ಕಾವ್ಯ ಸಂಗಾತಿ
ಗಜಲ್
ಆಸೀಫಾ
ದಿನವೆಲ್ಲಾ ಕಳೆದು ಹೋದರೂ ನೀನು ಬರಲಿಲ್ಲ
ಜಗವೆಲ್ಲಾ ಕತ್ತಲು ಕವಿದರೂ ನೀನು ಬರಲಿಲ್ಲ
ನಿಟ್ಟುಸಿರಲಿ ನಿಂತ ಸಹನೆ ಬೇಸರಿಸಿ ನರಳುತ್ತಿದೆ
ಭಾವನೆಗಳು ಬಲಿಯಾದರೂ ನೀನು ಬರಲಿಲ್ಲ
ಮಳೆ ಸುರಿಸಿ ಮೋಡ ಹೇಗೆ ನಿಂತಿದೆ ಹಗುರಾಗಿ
ಏಕೋ ಎದೆ ಭಾರವಾದರೂ ನೀನು ಬರಲಿಲ್ಲ
ಇತಿಮಿತಿಗಳ ದಾಟಿ ಮೈಮರೆತಿರುವೆ ನಿನಗಾಗಿ
ಅಗಲಿಕೆಯ ನೋವು ಸಹಿಸಿದರೂ ನೀನು ಬರಲಿಲ್ಲ
ಒಲವಿನ ನಶೆಯಿದೆ ಹೆಚ್ಚಾಗಿದೆ ನಿನ್ನಯ ಬಯಕೆ
ನಿನ್ನ ಪ್ರೇಯಸಿ ನಾನೇ ಎಂದರೂ ನೀನು ಬರಲಿಲ್ಲ
ತುಡಿತವಿದೆ, ಮಿಡಿತವಿದೆ ಬಲು ಹಂಬಲಿಕೆಯೂ ಇದೆ
ನಿರಾಸೆ ಮೊಗವೇರಿ ಮೆರೆದರೂ ನೀನು ಬರಲಿಲ್ಲ
ಮುಂಗುರುಳು ಹಣೆಮೇಲೆ ಲಾಸ್ಯವಾಡುತಿದೆ ಮತ್ತೇರಿ
ಮೋಹದಲಿ ಆಸೀ ಮಿಂದು ನೆಂದರೂ ನೀನು ಬರಲಿಲ್ಲ
ಆಸೀಫಾ
ಸೊಗಸಾಗಿದೆ
ಬಹಳ ಚೆನ್ನಾಗಿದೆ.
ವಾಹ್ವಾ! ಬಹುತ ಖೂಬ್!
Awesom