ಅಂಕಣ ಸಂಗಾತಿ

ಗಜಲ್ ಲೋಕ

ಮೇತ್ರಿಯವರ ಗಜಲ್ ಗಳಲ್ಲಿ ಮೈತ್ರಿಯಾನ..

ಗಜಲ್ ಪ್ರೀತಿಸುತ್ತಿರುವ ಮನಸುಗಳಿಗೆ ನಮಸ್ಕಾರಗಳು…

ಈ ‘ಗಜಲ್’ ಎನ್ನುವ ರಸಗಂಗೆ ಸಹೃದಯಿಯ ಕಿವಿಯ ದೇಹಲಿಜ್ ದಾಟುತ್ತಲೇ ಹೃದಯದಲ್ಲೊಂದು ಅಪರಿಮಿತ ಯೂನಿಕ್ ಕಂಪನ ಉಂಟಾಗುತ್ತದೆ. ಪ್ರತಿವಾರ ಒಬ್ಬೊಬ್ಬ ಸುಖನವರ್ ಬಗ್ಗೆ ಬರೆಯುತ್ತ ಗಜಲ್ ಹೂದೋಟದಲ್ಲಿ ಅಲೆದಾಡುತ್ತಿರುವೆ. ಆ ಹೂದೋಟದ ಲತೆಯೊಂದಿಗೆ ನಿಮ್ಮ ಮುಂದೆ ಬರುತಿದ್ದೇನೆ, ತಾವು ನಿರೀಕ್ಷಿಸುತ್ತಿರುವ ಗಜಲ್ ಬೆಳದಿಂಗಳೊಂದಿಗೆ…

ಬಿಗಿಯಾಗುತ್ತದೆ ಮೈ

ಈಗಲೂ ಮಳೆಗಾಲದ ರಾತ್ರಿಗಳಲ್ಲಿ‌

ಮೈ ಮುರಿದುಕೊಳ್ಳುತ್ತದೆ ಪ್ರೀತಿ

ಕಾಮನ ಬಿಲ್ಲಿನ ರೀತಿಯಲ್ಲಿ” 

ಪರವೀನ್ ಶಕೀರ್

      ಪ್ರತಿ ಮನುಷ್ಯ ತನ್ನ ಜೀವನವಿಡಿ ಒದ್ದಾಡೋದು ಒಂದು ಹಿಡಿ ಶಾಂತಿಗಾಗಿ, ಒಂಚೂರು ನೆಮ್ಮದಿಗಾಗಿ. ಇದಕ್ಕಾಗಿ ಮನುಷ್ಯ ತೆತ್ತ, ತೆರುತ್ತಿರುವ ಬೆಲೆ ಅಷ್ಟಿಷ್ಟಲ್ಲ. ಇನ್ನೂ ಈ ‘ಶಾಂತಿ’ ಎಂಬುದು ದುಡ್ಡು, ದೌಲತ್ತಿಗೆ ದೊರೆಯುವುಂತದ್ದಲ್ಲ, ಉಸಿರಾಡುವ ಎಲ್ಲ ಜೀವಕೋಶಗಳ ಅಂತರಂಗದಲ್ಲಿ ಇರುವಂತದ್ದು. ಆಂತರಿಕ ಶಾಂತಿ ಎನ್ನುವಂತದ್ದು ಮನಸ್ಸಿನಲ್ಲಿ ವಿರೋಧ ಅಥವಾ ಒತ್ತಡ ಎದುರಾದಾಗ ನಮ್ಮನ್ನು ನಾವು ಪ್ರಬಲವಾಗಿ ಇರಿಸಿಕೊಳ್ಳಲು ಸಾಕಷ್ಟು ಜ್ಞಾನ ಮತ್ತು ತಿಳುವಳಿಕೆಯ ಜೊತೆ ಜೊತೆಗೆ ಮಾನಸಿಕವಾಗಿ ಮತ್ತು ಆಧ್ಯಾತ್ಮಿಕವಾಗಿ ಶಾಂತವಾಗಿರುವ ಸ್ಥಿತಿಯನ್ನು ಸೂಚಿಸುತ್ತದೆ. ಮನಸ್ಸಿನ ಶಾಂತಿಯು ಆನಂದ, ಸಂತೋಷ ಮತ್ತು ತೃಪ್ತಿಯೊಂದಿಗೆ ಸಂಬಂಧಿಸಿದೆ. ಜೀವನದ ಸಣ್ಣ ಸಣ್ಣ ಘಟನೆಗಳಲ್ಲಿ ಸಂತೋಷ, ಶಾಂತಿ ಇದೆ, ಇರುತ್ತದೆ.‌ ಅದನ್ನು ನಾವು ಗಮನಿಸಬೇಕು, ಅನುಭವಿಸಬೇಕಷ್ಟೆ!! ಇಂಥಹ ಆಂತರಿಕ ಶಾಂತಿಯಿಂದ ಮಾತ್ರ ನಮ್ಮ ಸಂಸಾರದಲ್ಲಿ ನಿಜವಾದ ವಿಶ್ವಶಾಂತಿ ನೆಲೆಸಲು ಸಾಧ್ಯ. ನಾವು ಶಾಂತಿಯ ವಾತಾವರಣವನ್ನು ಮೊದಲು ನಮ್ಮೊಳಗೆ  ಸೃಷ್ಟಿಸಬೇಕು, ನಂತರ ಕ್ರಮೇಣವಾಗಿ ಇದು ನಮ್ಮ ಕುಟುಂಬಗಳು, ನಮ್ಮ ಸಮುದಾಯಗಳು ಮತ್ತು ಅಂತಿಮವಾಗಿ ಇಡೀ ಜಗತ್ತನ್ನು ಆವರಿಸಲು  ಸಾಧ್ಯ. ಇದು ಸಾಧ್ಯವಾಗಬೇಕಾದರೆ ಕಲೆ, ಸಾಹಿತ್ಯ ಮತ್ತು ಸಂಸ್ಕೃತಿಯ ಪಾತ್ರ ಅವಿಚ್ಛಿನ್ನ. ಇವುಗಳು ಮನುಷ್ಯನಲ್ಲಿ ಸಂಸ್ಕಾರದ ಬೀಜವನ್ನು ಬಿತ್ತುತ್ತವೆ.‌ ತಾಮಸ ವ್ಯಕ್ತಿತ್ವವನ್ನು ಸಾತ್ವಿಕವನ್ನಾಗಿ ಪರಿವರ್ತಿಸುತ್ತವೆ.‌ ಅಂತೆಯೇ “Literature is the garden of wisdom” ಎಂಬ ಅಮೇರಿಕಾದ ನಟ, ನಿರ್ದೇಶಕ ಜೇಮ್ಸ್ ಎಲ್ಲಿಸ್ ಅವರ ಹೇಳಿಕೆ ಸಾಹಿತ್ಯದ ಮಹತ್ವವನ್ನು ಸಾರುತ್ತದೆ. ಸಾಹಿತ್ಯ ಪ್ರತಿ ಭಾಷೆಯ ಅಸ್ಮಿತೆಯಾಗಿದೆ. ಇಂಥಹ ಸಾಹಿತ್ಯದ ಒಂದು ಪ್ರಮುಖ ಅಂಗವಾದ ‘ಗಜಲ್’ ಹಿಂದೆಂದಿಗಿಂತಲೂ ಇಂದು ನಮ್ಮ ಯುವ ಮನಸ್ಸುಗಳನ್ನು ಸೂರೆಗೊಳ್ಳುತ್ತಿದೆ. ಈ ಕಾರಣಕ್ಕಾಗಿಯೇ ಕನ್ನಡ ಸಾರಸ್ವತ ಲೋಕದಲ್ಲಿ ಅಸಂಖ್ಯಾತ ಬರಹಗಾರರು ಗಜಲ್ ಬೆಳದಿಂಗಳನ್ನು ಪ್ರೀತಿಸುತಿದ್ದಾರೆ. ಅವರಲ್ಲಿ ಡಾ. ಮಲ್ಲಿಕಾರ್ಜುನ ಮೇತ್ರಿ ಅವರೂ ಒಬ್ಬರು.

       ಡಾ. ಮಲ್ಲಿಕಾರ್ಜುನ ಸಂಗಪ್ಪ ಮೇತ್ರಿ ಅವರು ೧೯೬೭ರ ಜೂನ್‌ ೦೧ ರಂದು ವಿಜಯಪುರ ಜಿಲ್ಲೆ ಇಂಡಿ ತಾಲ್ಲೂಕಿನ ಪಡನೂರಿನಲ್ಲಿ ಜನಿಸಿದರು. ಇಂಡಿಯಲ್ಲಿ ಪ್ರಾಥಮಿಕ ಶಿಕ್ಷಣ ಪಡೆದ ಇವರು ಕರ್ನಾಟಕ ವಿಶ್ವವಿದ್ಯಾಲಯದಿಂದ ಕನ್ನಡ ವಿಷಯದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಮುಂದೆ ಇವರು ‘ಕರ್ನಾಟಕ ಗಾಂಧಿ ಹರ್ಡೇಕರ ಮಂಜಪ್ಪ ಜೀವನ ಮತ್ತು ಕೃತಿಗಳು’ ವಿಷಯ ಕುರಿತು ಸಂಶೋಧನಾ ಮಹಾಪ್ರಬಂಧವನ್ನು ಮಂಡಿಸಿ ಪಿಎಚ್.ಡಿ. ಪದವಿಯನ್ನು ಪಡೆದಿದ್ದಾರೆ. ಇವರು ‘ಕನ್ನಡಮ್ಮ’ ದಿನಪತ್ರಿಕೆಯಲ್ಲಿ ಉಪ ಸಂಪಾದಕರಾಗಿ ವೃತ್ತಿಯನ್ನು ಆರಂಭಿಸಿ ಪ್ರಸ್ತುತವಾಗಿ ವಿಜಯಪುರದ ಇನಾಮದಾರ ಕಲಾ ಮತ್ತು ವಿಜ್ಞಾನ ಮಹಿಳಾ ಮಹಾವಿದ್ಯಾಲಯದಲ್ಲಿ ಕನ್ನಡ ವಿಭಾಗ ಮುಖ್ಯಸ್ಥರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ವೃತ್ತಿಯಿಂದ ಕನ್ನಡ ಪ್ರಾಧ್ಯಾಪಕರಾದ ಇವರು ತಮ್ಮ ಪದವಿ ಹಂತದಿಂದಲೇ ಸಾಹಿತ್ಯದ ಆಸಕ್ತಿಯನ್ನು ಹೊಂದಿದ್ದು, ಕಾವ್ಯ, ವ್ಯಕ್ತಿ ಚಿತ್ರಣ, ಲೇಖನ, ಜಾನಪದ ಸಾಹಿತ್ಯ, ಸಂಪಾದನೆ ಹಾಗೂ ಗಜಲ್ .. ಸಾಹಿತ್ಯ ಪ್ರಕಾರಗಳಲ್ಲಿ ಆಸಕ್ತಿಯನ್ನು ಹೊಂದಿದ್ದು ಹತ್ತಾರು ಕೃತಿಗಳನ್ನು ರಚಿಸಿ ಕನ್ನಡ ಸಾರಸ್ವತ ಲೋಕಕ್ಕೆ ಅರ್ಪಿಸಿದ್ದಾರೆ. ಅವುಗಳಲ್ಲಿ ‘ಮುದ್ರೆ'(ಕವನ ಸಂಕಲನ),  ಕರ್ನಾಟಕ ಗಾಂಧಿ (ಸಂಶೋಧನಾ ಕೃತಿ), ಕೆ. ಅಮೀನ ಪೇಂಟರ (ವ್ಯಕ್ತಿ ಚಿತ್ರಣ), ಜಾನಪದ ಆಟಗಳು, ಇವುಗಳೊಂದಿಗೆ ಕ್ಯಾಂಪಸ್ಸಿನ ಕವಿತೆಗಳು, ಕಾವ್ಯಸ್ಪಂದನ, ಚಿಂತಾಮಣಿ, ಬೆಳ್ಳಿ ಬೆಳಕು, ಸಂತೃಪ್ತಿ, ಹುಡುಕುದೀಪ, ಹೊಸಗನ್ನಡ ಕವಿತೆಗಳ ಸಂಗ್ರಹ.. ಮುಂತಾದ ಕೃತಿಗಳನ್ನು ಸಂಪಾದಿಸಿದ್ದಾರೆ. ಇನ್ನೂ ‘ಸವಿಸಖಿ’ ಎಂಬ ಗಜಲ್ ಸಂಕಲನವನ್ನು ಪ್ರಕಟಿಸಿದ್ದಾರೆ.

       ಸದಾ ಅಧ್ಯಯನ, ಅಧ್ಯಾಪನ, ಸಾಹಿತ್ಯ, ಸಂಘಟನೆಯಲ್ಲಿ ನಿರತರಾಗಿರುವ ಡಾ. ಮೇತ್ರಿಯವರು ಜಾನಪದ, ಶರಣ ಸಾಹಿತ್ಯ, ಕನ್ನಡ ಸಾಹಿತ್ಯ ಪರಿಷತ್ತಿನಂತಹ ಹಲವಾರು ಸಂಘ-ಸಂಸ್ಥೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡಿದ್ದಾರೆ. ಇವರ “ಹೊಸಗನ್ನಡ ಕವಿತೆಗಳ ಸಂಗ್ರಹ” ಸಂಪಾದಿತ ಕೃತಿಯು ಕ‌.ರಾ.ಮ.ವಿ.ವಿ.ಯ ಬಿ.ಎಸ್ಸಿ ಪ್ರಥಮ ಸೆಮಿಸ್ಟರ್ ಕನ್ನಡ ಪಠ್ಯವಾಗಿದೆ. ಕವಿಗೋಷ್ಠಿ, ಕಮ್ಮಟ, ಕಾರ್ಯಾಗಾರ, ಉಪನ್ಯಾಸದಂತಹ ಅನೇಕ ಸೃಜನಶೀಲ ಕಾರ್ಯಕ್ರಮಗಳಲ್ಲಿ ಭಾಗಿಯಾಗಿದ್ದಾರೆ, ಕವನ ವಾಚನ; ಉಪನ್ಯಾಸ ಮಾಡಿ ಹೆಸರುವಾಸಿಯಾಗಿದ್ದಾರೆ. ಇವರ ಸಾಹಿತ್ಯ, ಸಂಘಟನೆ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳನ್ನು ಗಮನಿಸಿ ಇವರಿಗೆ ನಾಡಿನ ಹಲವಾರು ಪ್ರತಿಷ್ಠಾನಗಳು ಪ್ರಶಸ್ತಿ-ಪುರಸ್ಕಾರ ನೀಡಿ ಗೌರವಿಸಿವೆ. ಅವುಗಳಲ್ಲಿ ‘ಸುವರ್ಣ ಕರ್ನಾಟಕ ರಾಜ್ಯೋತ್ಸವ ಜಿಲ್ಲಾ ಪ್ರಶಸ್ತಿ’, ‘ಸಂಕ್ರಮಣ ಕಾವ್ಯಸ್ಪರ್ಧೆಯ ಪ್ರಶಸ್ತಿ’, ‘ಮಂಗಳ ಸಾಹಿತ್ಯ ವೇದಿಕೆ ಗಂಗಾವತಿಯ ವಿಶೇಷ ಸಾಹಿತ್ಯ ಪ್ರಶಸ್ತಿ’, ‘ರಾಧಾಕೃಷ್ಣ ಉತ್ತಮ ಶಿಕ್ಷಕ ಪ್ರಶಸ್ತಿ’, ‘ಗಜಲ್ ಕಾವ್ಯ ಪ್ರಶಸ್ತಿ’…. ಪ್ರಮುಖವಾಗಿವೆ.

      ಉರ್ದು ಕೋಮಲವೂ ಹೌದು, ಸಂಗೀತಮಯ ಹೌದು. ಇದರಲ್ಲಿ ಪದಗಳು ನಾದಮಯವೂ, ಲಾಲಿತ್ಯಮಯವೂ ಹಾಗೂ ಮೃದುತ್ವದಿಂದಲೂ ಕೂಡಿವೆ. ಇಂಥಹ ಭಾಷೆಯಲ್ಲಿ ವಿಶಿಷ್ಟ ರೂಪ ಪಡೆದ ‘ಗಜಲ್’ ಕಾವ್ಯದ ರಾಣಿಯಾಗಿ ಮೆರೆದಿದ್ದು ಇವಾಗ ಇತಿಹಾಸ. ಪ್ರಸ್ತುತವಾಗಿ ಇದು ಜಗದ ಕಾವ್ಯವಾಗಿ, ಜನರ ಕಾವ್ಯವಾಗಿ ಸಂಸಾರದಾದ್ಯಂತ ನಳನಳಿಸುತ್ತಿದೆ. ಮೃದುವಾದ ಮಾತುಗಳ ಸಂವಹನದಿಂದ ಸಮಾಜದಲ್ಲಿ ಮಧುರತೆ ಬೆಳೆಸಿಕೊಂಡು ಬರುತ್ತಿರುವ ಗಜಲ್ ಇಂದು ಕನ್ನಡದಲ್ಲಿ ಹೆಮ್ಮರವಾಗಿ ಬೆಳೆಯುವ ಲಕ್ಷಣವನ್ನು ಹೊಂದಿದೆ. ಸುಖನವರ್ ಡಾ. ಮಲ್ಲಿಕಾರ್ಜುನ ಮೇತ್ರಿ ಅವರ ಗಜಲ್ ಗಳಲ್ಲಿ ಪ್ರೀತಿ, ಪ್ರೇಮ, ಪ್ರಣಯ, ವಿರಹ, ಎದೆಯ ತಲ್ಲಣ, ಸೌಂದರ್ಯಾನುಭೂತಿ ವಿಷಯಗಳೊಂದಿಗೆ ಬದುಕಿನ ಸರ್ವನೆಲೆಯ ವಸ್ತುಗಳು ಅಭಿವ್ಯಕ್ತಗೊಂಡಿವೆ. ವಾಸ್ತವ ಜಗತ್ತಿಗೆ ಮುಖಾ-ಮುಖಿಯಾಗುವ ಸಂಗತಿಗಳನ್ನು ಗಜಲ್ ಬಂಧದ ವಿಷಮವಾಗಿವೆ. ಇವರ ಗಜಲ್ ಗಳಲ್ಲಿ ದಾಂಪತ್ಯ, ಕಾವ್ಯ, ಕನ್ನಡದ ಪ್ರೀತಿ, ಅಭಿಮಾನ, ಸಂಬಂಧಗಳ ಆಲಿಂಗನ, ಸಿದ್ದಾಂತಗಳ ತಾಕಲಾಟ, ಸಾಮಾಜಿಕ ವ್ಯವಸ್ಥೆಯ ಚಿತ್ರ… ಎಲ್ಲವೂ ಮುಪ್ಪುರಿಗೊಂಡಿವೆ.

ಕನ್ನಡಿಗರೆಲ್ಲ ಕೂಡಿ ಎಳೆಯೋಣ ಕನ್ನಡದ ತೇರ

ಕನ್ನಡದ ಹಾಡು ಹಾಡಿ ಮೆರೆಸೋಣ ಕನ್ನಡದ ತೇರ”

ಈ ಮೇಲಿನ ಷೇರ್ ಅರಬ್ ಸಂಸ್ಕೃತಿ ಪರ್ಷಿಯನ್ ಮಾರ್ಗವಾಗಿ ಉರ್ದು ಮುಖಾಂತರ ಕನ್ನಡದಲ್ಲಿ ಬೆರೆತು ಹೋಗಿರುವುದನ್ನು ಪ್ರತಿಧ್ವನಿಸುತ್ತಿದೆ.‌ ಇಲ್ಲಿ ಗಜಲ್ ಗೋ ಮೇತ್ರಿಯವರು ಕನ್ನಡ ನಾಡು, ನುಡಿಯ ಬಗೆಗಿನ ಪ್ರೀತಿ, ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ. ಇಲ್ಲಿ ಬಳಕೆಯಾದ ‘ಕನ್ನಡದ ತೇರ’ ಎಂಬ ರದೀಫ್ ಇಡೀ ಗಜಲ್ ನ ಸ್ಥಾಯಿ ಭಾವವಾಗಿದೆ.

ಮನುಷ್ಯನ ಯಶಸ್ವಿಗೆ ಮುಂದೆ ಗುರಿ ಇರಬೇಕು, ಹಿಂದೆ ಗುರು ಇರಬೇಕು ಎಂದು ಹೇಳಲಾಗುತ್ತದೆಯಾದರೂ ಅದರೊಂದಿಗೆ ಆ ಗುರಿಯೆಡೆಗೆ ತುಡಿತವಿರಬೇಕು, ಅದನ್ನು ಸಾಧಿಸುವ ಛಲವಿರಬೇಕು ಎಂಬುದನ್ನು ಶಾಯರ್ ಅವರು ಈ ಕೆಳಗಿನ ಷೇರ್ ಮುಖಾಂತರ ಹೇಳಲು ಪ್ರಯತ್ನಿಸಿದ್ದಾರೆ.

ಗುಂಗು ಹಿಡಿಯದ ಹೊರತು ಪೂರೈಸದು ಫಲ

ಬೆನ್ನು ಹತ್ತದ ಹೊರತು ಪಕ್ವವಾಗದು ಫಲ”

‘ಹುಚ್ಚು’ ಎಂಬುದು ಒಂದೇ ಪದವಾಗಿದ್ದರೂ ಅದು ಸ್ಫುರಿಸುವ ಅರ್ಥಗಳ ಗೊಂಚಲು ಅನನ್ಯ.‌ ‘ಹುಚ್ಚು’ ಎಂಬ ಶಬ್ದ ಕಿವಿಗೆ ಬೀಳುತ್ತಲೇ ಹೇಸಿಗೆ ಪಡುವ, ಕಲ್ಲೆಸೆಯುವ, ಅಂತರ ಕಾಪಾಡಿಕೊಳ್ಳುವ, ಗೌರವಿಸುವ, ಅಭಿಮಾನ ಪಡುವ ಮನಸ್ಥಿತಿಗಳು ನಮ್ಮ ಮುಂದೆ ಗೋಚರಿಸುತ್ತವೆ. ಇಲ್ಲಿ ಗಜಲ್ ಗೋ ಅವರು ‘ಗುಂಗು’ ಎನ್ನುವುದನ್ನು ಹುಚ್ಚು, ಫ್ಯಾಶನ್ ಎನ್ನುವ ಅರ್ಥದಲ್ಲಿ ಬಳಸಿ ಸಾಧನೆಯಡೆಗಿನ ಹೆಜ್ಜೆ ಗುರುತುಗಳನ್ನು ಗುರುತಿಸುವ ಪ್ರಯತ್ನ ಮಾಡಿದ್ದಾರೆ.

     ಪ್ರೇಮಿಗಳ ಪಿಸುಮಾತು, ಪ್ರೇಮಿಗಳು ಕಂಗಳಲ್ಲಿ ಮಾತನಾಡುತ ಮುಖದಲ್ಲಿಯೇ ಆಂಗಿಕ ರಸಾನುಭವವನ್ನು ಹೊರಸೂಸುವ, ಹಾವ-ಭಾವಗಳನ್ನು ಶಬ್ದಗಳಲ್ಲಿ ಸೆರೆಹಿಡಿಯುತಿದ್ದ ಗಜಲ್ ಇಂದು ಇಡೀ ಮನುಕುಲದ ಜೀವನಯಾನವನ್ನೆ ಆವರಿಸಿದೆ. ಈ ದಿಸೆಯಲ್ಲಿ ಗಜಲ್ ಗೋ ಡಾ. ಮೇತ್ರಿಯವರಿಂದ ಹೆಚ್ಚು ಹೆಚ್ಚು ಮೌಲ್ಯಿಕ ಗಜಲ್ ಗಳು ರಚನೆಯಾಗಲಿ, ಅವುಗಳು ಸಂಕಲನ ರೂಪ ಪಡೆದು ಸಹೃದಯ ಓದುಗರ ಮನವನ್ನು ತಣಿಸಲಿ ಎಂದು ಪ್ರೀತಿಯಿಂದ ಶುಭ ಕೋರುತ್ತೇನೆ.

“ಪುಸ್ತಕ ಎದೆಗೊತ್ತಿಕೊಂಡಿದ್ದ ಹುಡುಗಿಯು

ನನ್ನ ತಾಕಿದಳು ಜೋರಾಗಿ 

ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ

ನನ್ನ ಹೃದಯ ಮತ್ತು ಆಕೆಯ ಪುಸ್ತಕಗಳು”

-ಅನಾಮಿಕ

      ಮನಸು ತಳಮಳಗಳ ಗೂಡು. ನೆಮ್ಮದಿ ನಮ್ಮನ್ನು ಆವರಿಸಬೇಕಾದರೆ ಗಜಲ್ ಅಶಅರ್ ನ ಪಾತ್ರ ಅನನ್ಯ. ಇಂಥಹ ಗಜಲ್ ಲೋಕದಲ್ಲಿ ವಿಹರಿಸುತ್ತಿರಲು ಹಲವು ಬಾರಿ ಸಮಯವನ್ನೂ ಶಪಿಸಿದ್ದುಂಟು. ಆದರೂ ಆತ ಸಮಯದ ಮುಂದೆ ಮಂಡಿಯೂರಲೆ ಬೇಕಲ್ಲವೇ..ಸೋ, ಅನಿವಾರ್ಯವಾಗಿ ಇಂದು ನನಗೆ ಇಲ್ಲಿಂದ ನಿರ್ಗಮಿಸಲೆಬೇಕಿದೆ, ಮತ್ತೆ ಮುಂದಿನ ಗುರುವಾರ‌ ತಮ್ಮ ಪ್ರೀತಿಯನ್ನರಸುತ ಬರಲು.. ಹೋಗಿ ಬರುವೆ, ಅಲ್ವಿದಾ…ರತ್ನರಾಯಮಲ್ಲ

ರಾವೂರ ಎಂಬುದು ಪುಟ್ಟ ಊರು. ಚಿತ್ತಾವಲಿ ಶಾ ಎಂಬ ಸೂಫಿಯ ದರ್ಗಾ ಒಳಗೊಂಡ ಚಿತ್ತಾಪುರ ಎಂಬ ತಾಲೂಕಿನ ತೆಕ್ಕೆಯೊಳಗಿದೆ. ಕಲಬುರಗಿಯಲ್ಲಿ ಶತಮಾನ ಕಂಡ ನೂತನ ಪದವಿ ಕಾಲೇಜಿನಲ್ಲಿ ಕನ್ನಡ ಪ್ರಾಧ್ಯಾಪಕರಾಗಿರುವ ಡಾ.ಮಲ್ಲಿನಾಥ ತಳವಾರ ಅವರು ಪುಟ್ಟ ರಾವೂರಿನಿಂದ ರಾಜಧಾನಿವರೆಗೆ ಗುರುತಿಸಿಕೊಂಡಿದ್ದು “ಗಾಲಿಬ್” ನಿಂದ. ಕವಿತೆ, ಕಥೆ, ವಿಮರ್ಶೆ, ಸಂಶೋಧನೆ, ಗಜಲ್ ಸೇರಿ ಒಂದು ಡಜನ್ ಗೂ ಹೆಚ್ಚು ಪುಸ್ತಕಗಳನ್ನು ಬರೆದಿದ್ದಾರೆ. ಅವುಗಳಲ್ಲಿ ಜ್ಞಾನಪೀಠಿ ಡಾ.ಶಿವರಾಮ ಕಾರಂತರ ಸ್ತ್ರೀ ಪ್ರಪಂಚ ಕುರಿತು ಮಹಾಪ್ರಬಂಧ, ‘ಮುತ್ತಿನ ಸಂಕೋಲೆ’ ಎಂಬ ಸ್ತ್ರೀ ಸಂವೇದನೆಯ ಕಥೆಗಳು, ‘ಪ್ರೀತಿಯಿಲ್ಲದೆ ಬದುಕಿದವರ್ಯಾರು’ ಎಂಬ ಕವನ ಸಂಕಲನ, ‘ಗಾಲಿಬ್ ಸ್ಮೃತಿ’, ‘ಮಲ್ಲಿಗೆ ಸಿಂಚನ’ ದಂತಹ ಗಜಲ್ ಸಂಕಲನಗಳು ಪ್ರಮುಖವಾಗಿವೆ.’ರತ್ನರಾಯಮಲ್ಲ’ ಎಂಬ ಹೆಸರಿನಿಂದ ಚಿರಪರಿಚಿತರಾಗಿ ಬರೆಯುತ್ತಿದ್ದಾರೆ.’ರತ್ನ’ಮ್ಮ ತಾಯಿ ಹೆಸರಾದರೆ, ತಂದೆಯ ಹೆಸರು ಶಿವ’ರಾಯ’ ಮತ್ತು ಮಲ್ಲಿನಾಥ ‘ ಮಲ್ಲ’ ಆಗಿಸಿಕೊಂಡಿದ್ದಾರೆ. ‘ಮಲ್ಲಿ’ ಇವರ ತಖಲ್ಲುಸನಾಮ.ಅವಮಾನದಿಂದ, ದುಃಖದಿಂದ ಪ್ರೀತಿಯಿಂದ ಕಣ್ತುಂಬಿಕೊಂಡೇ ಬದುಕನ್ನು ಕಟ್ಟಿಕೊಂಡ ಡಾ.ತಳವಾರ ಅವರಲ್ಲಿ, ಕನಸುಗಳ ಹೊರತು ಮತ್ತೇನೂ ಇಲ್ಲ. ಎಂದಿಗೂ ಮಧುಶಾಲೆ ಕಂಡಿಲ್ಲ.‌ಆದರೆ ಗಜಲ್ ಗಳಲ್ಲಿ ಮಧುಶಾಲೆ ಅರಸುತ್ತ ಹೊರಟಿದ್ದಾರೆ..ಎಲ್ಲಿ ನಿಲ್ಲುತ್ತಾರೋ

Leave a Reply

Back To Top