ಅಂಕಣ ಸಂಗಾತಿ

ಸುಜಾತಾ ರವೀಶ್ ರವರ ಲೇಖನಿಯಿಂದ

ನೆನಪಿನ ದೋಣಿಯಿಂದ

ಕುಂಟೆಬಿಲ್ಲೆ ಕುಂಟಲಿಪಿ

ಅಮಟೆ” “ಅಮಟೆ” ತಲೆ ಮೇಲೆತ್ತಿಕೊಂಡು ಕಣ್ಮುಚ್ಚಿ ಕೆಳಗೆ ಹಾಕಿದ ಗೆರೆಗಳನ್ನು ನೋಡದೆ ಗೀಚಿಟ್ಟ ಚೌಕಗಳಲ್ಲಿ ಕುಪ್ಪಳಿಸುತ್ತಾ ಹೋಗುವ ಬಾಲೆಯೊಬ್ಬಳು .ಸರಿ ಸರಿ ಎನ್ನುವ ಅವಳ ಆಟದ ಜೊತೆಗಾರ್ತಿಯರು .ಅಮಟೇ am I right ನ ಅಪಭ್ರಂಶ ಎಂದು ಗೊತ್ತಾಗಿದ್ದು ಹೈಸ್ಕೂಲಿಗೆ ಬಂದ ಮೇಲೆಯೇ. ನಾವು ಚಿಕ್ಕವರಿದ್ದಾಗ ತುಂಬ ಆಡುತ್ತಿದ್ದ ಆಟ ಇದು. ಆಯತಾಕಾರವಾಗಿ ಆಕಡೆ ಈಕಡೆ 5ಚೌಕಗಳು ಬರುವಂತೆ ಗೆರೆ ಎಳೆದು ಕಡೆಯದರಲ್ಲಿ X ಮಾರ್ಕ್ ಹಾಕುವುದು
1ಚಪ್ಪಟೆ ಕಲ್ಲನ್ನು ಬಚ್ಚಾ ಅಥವಾ ಬಿಲ್ಲೆ ಹಾಕಿ ಅದನ್ನು ನಾಲ್ಕನೆಯ ಮನೆಯ ತನಕ 1ಕಾಲಲ್ಲಿ ನಾಲ್ಕನೆಯ ಮನೆಯವರೆಗೂ ಕಾಲಲ್ಲಿ ತಳ್ಳುವುದು .ನಂತರ ನಾಲ್ಕರ ಪಕ್ಕದ ಮನೆಗೆ ತಳ್ಳಿ ಐದನೆಯ ಮನೆಯಲ್ಲಿ ಕಾಲು ಬಿಟ್ಟು ವಿರಮಿಸಿ ಮತ್ತೆ ಆ ಪಕ್ಕದ ಚೌಕಗಳ ಮಧ್ಯೆ ತಳ್ಳುತ್ತಾ ಮುಗಿಸಿದರೆ 1ಘಟ್ಟ. ಹೀಗೆ ಎಲ್ಲಾ ಮನೆಗಳಲ್ಲೂ ಇದು ಪುನರಾವರ್ತಿಸಿ ಮೇಲೆ ಹೇಳಿದಂತೆ ಎರಡೂ ಕಡೆಯ ಚೌಕಗಳಿಗೆ ಒಂದೊಂದು ಕಾಲಿಟ್ಟು ಅಮಟೆ ಕೂಗಿ ಯಾವ ಹಂತದಲ್ಲೂ ಗೆರೆ ಮೇಲೆ ಕಾಲಿಡದೆ ಮುಗಿಸಿದರೆ ಅವರು ಗೆದ್ದ ಹಾಗೆ . ಹಿಂದೆ ತಿರುಗಿ ಬಚ್ಚಾ ಎಸೆದರೆ ಆ ಬಚ್ಛಾ ಯಾವ ಮನೆಯಲ್ಲಿ ಬೀಳುತ್ತದೋ ಅದು ಅವರ ಮನೆ. ಚೌಕವನ್ನು ಗೆದ್ದವರು ಅಲ್ಲಿ ಕಾಲು ಬಿಟ್ಟು ವಿರಮಿಸಬಹುದು. ಬೇರೆಯವರು ಅದನ್ನು ದಾಟಿ ಹೋಗಬೇಕು ಕುಂಟಿಯಾದರೂ ಆಗಲಿ ಬಚ್ಚಾವನ್ನು ತಳ್ಳಿ ಆಗಲಿ . ಇಷ್ಟೆಲ್ಲಾ ಮಾಡುವಾಗ ಕಾಲಾಗಲಿ ಬಚ್ಚಾಆದಲ್ಲಿ ಗೆರೆಯ ಮೇಲೆ ಬೀಳಬಾರದು ತಾಗಬಾರದು .ಹಾಗೆ ಗೆರೆ ತುಳಿದರೆ ಅಥವಾ ಬಚ್ಚಾ ಗೆರೆ ಮೇಲೆ ಬಿದ್ದರೆ ಅವರು ಔಟ್. ಬಚ್ಚಾ ಅಥವಾ ಬಿಲ್ಲೆಯನ್ನು ಟುಬ್ಟುಬಾಚ್ ಅಂತನೂ ಅಂತಿದ್ವಿ. ಆದರೆ ಅದು ಯಾವ ಭಾಷೆ ಎಂದು ಖಂಡಿತಾ ಕೇಳಬೇಡಿ ದಮ್ಮಯ್ಯ ನನಗೆ ಗೊತ್ತಿಲ್ಲ.
ಎಲ್ಲರ ಸರದಿ ಮುಗಿದ ಬಳಿಕ ಮತ್ತೆ ಅವರ ಸರದಿಯಲ್ಲಿ ನಿಂತಲ್ಲಿಂದ ಮುಂದುವರಿಸಬೇಕು. ಹೀಗೆ 4 / 5ಮಕ್ಕಳು ಸಾಮಾನ್ಯ ಹುಡುಗಿಯರು ಕೆಲವೊಮ್ಮೆ ಹುಡುಗರೂ ಸಹ ಸೇರಿ ಆಡುತ್ತಿದ್ದ ಆಟ. ಕಾಲಿಗೆ ಒಳ್ಳೆ ವ್ಯಾಯಾಮ . ಚುರುಕು ಚಟುವಟಿಕೆಗಳ ಅನಾವರಣಕ್ಕೆ ಅವಕಾಶ. ದಿನಾ ಸಂಜೆ ಶಾಲೆಯಿಂದ ಬಂದ ಮೇಲೆ ಇದನ್ನೇ ಆಡ ತೊಡಗಿ ಕತ್ತಲಾದಾಗ ಮುಗಿಸಿ ಹೋಗುವುದು ರೂಢಿ. ಕೆಲವೊಮ್ಮೆ ಹಿಂದಿನ ದಿನ ನಿಲ್ಲಿಸಿದ ಘಟ್ಟದಿಂದ ಮುಂದುವರಿಸುವುದು .

ಬಚ್ಚಾ ಗಳನ್ನು ತಯಾರಿಸಿಕೊಳ್ಳುವುದೂ ಒಂದು ಕಲೆಯೇ .ಚಪ್ಪಟೆಯಾದ ಜಲ್ಲಿಕಲ್ಲುಗಳು ಅಂಗೈಯಗಲದ ಸಮನಾಗಿ ಇರುವಂತೆ ಉಜ್ಜಿ ಉಜ್ಜಿ ಸಪಾಟು ಮಾಡುವುದು .ಆಗ ಮೊಸಾಯಿಕ್ ಅಪರೂಪ ಕೆಲವೊಮ್ಮೆ ತುಂಡುಗಳು ಸಿಕ್ಕುತ್ತಿತ್ತು . ಅವುಗಳನ್ನೂ ಆರಿಸಿ ಇಟ್ಟುಕೊಳ್ಳುತ್ತಿದ್ದೆವು ಹೀಗೆ ಎಸೆಯುವಾಗ ಬಚ್ಚಾ ಮುರಿದರೂ ಸಹ ಅವರ ಸರದಿ ಹೋಗಿ ಔಟ್ ಆಗುವ ಸಂಭವಗಳು ಇದ್ದವು .ಅದರಲ್ಲಿ ಕೆಲವು ಪ್ರಿಯವಾದ ಬಚ್ಚಾಗಳು ಇದ್ದವು. ಬೇಕಾದವರಿಗೆ ಮಾತ್ರ ಬಚ್ಚಾ ಸಾಲ ಕೊಡ್ತಾ ಇದ್ದೆವು. ಅಳುಬುರುಕಿ ಗೆಳತಿಯೊಬ್ಬಳು ಔಟಾದಾಗಲೆಲ್ಲಾ ಅಳ್ತಾ ಇದ್ದಿದ್ದು, ಗೆದ್ದಾಗ ಪ್ರಪಂಚ ಗೆದ್ದಷ್ಟು ಸಂಭ್ರಮಿಸುವ ಖುಷಿ ಇವೆಲ್ಲ ಬದುಕಿನ ಅನುಭವಗಳಿಗೆ ನಮ್ಮ ತೆರೆದಿಡುವಿಕೆಗೆ ಸಹಾಯ ಆಯ್ತು ಅಂತ ಈಗ ಅನ್ನಿಸತ್ತೆ .

ಮತ್ತುಿ 1 ತರಹ ಗೆರೆ ಹಾಕಿ 1 2 1 2 ಹೀಗೆ ಅಕ್ಕಪಕ್ಕದಲ್ಲಿ ಚೌಕಗಳು. ಅಲ್ಲಿ ಕೈಗಳನ್ನು ಆ್ಯಕ್ಷನ್ ಮಾಡಿಕೊಂಡು ಕೃಷ್ಣನು ಕೊಳ ಲು ಹಿಡಿದ ಹಾಗೆ, ಸರಸ್ವತೀ ತರಹ ಕಾಲುಮಡಚಿ ಮೇಲಿಟ್ಟುಕೊಂಡು ಕುಂಟುವುದು ಹೀಗೆ. ಬಚ್ಚಾ ಹಾಕುವಾಗ ನೇರವಾಗಿ ಮನೆಗಳಿಗೆ ಹಾಕದೆ ಹಿಂದೆ ತಿರುಗಿ ಹಾಕುತ್ತಿದ್ದುದು ವಿಶೇಷ .

೫/೬ ಗೆಳತಿಯರು ಸೇರಿ ಬೀದಿಯಲ್ಲಿ ಚಾಕ್ ಪೀಸ್ ನಲ್ಲಿ ಗೆರೆಹಾಕಿ ಆಡುತ್ತಿದ್ದ ನೆನಪು. ಬಿದ್ದು ಹಲ್ಲು ಮುರಿದುಕೊಳ್ಳುತ್ತಿದ್ದುದೂ, ಮಂಡಿ ತರಚಿಕೊಳ್ಳುತ್ತಿದ್ದುದೂ ಸಾಮಾನ್ಯ .ಉದ್ದ ಲಂಗ ಹಾಕಿದ್ದರಂತೂ ಕಾಲಿಗೆ ತೊಡರಿ ಬೀಳುವುದೇ ಹೆಚ್ಚು .ಮೇಲೆತ್ತಿಕೊಂಡು ಗಂಟು ಹಾಕಿ ಸಿಕ್ಕಿಸಿಕೊಂಡರೆ ಮಾತ್ರ ಪೂರ್ಣ ಸ್ವಾತಂತ್ರ್ಯ.

ಈಗಿನ ಮಕ್ಕಳು ಆಡುವ ವಿಧಾನ ಸ್ವಲ್ಪ ಬೇರೆಯಾದರೂ ಕುಂಟುವುದೂ ಇದೆ ಬಿಲ್ಲೆಯೂ
ಇದೆ .ಅದಕ್ಕೆ ಅದು ಕುಂಟಾಬಿಲ್ಲೆ .ಕಾಸು ಖರ್ಚಿಲ್ಲದ ಸಮಯ ಕಳೆಯುವ ಸುಲಭ ಸಾಧನ

ನಮ್ಮ ವಯೋಮಾನದ ಎಲ್ಲರೂ ಮಕ್ಕಳಾಗಿದ್ದಾಗ ಅಡಿಯೇ ಆಡಿರುವ ಈ ಹೊರಾಂಗಣ ಕ್ರೀಡೆ ಕಾಲಿಗೆ ಕಸುವನ್ನು ತಲೆಗೆ ಕಸರತ್ತನ್ನು ಕೊಡುತ್ತಿತ್ತು. ಗೆಳತಿಯರ ತಪ್ಪನ್ನು ಕಂಡುಹಿಡಿಯುವ, ಹೊಂದಿಕೊಂಡು ಹೋಗುವ ಬುದ್ದಿಯನ್ನು ಕಲಿಸುತ್ತಿತ್ತು .

ಮೊನ್ನೆ ಬೀದಿಯಲ್ಲಿ (ಕೊರೊನಾ ಆದ್ದರಿಂದ ಫ್ರೀ. ಇಲ್ಲದಿದ್ದರೆ ಸ್ಕೂಲು ಟ್ಯೂಷನ್ನು ಟೀವಿ ಅಷ್ಟೇ ಅವರ ಪ್ರಪಂಚ )ಮಕ್ಕಳು ಕುಂಟೆಬಿಲ್ಲೆ ಆಡುವುದನ್ನು ನೋಡಿ ನನಗೂ ಹೋಗಿ ಸೇರಿಕೊಳ್ಳುವ ಅನ್ನುವಷ್ಟು ಆಸೆಯಾಯ್ತು . ಆಟಕ್ಕಂತೂ ಸೇರಲಿಲ್ಲ (ಯಾರೇನಂದುಕೊಳ್ಳುತ್ತಾರೋ ಅಂತ) ಆದ್ರೆ ಈ ಲೇಖನ ಅಂತೂ ಬರೆದೆ. ಕುಂಟೆಬಿಲ್ಲೆ ಅಂದರೆ ಬಾಲ್ಯದ ಅಮರ ಮಧುರ ನೆನಪು. ಮೆಲುಕುಗಳ ಬೆಸುಗೆಯ ಕೊಂಡಿ.

ಬನ್ನಿ ಎಲ್ಲಾ ಕುಂಟೆಬಿಲ್ಲೆ ಆಟ ಆಡೋಣ-


ಸುಜಾತಾ ರವೀಶ್

ಭಾರತೀಯ ಜೀವ ವಿಮಾ ನಿಗಮದಲ್ಲಿ ಸೇವೆ ಸಲ್ಲಿಸುತ್ತಿರುವ ಎನ್ ಸುಜಾತ ಅವರ ಕಾವ್ಯನಾಮ ಸುಜಾತಾ ರವೀಶ್ . 1 ಕವನ ಸಂಕಲನ “ಅಂತರಂಗದ ಆಲಾಪ” ಪ್ರಕಟವಾಗಿದೆ.  “ಮುಖವಾಡಗಳು” ಕವನ ಕುವೆಂಪು ವಿಶ್ವವಿದ್ಯಾನಿಲಯದ ಎರಡನೇ ಬಿ ಎಸ್ ಸಿ ಯ ಪಠ್ಯದಲ್ಲಿ ಸ್ಥಾನ ಪಡೆದುಕೊಂಡಿವೆ. ಕವನದ ವಿವಿಧ ಪ್ರಕಾರಗಳು, ಕಥೆ ,ಲಲಿತ ಪ್ರಬಂಧ, ಪುಸ್ತಕ ವಿಮರ್ಶೆ ಹೀಗೆ ವಿವಿಧ ಪ್ರಕಾರಗಳಲ್ಲಿ ಕೃಷಿ ಸಾಧಿಸುತ್ತಿರುವ ಇವರ ರಚನೆಗಳು ವಿವಿಧ ಬ್ಲಾಗ್ ಗಳು, ಬ್ಲಾಗ್ ಪತ್ರಿಕೆ, ನಿಯತಕಾಲಿಕೆ ಹಾಗೂ ವೃತ್ತ ಪತ್ರಿಕೆ ಹಾಗೂ ಪರಿಷತ್ ಪತ್ರಿಕೆಗಳಲ್ಲಿ  ಪ್ರಕಟವಾಗಿವೆ. ವೃತ್ತಿ ಹಾಗೂ ಪ್ರವೃತ್ತಿಯ ಮಧ್ಯೆ ಸಮತೋಲನ ಸಾಧಿಸಿಕೊಂಡು ಬರವಣಿಗೆಯಲ್ಲಿ ತೊಡಗುವ ಬಯಕೆ ಲೇಖಕಿಯವರದು

One thought on “

Leave a Reply

Back To Top