ಲೇಖನ
ಸವಿತಾ ಇನಾಮದಾರ
ಅಡ್ವಾನ್ಸ್ ಟ್ಯಾಕ್ಸ್
ಎರಡು ವರ್ಷಗಳ ಬಳಿಕ ಈ ಬಾರಿ ಎಲ್ಲರೂ ದೀಪದ ಹಬ್ಬ ದೀಪಾವಳಿಯನ್ನು ಭರ್ಜರಿಯಾಗಿ ಆಚರಿಸಿದ್ದು ನೋಡಿ ತುಂಬಾ ಖುಷಿ ಆಯ್ತು. ಎಲ್ಲೆಡೆಗೂ ದೀಪೋತ್ಸವದ ಸಂಭ್ರಮ. ಆದರೆ ಈ ಹಬ್ಬ ಬರ್ತಾ ಇದೆ ಅಂದ್ರೆ ಹುಬ್ಬು ತಂತಾನೇ ಏರುತ್ತೆ ಅನ್ನೋದಂತೂ ನಿಜ. ಕಾರಣ ಮುಗಿಲಿಗೇರುತ್ತಿದ್ದ ಬೆಲೆಗಳಿಗೆ ಹಗ್ಗಹಾಕಿ ಜಗ್ಗಿದರೂ ಪ್ರಯೋಜನ ಆಗೋದೇ ಇಲ್ಲವಲ್ಲ. ಎಲ್ಲರ ಜೊತೆಗೆ ನಾವೂ ಅಲ್ವಾ?.
ಅಂತೂ ಹಬ್ಬ ಮುಗಿಸಿ ಮೊನ್ನೆ ನಮ್ಮೆಜಮಾನರ ಬಾಲ್ಯದ ಸ್ನೇಹಿತರ ಮನೆಯ ಗೃಹಪವೇಶಕ್ಕೆಹೋಗಿದ್ವಿ. ಎಲ್ಲಿ ನೋಡಿದ್ರೂ ಹೊಸ ಮುಖಗಳೇ. ಹೂಂ..ನಾನು ಒಳಗೆ, ನಮ್ಮವರು ಹೊರಗೆ. ಒಂದು ಸ್ಮೈಲ್ಕೊಟ್ಟು ಯಾರಾದ್ರೂ ಸಿಗ್ತಾರೇನೋ ಅಂತ ನೋಡಿದ್ರೆ..ಊಹೂಂ. ಎಲ್ಲರೂ ತಂತಮ್ಮಲ್ಲೇ ಬಿಝಿ. ಯಾವಾಗಪ್ಪಾ ಊಟಕ್ಕೆ ಹಾಕ್ತಾರೇಂತ ಕಾಯ್ತಾ ಇದ್ದೆ. ಕೊನೆಗೆ “ ರೀ ಊಟಕ್ಕಿನ್ನೂ ತಡವಿದ್ದ ಹಾಗೆ ಕಾಣುತ್ತೆ..ನಾವು ಮನೆಗೆಹೋಗೋಣ್ವಾ?” ಅಂತ ಇವರಿಗೆ ಫೋನ್ಮಾಡಿದ್ರೆ“ ಓಹ್ನೋ…ಇಟ್ಸ್ ಓಕೆ.. ಬಂದಿದ್ದೀವಿ ಅಂದ ಮೇಲೆ ಊಟ ಮುಗಿಸೇ ಹೋಗೋಣಾ” ಅಂದ್ರು. ಇದೇನಪ್ಪಾ ಇವತ್ತು ಹೊಸರಾಗ ಅಂತ ಬಗ್ಗಿ ನೋಡಿದ್ರೆ ನಮ್ಮ ಸಾಹೇಬ್ರು ಯಾರದ್ದೋ ಜೊತೆ ಹರಟ್ತಾ ಕೂತಿದ್ದು ಕಾಣಿಸ್ತು. ಆಯ್ತಲ್ಲ..ಹಳೇ ಗೆಳೆಯರು ಸಿಕ್ರು..ಅದಕ್ಕೆ ಹೆಂಡ್ತಿನ್ನ ಮರತೇಬಿಟ್ರು.
ಎರಡು ವರ್ಷ ಲಾಕ್ಡೌನ್ ಆಗಿದ್ದಕ್ಕೆ ತೆಪ್ಪಗೆ ಮನೆ ಹಿಡಿದು ಕುಳಿತವ್ರಿಗೆ ಈಗ ಹೊಸ ರೆಕ್ಕೆ ಬಂದಂತಾಗಿ ಎಲ್ಲಾ ಸಮಾರಂಭಗಳಿಗೆ ಹೋಗುವ ಹೊಸ ಹುರುಪು ಎಲ್ಲೆಡೆಗೂ ಕಾಣಿಸ್ತಾ ಇತ್ತು. ಪರಿಚಯ ಮಾಡಿಕೊಳ್ಳಬೇಕೂಂತ ಅತ್ತಇತ್ತ ನೋಡಿದೆ..ಊಹೂ…ಎಲ್ಲರೂ ಬಿಝಿ. ಸರಿ, ನಾನು ಒಂದು ಕುರ್ಚಿ ಹತ್ತಿ,ಚೇರ್ಮೆನ್ ಆಗಿ ತೆಪ್ಪಗೆ ಕುಳಿತೆ..ಹೊರಗೆ ಹೋದಾಗ ಕೇವಲ ಸೆಲ್ಫೀ ಒಂದ್ಬಿಟ್ರೇ ಬೇರೇನೂ ನೋಡೋ ಅಭ್ಯಾಸವಿಲ್ಲದ ನಾನು ಇಂದು ಗತ್ಯಂತರವಿಲ್ಲದೇ ಮೊಬೈಲ್ ತೆರೆದೆ.
ಅಲ್ಲೇ ಸ್ವಲ್ಪ ದೂರದಲ್ಲಿ ಕುಳಿತು ಹರಟೆ ಹೊಡೆಯುತ್ತಿದ್ದ ಇಬ್ಬರು ಗೆಳತಿಯರ ಮಾತುಗಳು ಬೇಡಬೇಡವೆಂದರೂ ನನ್ನ ಕಿವಿಗೆ ಬಿದ್ದವು. ತುಂಬಾ ದಿನಗಳ ನಂತರ ಭೇಟಿಯಾಗಿದ್ರೂಂತ ಕಾಣಿಸುತ್ತೆ. ತಮ್ಮ ಮನೆಯ ಎಲ್ಲಾ ಸುದ್ದಿಯನ್ನ ಚಾಚೂ ತಪ್ಪದೆ ಹೇಳಿಕೊಳ್ತಾ ಇದ್ದುದ್ದನ್ನ ನೋಡಿ ನನಗೂ ಮಾತನಾಡಬೇಕೆನಿಸ್ತಾ ಇತ್ತು ರೀ. ಆದ್ರೆ ನನ್ನ ಕಡೆಗೆ ಅವ್ರು ನೋಡ್ಲೇ ಇಲ್ಲ. ಬೆಪ್ಪಳ ಹಾಗೆ ಕೇಳ್ತಾ ಕೂತೆ.
ಅವರಲ್ಲಿ ಒಬ್ಬರು“ರೀ ಗೀತಾ ದೀಪಾವಳಿ ಜೋರಾ? ನೋಡಿ…ಈ ಬಾರಿ ನಾನಂತೂ ಡಿಜ಼ೈನರ್ ಸೀರೇನೇ ಕೊಂಡು ಕೊಂಡಿದ್ದೀನಿ. ಯಾವಾಗ್ಲೂ ಜರತಾರಿ ರೇಶ್ಮೆಸೀರೆ ಉಟ್ಟೂ, ಉಟ್ಟೂ ಬೇಸ್ರ ಬಂದುಬಿಟ್ಟಿದೆ ರೀ’ ಅಂದ್ರೆ“ಅಯ್ಯೋ.ರಮ್ಯಾ, ಆ ಡಿಜ಼ೈನರ್ ಸೀರೆಗಳು ತುಂಬಾ ದುಬಾರಿ ಕಣ್ರೀ. ಮತ್ತೆ ದಿನಕ್ಕೊಂದು ಫ್ಯಾಷನ್ನು, ಡಿಜೈನು ಬದಲಾಗ್ತಾ ಇರುತ್ತೆ. ಅದೂ ಅಲ್ಲದೆ ಆ ಡಿಜೈನರ್ ಸೀರೆಗಳನ್ನ ನಾವು ಪಾತ್ರೆ ಮಾರೋವ್ರಿಗೆ ಕೊಡ್ತೀವಲ್ಲಾ, ಆ ಹಳೇ ಸೀರೆಗಳನ್ನೇ ಕತ್ತರಿಸಿ, ಪ್ಯಾಚ್ ಹಚ್ಚಿ ಶೋರೂಮುಗಳಲ್ಲಿ ನೇತು ಹಾಕಿ ನಮಗೆ ಮೂರು ನಾಮ ಎಳೀತಾರೆ. ಸುಮ್ನೆ ಕಾಂಜೀವರಮ್ಮೋ ಇಲ್ಲಾ ಧರ್ಮಾವರಮ್ಮೋ ಕೊಂಡೊಳ್ಳಿ. ಅವೇ ಎವರ್ಗ್ರೀನ್ ಸಾರೀಜು” ಅಂದ್ರು. ನನಗೂ ಅವರ ಮಾತಿನಲ್ಲಿ ದಮ್ಮಿದೆ ಅನಿಸ್ತು. ಇನ್ನಷ್ಟು ಕಿವಿ ಉದ್ದಕ್ಕೆ ಬಿಟ್ಟೆ.
“ಅಲ್ಲಾರೀ ಗೀತಾ…ನೀವಂತೂ ತುಂಬಾ ಲಕ್ಕೀ ಕಣ್ರಿ. ಮಗಳನ್ನ ವ ಇಂಜಿನಿಯರ್ ಮಾಡಿಸಿದ್ದೂ ಆಯ್ತು.ಅವಳಿಗೆ ತಕ್ಕ ವರ ತಂತಾನೇ ಹುಡುಕಿಕೊಂಡು ಮನೇವರೆಗೆ ಬಂದದ್ದೂ ಆಯ್ತು. ಭಾರೀ ಅದೃಷ್ಟವಂತರು … ಮತ್ತೆ ಮದ್ವೆ ಯಾವಾಗ?”
ಅದಕ್ಕೆ ಆಕೆ ನಿರಾಸಕ್ತಿಯಿಂದ ‘ಹೂಂ…ಹೌದು ರೀ…ಎಲ್ಲಾ ನಮ್ಮ ಅದೃಷ್ಟಾನೇ ಅನಬೇಕು..ಮದ್ವೆ ಮಾರ್ಚ್ ತಿಂಗಳಲ್ಲಿ ಇಟ್ಕೊಂಡಿದ್ದೀವಿ.” ಅಂದ್ರು. ರಮ್ಯಾ ಆಶ್ಚರ್ಯದಿಂದ “ಯಾಕ್ರೀ ಗೀತಾ…ಏನಾಯ್ತು? ಯಾಕೋ ನಿಮ್ಮ ಮುಖ
ಸಪ್ಪಗಾಯ್ತಲ್ಲಾ? ಅಬ್ಬಾ…ಇಷ್ಟು ಕೇಳಿದ್ದೇ ಸಾಕು ನೋಡಿ…ಗೀತಾಯಣ ಶುರುವಾಯ್ತು. ಅಲ್ಲಾ…ನೀವೇ ಹೇಳಿ, ಕೇಳೋವ್ರಿದ್ದಾಗ ತಾನೇ ಹೇಳೋದಕ್ಕೆ ಮಜಾ ಬರೋದು?? ಸರಿ ಏನು ಹೇಳ್ತಾರೇಂತ ನನ್ನ ಕುರ್ಚಿ ಸದ್ದಾಗದಂತೆ ಅವರ ಹತ್ರಕ್ಕೆ ಜರುಗಿಸಿದೆ.
“ಹೂಂ…ನೋಡ್ರೀ ರಮ್ಯಾ, ನಮ್ಮ ಗೌರಿಗೆ ಒಳ್ಳೇ ಸಂಬಂಧ ಸಿಕ್ಕಿದೇಂತ ಭಾರೀ ಖುಷಿಯಲ್ಲಿದ್ವಿ. ಹುಡುಗನ ಕಡೆಯವ್ರಂತೂ ನಮ್ಮದೇನೂ ಡಿಮಾಂಡ್ ಇಲ್ಲ, ನಿಮ್ಮ ಮಗಳಿಗೇನು ಕೊಡಬೇಕು ಅನಿಸುತ್ತೋ ಅದನ್ನಷ್ಟೇ ಹಾಕಿದ್ರೆ ಸಾಕು ಅಂದಿದ್ರು. ನಮಗಂತೂ ತುಂಬಾ ಸಮಾಧಾನ ಆಗಿತ್ತು. ಒಳ್ಳೇ ಮನೆತನ,ವಿದ್ಯಾವಂತ ತಂದೆ- ತಾಯಿ, ಹೀರೋನ ತರಹ ಕಾಣಿಸುವ ಅಳಿಯ, ಮತ್ತೆ ಒಬ್ಬನೇ ಮಗ, ಇರೋದೂ ಡೆಲ್ಲಿಯಲ್ಲೇ. ಅಂದ ಮೇಲೆ ಇನ್ನೇನು ಬೇಕು ಹೇಳಿ?ನಾವು ಮಾಡೋದೆಲ್ಲಾ ಇರೋ ಈ ಇಬ್ಬರು ಹೆಣ್ಣುಮಕ್ಕಳಿಗೆ ತಾನೆ?” ಅದಕ್ಕೆರಮ್ಯಾ “ಹೌದು ರೀ ಗೀತಾ…ಮುಂದೆ??’ ಅಂದಾಗ ಸೆರಗನ್ನು ಸೊಂಟಕ್ಕೆ ಕಟ್ಟುತ್ತಾ ಗೀತಾ, “ಹೂಂ…ಮುಂದೇನಾಯ್ತೂಂತ ಕೇಳಿ ಮತ್ತೆ’ ನನ್ನ ಕಿವಿಗಳೂ ಉದ್ದವಾದವು.
‘ಮೊನ್ನೆ ಗೌತಮನ ಸೋದರತ್ತೆ ಮತ್ತು ಚಿಕ್ಕಮ್ಮ ಬಂದಿದ್ರು. ಗೌತಮ್ ಅಂದ್ರೆ ನಮ್ಮ ಭಾವೀ ಅಳಿಯ. ‘ಗೌತಮ್..ಹೆಸ್ರೂ ಚೆನ್ನಾಗಿದೆ ಬಿಡೀ’ ಅಂತ ಮಧ್ಯದಲ್ಲೇ ಬಾಯಿ ಹಾಕಿದ್ರು ರಮ್ಯಾದೇವಿ.
’ಅವ್ರು ಬಂದಾಗ ಏನಾಯ್ತು ಗೊತ್ತಾ?’…’ಏನಾಯ್ತು ರೀ ಗೀತಾ’ ಅಂತ ರೆಪ್ಪೆಗಳನ್ನ ಪಟಪಟನೇ ಬಡಿದಾಗ ನಾನೂ ನೋಡ್ತಾನೇ ನಿಂತೆ..ಅದೆಷ್ಟು ಒಯ್ಯಾರ ಮಾಡ್ತಾಳಪ್ಪಾ ಅಂತ ಅನಿಸದೇ ಇರಲಿಲ್ಲ. ಕೆಲವ್ರಿಗೆ ಚಿಕ್ಕವ್ರು ಅಂತ ತೋರಿಸೋ ಹುಚ್ಚಿರುತ್ತೆ ನೋಡಿ..ಹೂ..ಏನೂ ಮಾಡೋಕಾಗೋದಿಲ್ಲ ಬಿಡಿ…ಆದರೆ ಗೀತಾಳಿಗೆ ಇದ್ರ ಕಡೆಗೆಲ್ಲಾ ಗಮನಾನೇ ಇರಲಿಲ್ಲ. ಆಕೆ ‘ಆಗ ಶುರುವಾಯ್ತು ನೋಡಿ ಅವರ ಡಿಮಾಂಡು.” ಅಂದ್ರು. ರಮ್ಯಾ ದೊಡ್ಡಕಣ್ಣುಗಳನ್ನು ತಿರುಗಿಸುತ್ತಾ.” ಓ…ಏನಂತೆ ಅವ್ರ ಡಿಮಾಂಡು??” ಅಂದ್ರೆ“ಏನಿಲ್ಲಾ…ನಮ್ಮಕ್ಕನಿಗೆ ಇರೋನು ಒಬ್ಬನೇ ಮಗ. ಮದ್ವೆ ಆಗಿ ಮುಂದೆ ವಿದೇಶಕ್ಕೆ ಏನಾದ್ರೂ ಹೋದ್ರೆ??’ ಅಂತ ಗೌತಮನ ಚಿಕ್ಕಮ್ಮ ಹೇಳಿದ್ರೆ ಅವನ ಸೋದರತ್ತೆ ‘ಆವಾಗ ನಮ್ಮ ಅತ್ತಿಗೆಗೆ ಯಾವ ಹಬ್ಬಾನೂ ಆಚರಿಸೋಕೆ ಆಗೋದಿಲ್ಲಾ ಅಲ್ವೆ ಪಾಪ, ಹ್ಯಾಗೂ ನಾವೆಲ್ಲಾರೂ ಈವಾಗ ದೆಹಲಿ ನೋಡೋಕೇಂತ ಬಂದಿದ್ದೀವಿ. ಅದಕ್ಕೆ ನೀವು ಈ ಸಲಾನೇ ದೀಪಾವಳಿ ಹಬ್ಬಾ ಮಾಡಿಬಿಡಿ’ ಅಂದ್ರಮ್ಮಾ ರಮ್ಯಾ’ ಅಂದಾಗ ಅವಳ ಕೈಯಲ್ಲಿದ್ದ ಪರ್ಸ್ಜಾರಿ ಬಿತ್ತು.
“ಹಾಂ…ಇದ್ಯಾವ ಸೀಮೆ ಜನಾರೀ??ಮದುವೆಗೆ ಇನ್ನೂ ನಾಲಕ್ಕು ತಿಂಗಳು ಇವೆ, ಮದ್ವೆಗೂ ಮುಂಚೆನೇ ಯಾರಾದ್ರೂ ಅಳಿಯತನ ಮಾಡ್ತಾರಾ? ಆಂದ್ರು. ಗೀತಾ ಉತ್ತರಿಸುತ್ತ “ಅಯ್ಯೋ ಸೀಮೇ-ಗೀಮೆ ಹೋಗ್ಲಿ ರಮ್ಯಾ…ಎಲ್ಲರಿಗೆ ಏನೇನು ಕೊಡಬೇಕೂಂತ ಒಂದು ಉದ್ದದ ಲಿಸ್ಟು ಬೇರೆ ಕೊಟ್ರು…ಎಲ್ಲರಿಗೂ ಡಿಸೈನರ್ ಸೀ೯ರೆಗಳೇ ಬೇಕಂತೆ. ಒಬ್ಬರಿಗೆ ‘ರಿತು’ಕುಮಾರದ್ದಂತೆ, ಇನ್ನೊಬ್ರಿಗೆ ಸತ್ಯಾಪೌಲ್ ಮತ್ತೆ ಚಿಕ್ಕವಳಿಗೆ ಮಸಾಬಾಗುಪ್ತಾಳ ಡಿಸೈನರ್ಸೀರೇನೇ ಕೊಡಬೇಕಂತೆ. ನಾನು ಡೆಲ್ಲೀಲೇ ಇದ್ರೂನೂ ಮೊದಲಿನವ್ರು ಹೆಸರು ಕೇಳಿ ಗೊತ್ತು, ಈ ಮಾಸಾಬಾ- ಗೀಸಾಬಾ ಯಾರೋ ಅಳಲನ್ನ ತೋಡಿಕೊಂಡ್ರೆ ಅದರೆಡೆಗೆ ಗಮನ ಕೊಡದ ರಮ್ಯಾ ಭಾರೀ ಖುಶಿಯಿಂದ ನಗುತ್ತ –
”ರೀ ಗೀತಾ, ಅಯ್ಯೋ… ಮಾಸಾಬಾ ಯಾರೂಂತ ಗೊತ್ತಿಲ್ವೇನ್ರೀ ನಿಮಗೇ. ರೀ ಆಕೆ ಅದೇ ನಮ್ಮ ಹಿಂದಿ ಸೀರಿಯಲ್ಲಿನ ನೀನಾಗುಪ್ತಾ…ಹಾ… ನೆನಪಾಯ್ತಾ…ಇಲ್ವಾ…ಹೋಗ್ಲಿಬಿಡೀ…ಹಾ…ಖಳನಾಯಕದಲ್ಲಿ‘ಕ್ಕು..ಕ್ಕುಕ್ಕ..ಚೋಲೀ ಕೆ ಪೀಛೇ ಕ್ಯಾಹೈ’ ಅಂತ ಮಾಧುರಿ ದೀಕ್ಷಿತ್ ಹಿಂದೆ ದುಪ್ಪಟ್ಟಾ ಹಾಕ್ಕೊಂಡು ಕುಣೀತಿದ್ಲು ನೋಡೀ…ಆ ನೀನಾಗುಪ್ತಾ’ ಅಂತ ಕೊಕ್ಕರೆಯ ಹಾಗೆ ಗೋಣು ಅಲುಗಾಡಿಸಿ ತೋರಿಸಿಲ್ದು.. ಹಹಹಹ…ನನಗೋ ಭಾರೀ ನಗು ಬಂದಿತ್ತು..ಆದ್ರೆ ಮುಂದಿನ ಸುದ್ದಿ ಕೇಳೋ ಸಲುವಾಗಿ ಮುಖ ಕೆಳಗೆ ಹಾಕಿ ನಕ್ಕೆ. ಕೆಲವ್ರು ಮಾತಿನ ಭರದಲ್ಲಿ ತಾವೆಲ್ಲಿದ್ದೀವಿ ಅನ್ನೋದನ್ನೇ ಮರೀತಾರೆ. ಆದ್ರೆ ನನಗೋ ಭಾರೀ ಮಜಾ ಬರೋಕೆ ಶುರುವಾಗಿತ್ತು. ಮುಂದಿನ ಮಾತುಗಳ ಹೊಸಹೊಸ ಸೀನುಗಳ ಸವಿರುಚಿಗಾಗಿ ಕಾಯ್ತಾ ಕೂತೆ.
ಆದ್ರೆಗೀತಾಳಿಗೆ ಆ ನೀನಾಗುಪ್ತಾಳಲ್ಲಿ ಆಸಕ್ತಿಇರಲಿಲ್ಲಾ…ಆದ್ರೆ ರಮ್ಯಾ ಬಿಡಬೇಕಲ್ಲ…ತನ್ನ ಮಾತನ್ನಮುಂದುವರೆಸುತ್ತಾ- ‘ಆ ನೀನಾಗುಪ್ತಾ ಮತ್ತೆ…ಮತ್ತೆ ಆ ವಿವ್ರಿಚರ್ಡೂ ಅದೇರೀ…ವೆಸ್ಟ್ಇಂಡೀಜ್ ಕ್ರಿಕೆಟ್ ಪ್ಲೇಯರ್ರು…ಭಾರೀ ಒಳ್ಳೇ ಬ್ಯಾಟ್ಸ್ಮನ್ನು…ಈಕೆ ಅವರಿಬ್ಬರಿಗೆ ಹುಟ್ಟಿದ ಮಗಳು ಕಣ್ರಿ” ಅಂತ ಗಾಸಿಪ್ ರಾಣೀ ರಮ್ಯಾ ತನಗೆಲ್ಲಾ ಭಾರೀ ಗೊತ್ತಿದ್ದವರಂತೆ ಹುಬ್ಬು-ಕಣ್ಣು ಹಾರಿಸುತ್ತ ಹೇಳಿದ್ಲು. ಒಂದು ರೀತಿಯಲ್ಲಿ ನನ್ನ ಸಾಮಾನ್ಯಜ್ಞಾನ ಬೆಳೀತಾ ಹೋಯ್ತು ಅನ್ನಿ. ಅದೂ ಅಲ್ಲದೇ ಮಾಡೋದಕ್ಕೆ ಕೆಲ್ಸಾ ಇರಲ್ಲಾ ನೋಡಿ, ಆವಾಗ ಇಂಥ ಸುದ್ದಿಗಳು ಭಾರೀ ಕಚಗುಳಿ ಇಡ್ತಾವೆ ಅಲ್ವಾ…ಸರಿ,ಅದ್ಯಾವಾಗಮ್ಮ ನೀನಾಗುಪ್ತಾ ಬಾಯಿ ಮದ್ವೆಯಾದ್ಲೂಂತಕೇಳೋತವಕದಲ್ಲಿ ನಾನಿದ್ರೆ ನಮ್ಮ ಗೀತಮ್ಮಂಗೆ ಮಾತ್ರಾ ಅದನ್ನ ಕೇಳಿಸಿಕೊಳ್ಳೋ ವ್ಯವಧಾನ ಇರಲಿಲ್ಲ.
“ಅಯ್ಯ ರಮ್ಯಾ, ಅವಳನ್ನ ಬಿಡ್ರೀ… ಇಲ್ಲಿ ಮುಂದೇನಾಯ್ತೂಂತ ಕೇಳ್ರೀ’ ಅಂತ ತಮ್ಮ ಪುರಾಣ ಮುಂದುವರೆಸಿದ್ರು. ರಮ್ಯಾಗೆ ಸ್ವಲ್ಪ ಪಿಚ್ಚೆಸಿತು…ಜೊತೆಗೆ ನನಗೂ ಕೂಡ…ಆದ್ರೆ ಗೀತಾಳ ಮಾತನ್ನ ಕೇಳದೇ ಮಾರ್ಗವೂ ಇಲ್ಲವಲ್ಲ… ‘ಸರಿ ಹೇಳಿ ಗೀತಾ ಮುಂದೇನಾಯ್ತೂಂತ’ ಸೊಂಡಿ ಉದ್ದಕ್ಕೆ ಮಾಡುತ್ತ ಕೇಳಿದಳು ರಮ್ಯಾ.
ಗೀತಾ ಸ್ವಲ್ಪ ಮುಂದಕ್ಕೆ ಸರಿಯುತ್ತ ’ಇವ್ರದಷ್ಟೇ ಅಲ್ಲದೇ ಅವ್ರ ದೊಡ್ಡಪ್ಪ,ಚಿಕ್ಕಪ್ಪಂಗೆ ಮಾನ್ಯವರ್ನಿಂದಾನೋ ಇಲ್ಲಾ ಕುರ್ತಾಪ್ಯಾಲೇಸಿಂದ ಸ್ಪೆಷಲ್ ಕುರ್ತಾ ತರಬೇಕಂತೆ. ಅವರ ಅಪ್ಪಂಗೂ ಅಂಥದ್ದೇ ತಂದ್ರೂ ಪರವಾಗಿಲ್ಲ ಅಂದ್ರು.”ಓಹೋ ಹಾಗೇನು..ಮತ್ತೆ ಗೌತಮನ ತಾಯಿಗೆ?” ಅಂತ ರಮ್ಯಾ ಮಧ್ಯಕ್ಕೆ ಬಾಯಿ ಹಾಕಿದ್ರು. “ಅಯ್ಯೋ ಮತ್ತೆ ಅವ್ರನ್ನ ಹ್ಯಾಗ್ರೀ ಬಿಡ್ತಾರೆ? ಚಿಕ್ಕಮ್ಮಾಹೇಳಿದ್ರು-ನೋಡಿಗೀತಾಕ್ಕಾ, ನಮ್ಮಕ್ಕ ಕಾಂಜೀವರಮ್ ಬಿಟ್ರೆ ಬೇರೆ ಯಾವುದೇ ಸೀರೆನಾ ಉಡೋದಿಲ್ಲ.. ಅವ್ಳಿಗೆ ನಲ್ಲಿಯಲ್ಲೇ ತೊಗೊಂಡುಬಿಡಿ ಅಂದ್ರು. ರಮ್ಯಾಬಾಯ್ಹಾಕ್ಕುತ್ತಾ“ಮುಂದೆ?’
’ಮುಂದೆ!!! ಮುಂದೇನಾಯ್ತು ಗೊತ್ತಾ.?’ಅಂತ ಜೋರಾಗಿ ನಗಲಾರಂಭಿಸಿದರು ಗೀತಾ…
ಓಹೋ ಸ್ಟೋರಿ ಮೆ ಟ್ವಿಸ್ಟ್ ಆಯಾ’ ಅಂತ ನಾನೂ ಎದ್ದೇ ನಿಂತೆ…ಕೆಟ್ಟ ಕುತೂಹಲದ ಹುಳ ಕಡಿಯೋಕೆ ಶುರುವಾದ್ರೆ ಹೀಗೆ ನೋಡಿ…ಆವಗ್ಲೇ ನಮ್ಮವ್ರ ಕಾಲ್ ಬರಬೇಕಾ… ಮುಲಾಜಿಲ್ಲದೇ ಕಟ್ಮಾಡೇಬಿಟ್ಟೆ… ಕ್ಲೈಮಾಕ್ಸ್ ಟೈಮಿನಲ್ಲಿ ಕಾಲ್ ಬಂದ್ರೆ ಹ್ಯಾಗ್ರೀ ಎತ್ತೋದು? ಹಹಹ…ಅಷ್ಟೇ ಅಲ್ಲಾ ನನಗೇ ತಿಳಿಯದ ಹಾಗೆ ನಾನು ಅವ್ರ ಹಿಂದೇನೇ ಹೋಗಿ ನಿಂತಿದ್ದನ್ನ ನೋಡಿ ನಾಚಿಕೆಯಾಯ್ತು…ಬಟ್ಈವಾಗ ಅವಕ್ಕೆಲ್ಲಾ ನೋ ಟೈಮ್…ಕಮಾನ್.ಲೆಟ್ಸ್ಹಿಯರ್ ಅಂತ ನನ್ನ ಬ್ರೇನಿಗೆ ಹೇಳಿ ಫೋನ್ನೋಡೋ ಥರ ಅವ್ರ ಹಿಂದೆನೇ ನಿಂತೆ.
ಗೀತಾ ಖುಶಿಯಲ್ಲಿ ಚಪ್ಪಾಳೆ ಹೊಡೆದು ಜಯಭೇರಿಯ ನಗುನಗುತ್ತ“ಅವರೆಲ್ಲರಮಾತನ್ನ ಕೇಳ್ತಾ ರೂಮಲ್ಲೇ ಕೂತಿದ್ದ ನನ್ನ ಮಗಳು ಹೊರಗೆ ಬಂದವಳೇ. “ಮಮ್ಮಾ…ಇದೇ ಈಗ ಗೌತಮ್ ಕಾಲ್ಮಾಡಿದ್ರು’ ಅಂದಾಗ ನಾನು ಹೌಹಾರಿ- ಏನಂತೆ ಗೌರೀ…ಗೌತಮನದ್ದೂ ಮತ್ತೇನಾದ್ರೂ ಡಿಮಾಂಡ್ ಇದೆಯಾ? ಅಂತ ಹತಾಶಳಾಗಿ ಕೇಳಿದ್ರೆ, ಆಕೆ ನನ್ನ ಬಳಿ ಬಂದು ಬೆನ್ನ ಮೇಲೆ ಮೃದುವಾಗಿ ಒತ್ತುತ್ತಾ, ಕಣ್ಣಲ್ಲಿ ಸನ್ನೆಮಾಡುತ್ತಾ, – ಇಲ್ಲ ಮಮ್ಮಾ..ಅವ್ರು ಹೇಳಿದ್ರು ನನ್ನ ಅತ್ತೆ ಮತ್ತು ಚಿಕ್ಕಮ್ಮ ನಿನಗೆ ಒಂದು ಗೋಲ್ಡ್ಸೆಟ್ ಹಾಕಬೇಕೂಂತಿದ್ದಾರಂತೆ. ಆದ್ರೆ ಅವ್ರಿಗೆ ಎಂಥದ್ದು ಕೊಂಡುಕೊಳ್ಳಬೇಕೂಂತ ತಿಳೀತಾ ಇಲ್ಲವಂತೆ’ ಅಂದಾಗ ಅವ್ರಿಬ್ಬರ ಬಾಯಿಯಿಂದ ದೊಡ್ಡ ಉದ್ಗಾರ ಅಷ್ಟೇ ಕೇಳಿಸ್ತು. ಆದ್ರೆ ನನ್ನ ಮಗಳೂ ಬಿಡಬೇಕಲ್ಲ…‘ಮಮ್ಮಾ, ನನಗೆ ಗೋಲ್ಡ್ ಜೂವೆಲರಿಗಿಂತಾನೂ ಡೈಮಂಡ್ಸೆಟ್ಸ್ ಅಂದ್ರೆ ತುಂಬಾ ಇಷ್ಟ ಅಂತ ಗೌತಮನಿಗೂ ಗೊತ್ತು…ಅದಕ್ಕೆಅವ್ರಂದ್ರು–’ಅತ್ತೆಗೆ ಹೇಳು…ಗೋಲ್ದ್ಸೆಟ್ ಬೇಡ ಅಂತ. ಅವ್ರೇನೂ ತಪ್ಪು ತಿಳ್ಕೊಳ್ಳೋದಿಲ್ಲಾ.’ ಅಂತ ಅಂದಾಗ ಅತ್ತೆ ಮತ್ತೆ ಚಿಕ್ಕಮ್ಮ ಹಾಗಲಕಾಯಿ ತಿಂದವರಂತೆ ಮುಖ ಮಾಡಿದ್ರು.
ಚಟ್ಟನೇ ಎದ್ದು ನಿಲ್ಲುತ್ತಾ ರಮ್ಯಾ- ‘ಓಹೋ,ಮುಂದೇನಾಯ್ತುಗೀತಾ’ ರಮ್ಯಾಳಿಗೀಗ ತಡೆಯೋಕಾಗಲಿಲ್ಲ.
‘ನಿಲ್ಲಿ ರಮ್ಯಾ…ಹೇಳ್ತೀನಿ ಹೇಳ್ತೀನಿ…ನಮ್ಮ ಗೌರಿ ಅವರಿಬ್ಬರ ಬಳಿ ಹೋಗಿ ಪ್ರೀತಿಯಿಂದ‘ಆಂಟಿ, ಗೌತಮ್ ಏನು ಹೇಳಿದ್ರು ಗೊತ್ತಾ, ಅಲ್ವೇ ಗೌರೀ, ಕಳೆದ ತಿಂಗಳೇ ನಿಮ್ಮ ಏರಿಯಾದಲ್ಲಿ ಹೊಸಮಾಲ್ ಓಪನ್ ಆಗಿದೆಯಲ್ಲ..ಅಲ್ಲಿ ತನಿಷ್ಕ್ ಡೈಮಂಡ್ ಜುವೆಲರಿ ಶೋರೂಮ್ ಓಪನ್ ಆಗಿವೆ. ಹೇಗೂ ಅವ್ರಿಬ್ಬರೂ ಬಂದಿದ್ದಾರೆ, ಅವ್ರನ್ನೂ ಕರೆದುಕೊಂಡು ಹೋಗಿ ನಿನಗೆ ಇಷ್ಟವಾದ ಸೆಟ್ಟನ್ನ ನೀನೇ ಸೆಲೆಕ್ಟ್ಮಾಡು ಅಂತ ಹೇಳಿದ್ರು’..ಹಹಹ…ಇಷ್ಟುಕೇಳಿದ್ದೇ ಸಾಕು…ಅವರಿಬ್ಬರ ಮುಖ ಇಳಿದೇಹೋಯ್ತು…
ಕುಳಿತವರು ಶಾಕ್ ತಟ್ಟಿದವರಂತೆ ಚಟಕ್ಕನೇ ಎದ್ದು ‘ಓ…ಹೌದಾ ಗೌರಿ, ನಿನಗೆ ಡೈಮಂಡೇ.ಇಷ್ಟಾನಾ… ಸರಿ ಸರಿ ನಾಳೆ ನಾವು ಅಕ್ಕನ ಜೊತೆಗೆ ಬರ್ತೀವಿ’ ಅಂತ ಇಬ್ಬರೂ ಗಡಬಡಿಸುತ್ತ,ಕುಂಕುಮಾಕೊಡ್ತಿನಿ ತಾಳಿ ಅಂದ್ರೂನೂ ಕೇಳಿಸಿಕೊಳ್ಳದೇ ಓಡೇ ಹೋದ್ರು.’ ಅಂತ ಚಪ್ಪಾಳೆ ತಟ್ಟಿ ನಗಲಾರಂಭಿಸಿದರು.
”ಹಹಹ.ಭಾರೀ ಜಾಣೆ ನಿಮ್ಮ ಗೌರಿ ಮುಂದೆ??’ ನಗುತ್ತ ರಮ್ಯಾಕೇಳಿದಾಗ “ಮುಂದೇನು…ಅವರ ಎಲ್ಲಾ Advance Tax ಡಿಮಾಂಡ್ನನ್ನ ಮಗಳ ಡೈಮಂಡ್ಸೆಟ್ಟಿನ ಡಿಮಾಂಡಿನ ಮುಂದೆ ಗಾಯಬ್ ಆಯ್ತು…ಮತ್ತೆ ಅಲ್ಲಿ ನೋಡಿ ನಮ್ಮಗೌರಿ- ಗೌತಮ್ ಬರ್ತಾಇದ್ದಾರೆ” ಅಂತ ಹೆಮ್ಮೆಯಿಂದ ತನ್ನ ಮಗಳು ಭಾವಿಅಳಿಯನತ್ತ ನೋಡುತ್ತಾ ನಿಂತಾಗ ನಾನೂ ಅವರ ಸಂತೋಷದಲ್ಲಿ ಭಾಗಿಯಾದೆ.
ತಿಳವಳಿಕೆಯ ಹೊಸಪೀಳಿಗೆಗೆ ಶಹಬ್ಬಾಸ್ ಅಂತ ಮನದಲ್ಲೇ ಬೆನ್ನು ಚಪ್ಪರಿಸುತ್ತ ಅಪ್ಪ-ಅಮ್ಮನ ಮನಸನ್ನ ಅರಿಯುವಂಥ ಮಕ್ಕಳು ಎಲ್ಲರಿಗೂ ಕೊಡಪ್ಪ ದೇವ್ರೇ ಅಂತ ಬೇಡಿಕೊಂಡೆ.
ಅಂದ ಹಾಗೆ ನೀವೆಲ್ಲರೂ ಅಡ್ವಾನ್ಸ್ ಟ್ಯಾಕ್ಸx ತುಂಬಿದ್ದೀರಿ ತಾನೆ??
ಸವಿತಾ ಇನಾಮದಾರ