ಅನುವಾದಿತಕವಿತೆ-ಹುತಾತ್ಮನ ತಾಯಿ

ಅನುವಾದ ಸಂಗಾತಿ

ಹುತಾತ್ಮನ ತಾಯಿ

ಉರ್ದು ಮೂಲ : ಮೊಹಮ್ಮದ್ ಯೂನಸ್ ಕೌಲ್ (ಕಾಶ್ಮೀರಿ ಕವಿ)
ತೆಲುಗು ಅನುವಾದ : ಗೀತಾಂಜಲಿ (ಡಾ|| ಭಾರತಿ)
ಕನ್ನಡ ಅನುವಾದ : ಧನಪಾಲ‌ ನಾಗರಾಜಪ್ಪ

WIN-Initiative/Neleman/Getty Images

ಇಷ್ಟಕ್ಕೂ…
ಆ ತಾಯಿಗೆ…
ಈ ಆಪತ್ತನ್ನು ಸಹಿಸಿಕೊ ಅಂತ
ಸಾಂತ್ವನ ಹೇಳಲು ಅಲ್ಲಿ ಯಾರೂ ಇಲ್ಲ
ನಿನ್ನ ಸಹಾನುಭೂತಿಯೋ
ಆಕೆಗೆ ಅದು ಅಗತ್ಯವೇ ಇಲ್ಲ
ನಿನ್ನ ಮಾತುಗಳೆಂದರೆ ಆಕೆಗೆ ಲೆಕ್ಕವೇ ಇಲ್ಲ
ಅಸಲು ಆಕೆ ಯಾರೆಂದುಕೊಳ್ಳುತಿರುವೆ?
ಆಕೆ ಹುತಾತ್ಮನ ತಾಯಿ!
ಒಂದು, ಎರಡು, ಮೂರು, ನಾಲ್ಕು, ಐದು ಹನಿಗಳು
ಹನಿಗಳಾಗಿ ಕಪಟದಿಂದ ಸುರಿಯುವ ನಿನ್ನ ಮೊಸಳೆ ಕಣ್ಣೀರನ್ನೇ…
ಆಕೆ ತನ್ನ ದಿಟ್ಟತನದಿಂದ ಆಶ್ಚರ್ಯಗೊಳಿಸುವಳು, ತಡೆಯುವಳು!
ಆಕೆಗೆ ಯಾಕೆ ಬೇಕು?
ಮೂಕ ಪ್ರೇಕ್ಷಕರ ಕಳ್ಳ ಸಹಾನುಭೂತಿ!

ಕ್ರೂರವಾಗಿ ಕೊಲ್ಲಲ್ಪಟ್ಟ
ತನ್ನ ಗಂಡು ಮಕ್ಕಳು ಉಳಿಸಿದ ನಿರ್ವಾತವನ್ನು
ನಿನ್ನ ಅಲ್ಪವಾದ ಸಹಾನುಭೂತಿಯಿಂದ ತುಂಬಲಾರೆ
ಗಂಡು ಮಕ್ಕಳ ಮರಣದ ದುಃಖವನ್ನು
ಗುಟುಕುಗಳಾಗಿ ನುಂಗು ಎನ್ನಲು
ಆಕೆಗೆ ಮೌನವಾಗಿರು ಎನ್ನಲು
ನಿನಗೆ ಅರ್ಹತೆ ಇಲ್ಲವೇ ಇಲ್ಲ!
ಇಷ್ಟಕ್ಕೂ ಆಕೆ ಏನು ಮಾಡಿದಳೋ ಗೊತ್ತಾ?
ನಿನಗಾಗಿ ಆಕೆಯೂ ಕೂಡ ವರ್ಷಗಳಿಂದ ಕಾಯುತ್ತಿದ್ದಳು!
ಆಕೆಯ ದನಿ ಕೇಳಲು
ಕಳೆದುಕೊಂಡ ತನ್ನ ಹೆಣ್ಣು ಮಕ್ಕಳ ಗೌರವವನ್ನು ದಕ್ಕಿಸಿಕೊಳ್ಳಲು
ನಿನ್ನ ಶತ್ರುವ್ಯೂಹಗಳನ್ನು ಚಿತ್ತು ಮಾಡಲು
ನಿನ್ನನ್ನು ಪೂರ್ತಿಯಾಗಿ ನಿರ್ಮೂಲಿಸಲು
ಕಡೆಗೆ ನಿನ್ನನ್ನು ಶರಣಾಗಿಸಿಕೊಳ್ಳಲು!
ಹೌದು…
ಆಕೆ ಇಷ್ಟು ವರ್ಷಗಳು ಕಾದುನೋಡಿದಳು!
ಆಕೆ ಯಾರೆಂದುಕೊಂಡೆ?
ಆಕೆ ಹುತಾತ್ಮನ ತಾಯಿ!
ಆಕೆಯನ್ನು ಮೌನವಾಗಿರೆನ್ನಬೇಡ!


ಉರ್ದು ಮೂಲ : ಮೊಹಮ್ಮದ್ ಯೂನಸ್ ಕೌಲ್ (ಕಾಶ್ಮೀರಿ ಕವಿ)
ತೆಲುಗು ಅನುವಾದ : ಗೀತಾಂಜಲಿ (ಡಾ|| ಭಾರತಿ)
ಕನ್ನಡ ಅನುವಾದ : ಧನಪಾಲ‌ ನಾಗರಾಜಪ್ಪ

Leave a Reply

Back To Top