ಅಂಕಣ ಸಂಗಾತಿ
ಸುಜಾತಾ ರವೀಶ್ ರವರ ಲೇಖನಿಯಿಂದ
ಸಂಗಾತಿಯ ಸಾಂಗತ್ಯ
೨೦೧೯ ಅಕ್ಟೋಬರ್ …..ಮುಖ ಪತ್ರಿಕೆಯಲ್ಲಿ ಪರಿಚಿತರಾಗಿದ್ದ ಕು ಸ ಮಧುಸೂದನ್ ಅವರ 1 ಪ್ರಕಟಣೆ ನೋಡಿದೆ.ಹೊಸದಾಗಿ ಆರಂಭಿಸಲಾಗುತ್ತಿರುವ ಸಂಗಾತಿ ಬ್ಲಾಗ್ ಪತ್ರಿಕೆಗೆ ಬರಹಗಳನ್ನು ಆಹ್ವಾನಿಸಿದ್ದ ಪೋಸ್ಟ್ ಅದು . ಮೊಟ್ಟಮೊದಲಿಗೆ ಆಗತಾನೆ ಬರೆಯಲು ಆರಂಭಿಸಿದ್ದು ಕವಿತೆಗಳಿಂದ ಬರಹಗಳತ್ತ ಹೊರಳುತ್ತಿದ್ದ ಸಂಧಿಕಾಲ . ಅಲ್ಲದೆ ಬ್ಲಾಗ್ ಪತ್ರಿಕೆ ಅಂದರೆ ಏನು ಎಂಬುದು ತಿಳಿದಿರಲಿಲ್ಲ . ಇದುವರೆಗೂ ಯಾವೊಂದು ಪತ್ರಿಕೆಗಾಗಲಿ ಎಲ್ಲಿಗಾಗಲೀ ಬರಹಗಳನ್ನು ಕಳಿಸದಿದ್ದುದರಿಂದ ಇರುವ ಕವನಗಳನ್ನು ಕಳಿಸಿದರಾಯಿತೆಂದು ಮೆಸೆಂಜರ್ ನಲ್ಲಿ ಕವನಗಳನ್ನು ಕಳುಹಿಸಬಹುದಾ ಎಂದು ಕೇಳಿದೆ . ಅವರ ವಾಟ್ಸ್ ಆ್ಯಪ್ ನಂಬರ್ ಕೊಟ್ಟು ಈ ನಂಬರ್ ಗೆ ನಿಮ್ಮ ಬರಹ ಕವಿತೆಗಳನ್ನು ಕಳುಹಿಸಿ ಪ್ರಕಟಿಸಲು ಸಾಧ್ಯವೇ ನೋಡುವೆ ಎಂದರು . ಆಕಾಶ ಮಲ್ಲಿಗೆ ಕುರಿತಾದ ನನ್ನದೊಂದು ಲಲಿತ ಪ್ರಬಂಧವನ್ನು ಹಾಗೂ 1ಕವಿತೆಯನ್ನು ಮೊದಲಿಗೆ ಕಳಿಸಿದೆ .ಸಂಗಾತಿಯ ಮೊಟ್ಟ ಮೊದಲ ಸಂಚಿಕೆಯಲ್ಲೇ ನನ್ನ ಲಲಿತಪ್ರಬಂಧ ಪ್ರಕಟವಾಗಿತ್ತು ನನಗೂ ಹೊಸ ಬ್ಲಾಗ್ ಬರಹಗಾರಳೆಂಬ ಪಟ್ಟ ದೊರಕಿಸಿಕೊಟ್ಟಿತು .ಅದರ ಮುಂದಿನ ಸಂಚಿಕೆಯಲ್ಲಿ ಕವನವು ಸಹ ಪ್ರಕಟವಾಗಿತ್ತು .
ಅದೇ ಹುಮ್ಮಸ್ಸಿನಲ್ಲಿ ದೀಪಾವಳಿಯ ಬಗೆಗಿನ 1ಲೇಖನ ಕಳಿಸಿದರೆ ಖಡಕ್ ಉತ್ತರ ಧಾರ್ಮಿಕ ಲೇಖನಗಳನ್ನು ನಮ್ಮ ಪತ್ರಿಕೆಯಲ್ಲಿ ಪ್ರಕಟಿಸಲಾಗುವುದಿಲ್ಲ ಎಂದು. ಹೀಗೆ ಪತ್ರಿಕೆಯ ಬಗ್ಗೆ ಸ್ಪಷ್ಟ ಖಚಿತ ಅಭಿಪ್ರಾಯಗಳನ್ನಿಟ್ಟುಕೊಂಡು ಯಾವುದೇ ಇಸಂ ಗಾಗಲೀ ವಾದಕ್ಕಾಗಲಿ ವಾಲಿಕೊಳ್ಳದೇ ಧರ್ಮಾತೀತ ಜಾತ್ಯಾತೀತ ಹಾಗೂ ರಾಜಕೀಯ ಅತೀತವಾದ ಪತ್ರಿಕೆ ನಡೆಸಿಕೊಂಡು ಬರುತ್ತಿರುವ ಸಂಪಾದಕರು ಸ್ಪಷ್ಟ ನಿಲುವಿನ ಖಡಕ್ ಮಾತಿನ ನೇರ ನಿಷ್ಟುರ ಸ್ವಭಾವದವರು ಎಂದು ನನ್ನ ಮಾಮೂಲಿನ ಪ್ರಾಸಬದ್ಧ ಕವಿತೆಗಳನ್ನು ಬೇಡ ಎಂದು ನಿರಾಕರಿಸಿದಾಗಲೇ ಸ್ಪಷ್ಟವಾಗಿತ್ತು . ಹೊಸ ತರಹದ ಲೇಖನಗಳನ್ನು ಕವಿತೆಗಳನ್ನು ಪ್ರಕಟಿಸುವ ಪತ್ರಿಕೆ ನನ್ನ ಗಜಲ್ಗಳಿಗೆ ಪ್ರಕಟನೆಯ ಮೂಲಕ ಮನ್ನಣೆ ನೀಡಿದ್ದು ಪುರಸ್ಕಾರ ಬಂದಂತಾಗಿತ್ತು.
ಎಲ್ಲಾ ಅಂಕಣಗಳನ್ನು ತಪ್ಪದೆ ಓದುವ ನಾನು ಶ್ರೀದೇವಿ ಕೆರೆಮನೆಯವರ ಪುಸ್ತಕ ಪರಿಚಯದಲ್ಲಿ ಅನುವಾದಿತ ತೇರಾವೋ ಕಾದಂಬರಿ ಪರಿಚಯವನ್ನು ನೋಡಿ ಓದಲೇಬೇಕೆಂದು ಪುಸ್ತಕವನ್ನು ಹುಡುಕಿ ಕೊಂಡು ಓದಿದ್ದು 1ವಿನೂತನ ಅನುಭವ .ಮಹಾದೇವ ಭಟ್ ಕಾತಿಲ ಅವರ ಕವಿತೆಯ ಬಗೆಗಿನ ಅಂಕಣವು ನನ್ನ ಮೆಚ್ಚಿನ ಅಂಕಣ ಗಳಲ್ಲೊಂದು .
ಹಾಗೆಂದು ಕಹಿ ಅನುಭವ ಆಗೇ ಇಲ್ಲ ಅಂತಿಲ್ಲ . ಒಮ್ಮೆ ಜನಪ್ರಿಯ ಲೇಖಕಿಯೊಬ್ಬರ ಪುಸ್ತಕ ಪರಿಚಯವನ್ನು ಕಳಿಸಿದ್ದರೆ ಸಾರಾಸಗಟಾಗಿ ಕಾರಣ ಕೊಡದೆ ನಿರಾಕರಿಸಿದ್ದರು . ಆದರೆ ಅದೇ ಲೇಖಕಿಯವರ ಮತ್ತೊಂದು ಪುಸ್ತಕ ವಿಮರ್ಶೆ ಪ್ರಕಟವಾಗಿತ್ತು . ಆದರೆ ಇದನ್ನು ನಕಾರಾತ್ಮಕವಾಗಿ ತಿಳಿದುಕೊಳ್ಳದೆ ಮುಂದೆ ಪುಸ್ತಕ ವಿಮರ್ಶೆಯ ಕಾರ್ಯವನ್ನು ಬಿಡದೆ ಮುಂದುವರಿಸಿ ಈಗ ಸಂಗಾತಿ ಪತ್ರಿಕೆಯಲ್ಲಿಯೇ ಪುಸ್ತಕ ಸಂಗಾತಿ ಅಂಕಣ ಬರೆಯುತ್ತಿರುವುದು ನನಗೆ ತುಂಬ ಹೆಮ್ಮೆ ಹಾಗೂ ಖುಷಿ ಕೊಟ್ಟ ವಿಷಯ .
ಮೊದಲ ವರ್ಷದಲ್ಲಿ ಅಂಕಣಕ್ಕೆ ಅವಕಾಶ ಇರಲಿಲ್ಲ . ಎರಡನೆಯ ವರ್ಷ ಇದ್ದಕ್ಕಿದ್ದಂತೆ ನನ್ನನ್ನು ಅಂಕಣ ಬರೆಯಿರಿ ಎಂದು ಕೇಳಿದಾಗ ನನ್ನ ನೆನಪಿನ ದೋಣಿಯಲಿ ಅಂಕಣ ಆರಂಭವಾಯಿತು . ಈಗ ಇನ್ನೇನು ಸುವರ್ಣೋತ್ಸವ ಆಚರಿಸಲಿರುವ ಈ ಅಂಕಣ ಬರಹಗಾರಳಾಗಿ ನನಗೆ ತುಂಬಾ ಸಂತೋಷ ಕೊಟ್ಟಿರುವ ಲೇಖನಗಳು .
ಗಾಂಧಿ ಜಯಂತಿ ಸ್ವಾತಂತ್ರ್ಯೋತ್ಸವ ಮಹಿಳಾ ದಿನಾಚರಣೆ ಇಂತಹ ವಿಶೇಷ ದಿನಗಳಲ್ಲಿ ವಿಶೇಷ ಬರಹಗಳನ್ನು ಆಹ್ವಾನಿಸಿ ಪ್ರಕಟಿಸುವ ಸಂಪಾದಕರ ಅದಮ್ಯ ಚಿರಂತನ ನಿರಂತರ ಉತ್ಸಾಹ, ಆಸಕ್ತಿ ನಿಜಕ್ಕೂ ನನ್ನಲ್ಲಿ ಬೆರಗು ಹುಟ್ಟಿಸಿದೆ . ಬೇರೆ ಯಾವ ಕಡೆಯಿಂದಲೂ ಪ್ರೋತ್ಸಾಹವಿರದೆ ಏಕಾಂಗಿಯಾಗಿ ಅದು ಅಂಥ ಕುಗ್ರಾಮದಲ್ಲಿ ಕುಳಿತು ಇವರು ಮಾಡುತ್ತಿರುವ ಈ ಪತ್ರಿಕೆಯ ಪ್ರಕಟಣೆ ಗಮನಾರ್ಹ ಹಾಗೂ ಪ್ರಶಂಸನೀಯ .
ಹೀಗೆ ಸಂಗಾತಿ ಪತ್ರಿಕೆ ಮೊದಲ ಸಂಚಿಕೆಯಿಂದ ಅದರೊಂದಿಗೆ ಇರುವುದರಿಂದಲೋ ಏನೋ 1 ರೀತಿ ಆತ್ಮೀಯ ಭಾವನೆ ಬೆಸೆದುಕೊಂಡಿದೆ
ಈ ಮಧ್ಯೆ ಬಂದ ಕೆಲ ಲೇಖನಗಳ ಪ್ರೂಫ್ ರೀಡಿಂಗ್ ಕೆಲಸವನ್ನು ನನಗೆ ವಹಿಸಿರುವಾಗ ಸಂತೋಷದಿಂದಲೇ ಮಾಡಿಕೊಟ್ಟಿದ್ದೇನೆ . ಕರೋನಾ ದಲ್ಲಿ ಬಿಡುವಿನ ಕಾಲ ಬಂದಾಗ ಸಂಪಾದಕ ಕು ಸ ಮಧುಸೂದನ ಅವರ ‘ಇ’ ಬುಕ್ ಗಾಗಿ ಅವರ ಕಥೆಗಳ ಪ್ರೂಫ್ ರೀಡಿಂಗ್ ಮಾಡಿ ಕೊಟ್ಟ ಸಂತಸವೂ ನನಗಿದೆ..
ಇಂದಿಗೆ 3 ವರ್ಷಗಳು ತುಂಬಿ ನಾಲ್ಕನೆಯ ವರ್ಷಕ್ಕೆ ಕಾಲಿಡುತ್ತಿರುವ ಸಂದರ್ಭದಲ್ಲಿ ಪತ್ರಿಕೆಯೊಡನಿನ ನನ್ನ ಒಡನಾಟವನ್ನೇ ನೆನಪಿನ ದೋಣಿಯ ಒಂದು ಅಂಕಣವನ್ನಾಗಿಸಬಾರದೇಕೆ ಎಂಬ ಉದ್ದೇಶದೊಂದಿಗೆ ಇಂದಿನ ಸಂಚಿಕೆ. “ಸಂಗಾತಿಯೊಡನೆ ಸಾಂಗತ್ಯ”.
ಪತ್ರಿಕೆ ಇದೇ ರೀತಿ ಯಶಸ್ಸಿನ ಹಾದಿಯಲ್ಲಿ ನಡೆದು ರಜತ ಸುವರ್ಣ ಅಮೃತ ಶತಕ ಸಂಭ್ರಮಗಳನ್ನು ಕಾಣಲಿ ಎಂಬ ಹರಕೆ ಹಾರೈಕೆ
ಸುಜಾತಾ ರವೀಶ್
ಭಾರತೀಯ ಜೀವ ವಿಮಾ ನಿಗಮದಲ್ಲಿ ಸೇವೆ ಸಲ್ಲಿಸುತ್ತಿರುವ ಎನ್ ಸುಜಾತ ಅವರ ಕಾವ್ಯನಾಮ ಸುಜಾತಾ ರವೀಶ್ . 1 ಕವನ ಸಂಕಲನ “ಅಂತರಂಗದ ಆಲಾಪ” ಪ್ರಕಟವಾಗಿದೆ. “ಮುಖವಾಡಗಳು” ಕವನ ಕುವೆಂಪು ವಿಶ್ವವಿದ್ಯಾನಿಲಯದ ಎರಡನೇ ಬಿ ಎಸ್ ಸಿ ಯ ಪಠ್ಯದಲ್ಲಿ ಸ್ಥಾನ ಪಡೆದುಕೊಂಡಿವೆ. ಕವನದ ವಿವಿಧ ಪ್ರಕಾರಗಳು, ಕಥೆ ,ಲಲಿತ ಪ್ರಬಂಧ, ಪುಸ್ತಕ ವಿಮರ್ಶೆ ಹೀಗೆ ವಿವಿಧ ಪ್ರಕಾರಗಳಲ್ಲಿ ಕೃಷಿ ಸಾಧಿಸುತ್ತಿರುವ ಇವರ ರಚನೆಗಳು ವಿವಿಧ ಬ್ಲಾಗ್ ಗಳು, ಬ್ಲಾಗ್ ಪತ್ರಿಕೆ, ನಿಯತಕಾಲಿಕೆ ಹಾಗೂ ವೃತ್ತ ಪತ್ರಿಕೆ ಹಾಗೂ ಪರಿಷತ್ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ವೃತ್ತಿ ಹಾಗೂ ಪ್ರವೃತ್ತಿಯ ಮಧ್ಯೆ ಸಮತೋಲನ ಸಾಧಿಸಿಕೊಂಡು ಬರವಣಿಗೆಯಲ್ಲಿ ತೊಡಗುವ ಬಯಕೆ ಲೇಖಕಿಯವರದು