ಒಂದು ಸಲ ನನ್ನ ಕೈಬಿಡು
ಜಯಂತಿ ಸುನಿಲ್
ಅಂದ ಹಾಗೆ ಕೇಳಿಲ್ಲಿ..
ಒಂದೇ ಒಂದು ಸಲ ನನ್ನ ಕೈಬಿಡು..
ಜಗವ ನೋಡಲು
ಮೌನ ಮುರಿಯಲು
ಮುರಿದ ನಂಬಿಕೆಗೆ ಹೊಸ ವ್ಯಾಖ್ಯಾನ ಹುಡುಕಲು..
ನಿನ್ನ ಪ್ರೀತಿಯಲ್ಲದ ಪ್ರೀತಿಯಲ್ಲಿ
ಅದೆಷ್ಟು ದಿನ ಪ್ರೇಮಿಯ ಪಾತ್ರ ವಹಿಸಲಿ..?
ಧಗಿಸುವ ಕೆಂಡವನ್ನು ಸೆರಗಲ್ಲೇ ಅದೇಗೆ ಬಚ್ಚಿಡಲಿ..?
ಒಂದು ಸಲವಾದರೂ
ನನ್ನೆದೆಯಲಿ..
ಕನಸು ಹುಟ್ಟಿಸುವವರು
ಬೆಂದ ಹೂವನು ನಗಿಸುವವರು
ನೊಂದ ಹಾಡನು ಮೀಟುವವರು..
ಯಾರಾದರೂ ಇದ್ದಾರೆಯೇ ನೋಡಬೇಕಿದೆ!!
ಒಬ್ಬರಿಗೊಬ್ಬರು ಕಾಣಿಸದಷ್ಟು ಕತ್ತಲೆಯನ್ನು ನಮ್ಮೊಳಗೆ ಸೃಷ್ಟಿಸಿದ ಕೀರ್ತಿ ನಿನ್ನದು..
ಈಗ ಈ ಸುರಿಯುವ ಸಂಜೆಯಲಿ ಒಂಟಿತನ ಅನುಭವಿಸುವ ಬಯಕೆ ನನ್ನದು..
ಬದುಕಿನ ಕಡತದಲ್ಲಿ ಇನ್ನುಳಿದ ದಿನಗಳ ನನಗಾಗಿ ಮೀಸಲಿಡಬೇಕೆನ್ನಿಸುತ್ತಿದೆ..!!
ತಡೆಯಬೇಡ ನನ್ನಾ..
ಪ್ರೀತಿಸುವಾಗಲೂ ಬಾರದ ಒಳಮಾತುಗಳು ಏನನ್ನೋ ಹೇಳಬಯಸುತ್ತಿದೆ..
ಈ ಭೂಮಿ ಆಗಸದ ಸಾಕ್ಷಿಯಲಿ
ಮೋಹಕ್ಕೆ ಬಲಿಯಾದವರ ವೃತ್ತಾಂತ ಎದುರಿಗೆ ನಿಂತಂತಿದೆ..!!
ನೋಡೀಗ…
ನನ್ನನ್ನೇ ನಾನು ಮರೆಯುತ್ತಿದ್ದೇನೆ ಈಗೀಗ..
ಪ್ರೀತಿಯ ವ್ಯಾಮೋಹಕ್ಕೆ ಮಕಾಡೆ ಮಲಗಿದವರ ಸಪ್ಪೆತನ ಮೀರಲೆಂದೇ..
ಮೊದಲ ಬಾರಿಗೆ ತೆರೆದ ಮನಸ್ಸಿನಿಂದ
ಹಾಡಬೇಕೆನ್ನಿಸುತ್ತಿದೆ
ಬರೆಯಬೇಕೆನ್ನಿಸುತ್ತಿದೆ
ಆಯುಧವಾಗಬೇಕೆನ್ನಿಸುತ್ತಿದೆ
ನ್ಯಾಯಯುತ ಪ್ರೀತಿಗಾಗಿ ಹೋರಾಡಬೇಕೆನ್ನಿಸುತ್ತಿದೆ..!!
ಕಣ್ಣು ಮೀಟಬೇಡವೋ ಹುಡುಗ..ನನ್ನ ಕೈಬಿಡು
ಬುಧ್ಧ ನೆನಪಾಗುತ್ತಿರುವನು
ಎಲ್ಲೆ ಮೀರಿದ ಎಲ್ಲವೂ ವ್ಯರ್ಥವೆನಿಸುತ್ತಿರುವುದು..
ಭಾವನೆಗಳ ಆದ್ರತೆಯಲ್ಲಿ ಬೆಂದು ನೊಂದು ಜೀವನದ ಕೊನೆಯ ತಿರುವು ನನಗಾಗಿ ಕಾದಿಹುದು..!!
ಹೇಗೆ ಹೇಳಲಿ ಹುಡುಗಾ..?
ನನ್ನಲ್ಲಿ ಪ್ರತಿಕ್ಷಣ ಆವರಿಸುವ ನೀನೆಂಬ ಭಾವೋದ್ವೇಗಕ್ಕೆ ಮತ್ತೆ ಬಲಿಯಾಗಲಾರೆ…
ಬಹಳ ಕಾಲದಿಂದ ಮನಸ್ಸಿನಲ್ಲಿ ಹೊತ್ತ ನಿನ್ನ ಭಾರವನ್ನು ಮರಳಿ ಹೊರಲಾರೆ..!!
ಈಗಲಾದರೂ ದಾರಿಬಿಡು
ಮಸುಕು ಕವಿಯುವುದರೊಳಗೆ ಬಿಟ್ಟುಕೊಡು
ಇಲ್ಲಿಯೇ ನನ್ನನ್ನು ಬಿಟ್ಟುಬಿಡು
ಒಂದೇ ಒಂದು ಸಲ ನನ್ನನ್ನು ನಾನು ಪ್ರೀತಿಸಲು..
ಕತ್ತಲಿನಿಂದ ಬೆಳಕಿನೆಡೆಗೆ ಪಯಣಿಸಲು…
ನಿನಗೆ ಋಣಿ ಕಣೋ ಹುಡುಗಾ..
ಈಗಲಾದರೂ ನನ್ನ ಕೈಬಿಟ್ಟಿದ್ದಕ್ಕೆ…
ಪಂಜರದ ಗಿಳಿಗೆ ಮುಕ್ತಿ ನೀಡಿದ್ದಕ್ಕೆ…!!
ಜಯಂತಿ ಸುನಿಲ್
Super Dear …Keep it up
ಕವಿತೆ ಚಂದ,
ಸೂಪರ್ ಮೇಡಂ
ಚಂದವಾಗಿದೆ
ಹೆಣ್ಣಿನ ಅಳಲು ಎನ್ನುವುದಕ್ಕಿಂತ , ” ತನ್ನತನ ಬಿತ್ತುವ ಹೆಬ್ಬಯಕೆ ” ನನಗಿಲ್ಲಿ ಕಂಡಿತು