪೂರ್ಣ ಚಿಂತನೆಗಳು ಸೃಜನಶೀಲತೆಯೆಂಬ ಪ್ರಕ್ರಿಯೆಯ ಫಲ. ಎಲ್ಲಾ ಸಾಮಾಜಿಕ ಬೆಳವಣೆಗೆಗೆ, ವಿಜ್ಞಾನ ಹಾಗೂ ತಂತ್ರಜ್ಞಾನದಲ್ಲಿ ಆಗಿರುವ ಎಲ್ಲಾ ಸಂಶೋಧನೆಗಳಿಗೆ ಸೃಜನಶೀಲತೆಯೇ ಆಧಾರ.


ವೈಜ್ಞಾನಿಕ ಸಮೀಕ್ಷೆಯ ಪ್ರಕಾರ ಈಗ ಮಾನವನಲ್ಲಿರುವ 1/10 ಭಾಗದಷ್ಟು ಸೃಜನಶೀಲ ಚೈತನ್ಯ ಮಾತ್ರ ಈಗಿನ ಶಿಕ್ಷಣದಿಂದ ಹೊರಹೊಮ್ಮುತ್ತಿದೆ. 9/10 ಭಾಗ ಚೈತನ್ಯ ಉತೃಷ್ಟ ಶಿಕ್ಷಣದ ಮೂಲಕ ಹೊರಹೊಮ್ಮಬೇಕಾಗುತ್ತದೆ. ಅನೇಕ ಅಧ್ಯಯನಗಳಿಂದ ತಿಳಿದು ಬಂದಿರುವ ಅಂಶವೆಂದರೆ ಸೃಜನಶೀಲ ಸಾಮರ್ಥ್ಯ ಮಕ್ಕಳಲ್ಲಿ ಹೆಚ್ಚಿನ ಮಟ್ಟದಲ್ಲಿರುತ್ತದೆ. ಹೆಚ್ಚಿ ವಯಸ್ಸಾದಂತೆ ಕ್ಷೀಣಿಸುತ್ತ ಹೋಗುತ್ತದೆ. ಆದ್ದರಿಂದ ಪ್ರಾಥಮಿಕ ಹಂತದಲ್ಲಿಯೇ ಸೃಜನಶೀಲತೆಯನ್ನು ಗುರುತಿಸಿ ಸೂಕ್ತ ವಿಧಾನ ಹಾಗೂ ಕ್ರಮಗಳಿಂದ ಅಭಿವೃದ್ಧಿಪಡಿಸುವಂತಹ ಕಲಿಕೆ ಮತ್ತು ಭೋಧನೆ ಪ್ರಕ್ರಿಯೆ ರೂಪಿಸಬೇಕು. ಅಥವಾ ಅನುಕೂಲಿಸುವ ಕ್ರಮ ಕೈಗೊಳ್ಳಬೇಕು. ತರಗತಿಯಲ್ಲಿ ಪ್ರೋತ್ಸಾಹದಾಯಕ ವಾತಾವರಣವನ್ನು ನಿರ್ಮಿಸುವ ಅಗತ್ಯವಿದೆ. ಸೃಜನಶೀಲವಾಗಿ ಕಲಿಕಾ ಅನುಭವಗಳನ್ನು ಸಂಘಟಿಸುವಲ್ಲಿ ಶಿಕ್ಷಕರ ಪಾತ್ರ ಮಹತ್ವದ್ದು.
ಒಟ್ಟಾರೆಯಾಗಿ ಮಕ್ಕಳ ಸೃಜನಶೀಲತೆಯ ಬಗ್ಗೆ ಶಿಕ್ಷಕರು ಆತ್ಮಾವಲೋಕನ ಮಾಡಿಕೊಳ್ಳುವ ಅಗತ್ಯವಿದೆ. ಹಾಗೂ ಸೃಜನಶೀಲತೆ ಬೆಳೆಸುವ ನಿಟ್ಟಿನಲ್ಲಿ ಆಲೋಚಿಸಿ, ಅನುಕೂಲಿಸುವ ಅಗತ್ಯವಿದೆ. ಇದರಿಂದ ಮುಂದಿನ ಜನಾಂಗದಲ್ಲಿ ಸೃಜನಶೀಲತೆ ಬೆಳೆಸಿ ಬಲಿಷ್ಠ ರಾಷ್ಟ್ರ ಕಟ್ಟುವಲ್ಲಿ ಶಿಕ್ಷಕರ ಪಾತ್ರ ಅಮೋಘವಾಗಿದೆ ಎಂದರೆ ತಪ್ಪಾಗಲಾರದು.


ಡಾ.ದಾನಮ್ಮ ಝಳಕಿ

ಡಾ.ದಾನಮ್ಮ ಝಳಕಿ ಯವರು ಪ್ರಸ್ತುತ ಶ್ರೀಮತಿ ಸೋಮವ್ವ ಚ ಅಂಗಡಿಯ ಕರ್ನಾಟಕ ಪಬ್ಲಿಕ್ ಶಾಲೆಯ ಉಪಪ್ರಾಂಶುಪಾಲರಾಗಿದ್ದು ಶಿಕ್ಷಣದಲ್ಲಿ ಇವರು ನಡೆಸಿದ ಹಲವು ಸಂಶೋದನಾ ಲೇಖನಗಳು ರಾಷ್ಟ್ರೀಯ ಅಂತರರಾಷ್ಟ್ರೀಯ ಸಂಸ್ತೆಗಳಿಂದ ಪ್ರಕಟಗೊಂಡಿವೆ.ರಾಜ್ಯಮಟ್ಟದಲ್ಲಿ ಉತ್ತಮ ಶಿಕ್ಷಕಿ ಪ್ರಶಸ್ತಿಗೂ ಬಾಜನರಾಗಿದ್ದಾರೆ.ಶಿಕ್ಷಣ ಮಾತ್ರವಲ್ಲದೆ ಸೃಜನಶೀಲ ಸಾಹಿತ್ಯ ರಚನೆಯಲ್ಲು ಇವರು ತಮ್ಮ ಛಾಪು ಮೂಡಿಸಿರುವ ಇವರ ಹಲವಾರು ಬರಹಗಳು ನಾಡಿನ ಬಹುತೇಕ ಪತ್ರಿಕೆಗಳಲ್ಲಿ ಪ್ರಕಟವಾಗಿವೆ

One thought on “

Leave a Reply

Back To Top