ಕಂಬನಿ ಇಲ್ಲದ ಕಹಾನಿ

ಕಥಾ ಸಂಗಾತಿ

ಕಂಬನಿ ಇಲ್ಲದ ಕಹಾನಿ

ಆದಪ್ಪ ಹೆಂಬಾ ಮಸ್ಕಿ

ಹೊಸತೇನಲ್ಲದ ಸೀರೆ. ಬಣ್ಣ ಮಾಸಿದ ಕುಪ್ಪಸ. ಕೊರಳಲ್ಲಿ ಎರಡೆಳೆ ಕರಿಮಣಿ ಸರ, ತುದಿಯಲ್ಲಿ ಅರ್ಧ ಗ್ರಾಂ ನಷ್ಟು ಬಂಗಾರದ ಬಿಲ್ಲೆ. ಅದನ್ನು ತಾಳಿ ಅನ್ನಲೇಬೇಕು. ನತ್ತಿಲ್ಲದ ಮೂಗು, ಓಲೆಗಳಿಲ್ಲದ ಕಿವಿ. ಆಭರಣಗಳಿರಬೇಕಾದ ಅಂಗಗಳೆಲ್ಲವು ಖಾಲಿ ಖಾಲಿ. ಅವಳ ಸೌಂದರ್ಯವೋ ಅಪ್ರತಿಮ. ಆದರೂ ಆ ಕೃಷ್ಣ ಸುಂದರಿಯನ್ನು ನಿರಾಭರಣೆ ಎನ್ನಲಾಗುತ್ತಿಲ್ಲ. ಕಾರಣ ಅವಳ ನಿಷ್ಜಲ್ಮಶ ನಗು. ಹೌದು ಅದು ಅವಳ ಸೌಂದರ್ಯದ ಘನತೆಯನ್ನು ನೂರ್ಮಡಿಸಿತ್ತು. ಹೀಗಾಗಿ ಅವಳು ನಿರಾಭರಣೆಯಲ್ಲ ಘನಾಭರಣೆ. ಮೂವತ್ತಕ್ಕೆ ಮೂರು ಮಕ್ಕಳನ್ನು ಕರುಣಿಸಿರುವ ವಿಧಿ ಅವಳ ಬದುಕ ಬಂಡಿಯ ಸಾಹೇಬ. ಬಡತನಕ್ಕೆ ಮಕ್ಕಳು ಜಾಸ್ತಿ ಅನ್ನುವ ಮಾತಿಗೆ ಸಾಕ್ಷಿ ಅನ್ನುವಂತೆ ತನ್ನ ಆರುವರ್ಷದ, ನಾಲ್ಕು ವರ್ಷದ ಮತ್ತು ಎರಡು ವರ್ಷದ ಕಂದಮ್ಮಗಳನ್ನು ತೊಡೆಯ ಮೇಲೆ ಹಾಕಿಕೊಂಡು ಕೆಎಸ್ಆರ್ಟಿಸಿ ಬಸ್ಸಿನ ಸೀಟೊಂದರಲ್ಲಿ ಕುಳಿತಿದ್ದಳು ಆ ಕೃಷ್ಣಸುಂದರಿ. ತುಂಬ ಗದ್ದಲವಿದ್ದ, ಕಲಬುರ್ಗಿಯಿಂದ ಮೈಸೂರಿಗೆ ಹೊರಟ ಆ ಬಸ್ಸಿನಲ್ಲಿ ಕೂಡಲು ಒಂದು ಸೀಟೂ ಖಾಲಿ ಇರಲಿಲ್ಲ ಶರಣು ವಿಗೆ. ಅನಿವಾರ್ಯವಾಗಿ ಶರಣು ಆ ಕೃಷ್ಣಸುಂದರಿಯನ್ನು ಸೀಟಿಗಾಗಿ ಕೇಳಿದ. ಕರುಣಾಮಯಿ ಕೃಷ್ಣೆ “ಬರ್ರಿ ಅಣ್ಣ” ಅಂತ ತನ್ನ ಸಂಸಾರಿಕ ಸೀಟಿನಲ್ಲಿ ಒಂದಷ್ಡು ಜಾಗವನ್ನು ಶರಣುವಿಗೆ ಕೊಟ್ಡಳು. ಆ ಕೃಷ್ಣಸುಂದರಿಯ ಸಂಸಾರದ ಜೊತೆಗೆ ಸಾಗಿತ್ತು ಶರಣುವಿನ ಪಯಣ.
ಶರಣು ಸಧ್ಯಕ್ಕೆ ಒಬ್ಬ ಸಕ್ಸಸ್ಫುಲ್ ಬಿಜಿನೆಸ್ ಮನ್.‌ ಆತನ ಮೂಲ ಊರು ಮಾಸಂಗಿಪುರವಾದರೂ ವಾರದಲ್ಲಿ ಕನಿಷ್ಟ ನಾಲ್ಕು ದಿನವಾದರೂ ಹೊರಗೇ ಇರುವಷ್ಟು ಬಿಜಿ ಬಿಜಿನೆಸ್ ಮನ್. ‌ಒಮ್ಮೆ ಹೈದರಾಬಾದ್, ಒಮ್ಮೆ ಮುಂಬೈ, ಒಮ್ಮೆ ಬೆಂಗಳೂರು, ಒಮ್ಮೆ ಹುಬ್ಬಳ್ಳಿ . ಹೀಗೆ ಆತನ ಕಾರ್ಯಕ್ಷೇತ್ರ ದೊಡ್ಡದೇ. ಕಲಬುರ್ಗಿ ಆತನ ಕಾರ್ಯ ವ್ಯಾಪ್ತಿಗೆ ಬರದ ಊರು. ಆದರೂ ತನ್ನ ಆತ್ಮೀಯ ಗೆಳೆಯನೊಬ್ಬನಿಗೆ ಸಹಾಯ ಮಾಡುವುದಕ್ಕೋಸ್ಕರ ಕಲಬುರ್ಗಿಗೆ ಬಂದಿದ್ದ. ದಿನ ಪತ್ರಿಕೆಗಳ ಮೇಲೂ ಕಣ್ಣಾಡಿಸಲು ಪುರುಸೊತ್ತಿಲ್ಲದ ತನ್ನ ಬಿಜಿ ಶೆಡ್ಯೂಲ್ ನಲ್ಲೂ ತನ್ನ ಗೆಳೆಯನ ಕಷ್ಟಕ್ಕೆ ಊರುಗೋಲಾಗಿ ನಿಂತವ. ಗೆಳೆಯನಿಗೋಸ್ಕರವೇ‌ ಕಲಬುರ್ಗಿಗೆ ಬಂದಿದ್ದ ಶರಣು ಹೆಂಗರುಳಿನವ.
ಆ ಕೆಎಸ್ಆರ್ಟಿಸೀ ಬಸ್ಸಿನಲ್ಲಿ ಮೂವರು ಕೂಡಬಹುದಾದ ಸೀಟೊಂದರಲ್ಲಿ ಐದು ಮಂದಿ ಆರಾಮವಾಗೇ ಕುಳಿತಿದ್ದರು. ಬಸ್ಸು ಮೈಸೂರಿನ ಕಡೆಗೆ ಹೊರಟಿತ್ತು.
ದಾರಿಯುದ್ದಕ್ಕೂ ಮೂರು ಮಕ್ಕಳ ಗಲಾಟೆ, ಪರಸ್ಪರ ಕಿತ್ತಾಟ, ಆ ಮಕ್ಕಳನ್ನು ಸಂಭಾಳಿಸುವಲ್ಲಿ ಪಾಪ ಆ ಹೆಣ್ಮಗು ಪಡುತ್ತಿರುವ ಪಡಿಪಾಟಲು ಹೇಳತೀರದು. ಅವಳ ಮಡಿಲಲ್ಲಿದ್ದ ಎರಡು ವರ್ಷದ ಕೂಸಂತೂ ತುಂಬಾ ತುಂಟಿ. ಆ ಮಗುವಿನೊಂದಿಗೆ ಆಟ ಆಡ್ತಾ, ನಗ್ತಾ ಜಗತ್ತನ್ನೇ ಮರೆತಿದ್ದಳು ಆ ಕೃಷ್ಣೆ. ಆ ತಾಯಿ ಮಡಿಲಲ್ಲಿನ ಮಗುವನ್ನು ನಗಿಸಿದಾಗ ಮಲಗಿದಲ್ಲೇ ಜಿಗಿಯುತ್ತಿತ್ತು ಆ ಮಗು, ಆಗ ಅದರ ಕಾಲುಗಳು ಶರಣುವಿಗೆ ಬಡಿಯುತ್ತಿದ್ದವು. ಆಗ ಆ ತಾಯಿ, “ಏಯ್ ಕತ್ತಿ ಮಾಮಗ ಕಾಲ್ ಬಡಿಸ್ತಿಯೆನು ?” ಅಂತ ಗದರಿದರೆ, ಆ ಕೂಸು ಮತ್ತೆ ಕಿಲಕಿಲ ನಗುತ್ತಾ ಈ ಬಾರಿ ಬೇಕಂತಲೇ ಶರಣುವಿಗೆ ಕಾಲು ತಾಗುವಂತೆ ಜಿಗಿಯುತ್ತಿತ್ತು. “ಏ ಕೋತಿ ಏಳಿದಂಗಲ್ಲ ಅದನ್ನಾ ಮಾಡತೀಯನು. ಮಾಮ ಒಡಿತಾನ್ ನೋಡ್” ಎರಡು ವರ್ಷದ ಆ ಕಂದಮ್ಮನಿಗೆ ಅಮ್ಮನ ಆ ಗದರಿಕೆ….ಅವಳ ಚೆಲ್ಲಾಟಕ್ಕೆ ಮತ್ತಷ್ಟು ಉತ್ತೇಜನ ಕೊಟ್ಟಂತಾಗುತ್ತಿತ್ತು. ಮತ್ತದೇ ತುಂಟಾಟ, ಅದೇ ಕಿಲಕಿಲ ನಗು, ಶರಣು ಮಾಮನಿಗೆ ಹಿತವಾದ ಒದೆತ….. ಹೆಂಗರುಳಿನ ಶರಣು ಗೆ ಖುಷಿ. ಆಯಮ್ಮನಿಗೋ ಕಸಿವಿಸಿ,
“ಸ್ವಾರಿ ಅಣ್ಣ ಇಕಿ ಬಾರಿ ಬೆರ್ಕಿ ಅದಾಳ. ಏಳಿದಂಗಲ್ಲ ಅದನ್ನ ಮಾಡ್ತಾಳ ನೋಡ್ರಿ. ತಪ್ಪು ತಿಳಕಬ್ಯಾಡ್ರಿ” ಅಂದಳು ಕೃಷ್ಣೆ. “ಇರ್ಲಿ ಬುಡಮ್ಮ, ಬಾಯ್ತುಂಬ ಅಣ್ಣ ಅಂತೀ, ಅಂದ್ ಮ್ಯಾಲ ಅಕಿ ನನಗ ಸೊಸಿ ಇದ್ದಂಗ, ಸೊಸಿ ಕುಡ ಒದೆಸಿಗೆಂಡ್ರ ಆ ಕುಸೀನ ಬ್ಯಾರೆ” ಎನ್ನುತ್ತಾ ಆ ಕೂಸಿನ ಗಲ್ಲ ನೇವರಿಸಿದ ಶರಣು. ಆ ಮಗುವಿನಿಂದ ಮತ್ತದೆ ಕಿಲಕಿಲ…. ನವಿರಾದ ಒದೆತ. ನಗುವಿನ ಮಧ್ಯೆ ಶರಣು ಆ ಕೃಷ್ಣೆಯೊಂದಿಗೆ ಮಾತಿಗಿಳಿದ.
“ಯಾವೂರಿಗಿಳೀಬೇಕಮ್ಮ?”
“ಮುಂದ ದ್ಯಾವ್ ಪುರ ಕ್ರಾಸಿಗ್ರೀ”
“ಅದ…ಅನಮ್ಮ ನಿಮ್ಮೂರು”
“ಊನ್ರಿ ಗಂಡನ ಮನೀರಿ”
“ಔದನಮ…. ತೌರಮನಿಮಾ”
“ನನ್ ತೌರಮನಿ ಕಲಬುರ್ಗಿರಿ”
“ನಿನ್ ಗಂಡ ಏನ್ಮಾಡ್ತಾರಮ”
“ಕುಡೀತಾನ್ರೀ”
“ಅಯ್ಯೋ…. ಪಾಪ ಅಲ್ಲಮ್ಮಾ ಕೆಲ್ಸ ಏನ್ ಮಾಡ್ತಾನಮ್ಮಾ?”
“ಅದಾರೀ ಕುಡ್ಯಾಕ ಎಷ್ಟ್ ಬೇಕು ಅಷ್ಟ್ ಕೂಲಿ ಮಾಡ್ತಾನ್ರೀ ರೊಕ್ಕ ಬಂದ್ ಕುಟ್ಲೆ ಕುಡೀತಾನ್ರಿ, ಮತ್ ಕಾಯ್ತಾನ್ರೀ, ಮತ್ ಕುಡೀತಾನ್ರೀ ಇಷ್ಟಾರೀ”
“ಅಯ್ಯೋ ಪಾಪ. ಮನಿ ನೆಡಸಾಕ ರೊಕ್ಕ ಪಕ್ಕ ಕೊಡ್ತಾನಿಲ್ಲಮ ?”
“ಇಲ್ರೀ ಏನೂ ಕೊಡಾಂಗಿಲ್ರಿ. ಕೇಳಿದ್ರ ಸಿಕ್ ಸಿಕ್ಕಂಗ ಒಡಿತಾನ್ರಿ”
ಶರಣುವಿಗೆ ಆಘಾತವಾದಂತಾಯ್ತು.
“ಮತ್ ಮನೀ ಎಂಗ್ ನಡಸ್ತೀಯಮ್ಮ ? ಒಲ ಐತೆನು ?”
“ಏನಿಲ್ರಿ ಒಲ ಇಲ್ಲ ಮನಿ ಇಲ್ರಿ. ಬಾರಿ ಮೋಸಾ ಮಾಡಿ ಬಿಟ್ಟರ್ರೀ ನಮ್ ತೌರ್ ಮನ್ಯಾರಿಗೆ. ಆರ್ ಎಕ್ರೆ ಒಲ ಐತೆ, ತೊಗರಿ ಬೆಳಿತೀವಿ ಅಂತ ಸುಳ್ ಏಳಿ ನಂಬ್ಸಿ ಮದಿವಿ ಮಾಡಿಕೊಂಡರ್ರೀ. ಇಲ್ ನೋಡಿದ್ರ ಏನೂ ಇಲ್ರೀ”
“ಮತ್ ಈಗ ಎಲ್ಲಿರ್ತೀರಮ್ಮ ?”
“ದ್ಯಾವಪುರದಾಗ ಒಳಾಗ ಒಂದು ಸಣ್ ಮನಿ ಐತ್ರಿ, ಒಂದಾ ರೂಮೈತ್ರಿ ಅದರಾಗ ಇರ್ತೀವ್ರೀ”
“ಪಾಪ ಇರ್ಲಿ ಬುಡಮ್ಮ ಅಷ್ಟರ ಐತಲ”
“ಅದನ್ನೂ ಕೊಡಾಂಗಿಲ್ಲ, ಮನಿ ಬುಟ್ ಒರಾಗ್ ಓಗ್ರೀ ಅಂತಾನ್ರೀ ನಮ್ ಮಾವ”
“ಅಯ್ಯೊ ಕರ್ಮ ಯಾಕಂತಮ್ಮಾ”
“ಆ ಮನೀನ ತನ್ ಮಗಳಿಗೆ ಕೊಡ್ತಾನಂತ್ರಿ ನಾವ್ ಒರಾಗ್ ಓಗ್ಬೇಕಂತ್ರಿ ಇಲ್ಲಕ್ರ ತಾನಾ ಒರಾಗಾಕ್ತಾನಂತ್ರಿ. ಎಂಗೈತಿ ನೋಡ್ರೀ ಅಣ್ಣ ನಮ್ ಅಣೇಬರ”
“ಅಲ್ಲಮ್ಮ ಈ ಮೂರ್ ಮಕ್ಳನ್ ಕಟಿಗೆಂಡೂ, ಅವ ಕುಡಕ ಗಂಡನ್ ಕಟಿಗೆಂಡೂ ನೀ ಎಲ್ಲಿಗೋಗ್ಬೇಕಂತ? ಒರಾಗಾಕಾದೂ ಅಂದ್ರ ? ಮನಿಷತ್ವನ ಇಲ್ಲನು?”
“ಅವ್ರಿಗೆ ಅದೇನೂ ಇಲ್ರಿ”
“ಅವ್ರು ಒರಾಗಾಕಿದ್ರ ಪಾಪ ಏನ್ಮಾಡ್ತೆಮ್ಮಾ ನೀನು ?” ಶರಣುವಿನ ಆತಂಕ.
“ಎಂಗ್ ಒರಾಗ್ ಆಕ್ತಾರ್ರಿ, ಈ ಮೂರು ಮಕ್ಳನ್ ಕಟಿಗೆಂಡು ನಾನೆಲ್ಲಿಗೋಗ್ಲಿ ? ಈ ಉಡಗ್ರಿಗೆ ನನಗ ಇಸಾ ಕೊಡ್ರಿ ಆಮ್ಯಾಲ ಒರಾಗ್ ಯಾಕ ಕುಣ್ಯಾಗಾ ಇಟ್ ಬರವಂತ್ರಿ ಅಂದೀನ್ರೀ ನಾನೂ. ಸದ್ಯಕ್ಕ ಸುಮ್ಮಾಗ್ಯಾರ್ರೀ. ಆದ್ರೂ ಅವರ್ದು ದಿನಾ ವಟವಟ ಕಿಟಿಪಿಟಿ ಇದ್ದದ್ದಾರೀ. ಏನ್ ಮಾಡ್ಬೇಕ್ರಿ ಪಡಕಂಬಂದಿದ್ದು ಉಣಬೇಕಲ?”
“ನೀ ದೈರ್ಯವಾಗಿರಮ್ಮ ಎಷ್ಟ ತ್ರಾಸ ಬಂದ್ರೂ ಈ ಮಕ್ಳನ್ನ ಓದುಸೋದು ಬುಡಬ್ಯಾಡ. ಉಪಾಸ ಇದ್ರೂ ಚಿಂತಿಲ್ಲ ಓದಸಾದು ಬುಡಬ್ಯಾಡ. ಇಲ್ಲಕ್ರ ಇವೂ ಅಂಗಾ ಆತಾವ್ ನೋಡ್”
“ಔದ್ರೀ ನಾನೂ ಅದನ್ನಾ ಏಳ್ತಿನ್ರಿ. ನಾನರ ಆರ್ನೇತ್ತ ಓದೀನ್ರಿ. ಇವರಪ್ಪಂತೂ ಸಾಲೀಗೆ ಓಗಿಲ್ರಿ. ಸುಳ್ಳಾ ಏಳಿ ನನಗ ಗಂಟ್ ಆಕಿದರ್ರೀ”
“ಓಗ್ಲಿ ಬುಡಮ್ಮ ಈ ಮಕ್ಳನ್ ಸಾಲಿ ಮಾತ್ರ ಬುಡಸ್ಬ್ಯಾಡನೋಡ್.
ನೀ ನನಗ ಅಣ್ಣ ಅಂದೀದಿ. ನನಗೂ ತಂಗೀ ಇಲ್ಲ ನೀನಾ ತಂಗಿ ಅಂತ ತಿಳಕಂತೀನಿ, ರೊಕ್ಕಾ ಬೇಕಂದ್ರ ನಾ ಕೊಡತೀನಿ. ಇವ್ರಿಗೆ ಸಾಲಿ ಓದ್ಸು”
“ನೋಡ್ರೆಣ್ಣ ನಿಮಗಿದ್ದ ಕಳ್ಳು ಕಕ್ಕಲಾತಿ ಉಟ್ಟಿಸಿದಾಂವಗಿಲ್ನೋಡ್ರಿ. ಕುಡ್ಯಾಕ್ ಒಂದಿದ್ರ ಸಾಕ್ ಆಯಪ್ಪಗ ಈ ಉಡಗ್ರ ಸಾಲಿ ಪಾಲಿ ಏನೂ ಚಿಂತಿ ಇಲ್ಲ ಆ ಮನಿಷ್ಯಾಗ. ನಾನಾ ಮಾಸ್ತಾರ್ರಿಗೆ ಕೇಳಿಕೆಂಡು ಸಾಲಿ ಅಚ್ಚೀನ್ರಿ. ಈಗ ಮೂರ್ ತಿಂಗಳಾತು ನಾ ತೌರ್ ಮನಿಗ್ ಬಂದು. ಒಂದಿನಾನೂ ಹೊಳ್ಳಿ ಬಾ ಅಂತ ಕರದಿಲ್ ನೋಡ್ರಿ. ಆ ಮಾಸ್ತಾರ್ರಾ ದಿನಾ ಫೋನ್ ಮಾಡ್ತಾರ ಕರಕಂಬರ್ರೆಮ್ಮಾ ಉಡಗನ ಸಾಲಿ ಆಳಮಾಡಬ್ಯಾಡ್ರೀ ಅಂತ.ಅದಕ್ಕ ಅವನ ಸಾಲಿ ಸಲುವಾಗೇ ಹೊಂಟೀನಿ ನೋಡ್ರಿ ಅಣ್ಣ”
ಒಂದು ಹನಿ ಕಂಬನಿ ಇಲ್ಲದೇ ತನ್ನ ಕಹಾನಿಯನ್ನು ಹೇಳುತ್ತಲೇ ಇದ್ದಳು ಕೃಷ್ಣೆ. ಅವಳ ಕಹಾನಿಯಲ್ಲಿ ಕಣ್ಣೀರಿಗೂ ಬರ. ಅವು ಬತ್ತಿ ಹೋಗಿ ವರ್ಷಗಳೇ ಉರುಳಿದ್ದವು. ಶರಣುವಿನ ಎದೆ ಭಾರವಾಗುತ್ತಿತ್ತು.
ಆತಂಕದಲ್ಲೇ ಕೇಳಿದ, “ಅಲ್ಲಮ್ಮ ನೀ ಊರ ಮುಟ್ಟದರಾಗ ಸಂಜಿ ಆತೈತಿ. ಊಟ ಇರತೈತೋ ಇಲ್ಲೋ”
“ಎಲ್ಲಿ ಊಟಾರೀ ಅಣ್ಣ. ಅಡಗಿ ಮಾಡಾಕ ಬೇಕಾದ ರೇಷನ್ನೂ ಇರಾಂಗಿಲ್ಲ. ಮಾರಕೊಂಡಿರತಾನ. ಇವತ್ತಂತೂ ಬುತ್ತೀ ಕಟಿಗೆಂಡು ಬಂದೀನಿ. ನಾಳಿಲಿಂದ ಒಂದೆರೆಡು ತಿಂಗಳಿಗಾಗಾಟು ರೇಷನ್ ಕೊಟ್ ಕಳಿಸ್ಯಾರ್ರಿ ನಮ್ ತೌರ್ ಮನ್ಯಾರು”
ಕರುಳು ಕಿವುಚಿದಂತಾಯ್ತು ಶರಣುವಿಗೆ. ಮಾತನಾಡದಾದ. ದಾರಿ ಸಾಗಿತ್ತು. ಅವಳು ಇಳಿಯುವ ಸ್ಟಾಪ್ ಹತ್ತಿರವಾಗುತ್ತಿತ್ತು. ದಾರಿಯುದ್ದಕ್ಕೂ ಹಿತವಾಗಿ ಒದೆಯುತ್ತಿದ್ದ ಹೆಣ್ಮಗುವನ್ನು ಶರಣು ಎತ್ತಿಕೊಂಡ. ಪ್ರೀತಿಯಿಂದ ಐದುನೂರು ರೂಪಾಯಿ ಕೊಟ್ಟ. “ಬ್ಯಾಡ್ರೀ ಅಣ್ಣ, ರೊಕ್ಕ ಕೊಡಬ್ಯಾಡ್ರೀ” ಅಂದಳು ಕೃಷ್ಣೆ.
“ನನ್ ಸೊಸೀಗೆ ನಾ ಕೊಡಾಕತ್ತೀನವ ನೀ ಸುಮ್ಕಿರು” ಅಂದ. ನಕ್ಕಳವಳು. ಬಸ್ಸಿನಿಂದ ಇಳಿಯಲು, ಅವರ ಲಗ್ಗೇಜ್ ಇಳಿಸಲು ಸಹಾಯ ಮಾಡಿದ ಶರಣು. ಇಳಿಯುವಾಗ, “ತಂಗೀ ನಿನ್ನ ಹೆಸರೇನಮ್ಮ?” ಎಂದು ಕೇಳಿದ. ಅದಕ್ಕವಳು, “ಶರಣಮ್ಮರೀ”
“ಫೋನ್ ನಂಬರ್ ಐತನಮ್ಮ? “
“ತಗೋರಿ ಅಣ್ಣ 9845676591” ಎನ್ನುತ್ತಾ
“ಮಾಮಗ ಟಾಟಾ ಮಾಡ್ರೀ”
ಅವರ ಟಾಟಾ…..ಅವರ ನಗು ಇದೆಂಥಾ ಸಂಬಂಧ ? ಬರೀ ಸಂಬಂಧವಲ್ಲ ಅದನ್ನು ಮೀರಿದ ಅನುಬಂಧ ಆನಂದ‌. ಕಣ್ಮುಚ್ವಿ ತೆರೆಯುವಷ್ಟರಲ್ಲಿ ಮಾಸಂಗಿಪುರ ಬಂತು. ಶರಣು ಬಸ್ಸಿನಿಂದಿಳಿದು ಮನಗೆ ಹೋದ. ಇವನು ಮನೆಗೆ ಹೋಗುವಷ್ಟರಲ್ಲಿ ಮುದ್ದಿನ ಮಡದಿ ಅಕ್ಕಮ್ಮ ಬೆಚ್ಚಗೆ ನೀರು ಕಾಯಿಸಿ ಸ್ನಾನಕ್ಕೆ ಅಣಿ ಮಾಡಿಟ್ಡಿದ್ದಳು. ಸ್ನಾನ ಮುಗಿಸಿ ವಿಭೂತಿ ಧರಿಸಿ ದೇವರಿಗೆ ಕೈಮುಗಿದು ಊಟಕ್ಕೆ ಕುಳಿತ. ಶರಣಮ್ಮ ನೆನಪಾದಳು. ಫೋನಾಯಿಸಿದ, “ಶರಣಮ್ಮ ನಾನಮ್ಮ ಬಸ್ಸಿನ್ಯಾಗ ಸಿಕ್ಕ ನಿಮ್ಮಣ್ಣ”
“ಔದನ್ರಿ ಅಣ್ಣ ಅರಾಮ್ ಊರ್ ಮುಟ್ಟಿದ್ರ್ಯಾ”
“ಊನಮ್ಮ ನೀ ಆರಾಮ್ ಮನಿ ಮುಟ್ಟಿದಿಲ್ಲಮಾ. ಊಟಾತನಮ”
“ಇವತ್ತಂತೂ ತೌರ್ ಮನಿಲಿಂದ ತಂದಿದ್ದ ಊಂಡಿವೆಣ್ಣ. ನಾಳಿಗೆ ಎಂಗನ ನಮ್ ಬಾಳೇವು”
“ಯಾಕಮ್ಮ ತೌರ್ ಮನಿಲಿಂದ ಎರಡ ತಿಂಗಳಿಗೆ ಆಗಷ್ಟು ರೆಷನ್ ತಂದೀಯಲ್ಲಮ್ಮ?”
“ರೇಷನ್ ಐತ್ರೀ ಆದ್ರ ಮನ್ಯಾಗಿನ ಸಿಲೆಂಡ್ರೂ, ಗ್ಯಾಸೂ, ಪಾತ್ರೀ ಪಗಡೀ ಎಲ್ಲಾ ಮಾರಿ ಬಿಟ್ಟಾನ್ರೀ…..ಅಡಗೀ ಎಂಗ್ ಮಾಡಬಕೂ….” ಅಳುತ್ತಿದ್ದಳು ಶರಣೆ . ಇತ್ತ ಶರಣು ಕೂಡ. ಶರಣುವಿಗೆ ಊಟ ಬಡಿಸಲು ಬಂದ ಅಕ್ಕಮ್ಮ ಗಂಡ ಕಣ್ತುಂಬಿಕೊಂಡಿದ್ದನ್ನು ನೋಡಿ, “ಯಾಕ್ರೀ ಏನಾತು ?” ಎಂದು ಕೇಳಿದಳು. ಇದಕ್ಕೆ ಅವನ ಕಣ್ಣೀರು ಮತ್ತು ಉಪವಾಸವೇ ಉತ್ತರವಾಗಿತ್ತು.


Leave a Reply

Back To Top