ಒಲವ ಹಾಯಿದೋಣಿ–ಪ್ರಭಾವತಿ ದೇಸಾಯಿ

ಪುಸ್ತಕ ಸಂಗಾತಿ

ಒಲವ ಹಾಯಿದೋಣಿ-ಪ್ರಭಾವತಿ ದೇಸಾಯಿ

 ಪ್ರಭಾವತಿ ದೇಸಾಯಿವರಒಲವ ದೋಣಿಯಲ್ಲಿ  ವಿಹರಿಸಿದ ಒಂದು ಸವಿ ಅನುಭವ  ..!! ನಿಮ್ಮಗಳ ಗ್ರಹಿಕೆ ಮತ್ತು ಅಭಿಪ್ರಾಯಕ್ಕಾಗಿ…

ಮಾತಿನ ಮಾಂತ್ರಿಕ ,  ಸಂಘಟನೆಯ ಚತುರ   ನಮ್ಮ ಸೇಡಂ ನ ಸಾಹಿತ್ಯ ಲೋಕದ ಸರಪಂಚಕ  ಮಹಿಪಾಲ್ ರೆಡ್ಡಿ ಮನ್ನೂರು  ರವರ  ಲೇಖನಿಯಲ್ಲಿ ಒಲವ ಹಾಯಿ ದೋಣಿ ಮುನ್ನುಡಿಯೊಂದಿಗೆ  ಓದುಗನ ಎದೆಯಂಗಳದ ಕದವನ್ನು ಪ್ರೀತಿಯಿಂದಲೇ ತೆರದುಕೊಳ್ಳುತ್ತದೆ ಎಂಬುದು  ಪ್ರಭಾ ಅಮ್ಮನ ಈ ಶೇರ್ ವಿಶ್ಲೇಷಣೆಯಿಂದಲೇ   ತಿಳಿಯಬಹುದು..,.

ಮೋಡದೊಡಲ ಒಲವ ಜಲಧಾರೆ ಇಳೆ ಝಳ ಕರಗಿತು

ತನು ಕಾವೇರಿದೆ ನಲ್ಲನ ತಂಪು ಅಪ್ಪುಗೆಯಿಲ್ಲದೆ

ಒಲವಿನ ಜೊತೆಗೆ ಅನುಸಂಧಾನಕ್ಕಿಳಿಯುವುದು ಯಾವುದು ? ಮೋಹವಾ… ಪ್ರೇಮವಾ.. ಪ್ರೀತಿಯಾ .. ಇಳೆಯ ಝಳವೇ  ಕಾವೇರಿದ ತನುವಾ…. ನಲ್ಲನ ಅಪ್ಪುಗೆಯಾ…?  ಎಂಬ ಪ್ರಶ್ನೇಗಳನ್ನು ಹುಟ್ಟು ಹಾಕಿ ಸಂಕಲನದ ಅಂತರಾತ್ಮದ  ದನಿಯನ್ನು ಓದುಗ ಗಮನಿಸುವಂತೆ ಮುನ್ನುಡಿಗೆ ಶ್ರೀಕಾರ ಹಾಕಿದ್ದಾರೆ ಮೈನಾ !!

ನನಗೆ ಪ್ರಭಾ ಅಮ್ಮ ತಮ್ಮ ಹೊಸ ಪ್ರಕಟಿತ ಸಂಕಲನವನ್ನು  ಕಳುಹಿಸಿ ಪ್ರೀತಿಯಿಂದ ಓದಿಗೆ ಹಚ್ಚಿ ಸಾಹಿತ್ಯದ ಅಭಿರುಚಿ ಹೆಚ್ಚುವಂತೆ ಮಾಡುವ ಇವರ ಔದಾರ್ಯ ದೊಡ್ಡದು . ತಮ್ಮ ಎಪ್ಪತೈದರ ಇಳಿ ವಯಸ್ಸಿನಲ್ಲೂ ಇಷ್ಟೊಂದು ಉತ್ಸಾಹಭರಿತವಾಗಿ ಸಾಹಿತ್ಯದ ಕೃಷಿಯಲ್ಲಿ ತೊಡಗಿಸಿಕೊಂಡು ಚೂರೂ  ಸ್ವಾರ್ಥವಿಲ್ಲದೆ ಕನ್ನಡಮ್ಮನ ಮೇಲಿನ ಪ್ರೀತಿಯಿಂದ  ಕನ್ನಡ ಸಾಹಿತ್ಯದ ಪರಿಚಾರಕರಾಗಿ ಕಾರ್ಯ ನಿರ್ವಹಿಸುತ್ತಿರುವುದನ್ನು ನಾವು ಅಭಿನಂದಿಸಲೇ ಬೇಕು. ಈ ಮೊದಲಿನ ಸಂಕಲನಗಳನ್ನು ಓದಿ  ಅಭಿಪ್ರಾಯಿಸುವ ಸಂದರ್ಭದಲ್ಲಿ ನಾನು ಶ್ರೀಮತಿ ಪ್ರಭಾವತಿ ದೇಸಾಯಿ ಯವರ ಬದುಕು ಮತ್ತು ಬರಹಗಳ ಬಗೆಗಿನ ವಿವರಗಳನ್ನು ಹಂಚಿಕೊಂಡಿರುವೆ. ಹಾಗಾಗಿ ಇಲ್ಲಿ ಅದು ಅಪ್ರಸ್ತುತ ಅನ್ನಿಸುತ್ತಿದೆ ನನಗೆ.

ಸಂಕಲನದ ಶೀರ್ಷಿಕೆಯೇ ಒಲವ ಹಾಯಿದೋಣಿ.  ಅಂದರೆ ಪ್ರೀತಿಯ ದೋಣಿ ಯಾಗಿರುವುದರಿಂದ ಸಂಕಲನದ ಬಹುತೇಕ ಗಜಲ್ಗಳು  ಪ್ರಭಾ ಅಮ್ಮನ ಅನುಭವದ ಉತ್ಕಟತೆಯಲ್ಲಿ ಸಹಜವಾಗಿ ಬರೆಯಿಸಿಕೊಳ್ಳುತ್ತಾ  ಪ್ರೀತಿ, ಪ್ರೇಮ ಮೋಹ , ವಿರಹ ,  ಚಡಪಡಿಕೆ , ಮನದ ತಳಮಳ, ಸ್ರ್ರೀಪರ ಧ್ವನಿ ಎತ್ತುವುದು. ಅಲ್ಲಲ್ಲಿ ಸಾಮಾಜಿಕ ಪ್ರಜ್ಜೆಯನ್ನು ಮೂಡಿಸುವ , ಹೊಣೆಗಾರಿಕೆಯನ್ನು ಎಚ್ಚರಿಸುವ ,ವ್ಯವಸ್ಥೆಯ  ಹೇಡಿತನವನ್ನು ಪ್ರಶ್ನೇಸುವ, ಆಸ್ತಿಕ ಮತ್ತು ನಾಸ್ತಿಕ ವಿಚಾರವಂತಿಕೆಯನ್ನು ಸಾರುವ , ಅಸಹಾಯಕ ಮನಸುಗಳಿಗೆ ಧೈರ್ಯ ತುಂಬುವ  ಗಜಲ್ಗಳು ಮೈತಾಳಿವೆ. ಒಲವ ಸ್ಥಾಯಿಭಾವವಾಗಿರುವ ಗಜಲ್ ನ್ನು ಪ್ರಭಾವತಿ ಅಮ್ಮ ನವರು  ತುಂಬಾ ಮೃದು,  ಮಧುರ ರಸಾನುಭಾವಗಳಿಂದಲೇ ರಚಿಸಿದ್ದಾರೆ. ಹಾಗಾಗಿ ಸಂಕಲನವು ಮೌಲಿಕವಾಗಿ ಪ್ರಕಟಗೊಂಡಿದ್ದು ಗಜಲ್ ಕಾವ್ಯಕ್ಕೆ ಬೇಕಾದ ಆತ್ಮ ಶಕ್ತಿಯನ್ನು , ನಮ್ಮ  ಜೀವನ ಸಾಕ್ಷತ್ಕಾರವನ್ನು ಪ್ರತಿಭಿಂಬಿಸುತ್ತದೆ.

ಈ ಸಂಕಲನದ ಎಲ್ಲಾ ಗಜಲ್ಗಳು ಓದುಗನನ್ನು ತನ್ನ ಕಡೆಗೆ ಸೆಳೆಯುತ್ತದೆಯಾದರೂ ನನ್ನನ್ನು ಅತ್ಯಂತ ಮನಸೂರೆಗೊಳಿಸಿದ ಕೆಲವು ಪ್ರೀತಿ , ಮೋಹದ ಗಜಲ್ ಶೇರ್ ಗಳನ್ನು ನಾನು ಕೋಟ್ ಮಾಡಿರುವೆ….

ಮಾದಕ ಕಣ್ಣ ನೋಟ ಕಂಡು ಚಂದಿರ ಜೋಲಿ ಹೊಡೆಯುತಿದೆ

ಅವಳ ಸೆರಗ ಕಳ್ಳಾಟ ನೋಡಿ ಮೋಡವು ತೇಲಾಡುತಿದೆ ! ಗ.೧೬

ಉಕ್ಕುವ ಅಂಗಗಳ ಪ್ರದರ್ಶನ ಯಾರಿಗಾಗಿ ಮಾಡುತಿರುವೆ

ಯೌವ್ವನದ  ತುಂಟಾಟಗಳಲಿ ಕಾಡಲು ಯಾರನು ಕಾಯುತಿರುವೆ ..ಗ22

ನಯನ ಸರೋವರದಲಿ ಒಲವಿನ ಕನಸುಗಳು ತೇಲಿ ಬರಲಿ

ಹೃದಯ ಸಾಗರದಲಿ ಅನುರಾಗದ ಅಲೆಗಳು ತೇಲಿ ಬರಲಿ..ಗ 75

ಹೆಣ್ಣಾಗಲಿ ಗಂಡಾಗಲಿ ಪ್ರೀತಿಯ ಹಂಬಲಕೆ  ಬಿದ್ದಾಗ ತನ್ನ ತನವನ್ನೂ ಮರೆತು  ಸಮಾಜವನ್ನೂ ಧಿಕ್ಕರಿಸಿ ತೋರುವ ಉತ್ಕಟ ಪ್ರೇಮಾಭಿಮಾನವನ್ನು ಅದಕ್ಕಾಗಿ ಪಡುವ ಪಡುಪಾಟಲನ್ನು  ಮೋಹಕ ರೂಪಕಗಳಲ್ಲಿ ಈ ಶೇರ್ ಗಳಲ್ಲಿ ಬಿಂಬಿಸಲಾಗಿದೆ.

ಬದುಕೇ ಮೂರಾಬಟ್ಟೆ ಆದಾಗ ಅನ್ನವೆಲ್ಲಿಂದ ತರಲಿ

ಊರೇ ಮಸಣವದಾಗ ಹೆಣಕ್ಕೆ ಬಟ್ಟೆ ಎಲ್ಲಿಂದ ತರಲಿ ..ಗ ೧೧

ಸಂತೆಯಲ್ಲಿ ಆತ್ಮಗಳು ಹರಾಜಿಗಿವೆ ಬದುಕಲೆಲ್ಲಿ ಓಡುವೆ !?

ಕರೋನ ಕಾಲಘಟ್ಟದ ವಾಸ್ತವಿಕ ಚಿತ್ರಣಗಳು….ಎರಡು ವರ್ಷಗಳ ಜನರ ಜೀವ ಮತ್ತು ಜೀವನದ ಪರಿಸ್ಥಿಯನ್ನು ಈ ಶೇರ್ ಹೇಳುತ್ತವೆ.  ಎಲ್ಲವೂ ಇದ್ದು ಏನೂ ಇಲ್ಲದಂತೆ ; ಇದ್ದಲೇ   ಪೆದ್ದನಂತಾದ ಪರಿಸರ ಮಾರಕ  ಮನುಷ್ಯ ನ ಅಸಹಾಯಕತೆ ಮತ್ತು   ಸೃಷ್ಠಿಯ ಮುಂದೆ  ಅವನ ಸಾಧನೆಗಳು ಶೂನ್ಯ !! ಎಂಬುದನ್ನು ಸಾರಿ ಹೇಳುತ್ತದೆ ಎಂಬ  ಸಾಮಾಜಿಕ ಗಜಲ್ ಗಳೂ ಇಲ್ಲಿ ಸ್ಥಾನ ಪಡೆದಿವೆ.

ಗಜಲ್ ಹಾಗೂ ಇತರ ಪ್ರಕಾರದ  ಕಾವ್ಯ ಕೃಷಿಯಲ್ಲಿ ಪಳಗಿರುವ ಪ್ರಭಾವತಿ ದೇಸಾಯಿಯವರು ಈ ಸಂಕಲನದಲ್ಲಿ  ಸಮಾಜದ ಎಲ್ಲಾ ಬಗೆಯ ವಿಷಯ ವಸ್ತುಗಳ ಮೇಲೆ ಬೆಳಕು ಹರಿಸಿದ್ದಾರೆ. ಕವಿ ಮನೋಧರ್ಮ, .ಮಾನವೀಯ ಆರ್ದ್ರತೆ ಸುಸ್ಥಿರ ಸಮಾಜದ ಸಂಗತಿಗಳು, ಸ್ತ್ರೀ ಸಂವೇದನೆಯ ಆಸ್ಮಿತೆ , ಚಡಪಡಿಕೆ , ಲಾಲಸೆಗಳನ್ನು ಕ್ರೀಯಾತ್ಮಕವಾಗಿಯೂ ಕಲಾತ್ಮಾಕವಾಗಿಯೂ ಸುಮಧುರ ಭಾಷಾ ಬಳಕೆಯಿಂದಲೂ ರಚಿಸಿದ್ದಾರೆ. ಶ್ರೀಯುತರ ಈ ಕ್ರೀಯಾತ್ಮಕತೆ, ಸೃಜನಶೀಲತೆಯ ಸನ್ನಡತೆಗೆ ನಾವು ಶರಣಾಗಲೇ ಬೇಕು. ಭಗವಂತ ಇವರಿಗೆ ಇನ್ನಷ್ಟು ಆರೋಗ್ಯಭಾಗ್ಯ ಕರುಣಿಸಲಿ ಕನ್ನಡಮ್ಮನ ಸೇವೆಗೆ ಸದಾ ಇವರ ಹೃದಯ ಹಾತೊರೆಯುತ್ತಿರಲಿ ಎಂದು ಈ ಸುಸಂದರ್ಭದಲ್ಲಿ ಅಭಿನಂದಿಸುತ್ತಾ   ನಾಡಿನ ಜನರ ಮನಸ್ಸನ್ನು ಕಾಡುವ ಜೀವಪರ ಗಜಲ್ ಸಂಕಲನಗಳು ಓದುಗನಿಗೆ  ಇನ್ನೊಂದಿಷ್ಟು ಹೊರತರುವ ಶಕ್ತಿ ಸಾಮರ್ಥ್ಯ ನೀಡಲಿ ಎಂದು ಶುಭ ಹಾರೈಸಿ ನನ್ನ ಮನದ ಮಾತುಗಳಿಗೆ ವಿರಾಮ ಹೇಳುವೆ.


ಅಶೋಕ ಬಾಬು ಟೇಕಲ್

Leave a Reply

Back To Top