ಕಾವ್ಯ ಸಂಗಾತಿ
ಪದಗಳು ಘೇರಾವ್ ಕುಳಿತಿದ್ದಾಗ
ಹರೀಶ ಕೋಳಗುಂದ
ನೆನ್ನೆ ರಾತ್ರಿ
ಇದ್ದಕ್ಕಿದ್ದಂತೆ ಒಮ್ಮೆ ಎಚ್ಚರವಾಯಿತು,
ಮತ್ತೆ ನಿದ್ದೆ ಹತ್ತಲೊಲ್ಲದು.
ಅತ್ತಿತ್ತ ಹೊರಳಾಡಿದೆ, ಬೋರಲು ಮಲಗಿದೆ;
ಊಹೂಂ, ಎಲ್ಲಾ ವ್ಯರ್ಥ ಪ್ರಯತ್ನಗಳು.
ಸರಿ ಒಂದು ಕವಿತೆಯನ್ನಾದರೂ ಬರೆಯೋಣವೆಂದುಕೊಂಡು
ಎದ್ದುಕುಳಿತು, ಎಲ್ಲ ಸಿದ್ಧ ಮಾಡಿಕೊಂಡೆ.
ಖುರ್ಚಿಯ ಮೇಲೆ ನಾನು,
ನನ್ನೆದುರಿಗೊಂದು ಟೇಬಲ್ಲು, ಮೇಲೊಂದು ಬಿಳಿಯ ಹಾಳೆ,
ಶಾಯಿ ತುಂಬಿದ ಪೆನ್ನು, ಅಳಿದುಳಿದ ಮೇಣದಬತ್ತಿ.
ಈಗ ಮೆದುಳಿಗೂ ಹೃದಯಕ್ಕೂ ತಿಕ್ಕಾಟ!
ಯಾರು ಮೊದಲು?
ಹೃದಯದ ಭಾವನೆಗಳ ಹದವಾಗಿ ಕಾಯಿಸಿ ಮೆದುಳಿನಲ್ಲಿ ಎರಕ ಹುಯ್ಯುವುದೆಂದು ಸಂಧಾನವಾಯಿತು.
ಎರಡೂ ಒಪ್ಪಿಕೊಂಡವು.
ಮೆದುಳು ಹೇಳಿತು:
ಶಬ್ಧ ಪದ ವಾಕ್ಯ ಎಲ್ಲಾ ಸರಿಯಿರಬೇಕು.
ಪದಗಳ ಬಹಳ ಜಾಗ್ರತೆಯಿಂದ ಬಳಸಬೇಕು.
ಹೃದಯ ಎಚ್ಚರಿಸಿತು:
ಕವಿತೆಗೊಂದು ಆತ್ಮವಿರಬೇಕು
ಮೊದಲು ಮೆದುಳಿನ ಚಿಲಕ ತೆಗೆದು
ಟಾರ್ಚು ಬಿಟ್ಟು ಹುಡುಕಾಡಿದೆ.
ಅರೆ! ಪದಗಳ ಸುಳಿವೇ ಇಲ್ಲ….
ಏನೋ ಸದ್ದಾಗಿ, ತಕ್ಷಣ ಟೇಬಲ್ಲಿನತ್ತ ತಿರುಗಿದೆ.
ಅದುವರೆವಿಗೂ ಮುಕ್ತಿಕೊಡದೇ
ತಮ್ಮನ್ನು ಬಂಧಿಸಿಟ್ಟಿದ್ದಕ್ಕಾಗಿ
ಪದಗಳೆಲ್ಲಾ ನನ್ನ ವಿರುದ್ಧ ಘೇರಾವ್ ಕುಳಿತಿವೆ!
ಇನ್ನು ಹೃದಯದ ಸರದಿ;
ಬಹಳ ಕಾಲಗಳಿಂದ ಬೀಗ ಜಡಿದಿದ್ದ
ಹೃದಯದ ಕೋಣೆಯ ಬಾಗಿಲು ತೆಗೆಯುತ್ತಿದ್ದಂತೆಯೇ,
ಬಿಡುಗಡೆಗೆ ಹವಣಿಸಿಕೊಂಡಿದ್ದ ನೆನಪುಗಳೆಲ್ಲಾ
ಒಮ್ಮೆಲೇ ಹಾರಿಹೋದವು.
ಇನ್ನು ಉಳಿದವು, ಅಚ್ಚಳಿಯದ ಸಮೃದ್ಧ ಭಾವಗಳು.
ಒಮ್ಮೆ ಸುತ್ತಲೂ ಕಣ್ಣಾಡಿಸಿದೆ.
ಅಪ್ಪನ ಏಟು,
ಅಮ್ಮನ ಕೈತುತ್ತು,
ಬಾಲ್ಯದ ತುಂಟಾಟಗಳು, ತರಚು ಗಾಯಗಳು,
ಗೆಳೆಯರೊಂದಿಗಿನ ಮೋಜು ಮಸ್ತಿ,
ನಲ್ಲೆಯ ಮೊದಲ ಮುತ್ತು,
ಯಾರ್ಯಾರೋ ಹೇಳಿಕೊಂಡ ಗುಟ್ಟುಗಳು,
ಎಲ್ಲೆಲ್ಲೋ ಕಂಡ ಕೇಳಿದ ವಿಸ್ಮಯಗಳು,
ಆಗ ತಾನೇ ಚಿಗುರೊಡೆಯುತ್ತಿರುವ ಕನಸುಗಳು,
ಬತ್ತಿಹೋದ ಬಯಕೆಗಳು,
ಬಿಸಿಲುಗುದುರೆಯಂತಾದ ಕನವರಿಕೆಗಳು,
ಎಲ್ಲಾ ಒಂದರೊಳಗೊಂದು ಬೆಸೆದುಕೊಂಡಿದ್ದವು.
ಸುದ್ದಿ ತಿಳಿದ ತಕ್ಷಣ;
ನಾ ಮುಂದು, ತಾ ಮುಂದು
ಎಂದು ದಾಂಗುಡಿಯಿಡತೊಡಗಿದವು.
ಒಮ್ಮೆಲೇ
ಬುದ್ಧಿ ಜಾಗೃತವಾಯಿತು!
ಪದಗಳು ಬೇರೆ ಘೇರಾವ್ ಕುಳಿತಿವೆಯಲ್ಲಾ….!!
ಇನ್ನು ಕವಿತೆಯ ಕತೆ?!
ಯೋಚಿಸತೊಡಗಿದೆ…
ಕಿಟಕಿಯಾಚೆಯಿಂದ ಬೀಸಿಬಂದ ಜೋರುಗಾಳಿಗೊಮ್ಮೆ,
ಹಚ್ಚಿಟ್ಟ ಮೇಣದಬತ್ತಿ ಆರಿಹೋಗಿ ಕತ್ತಲಾವರಿಸಿತು.
ಭಾವಗಳೆಲ್ಲಾ ಮತ್ತೆ ನನ್ನೊಳಗೇ ಲೀನವಾದವು.
ಪದಗಳ ಗತಿ ಏನಾಯಿತೋ ತಿಳಿಯಲೇ ಇಲ್ಲ!
ಕವಿತೆ ನನ್ನೊಳಗೇ ಉಳಿದಿತ್ತು.
ಟೇಬಲ್ಲಿನ ಮೇಲಿದ್ದ ಬಿಳಿಯ ಹಾಳೆ
ಮೌನವಾಗಿ
ನನ್ನನ್ನೇ ಓದುತ್ತಾ ಕುಳಿತಿತ್ತು
ತುಂಬಾ ಚೆನ್ನಾಗಿದೆ ಹರೀಶ್