ನಿತ್ಯ ಜಗನ್ನಾಥ್ ನಾಯ್ಕ್ಕ ಕವಿತೆ-ಭೂರಮೆಯ ಸೊಬಗು

ಕಾವ್ಯ ಸಂಗಾತಿ

ಭೂರಮೆಯ ಸೊಬಗು

ನಿತ್ಯ ಜಗನ್ನಾಥ್ ನಾಯ್ಕ್ಕ

ರವಿ ಉದಯಿಸುವನು ದಿಗಂತದಲಿ
ಚಿಲಿಪಿಲಿ ಹಕ್ಕಿಗಳ ಗಾಯನ ನಿಸರ್ಗದಲ್ಲಿ
ಹೊಸ ಹುರುಪು ಹೊಸ ಕಳೆಯಿಂದ
ಶುರುವಾಗುವುದು ದಿನ ಸೂರ್ಯಕಿರಣದಿ
ಆಹಾ ಭೂರಮೆಯ ಸುಂದರ ಸೊಬಗಿದು

ಹಸಿರುಟ್ಟ ಧಾತ್ರಿಯ ನೋಡುತಲೇ ತುಂಬಿ ಹೋದವು ಕಂಗಳು
ಜೀವಜಲ ಉದರ ತುಂಬಿ ಪೋಷಿಸುವಳು ಭೂಮಾತೆ
ವಸುಂಧರೆಯ ವಾತ್ಸಲ್ಯಕ್ಕೆ ನಾನೆಂದೂ ಚಿರಋಣಿ
ಶಾಂತವಾಗಿ ಹರಿಯುವ ಶುಭ್ರ ನೀರಿನ ನದಿಗಳು ಮನಸೆಳೆದವು

ಹಚ್ಚ ಹಸಿರಿನ ಕಾನನದ ಸಿರಿಯ ಕಂಡು ನಯನಗಳು ಕಳೆದು ಹೋದವು
ಮನ ಕುಣಿಯತು ನವ ಹರುಷದಿಂದ
ನೂರು ಕನಸುಗಳು ಚಿಗುರಿದವು ಮನದಾಳದಿಂದ
ನೋವನ್ನೆಲ್ಲಾ ದೂರನೂಕುವ ಅದ್ಭುತ ಶಕ್ತಿ
ತುಟಿಯಂಚಲಿ ನಗು ಮೂಡಿಸಿ ಹೊಸ ಚೈತನ್ಯ ನೀಡುವ ಯುಕ್ತಿ
ನಿನ್ನಲ್ಲಿ ಮಾತ್ರ ಇಹುದು ಓ ಪ್ರಕೃತಿ ಮಾತೆ

ಉಸಿರ ನೀಡಿ ಉಳಿಸುವ ಒಡತಿಯು
ಕಹಿ ಕ್ಷಣಗಳ ಅಳಿಸಿ ಸಿಹಿ ನೆನಪು ನೀಡಿದವು ಮಧು ಹೀರುವ ದುಂಬಿಗಳು
ಪ್ರತಿ ಸೋಲಿಗೂ ಹುಮ್ಮಸ್ಸು ನೀಡಿ ಗೆಲಿಸುವ ಭೂರಮೆಯ ನವಿರಾದ ಸ್ಪರ್ಶಗಳು
ಯಾವ ಜನ್ಮದ ನಂಟು, ಈ ಮಣ್ಣಿನ ಒಡಲಿನಲಿ ಜನಿಸಿದ್ದು
ಶಿಶುವಾಗಿ ಇಳೆಯ ಮಡಿಲಿನಲ್ಲಿ ಮಲಗಿದ್ದು

ನಿಸರ್ಗದ ರಮಣೀಯತೆಯ ವರ್ಣಿಸಲಸಾಧ್ಯ
ಪೃಥ್ವಿಯ ಸೊಬಗ ಪದಗಳಲ್ಲಿ ವಿವರಿಸಲಸಾಧ್ಯ
ಅಂದ ಚಂದದಿ ಕಾಣುವ ಭೂರಮೆಯ ಸೌಂದರ್ಯ
ನವವುಲ್ಲಾಸ ನೀಡಿ ಜೀವ ಸಂಕುಲಗಳ ಸಲಹುವ ಇಳೆಯೇ ನಿನಗಿದು ಪ್ರಣಾಮ


Leave a Reply

Back To Top