ಮಹೇಶ್ ಹೆಗಡೆ ಹಳ್ಳಿಗದ್ದೆ-ಮುಕ್ತಕಗಳು

ಕಾವ್ಯ ಸಂಗಾತಿ

ಮುಕ್ತಕಗಳು

ಮಹೇಶ್ ಹೆಗಡೆ ಹಳ್ಳಿಗದ್ದೆ

ಬೆಲ್ಲವದು ಬದುಕಿನಲಿ ಅನುಭವದ ಮಾತುಗಳು
ಅಲ್ಲಗಳೆಯದೆ ನೀನು ಸ್ವೀಕರಿಸು ಬಾಗಿ ||
ಬಲ್ಲವರ ಬೋಧನೆಯ ಸಾರವನು ತಿಳಿಯುತ್ತ
ಎಲ್ಲರೊಳು ಬೆರೆಯುತಿರು – ಅಂತರಾತ್ಮ ||

ಕೆಸರಿನಲಿ ತಾನರಳಿ ಕೊಳೆಯಿಂದ ದೂರವಿದೆ
ಪಸರಿಸುತ ಪರಿಮಳವ ಹೆಸರು ಅರವಿಂದ ||
ನಸುನಗುತ ಕೊಳೆಯನ್ನು ಸರಿಸುತಿರು ಅನುದಿನವು
ಹೊಸತನಕೆ ತೆರೆಯುತಲಿ – ಅಂತರಾತ್ಮ ||

ಚಿತ್ತದೊಳು ಬಿತ್ತಿರುವ ಉತ್ತಮದ ಸಂಸ್ಕಾರ
ಸುತ್ತಿರುವ ಸಂಕೋಲೆ ಬಿಚ್ಚುವುದು ಖಚಿತ ||
ನೆತ್ತಿಯಲಿ ಅನವರತ ಸತ್ಯವನೆ ಚಿಂತಿಸುತ
ಎತ್ತರಕೆ ನಡೆಯುತಿರು – ಅಂತರಾತ್ಮ ||

ದಿನಕರನು ದಿನದಿನವು ಜನಿಸುವನು ಮರೆಯದೆಯೆ
ದಿನಚರಿಯು ಅವನಿಗದು ಬಿಡುವಿರದ ಕೆಲಸ ||
ಮನುಜ ಜನುಮದಲಿ ಜನಿಸಿರುವ ನೀ ಅರಿಯುತಿರು
ಜನುಮ ಜನುಮದ – ಅಂತರಾತ್ಮ ||

ನೋವು ನಲಿವುಗಳೆಲ್ಲ ಬಂದುಹೋಗುವ ಅತಿಥಿ
ಸಾವು ಬರುವನಕ ಸಹಿಸುತಿರು ಅದನೆಲ್ಲ ||
ಜೀವನದ ಪಯಣದಲಿ ಸತ್ಯವನು ಹುಡುಕುತ್ತ
ಸಾವಿನಲಿ ಸುಖಕಾಣು – ಅಂತರಾತ್ಮ ||


ಮಹೇಶ್ ಹೆಗಡೆ ಹಳ್ಳಿಗದ್ದೆ

2 thoughts on “ಮಹೇಶ್ ಹೆಗಡೆ ಹಳ್ಳಿಗದ್ದೆ-ಮುಕ್ತಕಗಳು

  1. ಹೃತ್ಪೂರ್ವಕ ಧನ್ಯವಾದಗಳು

Leave a Reply

Back To Top